Development:ಅಭಿವೃತ್ತಿ(Development) ರೂಪುಗೊಳ್ಳುವಲ್ಲಿ ಪ್ರಭಾವ ಬೀರುವ ಅಂಶಗಳು:

Development:ಕೆಳಕಂಡ ಅಂಶಗಳು ಅಭಿವೃತ್ತಿ ರೂಪುಗೊಳ್ಳುವಲ್ಲಿ ಪ್ರಮುಖ ಪ್ರಭಾವ ಬೀರುತ್ತವೆ. ಅವುಗಳೆಂದರೆ,
1.ಕುಟುಂಬ ಮತ್ತು ಶಾಲೆ ಪರಿಸರ :
ಬಾಲ್ಯದಲ್ಲಿ ಅಭಿವೃತ್ತಿ ರೂಪುಗೊಳ್ಳುವಲ್ಲಿ ಕುಟುಂಬದ ಪ್ರಭಾವ ಪ್ರಮುಖವಾದುದು. ತಂದೆ-ತಾಯಿಯರು, ಹಿರಿಯರು, ನೆರೆಹೊರೆಯವರು, ಕಲಿಯುವ ಶಾಲೆಯ ಗೆಳೆಯರು, ಶಿಕ್ಷಕರು, ಕಲಿಯುವ ವಿಷಯಗಳು, ಮುಂತಾದವು ಅಭಿವೃತ್ತಿ ಬೆಳೆಯುವಲ್ಲಿ ಪ್ರಮುಖ ಪ್ರಭಾವ ಬೀರುತ್ತವೆ.
2.ಅಧಿವಯಸ್ಸಿನಲ್ಲಿ ಪ್ರಮುಖವಾಗಿ ಉಲ್ಲೇಖಿತ (Reference groups) ಗುಂಪುಗಳು:
ಅಭಿವೃತ್ತಿ ರೂಪುಗೊಳ್ಳುವಲ್ಲಿ ಗುಂಪುಗಳು ಪ್ರಮುಖ ಪಾತ್ರ ವಹಿಸುತ್ತವೆ. ಉಡುಗೆ-ತೊಡುಗೆ ಬಗ್ಗೆ ಭವಿಷ್ಯದಲ್ಲಿ ಕೈಗೊಳ್ಳುವ ವೃತ್ತಿ ಬಗ್ಗೆ, ಗೆಳೆಯ-ಗೆಳತಿಯರ ಬಗ್ಗೆ, ಹೀಗೆ ಹಲವು ವಿಷಯಗಳ ಬಗ್ಗೆ ಅಭಿವೃತ್ತಿ ರೂಪಿಸಿಕೊಳ್ಳುವಲ್ಲಿ ಉಲ್ಲೇಖಿತ ಗುಂಪುಗಳ ಪ್ರಭಾವ ಹೆಚ್ಚಾಗಿರುತ್ತದೆ.
3.ಸ್ವಂತ ಅನುಭವಗಳು (Personal experiences):
ಆನೇಕ ಅಭಿವೃತ್ತಿಗಳು ನಮಗಾಗುವ ಸ್ವಂತ ಅನುಭವಗಳಿಂದ ರೂಪುಗೊಳ್ಳುತ್ತವೆ. ಇಲ್ಲೊಂದು ನೈಜ ಉದಾಹರಣೆ ಇದೆ. ಸೈನ್ಯದಲ್ಲಿ ಟ್ರಕ್ ಚಾಲಕನ ಸ್ವಂತ ಅನುಭವ ಆತನ ಜೀವನದ ದಿಕ್ಕನ್ನೇ ಬದಲಿಸಿದ ಪ್ರಸಂಗ ಇಲ್ಲಿದೆ. ಆತ ಚಾಲನೆ ಮಾಡುತ್ತಿದ್ದ ಟ್ರಕ್ ನೆಲಬಾಂಬ್ ಸ್ಪೋಟಕ್ಕೆ ಸಿಕ್ಕಿ ಛಿದ್ರ ಛಿದ್ರವಾಯಿತು. ಅದರಲ್ಲಿದ್ದ ಎಲ್ಲ ಸೈನಿಕರೂ ಸಾವಿಗೀಡಾದರು. ಆದರೆ ಚಾಲಕ ಮಾತ್ರ ಬದುಕುಳಿದ. ತಾನೊಬ್ಬನೇ ಬದುಕುಳಿದ ಆತನಿಗೆ ತನ್ನ ಜೀವನದ ಉದ್ದೇಶವೇನೆಂದು ಅಚ್ಚರಿಯಾಯಿತು. ವೃತ್ತಿಯನ್ನು ತೊರೆದು ತನ್ನ ಹಳ್ಳಿಗೆ ಹಿಂದಿರುಗಿದ. ದೇವರು ತನ್ನಿಂದ ಸಮಾಜಕ್ಕೆ ಅಮೂಲ್ಯ ಸೇವೆ ಬಯಸಿದ್ದಾನೆ ಎಂದು ಭಾವಿಸಿದ. ಅದರಂತೆ ನಿರಂತರವಾಗಿ ಜನಸೇವೆಯಲ್ಲಿ ತೊಡಗಿದೆ. ಇಂದಿಗೂ ನಿರಂತರವಾಗಿ ಅನ್ಯಾಯ, ಭ್ರಷ್ಟಾಚಾರ, ಅಸಮಾನತೆ, ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಹೋರಾಡುತ್ತಾ ಸಮಾಜ ಸೇವೆಗೆ ತನ್ನನ್ನೇ ತಾನು ಅರ್ಪಿಸಿಕೊಂಡಿದ್ದಾನೆ. ಅವರು ಯಾರೆಂದು ತಿಳಿಯಿತೆ? ಅವರೇ ‘ಆಣ್ಣಾ ಹಜಾರೆ’.
4. ಮಾಧ್ಯಮಗಳ ಪ್ರಭಾವ :
ಅಭಿವೃತ್ತಿಗಳನ್ನು ರೂಪಿಸುವಲ್ಲಿ ಸುದ್ದಿಮಾದ್ಯಮಗಳು ಹಿಂದೆಂದಿಗಿಂತ ಇಂದು ಹೆಚ್ಚು ಪ್ರಭಾವ ಬೀರುತ್ತಿವೆ. ಟಿ.ವಿ. ಅಂತರ್ಜಾಲ, ದೈನಿಕಗಳು, ಮುಂತಾದ ಸುದ್ದಿಮಾಧ್ಯಮಗಳು ಅಭಿವೃತ್ತಿ ರೂಪಿಸುವಲ್ಲಿ ಮಹತ್ತರವಾದ ಪ್ರಭಾವ ಬೀರುತ್ತಿವೆ. ಮಾಧ್ಯಮಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಅಭಿವೃತ್ತಿ ರೂಪಿಸುವಲ್ಲಿ ಆಗ್ರ ಸ್ಥಾನದಲ್ಲಿವೆ.
ಅಭಿವೃತ್ತಿ ವರ್ತನೆ:Attitudinal Change):
ಅಭಿವೃತ್ತಿ ಬದಲಾವಣೆ ಉಂಟುಮಾಡುವ ಅಂಶಗಳೆಂದರೆ ಸಮಾಜದ ಪ್ರಭಾವಿ ನಾಯಕರು, ರಾಜಕಾರಣಿಗಳು, ಉತ್ಪಾದಕರು, ಜಾಹಿರಾತುದಾರರು. ಮುಂತಾದವರು ಜೊತೆಗೆ ಸರ್ಕಾರ ಜಾರಿಗೊಳಿಸುವ ಕಾಯಿದೆ ಕಾನೂನು ಸಹ ಅಭಿವೃತ್ತಿ ಬದಲಾಯಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಅಭಿವೃತ್ತಿ ಪರಿವರ್ತನೆಗೆ ಸೂಕ್ತ ಸನ್ನಿವೇಶದ ಅವಶ್ಯಕತೆ ಇರುತ್ತದೆ.
(Process of attitude change):
ಅಭಿವೃತ್ತಿ ಪರಿವರ್ತನೆ ಪ್ರಕ್ರಿಯೆಯಲ್ಲಿ ಮೂರು ಪ್ರಮುಖ ಪರಿಕಲ್ಪನೆಗಳು ನಮ್ಮ ಗಮನ ಸೆಳೆಯುತ್ತವೆ.ಅವುಗಳನ್ನು ಕೆಳಗೆ ವಿವರಿಸಲಾಗಿದೆ.
1) ಸಮತೋಲನ : ಸಮತೋಲನ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು ಪ್ರಿಡ್ಜ್ ಹೈವೆರ್ (Fridtz Heider). ಇದನ್ನು P-O-X ತ್ರಿಕೋನ ಎನ್ನುವರು. ಇಲ್ಲಿ ಅಭಿವೃತ್ತಿಯ ಮೂರು ಆಯಾಮಗಳ ನಡುವಿನ ಸಂಬಂಧವನ್ನು ಕಾಣಬಹುದು. ಇಲ್ಲಿ P ಒಬ್ಬ ವ್ಯಕ್ತಿಯಾಗಿದ್ದು ಆತನ ಅಭಿವೃತ್ತಿಯನ್ನು ಅಧ್ಯಯನ ಮಾಡಲಾಗುತ್ತದೆ. ‘O’ ಮತ್ತೊಬ್ಬ ವ್ಯಕ್ತಿ ಹಾಗೂ ‘X’ ಒಬ್ಬ ವ್ಯಕ್ತಿ ಅಥವಾ ವಿಷಯ ಅಥವಾ ವಸ್ತುವಾಗಿದ್ದು, ಅದರ (X) ಬಗೆಗಿನ ಅಭಿವೃತ್ತಿಯನ್ನು ಅಧ್ಯಯನ ಮಾಡಲಾಗುತ್ತದೆ.
ಸಮತೋಲನ ಪರಿಕಲ್ಪನೆಯ ಮೂಲಭೂತ ಅಂಶವೆಂದರೆ P-O, O-X ಮತ್ತು P-X ನಡುವೆ ಅಸಮತೋಲನ ಇದ್ದಾಗ ಅಭಿವೃತ್ತಿಯಲ್ಲಿ ಬದಲಾವಣೆ ಕಂಡುಬರುತ್ತದೆ.
i) P-O-X ನಡುವೆ ನಕಾರಾತ್ಮಕ ಅಭಿವೃತ್ತಿ ಇದ್ದಾಗ ಅಭಿವೃತ್ತಿಯಲ್ಲಿ ಆಸಮತೋಲನ ಕಂಡುಬರುತ್ತದೆ. ಉದಾಹರಣೆಗೆ : ವರದಕ್ಷಿಣೆ ಅಭಿವೃತ್ತಿಯ ವಿಷಯ (X) ಎಂದು ಪರಿಗಣಿಸಿದರೆ, ‘P’ ಎಂಬ ವ್ಯಕ್ತಿಗೆ ವರದಕ್ಷಿಣೆ ಬಗ್ಗೆ ಒಲವು (ಸಕಾರಾತ್ಮಕ) ಇದ್ದು ತನ್ನ ಮಗನಿಗೆ ‘O’ ನ ಮಗಳನ್ನು ಮದುವೆ ಮಾಡಿಕೊಳ್ಳುವ ಯೋಜನೆ ಮಾಡುತ್ತಾನೆ. ಆದರೆ ‘O’ ಗೆ ವರದಕ್ಷಿಣೆ ವಿರೋಧಿ (ನಕಾರಾತ್ಮಕ) ಭಾವನೆ ಇರುತ್ತದೆ. ಇಂತಹ ಸನ್ನಿವೇಶದಲ್ಲಿ P-O ನಡುವೆ ಸಂಬಂಧ ಉಂಟಾಗುವ ಸಾಧ್ಯತೆ ಕಡಿಮೆ ಇರುತ್ತದೆ. ‘P’ ಅಥವಾ ‘O’ ತಮ್ಮ ಅಭಿಪ್ರಾಯ ಬದಲಾವಣೆ ಮಾಡಿಕೊಳ್ಳದ ಹೊರತು ಅಲ್ಲಿ ಸಮತೋಲನ (ಸಂಬಂಧ) ಅಸಾಧ್ಯ ಎಂದು ಹೇಳಬಹುದು.
2) ಸಂಜ್ಞಾನಾತ್ಮಕ ಆಸಂಬದ್ಧತೆ ಪರಿಕಲ್ಪನೆ (The concept of cognitive dissonance): ಲಿಯಾನ್ ಫೆಸ್ಟಿಂಗರ್ (Leon Festinger) ನೀಡಿರುವ ಸಂಜ್ಞಾನಾತ್ಮಕ ಪರಿಕಲ್ಪನೆ ಪ್ರಕಾರ ಒಬ್ಬ ವ್ಯಕ್ತಿ ಒಂದು ವಿಚಾರದ ಬಗ್ಗೆ ಪರಸ್ಪರ ವಿರೋಧ ನಿಲುವು ತಳೆದಿರುವಾಗ ಅವುಗಳಲ್ಲಿ ಒಂದು ಬದಲಾಗಿ ಸಾಮರಸ್ಯ ಉಂಟಾಗುವವರೆಗೆ ಅಸಂಬದ್ಧತೆ ಮುಂದುವರೆಯುತ್ತದೆ. ಉದಾಹರಣೆಗೆ:ಕೆಳಕಂಡ ವಿಚಾರಗಳನ್ನು ನೋಡೋಣ.
ಅ) ಮದ್ಯಪಾನ ಆರೋಗ್ಯಕ್ಕೆ ಹಾನಿಕರ.
ಆ) ನಾನು ಮದ್ಯಪಾನ ಮಾಡುತ್ತೇನೆ.
ಮೇಲಿನ ಎರಡೂ ವಿಚಾರಗಳಲ್ಲಿ ಪರಸ್ಪರ ವಿರೋಧವಿರುವುದು ಯಾರಿಗಾದರೂ ತಿಳಿಯುತ್ತದೆ. ಆದ್ದರಿಂದ ಅವುಗಳ ನಡುವೆ ವಿರೋಧಾಭಾಸ ನಿವಾರಣೆಯಾಗಬೇಕಾದರೆ ಎರಡು ವಿಚಾರಗಳಲ್ಲಿ ಒಂದು ಬದಲಾಗಬೇಕಾಗುತ್ತದೆ. ಅಂದರೆ ‘ನಾನು ಕುಡಿಯುವುದನ್ನು ಬಿಡುತ್ತೇನೆ ಎಂಬುದು ಸೂಕ್ತ, ತರ್ಕಬದ್ಧ ಹಾಗೂ ಆರೋಗ್ಯಕರ ವಿಚಾರವಾಗಿದ್ದು ವಿರೋಧಾಭಾಸವನ್ನು ನಿವಾರಿಸುತ್ತದೆ. ಆಗ ವಿಚಾರಗಳಲ್ಲಿ ಸಾಮರಸ್ಯ ಉಂಟಾಗುತ್ತದೆ. ಹೀಗೆ ವಿಚಾರಗಳಲ್ಲಿ ಅಸಂಬದ್ಧತೆ ನಿವಾರಣೆಯಾಗಿ ಸಾಮರಸ್ಯ ಉಂಟಾದಾಗ ಅಭಿವೃತ್ತಿ ಬದಲಾವಣೆಯಾಗುತ್ತದೆ.
3) ಎರಡು ಹಂತದ ಪರಿಕಲ್ಪನೆ (The two step concept):
ಭಾರತದ ಮನೋವಿಜ್ಞಾನಿ ಎಸ್.ಎಂ.ಮೋಸಿಸ್ ನೀಡಿರುವ ಎರಡು ಹಂತದ ಪರಿಕಲ್ಪನೆಯಲ್ಲಿ ಅಭಿವೃತ್ತಿ ಬದಲಾವಣೆ ಎರಡು ಹಂತಗಳಲ್ಲಿ ಉಂಟಾಗುತ್ತದೆ. ಮೊದಲನೇ ಹಂತದಲ್ಲಿ ಅಭಿವೃತ್ತಿ ಬದಲಾವಣೆ ಹೊಂದುವ ವ್ಯಕ್ತಿಯನ್ನು ‘ಗುರಿ’ಯನ್ನು (target) ಗುರ್ತಿಸಲಾಗುತ್ತದೆ. ಯಾರ ಪ್ರಭಾವದಿಂದ ಅಭಿವೃತ್ತಿ ಬದಲಾವಣೆಯಾಗುತ್ತದೆಯೋ ಆ ವ್ಯಕ್ತಿಯನ್ನು ‘ಆಕರ’ (source) ಎಂದು ಕರೆಯಲಾಗುತ್ತದೆ. ‘ಗುರ್ತಿಸುವಿಕೆ’ (Identification) ಅಂದರೆ ಅಭಿವೃತ್ತಿ ಬದಲಾವಣೆ ಹೊಂದುವ (target) ವ್ಯಕ್ತಿಗೆ ‘ಆಕರ’ ದ ಬಗ್ಗೆ ಅಭಿಮಾನ ಆದರ ಇರುತ್ತದೆ. ಇಲ್ಲಿ ‘ಅಕರ’ ಗುರಿಯ (target) ಸ್ಥಾನದಲ್ಲಿ ಗುರ್ತಿಸಿಕೊಂಡು ಆತ ಅನುಭವಿಸುವ ಭಾವನೆಗಳನ್ನೇ ಅನುಭವಿಸುತ್ತಾನೆ ಮತ್ತು ‘ಗುರಿ’ ಬಗ್ಗೆ ಸಕಾರಾತ್ಮಕ ಭಾವನೆ ತಳೆದಿರುತ್ತಾನೆ.
ಎರಡನೇ ಹಂತದಲ್ಲಿ ‘ಆಕರ’ ಸ್ವಯಂ ಅಭಿವೃತ್ತಿ ಬದಲಾವಣೆಯನ್ನು ತೋರುತ್ತಾನೆ. ‘ಆಕರ’ (source) ಅಭಿವೃತ್ತಿ ಬದಲಾವಣೆಯನ್ನು ಗಮನಿಸಿದ ‘ಗುರಿ’ (target) ಆಕರ ನಂತಯೇ ತನ್ನ ಅಭಿವೃತ್ತಿಯನ್ನು ಬದಲಾಯಿಸಿಕೊಳ್ಳುತ್ತಾನೆ. ಇದನ್ನು ‘ಅನುಕರಣ ಕಲಿಕೆ’ ಎನ್ನುವರು.
ಈ ಉದಾಹರಣೆ ಮೂಲಕ ‘ಎರಡು ಹಂತ ಪರಿಕಲ್ಪನೆ’ಯನ್ನು ಸ್ಪಷ್ಟಪಡಿಸಬಹುದು. ‘A’ ಎಂಬ ಕ್ರೀಡಾಪಟ್ಟು ‘M’ ಬ್ರಾಂಡ್ ಫೂಸ್ (shoes) ಗಳಿಗೆ ಪ್ರಚಾರ ನೀಡುತ್ತಿರುತ್ತಾನೆ. ಅವು ಉತ್ತಮ ಪೂಸ್‌ಗಳೆಂದು ಹೇಳುತ್ತಾನೆ. ‘A’ ಯ ಅಭಿಮಾನಿಯಾದ ‘B’ ಅದೇ ಬ್ರಾಂಡ್ ಪೂಸ್ ಬಳಸತೊಡಗುತ್ತಾನೆ. ಆದರೆ ‘M’ ಬ್ರಾಂಡ್ ಹೂಸ್‌ನಿಂದ ಕಾಲುನೋವು ಬರುತ್ತದೆ ಎಂದು ಅಧ್ಯಯನಗಳಿಂದ ಧೃಡಪಟ್ಟಿದೆ ಎಂದು ತಿಳಿದಾಗ ‘B’ ತನ್ನ ನೆಚ್ಚಿನ ಕ್ರೀಡಾಪಟು ‘M’ ಬ್ರಾಂಡ್ ಹೂಗಳಿಗೆ ಜಾಹಿರಾತು ನೀಡುತ್ತಿರುವುದರಿಂದ ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವುದಿಲ್ಲ. ಆದರೆ ‘A’, ಅಧ್ಯಯನದ ಪರಿಣಾಮವಾಗಿ ‘M’ ಬ್ರಾಂಡ್‌ಗೆ ನೀಡುತ್ತಿದ್ದ ಜಾಹಿರಾತು ನಿಲ್ಲಿಸಿ ‘N’ ಬ್ರಾಂಡ್ ಉತ್ತಮ ಎಂದು ಮತ್ತೊಂದು ಬ್ರಾಂಡ್ ಗೆ ಜಾಹಿರಾತು ನೀಡಿದಾಗ, ‘B’ ತನ್ನ ನೆಚ್ಚಿನ ಕ್ರೀಡಾಪಟು ರೀತಿಯೇ ‘M’ ಬ್ರಾಂಡ್ ಬಿಟ್ಟು ‘N’ ಬ್ರಾಂಡ್ ಹೂ ಉಪಯೋಗಿಸತೊಡಗುತ್ತಾನೆ.
ಅಭಿವೃತ್ತಿ ಬದಲಾವಣೆಯಲ್ಲಿ ಪ್ರಭಾವ ಬೀರುವ ಅಂಶಗಳು :-
ಸಕಾರಾತ್ಮಕ ಅಭಿವೃತ್ತಿಗಳು ಬೇಗ ಬದಲಾಗುತ್ತವೆ. ಆದರೆ ನಕಾರಾತ್ಮಕ ಅಭಿವೃತ್ತಿಗಳು ಬದಲಾಗುವುದು ಕಷ್ಟ ಅದೇ ರೀತಿ ತೀವ್ರ ವೈಪರೀತ್ಯದ (extreme) ಅಭಿವೃತ್ತಿಗಳು ಮತ್ತು ಕೇಂದ್ರಿತ (centralized) ಅಭಿವೃತ್ತಿಗಳು ಬದಲಾವಣೆ ಹೊಂದುವುದು ಕಷ್ಟ ಸಾಧ್ಯ
ಅಭಿವೃತ್ತಿ ಬದಲಾವಣೆಯಲ್ಲಿ ಒಂದೇ ರೀತಿಯ (Congruent) ಬದಲಾವಣೆ ಕಾಣಬಹುದು. ಅಂದರೆ ಸಕಾರಾತ್ಮಕ ಅಭಿವೃತ್ತಿ ಹೆಚ್ಚು ಸಕಾರಾತ್ಮಕವಾಗಿ ಬದಲಾಗುವುದು ಮತ್ತು ನಕಾರಾತ್ಮಕ ಅಭಿವೃತ್ತಿ ಹೆಚ್ಚು ನಕಾರಾತ್ಮಕವಾಗಬಹುದು. ಉದಾಹರಣೆಗೆ : ಗ್ರಾಮೀಣ ಜನರ ಬಗ್ಗೆ ಅದರ-ಪ್ರೀತಿ ಇರುವ ವ್ಯಕ್ತಿಗೆ ಒಂದಿಬ್ಬರು
ಗ್ರಾಮೀಣ ಜನರ ಒಳ್ಳೆಯತನದ ಪ್ರತ್ಯಕ್ಷ ಅನುಭವವಾದಾಗ ಗ್ರಾಮೀಣ ಜನರ ಬಗೆಗೆ ಇದ್ದ ಆತನ ಅದರ ಪ್ರೀತಿ ಮತ್ತಷ್ಟು ಇಮ್ಮಡಿಯಾಗುತ್ತದೆ.
ಅಭಿವೃತ್ತಿಗಳು ಕೆಲವು ವೇಳೆ ವಿರುದ್ಧ ರೀತಿ (Incongruent) ಆಗಬಹುದು, ಅಂದರೆ ಸಕಾರಾತ್ಮಕ ಅಭಿವೃತ್ತಿ ನಕಾರಾತ್ಮಕವಾಗಿ ಬದಲಾಗಬಹುದು ಅಥವಾ ನಕಾರಾತ್ಮಕ ಅಭಿವೃತ್ತಿ ಸಕಾರಾತ್ಮಕವಾಗಿ ಬದಲಾಗಬಹುದು. ಮೇಲಿನ ಉದಾಹರಣೆಯಲ್ಲಿ ಗ್ರಾಮೀಣ ಜನರ ಬಗ್ಗೆ ಅಭಿಮಾನ ಹೊಂದಿದ್ದ ವ್ಯಕ್ತಿಗೆ ಅವರ ಒರಟು ನಡೆ-ನುಡಿ ನೋಡಿದಾಗ, ಸಕಾರಾತ್ಮಕ ಅಭಿವೃತ್ತಿ ನಕಾರಾತ್ಮಕವಾಗಿ ಬದಲಾಗಬಹುದು.
ವಿವಿಧ ಜಾಹಿರಾತುಗಳ ಮೂಲಕ ನೀಡುವ ಮಾಹಿತಿಯ ಪರಿಣಾಮವಾಗಿ ಒಬ್ಬ ವ್ಯಕ್ತಿ ಒಂದು ವಸ್ತುವಿನ ಬಗ್ಗೆ ಸಕಾರಾತ್ಮಕ ಅಥವಾ ನಕಾರಾತ್ಮಕ ಅಭಿವೃತ್ತಿ ಬೆಳೆಸಿಕೊಳ್ಳಬಹುದು. ಅಂದರೆ ಆ ವಸ್ತುವಿನ ಬಗ್ಗೆ ಒಲವು ಇಲ್ಲವೇ ದ್ವೇಷ ಬೆಳೆಯಬಹುದು. ನೀಡುವ ಮಾಹಿತಿ ಎಷ್ಟು ಪರಿಣಾಮಕಾರಿ ಎಂಬುದರ ಮೇಲೆ ಅಭಿವೃತ್ತಿ ಬದಲಾವಣೆ ಅವಲಂಬಿತವಾಗಿರುತ್ತದೆ. ಇದನ್ನು ‘ಆಕರದ ಗುಣಲಕ್ಷಣಗಳು’ (Source characteristics) 2.
ಅಭಿವೃತ್ತಿ ಬದಲಾವಣೆಯಲ್ಲಿ ಪ್ರಭಾವ ಬೀರುವ ಇತರ ಅಂಶಗಳೆಂದರೆ ನೈಜತೆ, ಭಾವನಾತ್ಮಕತೆ, ಸಂವೇಗಾಂಶಗಳು ಹಾಗೂ ಮಾಹಿತಿ ನೀಡಲು ಅನುಸರಿಸುವ ವಿಧಾನಗಳು, ಸಂವೇಗ ಮಿಳಿತ, ಹೃದಯಸ್ಪರ್ಶಿ ಹಾಗೂ ವಾಸ್ತವದ ಹಿನ್ನಲೆಯಲ್ಲಿ ದೃಶ್ಯ ಮಾಧ್ಯಮಗಳ ಮೂಲಕ ಮಂಡಿಸಿದ ವಿಚಾರಗಳಿಂದ ಅಭಿವೃತ್ತಿಗಳು ಬೇಗ ಬದಲಾಗುತ್ತವೆ. ಉದಾಹರಣೆಗೆ : ಡೆಂಗ್ಯೂ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮದ ಬಗ್ಗೆ ರೇಡಿಯೋ ಮೂಲಕ ನೀಡುವ ಪ್ರಚಾರ ಟಿ.ವಿ. ಮೂಲಕ ನೀಡುವ ಪ್ರಚಾರದಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಅದೇ ರೀತಿ ಟಿ.ವಿ. ಪ್ರಚಾರಕ್ಕಿಂತ ಪ್ರತ್ಯಕ್ಷವಾಗಿ ಜನರನ್ನು ಭೇಟಿಮಾಡಿ ನೀಡುವ ಪ್ರಚಾರ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಮುಕ್ತ ಮನಸ್ಸಿನ ತಿಳುವಳಿಕೆಯುಳ್ಳ ವ್ಯಕ್ತಿ ತನ್ನ ಅಭಿವೃತ್ತಿಯಲ್ಲಿ ಬೇಗ ಬದಲಾವಣೆ ತಂದುಕೊಳ್ಳುತ್ತಾನೆ. ಈ ರೀತಿ ಅಭಿವೃತ್ತಿ ಬದಲಾವಣೆಯಲ್ಲಿ ಅನೇಕ ಅಂಶಗಳು ಪ್ರಭಾವ ಬೀರುತ್ತವೆ.
ಅಭಿವೃತ್ತಿ ಬದಲಾವಣೆಯಲ್ಲಿ ಪ್ರಭಾವ ಬೀರುವ ಇತರ ಅಂಶಗಳೆಂದರೆ ಮಾಹಿತಿಯ ಆಕರ ಮತ್ತು ವಿಷಯದ ಆಕರ್ಷಣೆ, ಉದಾಹರಣೆಗೆ : ಕಂಪ್ಯೂಟರ್ ಕೊಳ್ಳುವಾಗ ಒಬ್ಬ ಕಂಪ್ಯೂಟರ್ ಎಂಜಿನಿಯರ್ ನೀಡುವ ಮಾಹಿತಿಯನ್ನು ನಾವೆಲ್ಲರೂ ಒಪ್ಪುತ್ತೇವೆ. ಆದರೆ ಕಂಪ್ಯೂಟರ್ ಜ್ಞಾನವಿಲ್ಲದ ವ್ಯಕ್ತಿ ನೀಡುವ ಮಾಹಿತಿಯನ್ನು ನಾವು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅದೇ ರೀತಿ ವಸ್ತು ಅಥವಾ ವಿಷಯದ ಆಕರ್ಷಣೆ ಕೂಡ ಬಹಳ ಮುಖ್ಯ. ವಸ್ತು ಅಥವಾ ವಿಷಯದ ಗುಣಮಟ್ಟ ಶ್ರೇಷ್ಟವಾಗಿದ್ದರೂ ಅದು ನೋಡಲು ಅಕರ್ಷಣೀಯವಾಗಿರದಿದ್ದರೆ ಅದನ್ನು ನಾವು ಕೊಂಡುಕೊಳ್ಳುವುದಿಲ್ಲ. ಅನೇಕ ಬಾರಿ ಆಕರ್ಷಣೆಗೆ ಮಾರುಹೋಗಿ ಕಳಪೆ ಗುಣಮಟ್ಟದ ವಸ್ತುವನ್ನು ಖರೀದಿಸುತ್ತೇವೆ. ವಸ್ತುಗಳನ್ನು ಖರೀದಿಸುವಾಗ ದೊಡ್ಡವರು ಹಾಗೂ ಮಕ್ಕಳ ವರ್ತನೆಯಲ್ಲಿ ವ್ಯತ್ಯಾಸವನ್ನು ಕಾಣುತ್ತೇವೆ. ದೊಡ್ಡವರು ತಜ್ಞರ ಮಾತಿಗೆ ಮಹತ್ವ ನೀಡುತ್ತಾರೆ. ಆದರೆ ಮಕ್ಕಳು ತಮ್ಮ ಗೆಳೆಯರ ಮಾತಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಕಾರು, ಮೋಟರ್ ಸೈಕಲ್ ಮುಂತಾದವುಗಳ ಜಾಹಿರಾತಿನಲ್ಲಿ ಹೆಸರಾಂತ ಕ್ರೀಡಾಪಟುಗಳು ಅಥವಾ ನಟರು ಕಾಣಿಸಿಕೊಂಡಾಗ ಬಹಳ ಮಂದಿ ಅವರ ಅಭಿಮಾನಿಗಳು ಆ ವಸ್ತುಗಳನ್ನು ಕೊಳ್ಳಲು ಮುಗಿಬೀಳುವರು.
ಅರ್ಥ ಮತ್ತು ನಿರೂಪಣೆ:- ಪೂರ್ವಾಗ್ರಹ ಎಂಬ ಪದವು ಇಂಗ್ಲಿಷ್ ಭಾಷೆಯ Prejudice ಎಂಬ ಪದದ ಸಮನಾಂತರ ರೂಪ. ಈ Prejudice ಎಂಬ ಇಂಗ್ಲೀಷ್ ಪದವು ಲ್ಯಾಟಿನ್ ಭಾಷೆಯ Prejudicium ಎಂಬ ಪದದಿಂದ ಆಗಿದೆ. ಪೂರ್ವಾಗ್ರಹ ಎಂದರೆ ಪೂರ್ವ ನಿರ್ಧಾರದ ಮೇಲೆ ಕೈಗೊಂಡ ಆತುರದ ನಿರ್ಣಯ, ಇದು ಒಂದು ರೀತಿಯ ನಕಾರಾತ್ಮಕ ಮನೋಭಾವ, ಅಪಕ್ವ ಹಾಗೂ ಆತುರದ ನಿರ್ಣಯ. ಗಾರ್ಡನ್ ಆಲ್ಬರ್ಟ್ ಪ್ರಕಾರ, ಪೂರ್ವಾಗ್ರಹವು ತಪ್ಪು ತಿಳುವಳಿಕೆಯಿಂದ ರೂಪಗೊಳ್ಳುತ್ತದೆ. ಪೂರ್ವಾಗ್ರಹವು ಸಂವೇಗಾತ್ಮಕ ಅಂಶಗಳನ್ನೊಳಗೊಂಡ ನಕಾರಾತ್ಮಕ ತೀರ್ಮಾನ ವಾಗಿರುತ್ತದೆ. ಪೂರ್ವಾಗ್ರಹಗಳು ಏಕರೂಪಕಗಳ ರೂಪದಲ್ಲಿ ವ್ಯಕ್ತವಾಗುತ್ತವೆ. ಏಕರೂಪಕಗಳು ಇತರ ವ್ಯಕ್ತಿ ವಸ್ತು ಹಾಗೂ ಸನ್ನಿವೇಶಗಳ ಬಗ್ಗೆ ತಳೆದಿರುವ ಮಾನಸಿಕ ಚಿತ್ರಗಳಾಗಿರುತ್ತವೆ. ಈ ಮಾನಸಿಕ ಚಿತ್ರಗಳು ಯಾವಾಗಲೂ ನಕಾರಾತ್ಮಕವಾಗಿರುವುದೇ ಹೆಚ್ಚು. ಉದಾಹರಣೆಗೆ: ಬ್ರಿಟಿಷರು ಬಿಗುಮಾನದವರು. ಅಮೆರಿಕನ್ನರು ಸ್ನೇಹಮಯಿಗಳು ಹಾಗೂ ಪ್ರೊಫೆಸರ್ಗಳು ಅರೆಮರಳು ಸ್ವಭಾವದವರು ಇತ್ಯಾದಿ.
ಏಕರೂಪಕಗಳು ಎಂದರೆ ಅನ್ಯ ವ್ಯಕ್ತಿ, ಅನ್ಯ ಜಾತಿ, ಅನ್ಯ ಜನಾಂಗದ ಬಗ್ಗೆ ತಳೆದಿರುವ ಮಾನಸಿಕ ಚಿತ್ರಣ. ಒಂದು ಜನಾಂಗ ಮತ್ತೊಂದು ಜನಾಂಗದ ಬಗ್ಗೆ ಒಂದೇ ರೀತಿಯ ಮಾನಸಿಕ ಚಿತ್ರಣ ಹೊಂದಿರುತ್ತಾರೆ. ಪೂರ್ವಾಗ್ರಹದಲ್ಲಿ ಅಡಕವಾಗಿರುವ ಸಂಜ್ಞಾನಾತ್ಮಕ ಅಂಶವೆಂದರೆ ದ್ವೇಷ ಮತ್ತು ಅಸಹ್ಯ ಪಟ್ಟುಕೊಳ್ಳುವುದು. ವರ್ತನೆಯಲ್ಲಿ ಜನರು ನಕಾರಾತ್ಮಕವಾಗಿ ವರ್ತಿಸುತ್ತಾರೆ. ತಾರತಮ್ಯ ವ್ಯಕ್ತಪಡಿಸುತ್ತಾರೆ. ಉದಾಹರಣೆಗೆ : ಎರಡನೇ ಮಹಾಯುದ್ಧ ಕಾಲದಲ್ಲಿ ಜರ್ಮನರು ನಾಜಿಗಳನ್ನು ಸರ್ವನಾಶ ಮಾಡಲು ಯತ್ನಿಸಿ ಲಕ್ಷಾಂತರ ಅಮಾಯಕ ಯಹೂದಿ (Jews) ಜನರನ್ನು ಹತ್ಯೆಮಾಡಿದರು. ತಾರತಮ್ಯ ಮಾಡದೆ ಪೂರ್ವಾಗ್ರಹ ವ್ಯಕ್ತಪಡಿಸುವುದನ್ನು ಕಾಣುತ್ತೇವೆ. ಅದೇ ರೀತಿ ಪೂರ್ವಾಗ್ರಹವಿಲ್ಲದೆ ಭೇದಭಾವ ತೋರುವುದನ್ನು ಕಾಣಬಹುದು. ಎಲ್ಲಿ ತಾರತಮ್ಯ ಮಾಡುವುದು ಮತ್ತು ಪೂರ್ವಾಗ್ರಹ ಇರುತ್ತದೋ ಅಲ್ಲಿ ಸಾಮಾಜಿಕ ಸಂಘರ್ಷ ಇದ್ದೇ ಇರುತ್ತದೆ.
ಪೂರ್ವಾಗ್ರಹ ಮೂಲ & ಬೆಳವಣಿಗೆ(The origin and growth of prejudice):
ಸಾಮಾಜಿಕ ಮನೋವಿಜ್ಞಾನಿಗಳು ಪೂರ್ವಾಗ್ರಹಗಳ ಬೆಳವಣಿಗೆಯ ಬಗ್ಗೆ ಅಧ್ಯಯನ ಮಾಡಿದ್ದಾರೆ.
ಅವುಗಳ ಬಗ್ಗೆ ಈಗ ತಿಳಿಯೋಣ.
1.ವಾಸ್ತವಿಕ ಸಂಘರ್ಷ ಸಿದ್ದಾಂತ Realistic conflict theory Bobo-1983):
ಈ ಸಿದ್ಧಾಂತದ ಪ್ರಕಾರ ಪೂರ್ವಾಗ್ರಹ ಬೆಳವಣಿಗೆಗೆ ಪ್ರಮುಖ ಕಾರಣ ಅಗತ್ಯ ವಸ್ತುಗಳಿಗಾಗಿ ಅಥವಾ ಸೌಲಭ್ಯಗಳಿಗಾಗಿ ನಡೆಯುವ ಸ್ಪರ್ಧೆ, ಸ್ಪರ್ಧೆಯಲ್ಲಿ ತೊಡಗಿರುವ ವಿವಿಧ ಗುಂಪುಗಳು ಪರಸ್ಪರ ನಕಾರಾತ್ಮಕ ವರ್ತನೆ ತೋರುತ್ತವೆ. ಅನ್ಯಗುಂಪನ್ನು ವೈರಿಗಳೆಂದು ಭಾವಿಸುವರು. ಉದಾಹರಣೆಗೆ : ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಆನೇಕ ಸಾಮಾಜಿಕ ಸೌಲಭ್ಯಗಳಿಂದ ವಂಚಿಸಲಾಗಿದೆ. ಕೆಲವು ಪ್ರಮುಖ ಸ್ಥಾನಮಾನಗಳಿಗೆ ಮಹಿಳೆಯರನ್ನು ಪರಿಗಣಿಸುವುದೇ ಇಲ್ಲ. ಭಾರತದಲ್ಲಿ ಜಾತೀಯತೆ ವ್ಯಾಪಕವಾಗಿದ್ದು ಮೇಲು ಜಾತಿಯ ಜನರು ನಿಮ್ಮ ಜಾತಿಯ ಜನರಿಗೆ ಅನೇಕ ಸೌಲಭ್ಯಗಳು ದೊರೆಯದಂತೆ ಮಾಡುತ್ತಾರೆ. ಅವರನ್ನು ಮನೆಯೊಳಗೆ ಸೇರಿಸದಿರುವ ಉದಾಹರಣೆಗಳನ್ನು ಕಾಣಬಹುದು. ಕೆಲವರನ್ನು ಮನೆಯೊಳಗೆ ಸೇರಿಸುತ್ತಾರೆ. ಆದರೆ ಅವರ ಜೊತೆ ವೈವಾಹಿಕ ಸಂಬಂಧ ಬೆಳೆಸುವುದಿಲ್ಲ. (ಶರ್ಮ – 1981).
2. ಸಾಮಾಜಿಕ ವರ್ಗಿಕರಣ Social Categorization):
ನಾವೆಲ್ಲರೂ ಸಾಮಾಜಿಕ ಜಗತ್ತನ್ನು ‘ನಾವು’ ಮತ್ತು ‘ಅವರು’ ಎಂದು ಎರಡು ವರ್ಗಗಳಾಗಿ ವಿಂಗಡಿಸುತ್ತೇವೆ. ನಮ್ಮ ಸಾಮಾಜಿಕ ಗುಂಪಿಗೆ ಸೇರಿದವರನ್ನು ‘ನಮ್ಮವರು’ (Ingroup) ಎಂದೂ ಉಳಿದವರನ್ನು ಹೊರಗಿನವರು (out group) ಎಂದು ಕರೆಯುತ್ತೇವೆ. ಈ ರೀತಿಯ ವರ್ಗೀಕರಣವು ಜಾತಿ, ಧರ್ಮ, ಲಿಂಗ, ವಯಸ್ಸು, ಸಾಮಾಜಿಕ ಹಿನ್ನಲೆ, ವೃತ್ತಿ, ಮುಂತಾದವುಗಳನ್ನು ಅವಲಂಬಿಸಿರುತ್ತದೆ. ನಮ್ಮದೇ ಗುಂಪಿನವರ ಬಗ್ಗೆ ಮೆಚ್ಚುಗೆ ತೋರುತ್ತೇವೆ. ಆದರೆ ಹೊರಗಿನವರ ಬಗ್ಗೆ ಇಂತಹ ಮೆಚ್ಚುಗೆ ತೋರುವುದು ತುಂಬಾ ಕಡಿಮೆ ಅಥವಾ ಇಲ್ಲವೇ ಇಲ್ಲ. ಇದನ್ನು ‘ಗುಣದೋಷ’ (attribution error) ಎನ್ನುವರು.
3. ಅಭಿವೃತ್ತಿ ಬೆಳವಣಿಗೆಯಲ್ಲಿ ಸಾಮಾಜಿಕ ಕಲಿಕೆಯ ಪಾತ್ರ (The role of social learning):
ಬೆಳೆಯುವ ವಯಸ್ಸಿನಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯರನ್ನು ಗುರುಗಳನ್ನು, ಗೆಳೆಯರು ಹಾಗೂ ಇತರರು, ಪೂರ್ವಾಗ್ರಹಗಳನ್ನು ವ್ಯಕ್ತಪಡಿಸುವುದನ್ನು ಗಮನಿಸುವರು ಮತ್ತು ಅವುಗಳನ್ನು ತಾವೂ ಕೂಡ ಮೈಗೂಡಿಸಿಕೊಳ್ಳುವರು. ಅಂದರೆ ಅನ್ವರ ಬಗ್ಗೆ ಪೂರ್ವಾಗ್ರಹಗಳನ್ನು ವ್ಯಕ್ತಪಡಿಸುವರು.
4. ಇತರರನ್ನು ಹೊಣೆ ಮಾಡುವುದು (ಇತರರ ಮೇಲೆ ಗೂಬೆ ಕೂರಿಸುವುದು) (Scapegoating) :
ಬಹುಸಂಖ್ಯಾತರು ತಮ್ಮ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಸ್ಯೆಗಳಿಗೆ ದುರ್ಬಲರನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಅಂದರೆ ತಮ್ಮ ವಿಫಲತೆಗೆ ಅಲ್ಪಸಂಖ್ಯಾತರು ಅಥವಾ ಹಿಂದುಳಿದವರು ಕಾರಣ ಎಂದು ಹೇಳುತ್ತಾರೆ. ಇದು ಕೆಲವು ವೇಳೆ ತೀವ್ರ ರೀತಿಯ ತಪ್ಪು ತಿಳುವಳಿಕೆಗೆ ದಾರಿಮಾಡಿಕೊಡುತ್ತದೆ. ನಮ್ಮ ನ್ಯೂನತೆಗಳ ಬಗ್ಗೆ ಗಂಭೀರವಾಗಿ ಅವಲೋಕಿಸಿ ಸರಿಪಡಿಸಿಕೊಳ್ಳುವ ಬದಲು ತಮ್ಮ ಸಮಸ್ಯೆಗಳಿಗೆ ಇತರರು ಕಾರಣರೆಂದು ಅಮಾಯಕರ ಮೇಲೆ ಗೂಬೆ ಕೂರಿಸುತ್ತೇವೆ. ಇಂತಹ ತೀರ್ಮಾನಗಳಿಂದ ಕೆಲವು ವೇಳೆ ಸಾಮಾಜಿಕ ಸೆಟೆತ (Social tension) ಉಂಟಾಗುತ್ತದೆ. ಇದು ಪೂರ್ವಾಗ್ರಹ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ.
5. ಪೂರ್ವಾಗ್ರಹಕ್ಕೆ ಗುರಿಯಾದ ಗುಂಪು ಅಥವಾ ಸಮೂಹ ಕೆಲವು ವೇಳೆ ಪೂರ್ವಾಗ್ರಹ ಮುಂದುವರಿಯಲು ಕಾರಣವಾಗುತ್ತದೆ. ಪೂರ್ವಾಗ್ರಹ ಪೋಷಕವಾದ ಅಂಶಗಳನ್ನು ಆ ಸಮೂಹ ಪ್ರದರ್ಶಿಸುತ್ತದೆ. ಉದಾ: ಜನರಿಂದ ಆಯ್ಕೆಯಾದ ಕೆಲವು ರಾಜಕೀಯ ಪಕ್ಷಗಳು ಉತ್ತಮ ಆಡಳಿತ ನೀಡದೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮುಂತಾದ ಸಮಾಜಘಾತುಕ ಕೆಲಸಗಳಲ್ಲಿ ತೊಡಗಿದಾಗ ಜನಸಮೂಹ ಅಂತಹ ಪಕ್ಷಗಳ ಬಗ್ಗೆ ಪೂರ್ವಾಗ್ರಹಪೀಡಿತ ಆಕ್ರೋಶ ವ್ಯಕ್ತಪಡಿಸುತ್ತಾರೆ ಮತ್ತು ಅದು ಸರ್ಕಾರ ಪತನವಾಗುವವರೆಗೂ ಮುಂದುವರಿಯುತ್ತದೆ.
ಪೂರ್ವಾಗ್ರಹ ಬೆಳವಣಿಗೆಗೆ ಇತರ ಕಾರಣಗಳೆಂದರೆ ಸಂಪ್ರದಾಯ ಭೇದ, ಆಚಾರ-ವಿಚಾರ, ಆಹಾರ ಪದ್ಧತಿ, ಉಡುಗೆ-ತೊಡುಗೆಗಳಲ್ಲಿ ವ್ಯತ್ಯಾಸ, ಹಾಗೂ ವ್ಯಕ್ತಿಗೆ ಆಗುವ ಕೆಲವು ಅನುಭವಗಳು, ಮುಂತಾದ ಅಂಶಗಳು.




