Co-Operation and Competition: ಸಹಕಾರ ಮತ್ತು ಸ್ಪರ್ಧೆ (Co-Operation and Competition)

Co-Operation and Competition: ‘ಎಲ್ಲರಿಗೂ ಬೇಕಾದ ಗುರಿಸಾಧನೆಗಾಗಿ ಎಲ್ಲರೂ ಒಗ್ಗೂಡಿ ದುಡಿಯುವುದಕ್ಕೆ ಸಹಕಾರ ಎನ್ನುವರು. ಇದು ಸ್ಪರ್ಧೆಗೆ ವ್ಯತಿರಿಕ್ತವಾದ ಪ್ರವೃತ್ತಿ. ಜನರು ಸಹಕಾರದಿಂದ ಕಾರ್ಯನಿರ್ವಹಿಸಲು ಕಾರಣವಾದ ಅಂಶಗಳೆಂದರೆ,
1) ಪರಸ್ಪರ ಸಹಾಯ (Reciprocity)
2) ವೈಯಕ್ತಿಕ ತರಬೇತಿ(Personal orientation)
3) ಇತರರ ಜೊತೆ ಸಂವಹನ (Interpersonal Communication).
1) ಪರಸ್ಪರ ಸಹಾಯ :-
ಇತರರು ನಮ್ಮನ್ನು ಹೇಗೆ ಕಾಣುತ್ತಾರೋ ಹಾಗೆಯೆ ನಾವೂ ಕೂಡ ಅವರನ್ನು ಕಾಣುವುದು. ಯಾರಾದರೂ ನಮಗೆ ಕಷ್ಟದಲ್ಲಿ ಸಹಾಯ ಮಾಡಿದರೆ ನಾವೂ ಕೂಡ ಹಿಂತಿರುಗಿ ಅವರಿಗೆ (ಆವಶ್ಯಕತೆ ಇದ್ದಾಗ) ಸಹಾಯ ಮಾಡುತ್ತೇವೆ. ಪರಸ್ಪರ ಉಪಕಾರದ ಸಿದ್ಧಾಂತದ ಪ್ರಕಾರ ಆಹಾರ ಮುಂತಾದ ಸಂಪನ್ಮೂಲಗಳನ್ನು ಹಂಚಿಕೊಳ್ಳುವುದರಿಂದ ಜೀವಿಗಳು ಹೆಚ್ಚುಕಾಲ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುತ್ತವೆ ಮತ್ತು ಈ ಗುಣವನ್ನು ತಮ್ಮ ಮುಂದಿನ ಸಂತತಿಗೆ ವರ್ಗಾಯಿಸುತ್ತವೆ. ಸಂಪನ್ಮೂಲಗಳನ್ನು ಹಂಚಿಕೊಳ್ಳುವುದರಿಂದ ಫಲಾನುಭವಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಉದಾಹರಣೆಗೆ : ಒಂದು ತರಗತಿಯಲ್ಲಿ ಒಬ್ಬ ಬುದ್ದಿವಂತ ಹುಡುಗನಿದ್ದರೆ, ಅವನು ತನ್ನ ಜ್ಞಾನವನ್ನು ಇತರರ ಜೊತೆ ಹಂಚಿಕೊಂಡು ಅವರೂ ಕೂಡ ಸಾಕಷ್ಟು ಕಲಿಯುವಂತೆ ಮಾಡುವುದರಿಂದ ಬುದ್ದಿವಂತ ಹುಡುಗನಿಗೆ ಏನೂ ನಷ್ಟವಾಗುವುದಿಲ್ಲ, ಬದಲಾಗಿ ಆತನ ಜ್ಞಾನ ಮತ್ತಷ್ಟು ವೃದ್ಧಿಸುತ್ತದೆ ಮತ್ತು ಇತರರಿಗೆ ಅನುಕೂಲವೂ ಆಗುತ್ತದೆ.
2. ವೈಯಕ್ತಿಕ ತರಬೇತಿ Personal orientation)
ಸಹಕಾರ ಮನೋಭಾವದಿಂದ ಕೆಲಸ ಮಾಡುವುದರಿಂದ ವ್ಯಕ್ತಿಗೆ ಇತರರ ಜೊತೆ ಹೇಗೆ ನಡೆದುಕೊಳ್ಳಬೇಕು, ಒಗ್ಗಟ್ಟಿನಲ್ಲಿ ಹೇಗೆ ಕೆಲಸ ಮಾಡಬೇಕು ಎಂಬ ಸಾಮಾಜಿಕ ಪ್ರಬುದ್ಧತೆ ಹೆಚ್ಚಾಗುತ್ತದೆ. ಅಲ್ಲದೆ ಇತರರನ್ನು ನೋಡಿ ಅವರಲ್ಲಿರುವ ಎಷ್ಟೋ ಕೌಶಲಗಳನ್ನು, ನಡವಳಿಕೆಗಳನ್ನು ಮೈಗೂಡಿಸಿಕೊಳ್ಳಲು ಸಹಕಾರ ಮನೋಭಾವ ಸಹಾಯ ಮಾಡುತ್ತದೆ. ಸಹಕಾರದಿಂದ ಅಗುವ ಮತ್ತೊಂದು ಅನುಕೂಲವೆಂದರೆ, ಇತರ ಗುಂಪುಗಳ ಜೊತೆ ಹೇಗೆ ಸ್ಪರ್ಧಿಸಬೇಕು. ಹೇಗೆ ಇತರರನ್ನು ಸೋಲಿಸಿ ಮುಂದೆ ಬರಬೇಕು ಎಂಬ ಸ್ಪರ್ಧಾ ಮನೋಭಾವ ಬೆಳೆಯುತ್ತದೆ.
ಈ ರೀತಿ ಸಹಕಾರದಿಂದ ಕೆಲಸ ಮಾಡುವಾಗ ವ್ಯಕ್ತಿ ಸ್ವತಃ ಅನೇಕ ಸಾಮಾಜಿಕ ಅಂಶಗಳನ್ನು ಮೈಗೂಡಿಸಿಕೊಳ್ಳುತ್ತಾನೆ.
3. ಇತರರ ಜೊತೆ ಸಂವಹನ (Interpersonal Communication) :-
ಇತರರ ಜೊತೆ ಚರ್ಚಿಸಿ ಎಲ್ಲರಿಗೂ ಅನುಕೂಲವಾಗುವ ಕೆಲಸಗಳಲ್ಲಿ ಹೇಗೆ ಸಹಕರಿಸಬೇಕು ಎಂದು ನಿರ್ಧರಿಸುವುದು ಸಂವಹನಕ್ಕೆ ಸಂಬಂಧಪಟ್ಟಿದೆ. ಸಹಕಾರ ಮನೋಭಾವಕ್ಕೆ ವೈಯಕ್ತಿಕ ಮೌಲ್ಯಗಳು ಭದ್ರ ತಳಪಾಯವನ್ನು ಒದಗಿಸುತ್ತವೆ. ಇತರರ ಜೊತೆ ಚೆನ್ನಾಗಿ ಹೊಂದಿಕೊಳ್ಳುವ ವ್ಯಕ್ತಿ ಸಹಕಾರದಿಂದ ಕೆಲಸ ಮಾಡಬಲ್ಲನು.
▪️ಅಂತಿಮವಾಗಿ, ವ್ಯಕ್ತಿ ಸಹಕಾರದಿಂದ ಕಾರ್ಯನಿರ್ವಹಿಸಬಲ್ಲನೆ ಅಥವಾ ಅಲ್ಲಿಂದ ಪಲಾಯನ ಮಾಡುವನೆ ಎಂಬುದು ಅನೇಕ ಸಾಮಾಜಿಕ ಹಾಗೂ ವೈಯಕ್ತಿಕ ಅಂಶಗಳನ್ನು ಅವಲಂಬಿಸಿದೆ.
▪️ಸಾಮಾಜಿಕ ಸಮೂಹಗಳು ಸ್ಪರ್ಧಾತ್ಮಕ ಹಾಗೂ ಸಹಕಾರದ ಗುರಿಗಳನ್ನು ಹೊಂದಿವೆ. ಸ್ಪರ್ಧೆಯಲ್ಲಿ ಇತರರಿಗಿಂತ ಉತ್ತಮ ಪ್ರಯತ್ನಕ್ಕೆ ಮನ್ನಣೆ ಇರುತ್ತದೆ. ಉದಾಹರಣೆಗೆ : ಹತ್ತು ವಿದ್ಯಾರ್ಥಿಗಳು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಅವರಲ್ಲಿ ಅತ್ಯತ್ತಮವಾಗಿ ಮತ್ತು ವೇಗವಾಗಿ ಓಡುವವನಿಗೆ ಮಾತ್ರ ಬಹುಮಾನ ಸಿಗುತ್ತದೆ. ಆದರೆ ರಿಲೇ ಓಟದಲ್ಲಿ ಎಲ್ಲ ನಾಲ್ಕು ಸ್ಪರ್ಧಿಗಳೂ ಉತ್ತಮವಾಗಿ ಓಡಿದಾಗ ಮಾತ್ರ ಗುರಿ ತಲುಪಲು ಸಾಧ್ಯ. ಅಂದರೆ ರಿಲೇ ಸ್ಪರ್ಧೆಯಲ್ಲಿ ಸಹಕಾರಕ್ಕೆ ಮನ್ನಣೆ ಇರುತ್ತದೆ.
▪️ಸ್ಪರ್ಧೆ ಮತ್ತು ಸಹಕಾರಕ್ಕೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿಗಳ ಮೇಲೆ ಒಂದು ಅಧ್ಯಯನ ನಡೆಸಲಾಯಿತು. ಐದೈದು ವಿದ್ಯಾರ್ಥಿಗಳ ಗುಂಪು ಮಾಡಲಾಯಿತು. ಅವರಿಗೆ ಒಂದು ಸಮಸ್ಯೆಯನ್ನು ಬಿಡಿಸಲು ಹೇಳಲಾಯಿತು. ಸಹಕಾರದಿಂದ ಸಮಸ್ಯೆ ಬಿಡಿಸುವ ಗುಂಪಿಗೆ ಒಟ್ಟಾರೆ ಗುಂಪಿಗೆ ಬಹುಮಾನ ನೀಡುವುದಾಗಿ ತಿಳಿಸಲಾಯಿತು. ಇನ್ನೊಂದು ಗುಂಪಿಗೆ ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕವಾಗಿ ಬಹುಮಾನ ನೀಡುವುದಾಗಿ ತಿಳಿಸಲಾಯಿತು. ಅಧ್ಯಯನದಲ್ಲಿ ತಿಳಿದುಬಂದುದೇನೆಂದರೆ, ಸಹಕಾರದಿಂದ ಎಲ್ಲರೂ ಸೇರಿ ಸಮಸ್ಯೆ ಬಿಡಿಸಿದ ಗುಂಪಿನಲ್ಲಿ ಸಮನ್ವಯತೆ, ಪರಸ್ಪರರ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವುದು ಮತ್ತು ಪರಸ್ಪರ ಎಲ್ಲರೂ ಆತ್ಮೀಯವಾಗಿ ವರ್ತಿಸುತ್ತಿದ್ದರು. ಆದರೆ ಸ್ಪರ್ಧಾತ್ಮಕ ಗುಂಪಿನಲ್ಲಿ ಪರಸ್ಪರರ ನಡುವೆ ಸಂಘರ್ಷ, ಅಭಿಪ್ರಾಯ ಭೇದ ಕಂಡುಬಂತು. ಗುಂಪು-ಗುಂಪುಗಳ ನಡುವೆ ಸ್ಪರ್ಧೆ ಇದ್ದಾಗ, ಗುಂಪಿನೊಳಗೆ ಏಕತೆ, ಒಗ್ಗಟ್ಟು ಮತ್ತು ಉತ್ತಮ ಬಾಂಧವ್ಯ ಇರುವುದು ಕಂಡುಬಂತು.
▪️ಸಾಮಾಜಿಕ ಮನೋವಿಜ್ಞಾನವು ಸಾಮಾಜಿಕ ಸನ್ನಿವೇಶದಲ್ಲಿ ಕಂಡುಬರುವ ವರ್ತನೆಗಳನ್ನು ಕುರಿತು ಅಧ್ಯಯನ ಮಾಡುತ್ತದೆ.
▪️ಅಭಿವೃತ್ತಿ ಎಂದರೆ, “ವ್ಯಕ್ತಿಯ ಪ್ರೇರಣೆ ಕಾರ್ಯೋನ್ಮುಖವಾಗಲು ಅಗತ್ಯವಾದ ಸಿದ್ಧತಾ ಸ್ಥಿತಿ”- ನ್ಯೂಕೂಂಬ್.
▪️ಅಭಿವೃತ್ತಿಯಲ್ಲಿ ಭಾವನಾತ್ಮಕ, ಸಂಜ್ಞಾನಾತ್ಮಕ ಮತ್ತು ವರ್ತನಾ ಅಂಶಗಳು ಅಡಕವಾಗಿರುತ್ತವೆ.
▪️ಅಭಿವೃತ್ತಿಗಳು ವ್ಯಕ್ತಿಯ ನಂಬಿಕೆಗಳು ಹಾಗೂ ಮೌಲ್ಯಗಳಿಗೆ ಸಂಬಂಧಪಟ್ಟಿವೆ.
▪️ಅಭಿವೃತ್ತಿಗಳು ಕಲಿಕೆಯಿಂದ. ಇತರರ ಸಂಪರ್ಕದಿಂದ ಇತರರ ಅನುಕರಣೆಯಿಂದ, ಅನುಬಂಧ ಕಲಿಕೆಯಿಂದ ಹಾಗೂ ಹೊಸ ಹೊಸ ವಿಷಯಗಳನ್ನು ತಿಳಿಯುವುದರಿಂದ ರೂಪುಗೊಳ್ಳುತ್ತವೆ.
▪️ಅಭಿವೃತ್ತಿ ಬದಲಾವಣೆಯಲ್ಲಿ ಅಡಕವಾಗಿರುವ ಮೂರು ಪ್ರಕ್ರಿಯೆಗಳೆಂದರೆ, ಸಮತೋಲನ, ಸಂಜ್ಞಾನಾತ್ಮಕ ಅಸಂಬದ್ಧತೆ ಮತ್ತು ಎರಡು ಹಂತಗಳ ಪರಿಕಲ್ಪನೆ.
▪️ಪೂರ್ವಾಗ್ರಹ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪಿನ ಬಗ್ಗೆ ಕೈಗೊಂಡ ಅಪಕ್ವ, ಆತುರದ ಹಾಗೂ ತಪ್ಪು ತೀರ್ಮಾನ.
▪️ಅನ್ಯವ್ಯಕ್ತಿ ಅಥವಾ ಅನ್ಯ ಜನಾಂಗದ ಬಗ್ಗೆ ತಳೆದಿರುವ ಸಾಮಾನೀಕರಿಸಿದ ಮತ್ತು ನಿಖರವಾಗಿಲ್ಲದ ಮಾನಸಿಕ ಚಿತ್ರಣವೇ ಏಕರೂಪಕಗಳು.
ಪೂರ್ವಾಗ್ರಹ ಬೆಳವಣಿಗೆಗೆ ಪ್ರಮುಖ ಕಾರಣ, ಅಗತ್ಯ ವಸ್ತುಗಳು ಹಾಗೂ ಅವಕಾಶಗಳಿಗಾಗಿ ಸಾಮಾಜಿಕ ಗುಂಪುಗಳ ನಡುವೆ ನಡೆಯುವ ಸ್ಪರ್ಧೆ.
ಸಮೂಹದ ಜನರನ್ನು 1) ನಮ್ಮವರು (in-group) ಮತ್ತು 2) ಹೊರಗಿನವರು ಎಂದು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. (Out-group)
ಪೂರ್ವಾಗ್ರಹ ರೂಪುಗೊಳ್ಳುವಲ್ಲಿ ಪೋಷಕರು, ಸ್ನೇಹಿತರು. ಶಿಕ್ಷಕರು ಸ್ವಂತ ಅನುಭವಗಳು ಹಾಗೂ ಸುದ್ದಿ ಮಾಧ್ಯಮಗಳು ಪ್ರಮುಖ ಪ್ರಭಾವ ಬೀರುತ್ತವೆ.
3) ಪೂರ್ವಾಗ್ರಹಗಳನ್ನು ಹಗೆತನದ ವರ್ತನೆಗಳಾದ
1) ದೂರ ಮಾಡುವುದು
2) ದೂರುವುದು ತಾರತಮ್ಯ ಮಾಡುವುದು
3) ತಾರತಮ್ಯ ಮಾಡುವುದು
4) ಆಕ್ರಮಣ ಮಾಡುವುದು ಮತ್ತು
5) ನಿರ್ಮೂಲನ ಮಾಡುವುದು
ಎಂದು ಐದು ವಿಧಗಳಲ್ಲಿ ವ್ಯಕ್ತವಾಗುತ್ತದೆ.
▪️ಸಾಮಾಜಿಕ ಅಂತರ ಎಂದರೆ. ಪೂರ್ವಾಗ್ರಹ ಪೀಡಿತ ವ್ಯಕ್ತಿ ಅಥವಾ ಗುಂಪು ಅನ್ಯ ವ್ಯಕ್ತಿ ಅಥವಾ ಅನ್ಯ ಗುಂಪನ್ನು ಮಾನಸಿಕವಾಗಿ ಎಷ್ಟು ದೂರದಲ್ಲಿಟ್ಟಿದೆ ಎಂಬುದಾಗಿದೆ.
▪️ಬೋಗಾರ್ಡನು 7 ಅಂಶಗಳ ಸಾಮಾಜಿಕ ಅಂತರ ಮಾಪಿನಿಯನ್ನು 1924 ರಲ್ಲಿ ಸಿದ್ದಪಡಿಸಿದನು.
▪️ಪ್ರೊ. ಬಿ. ಕುಪ್ಪುಸ್ವಾಮಿ (1951) ಎಂಬುವವರು ಬೋಗಾರ್ಡಸ್‌ನ ‘ಸಾಮಾಜಿಕ ಅಂತರ’ ಮಾಪಿನಿಯನ್ನು
▪️ಭಾರತದ ಸನ್ನಿವೇಶಕ್ಕೆ ಹೊಂದುವಂತೆ ಮಾರ್ಪಡಿಸಿದರು.
▪️ಪೂರ್ವಾಗ್ರಹವನ್ನು ಕೆಳಕಂಡ ವಿಧಾನಗಳ ಮೂಲಕ ನಿಯಂತ್ರಿಸಬಹುದು.
1) ಒಳ್ಳೆಯ ಶಿಕ್ಷಣ ಹಾಗೂ ವಾಸ್ತವದ ಅರಿವುಂಟು ಮಾಡುವುದರಿಂದ
2) ವಿವಿಧ ಗುಂಪುಗಳ ನಡುವೆ ಸಂಪರ್ಕವನ್ನು ಹೆಚ್ಚಿಸುವುದರಿಂದ
3) ವ್ಯಕ್ತಿತ್ವವನ್ನು ಬಿಂಬಿಸುವುದರಿಂದ
4) ಪುನರ್ ವರ್ಗೀಕರಣ ಮಾಡುವುದರಿಂದ
5) ಏಕರೂಪಕಗಳನ್ನು ಹೋಗಲಾಡಿಸುವುದರಿಂದ,
▪️ಸಾಮಾಜಿಕ ಕಳಕಳಿಗೆ ಬಳಸಿರುವ ಪರ್ಯಾಯ ಪದಗಳೆಂದರೆ; ಸಹಾಯ ಮಾಡುವುದು, ದಾನಧರ್ಮ ಮಾಡುವುದು ಮತ್ತು ಸ್ವಯಂ ಸೇವಕರಾಗುವುದು.
▪️ಸಾಮಾಜಿಕ ಕಳಕಳಿಯು ಹುಟ್ಟಿನಿಂದ, ಕಲಿಕೆಯಿಂದ ಹಾಗೂ ಸಂಸ್ಕೃತಿಯಿಂದ ಬಂದಿದ್ದು ಸಾಮಾಜಿಕ ಕಟ್ಟುಪಾಡುಗಳಿಂದ ಪ್ರಭಾವಿತವಾಗಿರುತ್ತದೆ.
▪️ಇತರರ ಕಷ್ಟ-ಸುಖಗಳನ್ನು ತನ್ನ ಕಷ್ಟಸುಖಗಳೆಂದು ಭಾವಿಸಿ ಅನುಭವಿಸುವುದೇ ಸಹಾನುಭೂತಿ ಅಥವಾ ತದನುಭೂತಿ (Empathy)
▪️ಸಾಮಾನ್ಯ ಗುರಿ ಹೊಂದಿರುವ ಎರಡು ಅಥವಾ ಎರಡಕ್ಕಿಂತ ಹೆಚ್ಚು ಜನರಿರುವ ಸಮೂಹವನ್ನು ಗುಂಪು (group) ಎನ್ನುವರು.
▪️ಒಂದು ಸ್ಥಳದಲ್ಲಿ ಇದ್ದಕ್ಕಿದ್ದಂತೆ ಸೇರುವ ಜನ ಸಮೂಹವೇ ‘ಜನ ಸಂದಣಿ’ (crowd). ಉದಾಹರಣೆಗೆ: ಅಪಘಾತವಾದ ಸ್ಥಳದಲ್ಲಿ ಇದ್ದಕ್ಕಿದ್ದಂತೆ ಸೇರುವ ಜನರ ಗುಂಪು.
▪️ಒಂದು ತಂಡ (team) ದ ಸದಸ್ಯರು ಸಾಮಾನ್ಯ ಕೌಶಲಗಳನ್ನು ಹೊಂದಿರುತ್ತಾರೆ ಮತ್ತು ನಿರ್ದಿಷ್ಟ ಗುರಿ ಸಾಧನೆಯಲ್ಲಿ ತೊಡಗಿರುತ್ತಾರೆ.
▪️ಒಂದು ನಿರ್ದಿಷ್ಟ ಸ್ಥಳದಲ್ಲಿ ಒಂದು ನಿರ್ದಿಷ್ಟ ವೇಳೆಗೆ ಪೂರ್ವನಿರ್ಧಾರಿತ ಚಟುವಟಿಕೆಗಾಗಿ ಸೇರುವ ಜನ ಸಮೂಹವೇ ಪ್ರೇಕ್ಷಕರು (Audiences).
▪️ಗುಂಪು (ಸಮೂಹ) ನಮಗೆ ನಾವು ನಮ್ಮವರೆಂಬ ಮಾನಸಿಕ ತೃಪ್ತಿ ನೀಡುತ್ತದೆ. ಬೇಕಾದ ವಿಷಯಗಳನ್ನು ಒದಗಿಸುತ್ತದೆ. ಶತೃಗಳಿಂದ ರಕ್ಷಿಸುತ್ತದೆ. ಸಾಮಾಜಿಕ ಸ್ಥಾನಮಾನ ನೀಡುತ್ತದೆ ಮತ್ತು ಗುರಿ ಸಾಧನೆಗೆ ಸಹಾಯ ಮಾಡುತ್ತದೆ.
▪️ಗುಂಪು ಸೇರಲು ಅನುಕೂಲಕರ ಅಂಶಗಳೆಂದರೆ, ಸಾಮೀಪ್ಯ (Proximity), ಸಾಮ್ಯ ಅಥವಾ ಹೋಲಿಕೆ (similarity), ಮತ್ತು ಸಾಮಾನ್ಯ ಗುರಿ ಅಥವಾ ಪ್ರೇರಣೆ (Common motives or goals).
▪️ಸಾಮೀಪ್ಯ ಎಂದರೆ ನಿಕಟ ಭೌತಿಕ ಪರಿಸರವಿದ್ದು ಜನರು ಆಗಾಗ ಭೇಟಿಯಾಗುತ್ತಿರುತ್ತಾರೆ.
▪️ಹೋಲಿಕೆ ಎಂದರೆ, ವ್ಯಕ್ತಿತ್ವ ಗುಣಗಳಲ್ಲಿ, ಬುದ್ಧಿಶಕ್ತಿಯಲ್ಲಿ, ವಯಸ್ಸು, ಆಸಕ್ತಿ, ಅಭಿರುಚಿ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಹೋಲಿಕೆ ಇರಬೇಕು.
▪️ತಮ್ಮ ಸಮುದಾಯಕ್ಕೆ ಒಳ್ಳೆಯದನ್ನು ಮಾಡಲು ಪ್ರೇರಿತರಾದ ಜನರು ಒಂದೆಡೆ ಸೇರಿ ಒಂದು ಗುರಿ ಸಾಧನೆಯಲ್ಲಿ ತೊಡಗುವರು.
▪️ಗುಂಪು ನಿರ್ಮಾಣದ ಹಂತಗಳೆಂದರೆ, 1) ರೂಪಗೊಳ್ಳುವ ಹಂತ (forming stage), ರೀತಿ ನೀತಿಗಳು (norms), ನೆಲೆಗೊಳ್ಳುವ ಹಂತ (Laying stage) ಮತ್ತು ನಿರ್ವಹಣಾ ಹಂತ (Performing stage).
▪️ಗುಂಪು ಚಟುವಟಿಕೆಗಳು ನಾಲ್ಕು ಅಂಶಗಳಿಂದ ಪ್ರಭಾವಿತವಾಗುತ್ತವೆ. ಅವುಗಳೆಂದರೆ ಪಾತ್ರಗಳು (roles) ಸ್ಥಾನಮಾನ(status), ರೀತಿ-ನೀತಿಗಳು (norms), ಮತ್ತು ಒಗ್ಗಟ್ಟು (Cohesiveness).
▪️ಗುಂಪುಗಳಲ್ಲಿ ಕೆಲವು ವೇಳೆ ಅವರ ವಿದ್ಯಾರ್ಹತೆ ಹಾಗೂ ಅನುಭವಗಳ ಆಧಾರದ ಮೇಲೆ ಸದಸ್ಯರುಗಳಿಗೆ ಸ್ಥಾನಮಾನಗಳನ್ನು ನೀಡಲಾಗುತ್ತದೆ. ಕೆಲವು ವೇಳೆ ಸದಸ್ಯರೇ ತಮ್ಮ ಸ್ಥಾನಮಾನಗಳನ್ನು ಸಂಪಾದಿಸುತ್ತಾರೆ.
▪️ಗುಂಪಿನ ಸದಸ್ಯರು ವಿವಿಧ ಪಾತ್ರಗಳನ್ನು ನಿರ್ವಹಿಸುವಾಗ ಪಾತ್ರ ಸಂಘರ್ಷ (Role Conflict) ದ ಅನುಭವವಾಗುತ್ತದೆ. ಉದಾಹರಣೆಗೆ : ಹೊಸದಾಗಿ ತಾಯಿಯಾದಾಗ ಮನೆ ಮತ್ತು ಕಛೇರಿ ಕೆಲಸಗಳನ್ನು ನಿರ್ವಹಿಸಬೇಕಾದಾಗ ಗೊಂದಲ ಹಾಗೂ ಸಂಘರ್ಷಗಳ ಅನುಭವವಾಗುತ್ತದೆ.
▪️ಸ್ಥಾನಮಾನ (status) ಎಂಬುದು ಸಂಬಳ, ಕೆಲಸ ಮಾಡುವ ಕಛೇರಿ, ಉಪಯೋಗಿಸುವ ವಾಹನ (Car), ಮುಂತಾದವುಗಳನ್ನು ಅವಲಂಬಿಸಿದೆ.
▪️ರೀತಿ – ನೀತಿ (ಕಟ್ಟು-ಪಾಡುಗಳು) (norms)ಗಳೆಂದರೆ ಗುಂಪಿನ ಸದಸ್ಯರನ್ನು ನಿಯಂತ್ರಿಸಲು ರೂಪಿಸಿರುವ ಪ್ರಕಟಿತ (explicit) ಮತ್ತು ಅಪ್ರಕಟಿತ (implicit) ನಿಯಮಗಳು.
▪️ಒಗ್ಗಟ್ಟು (Cohesiveness) ಎಂಬುದು ಸದಸ್ಯರು ಪರಸ್ಪರ ಇಷ್ಟಪಡುವುದನ್ನು ಅವಲಂಬಿಸಿದೆ.
▪️ಇತರರು ಇರುವುದರಿಂದ ಪ್ರೇರಿತನಾಗಿ ಒಂದು ಕೆಲಸವನ್ನು ಒಬ್ಬನೇ ಮಾಡುವುದಕ್ಕೆ ಸಾಮಾಜಿಕ ಸುಗಮತೆ (Social facilitation) ಎನ್ನುವರು.
▪️ಅನುವರ್ತನೆ (Conformity) ಎಂದರೆ ತನ್ನ ಸಮಾಜದ ಕಟ್ಟುಪಾಡುಗಳಿಗೆ ಹೊಂದಿಕೊಂಡು ಹೋಗುವುದು.
▪️ವ್ಯಕ್ತಿ ತನ್ನ ಸಮಾಜದ ಪದ್ಧತಿಗಳು, ರೀತಿ-ನೀತಿಗಳು, ಕಟ್ಟುಪಾಡುಗಳು ಹಾಗೂ ನಿಯಮಗಳನ್ನು ಪಾಲಿಸಬೇಕಾದಾಗ ಅನುವರ್ತನೆ ಒತ್ತಡ ಉಂಟಾಗುತ್ತದೆ.
▪️ತನ್ನ ನಾಯಕ, ಪೋಷಕರು, ಮೇಲಾಧಿಕಾರಿ, ಧಾರ್ಮಿಕ ಮುಖಂಡರು ಮುಂತಾದವರ ಆದೇಶದಂತೆ ವರ್ತಿಸುವುದಕ್ಕೆ ವಿಧೇಯತೆ (obedience) ಎನ್ನುವರು.
▪️ನಾಯಕನ ಆದೇಶಗಳು ಬಹುಸಂಖ್ಯೆಯ ಜನರಿಗೆ ಅನ್ಯಾಯ ಎಸಗುವಾಗ ಅಂತಹ ಆದೇಶಗಳನ್ನು ಒಪ್ಪದಿರುವುದಕ್ಕೆ ಅಸಮ್ಮತಿ (dissent) ಎನ್ನುವರು.
▪️ಬಹು ಸಂಖ್ಯೆಯ ಗುಂಪಿನಲ್ಲಿ ಇತರರ ಜೊತೆಗೂಡಿ ಒಂದು ಕಾರ್ಯವನ್ನು ನಿರ್ವಹಿಸುವುದಕ್ಕೆ ಸಾಮಾಜಿಕ ಸೋಮಾರಿತನ (Social loafing) ಎನ್ನುವರು.
▪️ಎಲ್ಲರಿಗೂ ಬೇಕಾದ ಗುರಿ ಸಾಧನೆಗಾಗಿ ಒಗ್ಗೂಡಿ ಕೆಲಸ ಮಾಡುವುದಕ್ಕೆ ಸಹಕಾರ (Co-operation) ಎನ್ನುವರು.