Emotion: ಸಂವೇಗ(Emotion) ಸ್ಥಿತಿಯಲ್ಲಿ ಉಂಟಾಗುವ ದೈಹಿಕ, ಶಾರೀರಿಕ ಮತ್ತು ಮಾನಸಿಕ ಬದಲಾವಣೆಗಳು.

Emotion: ಸಂವೇಗ(Emotion) ಸ್ಥಿತಿಯಲ್ಲಿ ಉಂಟಾಗುವ ದೈಹಿಕ, ಶಾರೀರಿಕ ಮತ್ತು ಮಾನಸಿಕ ಬದಲಾವಣೆಗಳು.

Emotion

Emotion:ವ್ಯಕ್ತಿ ಸಂವೇಗಕ್ಕೆ(Emotion) ಒಳಗಾದಾಗ ಅವನ ಶರೀರ ಮತ್ತು ಮನಸ್ಸಿನಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

1) ದೈಹಿಕ ಬದಲಾವಣೆಗಳು :-

ದೇಹದ ಹೊರಗೆ ವ್ಯಕ್ತವಾಗುವ ಬದಲಾವಣೆಗಳನ್ನು ದೈಹಿಕ ಬದಲಾವಣೆಗಳು ಎನ್ನುತ್ತೇವೆ. ಅವುಗಳೆಂದರೆ, ಧ್ವನಿತರಂಗದಲ್ಲಿ ಬದಲಾವಣೆ, ಮುಖಚರ್ಯೆಯಲ್ಲಿ ಬದಲಾವಣೆ, ತೊದಲು ಮಾತು, ಶರೀರದ ರೋಮಗಳು ನಿಮಿರುವುದು, ಚರ್ಮದಲ್ಲಿ ಗುಳ್ಳೆಗಳು ಏಳುವುದು, ಕಣ್ಣಾಲಿಗಳು ದೊಡ್ಡದಾಗುವುದು, ಬಾಯಿ ಒಣಗುವುದು. ತುಟಿ ಅದುರುವುದು, ಬೆವರು ಕಾಣಿಸಿಕೊಳ್ಳುವುದು. ಇತ್ಯಾದಿ.

ಅ) ಧ್ವನಿತರಂಗದಲ್ಲಿ ಬದಲಾವಣೆ :-

ಸಂವೇಗ ಸ್ಥಿತಿಯಲ್ಲಿ ಧ್ವನಿತರಂಗದಲ್ಲಿ ಬದಲಾವಣೆಯಾಗುವುದನ್ನು ಕಾಣುತ್ತೇವೆ. ಕೋಪದಲ್ಲಿ ಧ್ವನಿ ಏರುತ್ತದೆ. ಭಯದಲ್ಲಿ ತೊದಲುತ್ತದೆ ಮತ್ತು ನಡುಗುತ್ತದೆ. ಪ್ರೀತಿ ತುಂಬಿದಾಗ ಧ್ವನಿ ಮಧುರವಾಗುತ್ತದೆ. ಸಂತೋಷದಲ್ಲಿ ಧ್ವನಿ ಆಹ್ಲಾದಕರವಾಗಿರುತ್ತದೆ, ಇತ್ಯಾದಿ ಬದಲಾವಣೆಗಳು ಕಂಡುಬರುತ್ತವೆ.

ಆ) ಮುಖಚರ್ಯೆಯಲ್ಲಿ ಬದಲಾವಣೆ :-

ಸಂವೇಗ ಸ್ಥಿತಿಯಲ್ಲಿ ಮುಖಚರ್ಯೆಯಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಅವುಗಳೆಂದರೆ ಭಯದಲ್ಲಿ ಮುಖ ಬಿಳಿಚಿಕೊಳ್ಳುತ್ತದೆ. ನಾಚಿಕೊಂಡಾಗ ಮುಖ ಕೆಂಪಾಗುತ್ತದೆ. ಕೋಪದಲ್ಲಿ ಮುಖ ಗಂಟಿಕ್ಕುತ್ತದೆ. ಹಲ್ಲು ಮಸೆಯುತ್ತವೆ. ಕಣ್ಣಾಲಿಗಳು ದೊಡ್ಡದಾಗುತ್ತವೆ. ಈ ರೀತಿ ಅನೇಕ ಬದಲಾವಣೆಗಳು ಉಂಟಾಗುತ್ತವೆ.

ಇ) ಮಾತು ತೊದಲುವುದು :-

ಭಯ ಹಾಗೂ ಕೋಪದಲ್ಲಿ ಮಾತುಗಳು ತೊದಲುತ್ತವೆ. ವ್ಯಕ್ತಿ ಹೇಳುವುದು ಅರ್ಥಪೂರ್ಣವಾಗಿರುವುದಿಲ್ಲ.

ಈ) ಭಯದಲ್ಲಿ ಶರೀರದ ರೋಮಗಳು ನಿಮಿರುತ್ತವೆ ಮತ್ತು ಚರ್ಮದಲ್ಲಿ ಗುಳ್ಳೆಗಳು ಏಳುತ್ತವೆ.

ಈ ರೀತಿ ಅನೇಕ ಬಾಹ್ಯಬದಲಾವಣೆಗಳು ಕಂಡುಬರುತ್ತವೆ.

2) ಶಾರೀರಿಕ ಬದಲಾವಣೆಗಳು (ಆಂತರಿಕ) :-

ಸಂವೇಗ ಸ್ಥಿತಿಯಲ್ಲಿ ಶರೀರದ ಒಳಗಿನ ಕ್ರಿಯೆಗಳಲ್ಲಿ ಆಗುವ ಬದಲಾವಣೆಗಳನ್ನು ಶಾರೀರಿಕ ಬದಲಾವಣೆಗಳು ಎನ್ನುತ್ತೇವೆ. ಪ್ರಮುಖ ಶಾರೀರಿಕ ಬದಲಾವಣೆಗಳೆಂದರೆ ಹೃದಯಬಡಿತ ಮತ್ತು ರಕ್ತದ ಒತ್ತಡ ಏರುತ್ತದೆ. ಜೀರ್ಣಕ್ರಿಯೆ ತಗ್ಗುತ್ತದೆ. ವಿಸರ್ಜನಕ್ರಿಯೆ ಏರುಪೇರಾಗುತ್ತದೆ. ಚರ್ಮದ ವಿದ್ಯುತ್ ನಿರೋಧಕ ಶಕ್ತಿ ಕುಗ್ಗುತ್ತದೆ. ಎದೆ ಡವಡವ ಹೊಡೆದುಕೊಳ್ಳುತ್ತದೆ. ಉಸಿರಾಟದ ವೇಗ ಹೆಚ್ಚಾಗುತ್ತದೆ. ಶರೀರದ ಉಷ್ಣಾಂಶ ಏರುವುದರಿಂದ ಬೆವರು ಕಾಣಿಸಿಕೊಳ್ಳಬಹುದು. ಸ್ವಾಯತ್ತ ನರಮಂಡಲದ ಚಟುವಟಿಕೆಗಳಲ್ಲಿ ಏರುಪೇರಾಗುತ್ತದೆ. ವಿಪರೀತ ಶಕ್ತಿ ವ್ಯಯವಾಗುವುದರಿಂದ ಬೇಗ ಸುಸ್ತು ಕಾಣಿಸಿಕೊಳ್ಳುತ್ತದೆ. ಅತಿಯಾದ ಅಡ್ರಿನಾಲಿನ್ ಉತ್ಪತ್ತಿಯಾಗುವುದರಿಂದ ಶರೀರದಲ್ಲಿ ಅತಿಯಾದ ಆವೇಶ, ರೋಷ, ಅತಿ ಚಟುವಟಿಕೆ ಕಂಡುಬರುತ್ತದೆ. ಸಂವೇಗ ಸ್ಥಿತಿ ಹೆಚ್ಚುಕಾಲ ಮುಂದುವರಿದರೆ ದೇಹದ ಸಮತೋಲನ ತಪ್ಪುತ್ತದೆ. ಶಾರೀರಿಕ ಅಸಮತೋಲನದಿಂದ ನಿರಂತರ ಸಂವೇಗ ಸೆಟತದಿಂದ ಶರೀರದ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಸ್ನಾಯು ಸೆಟೆತ. ಮೈಕೈ ನೋವು, ಆಯಾಸ. ಕೆಲವು ವೇಳೆ ಅತಿಸಾರ ಭೇದಿ, ಮಲಬದ್ಧತೆ, ಪದೇಪದೇ ಮೂತ್ರವಿಸರ್ಜನೆ, ಮುಂತಾದ ಸಮಸ್ಯೆಗಳೂ ಉಂಟಾಗುತ್ತವೆ.

ಸಂವೇಗ ಸ್ಥಿತಿಯಲ್ಲಿ ಅದರಲ್ಲೂ ಉದ್ವಿಗ್ನತೆ ಮತ್ತು ಪ್ರತಿಬಲನ ಸ್ಥಿತಿಯಲ್ಲಿ ಚರ್ಮದ ವಿದ್ಯುತ್ ನಿರೋಧಕ ಶಕ್ತಿ ತಗ್ಗುತ್ತದೆ. ಇದನ್ನು ಮೂಲತಃ ‘ಸೈಕೋಗ್ಯಾಲ್ವನಿಕ್’ ಪ್ರತಿವರ್ತ (psychogalvavic reflex-P.G.R ಎಂದು ಕರೆಯುತ್ತಿದ್ದರು. ಈಗ ಇದನ್ನು ‘ಗ್ಯಾಲ್ಪನಿಕ್ ಚರ್ಮಾನುಕ್ರಿಯೆ’ (Galvanic skin Response-G.S.R) ಎಂದು ಕರೆಯುವರು. ಚರ್ಮದ ವಿದ್ಯುತ್ ನಿರೋಧಕ ಶಕ್ತಿಯನ್ನು ಗುರ್ತಿಸಲು ಎರಡು ಲೋಹದ ತಂತಿಗಳನ್ನು ಅಳವಡಿಸಿರುವ ಗ್ಯಾಲ್ವನಿಕ್ ಮೀಟರನ್ನು ಬಳಸಲಾಗುತ್ತದೆ. ಲೋಹದ ತಂತಿಗಳ (electrodes) ನ್ನು ವ್ಯಕ್ತಿಯು ಕೈಯಲ್ಲಿ ಹಿಡಿದುಕೊಂಡಾಗ ಆತನ ಚರ್ಮದ ವಿದ್ಯುತ್ ತರಂಗಗಳು ಗ್ಯಾಲ್ವನಿಕ್ ಮೀಟರ್‌ನಲ್ಲಿ ದಾಖಲಾಗುತ್ತವೆ. ಭಯ ಮತ್ತು ಉದ್ವಿಗ್ನತೆ ಸ್ಥಿತಿಯಲ್ಲಿ ಚರ್ಮದ ವಿದ್ಯುತ್ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆದು ಗ್ಯಾಲ್ವನಿಕ್ ಮೀಟರ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಗ್ಯಾಲ್ಪನಿಕ್ ಮೀಟರ್‌ನ್ನು ಹಿಂದೆ ಸುಳ್ಳು ಪತ್ತೆಹಚ್ಚುವುದಕ್ಕಾಗಿ ಬಳಸುತ್ತಿದ್ದರು.

1) ಎಲೆಕ್ಟೋ ಕಾರ್ಡಿಯೋಗ್ರಾಫ್ (ECG)

ಹೃದಯದ ವಿದ್ಯುತ್ ತರಂಗಗಳನ್ನು ಮಾಪನ ಮಾಡಲು ECG ಯಂತ್ರವನ್ನು ಬಳಸುವರು. ಹೃದಯವು ಸ್ವಾಭಾವಿಕ ವಿದ್ಯುತ್ ವ್ಯವಸ್ಥೆಯಿಂದ ದೇಹದ ವಿವಿಧ ಭಾಗಗಳಿಗೆ ರಕ್ತ ಸರಬರಾಜು ಮಾಡುತ್ತದೆ. ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಮೇಲಿನ ಎರಡು ಕೋಣೆಗಳು (Atria or auricles) ಒಟ್ಟಿಗೆ ಸಂಕುಚಿಸುತ್ತವೆ. ಹಾಗೆಯೇ ಕೆಳಗಿನ ಎರಡು ಕೋಣೆಗಳು (ventricles) ಒಟ್ಟಿಗೆ ಸಂಕುಚಿಸಿ ಹೊರಕ್ಕೆ ರಕ್ತ ಸಾಗಿಸುತ್ತವೆ.

ಹೀಗೆ ಕ್ರಮಬದ್ಧವಾಗಿ ಸಂಕುಚನ ಮತ್ತು ವಿಕಸನ ಕ್ರಿಯೆ ಸ್ವಾಭಾವಿಕ ವಿದ್ಯುತ್ ವ್ಯವಸ್ಥೆಯಿಂದ ನಡೆಯುತ್ತದೆ. ಹೃದಯದ ಗೋಡೆ ವಿಶೇಷ ಸ್ನಾಯುಗಳಿಂದ ಆಗಿದೆ. ಹೃದಯ ನಿಮಿಷಕ್ಕೆ ಸರಾಸರಿ 70-75 ಬಾರಿ ಬಡಿದುಕೊಳ್ಳುತ್ತದೆ.

ECG ಯಲ್ಲಿ ಹೃದಯದ ವಿದ್ಯುತ್ ತರಂಗಗಳು ಪೇಪ‌ರ್ನನ ಒಂದು ಪಟ್ಟಿಯ ಮೇಲೆ ದಾಖಲಾಗುತ್ತವೆ. ಆ ದಾಖಲೆಗಳು ಏರಿಳಿತದ ಗೆರೆಗಳಾಗಿ ಪೇಪರ್ ಮೇಲೆ ಮೂಡುತ್ತವೆ. ಇದನ್ನು ‘ಎಲೆಕ್ಟೋಕಾರ್ಡಿಯೋಗ್ರಾಮ್’ ಎನ್ನುವರು. ಹೃದಯದಲ್ಲಿ ಏನಾದರೂ ತೊಂದರೆ ಇದ್ದರೆ ಅದು ಗೆರೆಗಳು ಮೂಡುವ ಏರಿಳಿತದ ಲಯಬದ್ಧತೆಯಲ್ಲಿ ಕಾಣುತ್ತದೆ. ECG ಮಾಹಿತಿಯು ಹೃದಯದ ಸ್ಥಿತಿಗತಿ (ಆರೋಗ್ಯ) ಯನ್ನು ತಿಳಿಸುತ್ತದೆ.

ii) ಎಲೆಕ್ಟೋಮಯೋಗ್ರಾಫ್ (EMG) :-

ಮೂಳೆ ಸ್ನಾಯುಗಳ ಲಕ್ಷಣಗಳನ್ನು ನಿರ್ಧರಿಸುವ ಮತ್ತು ದಾಖಲಿಸುವ ವೈದ್ಯಕೀಯ ವಿಧಾನವೇ ಎಲೆಕ್ಟೋಮಯೋಗ್ರಾಫ್, ಸ್ನಾಯುಗಳು ವಿಶ್ರಾಂತ ಸ್ಥಿತಿಯಲ್ಲಿರುವಾಗ ಅಥವಾ ಕಾರ್ಯನಿರತವಾಗಿರುವಾಗ ಅಥವಾ ವಿದ್ಯುತ್‌ನಿಂದ ಪ್ರಚೋದಿಸಲ್ಪಟ್ಟಾಗ ಸ್ನಾಯುವಿನ ಲಕ್ಷಣಗಳನ್ನು ಈ ಯಂತ್ರ ದಾಖಲಿಸುತ್ತದೆ. ಈ ಪರೀಕ್ಷೆ ಮಾಡುವಾಗ ಒಂದು ಚಿಕ್ಕ (ಸಣ್ಣ) ಸೂಜಿಯನ್ನು ಸ್ನಾಯು ಒಳಗೆ ಚುಚ್ಚಲಾಗುವುದು. ಆಗ ಅದು ಸ್ನಾಯುಗಳ ಚಟುವಟಿಕೆಯ ಮಟ್ಟವನ್ನು ದಾಖಲಿಸುತ್ತದೆ. ಇದು ನೀಡುವ ದಾಖಲೆಯನ್ನು ‘ಎಲೆಕ್ಟೋಮಯೋಗ್ರಾಮ್’ ಎನ್ನುವರು. ಇದು ಸ್ನಾಯುಗಳು ಸಂಕುಚಿಸಿದಾಗ ಅಥವಾ ವಿಶ್ರಾಂತ ಸ್ಥಿತಿಯಲ್ಲಿರುವಾಗ ಸ್ನಾಯುಗಳ ಕೋಶಗಳು ಉತ್ಪತ್ತಿ ಮಾಡುವ ವಿದ್ಯುತ್ ಪ್ರಚನ್ನಶಕ್ತಿಯನ್ನು ಕಂಡುಹಿಡಿಯುತ್ತದೆ. ನರಗಳಿಗೆ ಆಗಿರುವ ಹಾನಿಯನ್ನು ಪತ್ತೆಹಚ್ಚಲೂ ಸಹ ಈ ಪರೀಕ್ಷೆ ನಡೆಸುವರು.

iii) ಎಲೆಕ್ಟೋ ಎನ್‌ಸೆಫಲೊಗ್ರಾಮ್ (EEG)

ಮೆದುಳಿನ ಅಲೆಗಳ ವಿದ್ಯುತ್ ಚಟುವಟಿಕೆಯನ್ನು ಮಾಪನ ಮಾಡಲು ಮತ್ತು ದಾಖಲಿಸಲು ಈ ಪರೀಕ್ಷೆ ನಡೆಸುವರು. ಇದು ಅತಿ ಸೂಕ್ಷ್ಮವಾದ ದಾಖಲೆ ಮಾಡುವ ಉಪಕರಣವಾಗಿರುತ್ತದೆ. ಇದನ್ನು ತಲೆ ಬುರುಡೆಗೆ ಸೂಕ್ಷ್ಮ ವಿದ್ಯುತ್ ತಂತಿ (electrodes) ಗಳಿಂದ ಸಂಪರ್ಕಿಸಿರುತ್ತಾರೆ. ವಿದ್ಯುತ್ ತಂತಿಗಳು ಮೆದುಳಿನ ಮೆಲೈನಲ್ಲಿರುವ ನರತಂತುಗಳ ವಿದ್ಯುತ್ ಚಟುವಟಿಕೆಯನ್ನು ದೃಶ್ಯ ಪರದೆಗೆ ವರ್ಗಾಯಿಸುತ್ತವೆ. ಮೆದುಳಿನ ವಿದ್ಯುತ್ ಚಟುವಟಿಕೆಗಳನ್ನು 19ನೇ ಶತಮಾನದಲ್ಲೇ ಗುರ್ತಿಸಿದರೂ ಅದನ್ನು ಪ್ರಥಮವಾಗಿ ದಾಖಲೆ ಮಾಡಿದವರು ‘ಹ್ಯಾನ್ಸ್ ಬರ್ಗರ್’ ಎಂಬ ಆಸ್ಟ್ರಿಯಾ ದೇಶದ ಮನೋವೈದ್ಯ (1920), ಆಮೇಲೆ 1950 ರ ವೇಳೆಗೆ EEG ಯನ್ನು ಅಮೇರಿಕಾದಾದ್ಯಂತ ಬಳಕೆಗೆ ತರಲಾಯಿತು.

EEG ಯಲ್ಲಿ ತರಬೇತಿ ಪಡೆದ ವ್ಯಕ್ತಿ ಈ ಪರೀಕ್ಷೆ ನಡೆಸುವನು. ಪರೀಕ್ಷಿಸಬೇಕಾದ ವ್ಯಕ್ತಿಯನ್ನು ಮಲಗಿಸಿ ಅವನ ತಲೆಗೆ ವಿದ್ಯುತ್ ತಂತಿ (electrodes) ಗಳನ್ನು ಲೋಹದ ಬಿಲ್ಲೆಗೆ ಸಂಪರ್ಕಿಸಿ ಒಂದು ವಿಶೇಷ ಜಲ್ (ಅಂಟುದ್ರವ) ನ್ನು ಬುರುಡೆಗೆ ಹಚ್ಚಿ ಲೋಹದ ಬಿಲ್ಲೆಗಳನ್ನು ಅಂಟಿಸಲಾಗುವುದು. ಸುಮಾರು 16 ರಿಂದ 25 ವಿದ್ಯುತ್ ತಂತಿಗಳಿರುವ ಲೋಹದ ಬಿಲ್ಲೆಗಳನ್ನು ಅಂಟಿಸಲಾಗುವುದು. ಆಗ ಮೆದುಳಿನ ಅಲೆಗಳು ತಂತಿಗಳ ಮೂಲಕ ಹರಿದು ದೃಶ್ಯಪರದೆಯಲ್ಲಿ ಅಲೆರೂಪದ ಗೆರೆಗಳಾಗಿ ಮೂಡುವುವು. ಈ ಅಲೆಗಳನ್ನು ಚಲನೆಯ ಗ್ರಾಫ್ ಪೇಪರ್ ಮೇಲೆ ದಾಖಲಿಸಲಾಗುವುದು. ಈ ರೀತಿ ದಾಖಲಿಸುವಾಗ ವ್ಯಕ್ತಿ ಅಲುಗಾಡದೆ ಸ್ಥಿರವಾಗಿ ಕಣ್ಣುಮುಚ್ಚಿ ಮಲಗಿರಬೇಕು. ಇದರಿಂದ ವ್ಯಕ್ತಿಗೆ ಯಾವುದೇ ರೀತಿಯ ತೊಂದರೆ ಅಥವಾ ನೋವು ಉಂಟಾಗುವುದಿಲ್ಲ.

EEG ಯಂತ್ರದಿಂದ ಮೆದುಳಿನಲ್ಲಿರುವ ತೊಂದರೆಗಳನ್ನು ಗುರ್ತಿಸಬಹುದು. ಮೆದುಳಿನ ಗೆಡ್ಡೆಗಳು, ಮೂರ್ಚೆರೋಗ, ಮೆದುಳಿಗೆ ಹಾನಿ ಮುಂತಾದವುಗಳನ್ನು ಗುರುತಿಸಲು ಸಾಧ್ಯ. ಈ ಯಂತ್ರದ ನ್ಯೂನತೆ ಎಂದರೆ ಮೆದುಳಿನ ಒಳಹೊಕ್ಕಿ ಅಂದರೆ ಮೆದುಳಿನ ತಿರುಳು ಭಾಗವನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ.

ಮಾನಸಿಕ ಬದಲಾವಣೆಗಳು :-

ಸಂವೇಗ ಸ್ಥಿತಿಯಲ್ಲಿ ವಿವೇಚನಾ ಶಕ್ತಿ ಕಡಿಮೆಯಾಗುತ್ತದೆ. ಅಂದರೆ ಸರಿ-ತಪ್ಪುಗಳ ನಿರ್ಧಾರ ತೆಗೆದುಕೊಳ್ಳಲು ವ್ಯಕ್ತಿ ಅಸಮರ್ಥನಾಗುತ್ತಾನೆ. ಕಲಿಕೆ. ನೆನಪಿನ ಶಕ್ತಿ ಕುಂಟಿತಗೊಳ್ಳುತ್ತದೆ. ಏಕಾಗ್ರತೆ ಕಡಿಮೆಯಾಗುತ್ತದೆ. ವ್ಯತಿರಿಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಜಾಸ್ತಿ ಇರುತ್ತದೆ.

ಸಂವೇಗಗಳ ಸಂವಹನ (Communication of emotions):

“ಸಂವೇಗಗಳನ್ನು ಹಾವಭಾವಗಳ ಮೂಲಕ, ಮುಖಚರ್ಯೆ, ಕೈಕಾಲುಗಳ ಸನ್ನೆ ಮೂಲಕ ವ್ಯಕ್ತಪಡಿಸುವುದಕ್ಕೆ ಶರೀರ ಭಾಷೆ ಅಥವಾ ದೇಹ ಭಾಷೆ ಎನ್ನುವರು.” ಸಂವೇಗಗಳನ್ನು ವ್ಯಕ್ತಪಡಿಸುವಿಕೆಯಲ್ಲಿ ದೇಹಭಾಷೆ ಪ್ರಮುಖವಾದ ಸಂವಹನ ವಿಧಾನ ಎನಿಸಿದೆ. ಸನ್ನೆ ಅನೇಕ ಪದಗಳಿಗೆ ಸಮ ಎನಿಸುತ್ತದೆ. ಉದಾಹರಣೆಗೆ : ಮುಗುಳು ನಗೆ. ಮುಖ ಗಂಟಿಕ್ಕುವುದು, ಹುಬ್ಬೇರಿಸುವುದು, ಮುಖ ತಿರುಗಿಸುವುದು. ತಲೆಯಾಡಿಸುವುದು, ಬೊಟ್ಟುಮಾಡಿ ತೋರಿಸುವುದು, ಬೆನ್ನು ತಟ್ಟುವುದು, ಚಪ್ಪಾಳೆ ತಟ್ಟುವುದು, ಕಾಲಿನಿಂದ ನೆಲ ಒದೆಯುವುದು, ಮೇಜು ಕುಟ್ಟುವುದು. ಮುಂತಾದ ಸನ್ನೆಗಳು ವಿವಿಧ ಸಂವೇಗಗಳನ್ನು ತಿಳಿಸುತ್ತವೆ.

ಶರೀರ ಭಾಷೆಯನ್ನು, ಭಾಷೇತರ ಸಂವಹನ ವಿಧಾನ ಎನ್ನುವರು. ನಮ್ಮ ಮನಸ್ಸಿನ ಭಾವನೆಗಳು ನಾವು ತೋರುವ ಹಾವಭಾವಗಳಲ್ಲಿ ವ್ಯಕ್ತವಾಗುತ್ತದೆ ಎಂದು ಮನೋವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಿವಿಧ ಶರೀರ ಭಾಷೆಗಳ ಅರ್ಥವನ್ನು ತಿಳಿಯಲು ಮನೋವಿಜ್ಞಾನಿಗಳು ಅಧ್ಯಯನಗಳನ್ನು ನಡೆಸಿದ್ದಾರೆ. ಶರೀರ ಭಾಷೆ ಕುರಿತು ಅನೇಕ ಗ್ರಂಥಗಳು ಹೊರಬಂದಿವೆ. ಶರೀರ ಭಾಷೆಗಳು ಕೋಪ, ದುಃಖ, ಸಂತೋಷ, ನೋವು, ಅನುಕಂಪ, ಸಹಾನುಭೂತಿ, ಮುಂತಾದ ಎಲ್ಲ ರೀತಿಯ ಸಂವೇಗಗಳನ್ನು ವ್ಯಕ್ತಪಡಿಸುತ್ತವೆ. ಮನೋವಿಜ್ಞಾನಿಗಳ ಪ್ರಕಾರ ಶೇ.93 ರಷ್ಟು ಸಂವೇಗಗಳನ್ನು ಪದಗಳ ಬಳಕೆ ಇಲ್ಲದೆ ವ್ಯಕ್ತಪಡಿಸಲಾಗುತ್ತದೆ.

ದೇಹಭಾಷೆ ವ್ಯಕ್ತ ಪಡಿಸುವಿಕೆಯಲ್ಲಿ ಸಂಸ್ಕೃತಿಯಿಂದ ಸಂಸ್ಕೃತಿಗೆ ವ್ಯತ್ಯಾಸವನ್ನು ಕಾಣುತ್ತೇವೆ. ಆದರೆ ಕೆಲವು ಮೂಲಭೂತ ಸಂವೇಗಗಳ ಸಂವಹನ ಎಲ್ಲ ಸಂಸ್ಕೃತಿಗಳಲ್ಲೂ ಹೆಚ್ಚುಕಮ್ಮಿ ಒಂದೇ ರೀತಿ ಇರುತ್ತದೆ.

ಅಹಿತಕರ ಸಂವೇಗಗಳ ನಿರ್ವಹಣೆ :-

ಸಂವೇಗಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಸಂವೇಗ ರಹಿತ ಜೀವನ ನೀರಸ ಜೀವನ ಉಪ್ಪುಖಾರ ಇಲ್ಲದ ಊಟದಂತೆ. ಬದುಕಿಗೆ ಅರ್ಥ ಬರಬೇಕಾದರೆ ಬದುಕು ಸಂವೇಗ ಸಮ್ಮಿಳಿತವಾಗಿರಬೇಕು. ಆದರೆ ಸಂವೇಗಗಳನ್ನು ಒಂದು ಮಿತಿಯೊಳಗೆ ವ್ಯಕ್ತಪಡಿಸಿದಾಗ ಮಾತ್ರ ಬದುಕು ಹಿತವೆನಿಸುತ್ತದೆ. ಅದರಲ್ಲೂ ಅಹಿತಕರ ಸಂವೇಗಗಳನ್ನು ಮಿತಿಮೀರಿ ವ್ಯಕ್ತಪಡಿಸಿದಾಗ ಬದುಕು ನರಕವಾಗುತ್ತದೆ. ಈಗ ಅಹಿತಕರ ಸಂವೇಗಗಳ ನಿರ್ವಹಣೆ ಬಗ್ಗೆ ತಿಳಿದುಕೊಳ್ಳೋಣ.

ಸ್ವಯಂ ಅರಿವನ್ನು ಹೆಚ್ಚಿಸಿಕೊಳ್ಳುವುದು :-

ವ್ಯಕ್ತಿ ತನ್ನನ್ನು ತಾನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಸಂದರ್ಭೋಚಿತವಾಗಿ ಸಂವೇಗಗಳನ್ನು ವ್ಯಕ್ತಪಡಿಸುವುದನ್ನು ಅಭ್ಯಾಸಮಾಡಿಕೊಳ್ಳಬೇಕು.

ಸನ್ನಿವೇಶವನ್ನು (ಸಂವೇಗ ಉಂಟುಮಾಡುವ) ನಿಷ್ಪಕ್ಷಪಾತವಾಗಿ ಪರಾಮರ್ಶಿಸಬೇಕು:

ಸಂವೇಗ ಉಂಟುಮಾಡುವ ಸನ್ನಿವೇಶವನ್ನು ವ್ಯಕ್ತಿ ನಿಷ್ಪಕ್ಷಪಾತವಾಗಿ ಪರಾಮರ್ಶಿಸಿದಾಗ ಆ ಸನ್ನಿವೇಶದಲ್ಲಿ ತನ್ನದೆಷ್ಟು ತಪ್ಪಿದೆ ಮತ್ತು ಇತರರು ಎಷ್ಟು ಕಾರಣರು ಎಂಬುದು ಅರಿವಾಗಿ ಸಂವೇಗದ ಮೇಲೆ ನಿಯಂತ್ರಣ ಹೊಂದುವುದು ಸಾಧ್ಯವಾಗುತ್ತದೆ.

ಹಿಂದಿನ ಸಂವೇಗಾನುಭವಗಳನ್ನು ಆಗಾಗ ವಿಮರ್ಶೆಗೆ ಒಳಪಡಿಸುವುದು :

199 ವ್ಯಕ್ತಿ ತನ್ನ ಹಿಂದಿನ ಸಂವೇಗಾನುಭವಗಳನ್ನು, ಅದರ ಪರಿಣಾಮವನ್ನು ಆಗಿಂದಾಗ್ಗೆ ವಿಮರ್ಶೆಗೆ ಒಳಪಡಿಸಿಕೊಳ್ಳುವುದರಿಂದ ತನ್ನದೆಷ್ಟು ತಪ್ಪಿದೆ ಎಂಬುದು ತಿಳಿಯುತ್ತದೆ. ಆಗ ಸಂವೇಗಗಳ ವ್ಯಕ್ತಪಡಿಸುವಿಕೆಯಲ್ಲಿ ಮಾರ್ಪಾಡು ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ತನಗೆ ತಾನೇ ಆದರ್ಶಪ್ರಾಯನಾಗಲು ಯತ್ನಿಸುವುದು :-

ವ್ಯಕ್ತಿ ತನ್ನ ಹಿಂದಿನ ಸಂವೇಗಾನುಭವಗಳ ಉತ್ತಮ ಅಂಶಗಳನ್ನು ಆಗಾಗ ಮೆಲುಕು ಹಾಕಬೇಕು ಮತ್ತು ಆ ಉತ್ತಮ ಅಂಶಗಳನ್ನು ತನ್ನ ವರ್ತನೆಯಲ್ಲಿ ಅಳವಡಿಸಿಕೊಳ್ಳಲು ಯತ್ನಿಸಬೇಕು. ಇದರಿಂದ ಮುಂದೆ ಅವನ ವರ್ತನೆಗಳು ಸುಧಾರಿಸಲು ಸಾಧ್ಯವಾಗುತ್ತದೆ.

ತನ್ನ ಸಂವೇಗಾನುಭವಗಳನ್ನು ಇತರರ ದೃಷ್ಟಿಯಿಂದ ನೋಡುವುದು :-

ತನ್ನ ಸಂವೇಗಾನುಭವಗಳನ್ನು ಇತರರು ಹೇಗೆ ಗ್ರಹಿಸುತ್ತಾರೆ ಎಂದು ಇತರರ ದೃಷ್ಟಿಯಲ್ಲಿ ನೋಡಿದಾಗ ತನ್ನ ತಪ್ಪುಗಳ ಅರಿವಾಗಿ ಸಂವೇಗಗಳ ವ್ಯಕ್ತಪಡಿಸುವಿಕೆಯಲ್ಲಿ ಮಾರ್ಪಾಟು ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸೃಜನಾತ್ಮಕತೆಯನ್ನು ಬೆಳೆಸಿಕೊಳ್ಳುವುದು :-

ಜೀವನದಲ್ಲಿ ಒಂದು ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಂಡು ಅದರಲ್ಲಿ ತಲ್ಲೀನನಾದಾಗ ಅಪಾರ ಆತ್ಮ ತೃಪ್ತಿ ದೊರೆಯುತ್ತದೆ ಮತ್ತು ನಕಾರಾತ್ಮಕ ವರ್ತನೆ ಕಡಿಮೆಯಾಗುತ್ತದೆ.

* ಉತ್ತಮ ಸ್ನೇಹಬಳಗವನ್ನು ಹೊಂದುವುದು :-

“ಸಜ್ಜನರ ಸಂಘ ಹೆಚ್ಚೇನು ಸವಿದಂತೆ” ಎಂಬ ಗಾದೆ ಮಾತನ್ನು ಸದಾ ನೆನಪಿಡಬೇಕು. ಒಳ್ಳೆಯವರ ಸ್ನೇಹ ಮಾಡಬೇಕು. ಅಂತಹವರ ಸಹವಾಸದಿಂದ ನಮ್ಮ ದುರ್ಗುಣಗಳು ಮಾಯವಾಗಿ ಸದ್ಗುಣಗಳು ಬೆಳೆಯುತ್ತವೆ.

* ಬೇರೆಯವರ ಭಾವನೆಗಳನ್ನು ಅವರ ದೃಷ್ಟಿಯಲ್ಲಿ ಅರ್ಥಮಾಡಿಕೊಳ್ಳಲು ಯತ್ನಿಸಬೇಕು. ಬೇರೆಯವರ ಕಷ್ಟಸುಖಗಳಲ್ಲಿ ಭಾಗಿಯಾದರೆ ಅವರೂ ನಮ್ಮ ಕಷ್ಟಸುಖಗಳಿಗೆ ಸ್ಪಂದಿಸುತ್ತಾರೆ. ಕೊಟ್ಟು ತೆಗೆದುಕೊಳ್ಳುವ (Give and take) ಪ್ರವೃತ್ತಿ ರೂಢಿಸಿಕೊಳ್ಳಬೇಕು.

ಇತರರಿಗೆ ಸಹಾಯ ಮಾಡುವ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಅಂಗವಿಕಲರು, ಬಡವರು, ಶೋಷಿತರು, ಮುಂತಾದವರಿಗೆ ನೆರವಾಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. “ಪರೋಪಕಾರಂ ಇದಂ ಶರೀರಂ” ಎಂಬ ಶ್ರೇಷ್ಠ ನುಡಿಗಳನ್ನು ಸದಾ ನೆನಪಿಟ್ಟುಕೊಳ್ಳಬೇಕು.

ವ್ಯಾಯಾಮ, ಧ್ಯಾನ, ವಾಯುಸಂಚಾರ, ಶಿಸ್ತುಬದ್ಧ ಬದುಕು, ಬದುಕಿನಲ್ಲಿ ಒಳ್ಳೆಯ ಆದರ್ಶಗಳನ್ನು ಇಟ್ಟುಕೊಳ್ಳುವುದು. ಮತ್ತು ಮೌಲ್ಯಾಧಾರಿತ ಸರಳ ಬದುಕು ಬದುಕುವುದರಿಂದಲೂ ನಕಾರಾತ್ಮಕ ಸಂವೇಗಗಳನ್ನು ನಿಯಂತ್ರಿಸಬಹುದು.

ಹಿತಕರ ಸಂವೇಗಗಳನ್ನು ಹೆಚ್ಚಿಸಿಕೊಳ್ಳುವುದು (ವೃದ್ಧಿಮಾಡಿಕೊಳ್ಳುವುದು) :

ಮನುಷ್ಯನ ಬದುಕು ಅರ್ಥಪೂರ್ಣವಾಗಬೇಕಾದರೆ ಸಂವೇಗಗಳು ನಮ್ಮ ಬದುಕಿನಲ್ಲಿ ಮಿಳಿತವಾಗಿರಬೇಕು.

ಹಿತಕರ ಮತ್ತು ಅಹಿತಕರ ಸಂವೇಗಗಳು ತಮ್ಮದೇ ಆದ ಜೈವಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಹೊಂದಿವೆ. ಅಹಿತಕರ ಸಂವೇಗಗಳಾದ ಭಯ, ಕೋಪ, ಮುಂತಾದವು ಸಹ ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಉದಾಹರಣೆಗೆ ನಮಗೆ ಹಾವು, ಹಾಗೂ ಇತರೆ ಕ್ರೂರ ಪ್ರಾಣಿಗಳ ಭಯ ಇಲ್ಲದಿದ್ದರೆ, ಅದೆಷ್ಟೋ ಮಂದಿ ಅವುಗಳಿಗೆ ಬಲಿಯಾಗುತ್ತಿದ್ದರು. ಚಿಕ್ಕ ಚಿಕ್ಕ ಪ್ರಾಣಿಗಳಂತೂ ಪ್ರಾಣಭಯ ಹೊಂದಿರದಿದ್ದರೆ, ಅವುಗಳ ಸಂತತಿಯೇ ನಾಶವಾಗುತ್ತಿತ್ತು. ಆದ್ದರಿಂದ ಪ್ರತಿಯೊಂದು ಸಂವೇಗವೂ ತನ್ನದೇ ಆದ ಮಹತ್ವವನ್ನು ಹೊಂದಿದೆ.

ಹಿತಕರ ಸಂವೇಗಗಳಾದ ಸಂತೋಷ, ಆನಂದ, ಉಲ್ಲಾಸ, ಭರವಸೆ, ಆಶಾವಾದ, ತೃಪ್ತಿ, ಕೃತಜ್ಞತೆ, ಮುಂತಾದವು ವ್ಯಕ್ತಿಯಲ್ಲಿ ಶಕ್ತಿ ತುಂಬಿ ಬದುಕನ್ನು ಆಹ್ಲಾದಕರವಾಗಿ ಮಾಡುತ್ತವೆ. ಸಕಾರಾತ್ಮಕ ಭಾವನೆ ಹೊಂದಿರುವ ವ್ಯಕ್ತಿ ಎಲ್ಲದರಲ್ಲೂ ಒಳ್ಳೆಯದನ್ನು ಕಾಣುತ್ತಾನೆ. ಆತನಿಗೆ ಮಾನಸಿಕ ಒತ್ತಡ, ಉದ್ವಿಗ್ನತೆ. ಚಿಂತೆ. ನಿರಾಸೆ, ಇತ್ಯಾದಿ ಕಾಡುವುದಿಲ್ಲ.

ಮನೋವಿಜ್ಞಾನಿಗಳು ಜನರ ಮೇಲೆ ಸಂವೇಗಗಳ ಪರಿಣಾಮ ತಿಳಿಯಲು ಎರಡು ರೀತಿಯ ಸಿನಿಮಾಗಳನ್ನು ತೋರಿಸಿದರು. ಒಂದು ಸಿನಿಮಾ, ಸಂತೋಷ, ಆನಂದ, ತೃಪ್ತಿಯನ್ನು ಪ್ರತಿಪಾದಿಸುವ ಸಿನಿಮಾ. ಅದನ್ನು ನೋಡಿದ ಜನರಲ್ಲಿ ತಾವು ಮಾಡಬೇಕೆಂದಿರುವ ಕೆಲಸದ ಬಗ್ಗೆ ವಿವಿಧ ಸಕಾರಾತ್ಮಕ ಅಭಿಪ್ರಾಯಗಳು ಮೂಡಿಬಂದವು. ಆದರೆ ಕೋಪ, ಭಯಗಳನ್ನು ಪ್ರತಿಬಿಂಬಿಸುವ ಚಿತ್ರ ನೋಡಿದವರಲ್ಲಿ ಅಂತಹ ಸಕಾರಾತ್ಮಕ ಆಲೋಚನೆಗಳಾಗಲೀ, ಅಭಿಪ್ರಾಯಗಳಾಗಲೀ ಮೂಡಿಬರಲಿಲ್ಲ. ಆದ್ದರಿಂದ ಹಿತಕರ ಸಂವೇಗಗಳನ್ನು ಅನುಭವಿಸುವ ವ್ಯಕ್ತಿಯ ಮನಸ್ಸು ನಿರಾಳವಾಗಿದ್ದು ವಿಭಿನ್ನ ರೀತಿಯ ಚಟುವಟಿಕೆಗಳನ್ನು ಮಾಡಲು ಮುಂದೆ ಬರುತ್ತಾರೆ. ಒಂದು ಸಮಸ್ಯೆಯನ್ನು ಬಗೆಹರಿಸಲು ವಿವಿಧ ಕೋನಗಳಲ್ಲಿ ಆಲೋಚಿಸುತ್ತಾರೆ ಮತ್ತು ಪರಿಹಾರ ಕಂಡುಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಇವರು ಸಂದರ್ಭಗಳಿಗೆ ಬೇಗ ಹೊಂದಿಕೊಳ್ಳಬಲ್ಲರು. ಉನ್ನತ ಗುರಿ ಮತ್ತು ದೂರದೃಷ್ಟಿಗಳನ್ನು ಹೊಂದಿರುತ್ತಾರೆ ‘ಮತ್ತು ಗುರಿ ಸಾಧನೆಯಲ್ಲಿ ಯಶಸ್ಸು ಸಾಧಿಸುತ್ತಾರೆ. ಹಿತಕರ ಸಂವೇಗಗಳ ವೃದ್ಧಿಗೆ ಕೆಳಕಂಡ ಅಂಶಗಳು: ಸಹಕಾರಿಯಾಗಬಲ್ಲವು.

ಆಶಾವಾದ, ಬದುಕಿನಲ್ಲಿ ಭರವಸೆ, ಸಂತೃಪ್ತಿ, ಮತ್ತು ಸಕಾರಾತ್ಮಕ ಭಾವನೆ, ಮುಂತಾದ ಗುಣಗಳನ್ನು ಪೋಷಿಸಿ ಬೆಳೆಸುವುದು.

ಸಂಕಷ್ಟಗಳಲ್ಲಿ ಶಾಂತಿ, ಸಮಾಧಾನದಿಂದ ಯೋಚಿಸಿ ಪರಿಹಾರ ಕಂಡುಹಿಡಿಯುವುದು

ಎಲ್ಲರ ಜೊತೆ ಒಳ್ಳೆಯ ಬಾಂಧವ್ಯ ವೃದ್ಧಿಸಿಕೊಳ್ಳುವುದು.

ಸದಾ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡು ಪ್ರಾವೀಣ್ಯತೆ ಬೆಳೆಸಿಕೊಳ್ಳುವುದು.

ಬದುಕಿನಲ್ಲಿ ಭರವಸೆ, ಆಶಾವಾದ, ಸಾಮಾಜಿಕ ಬೆಂಬಲಗಳಿಂದ ಸದುದ್ದೇಶದ ಜೀವನ ನಡೆಸುವುದು.

ದೈನಂದಿನ ಘಟನೆಗಳಿಗೆ ಸಕಾರಾತ್ಮಕ ಅರ್ಥವಿವರಣೆ ನೀಡುವುದು.

ಶ್ರೇಷ್ಠ ಗ್ರಂಥಗಳ ಅಧ್ಯಯನ, ಸಜ್ಜನರ ಸಹವಾಸ, ವಿಚಾರವಂತರ ಜೊತೆ ಆರೋಗ್ಯಕರ ಚರ್ಚೆ, ಪ್ರಪಂಚದ ದಿನನಿತ್ಯದ ಆಗುಹೋಗುಗಳ ಬಗ್ಗೆ ನಿಖರ ಮಾಹಿತಿ ಹೊಂದುವುದು ಮತ್ತು ಪ್ರಸ್ತುತ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಎದುರಿಸುವ ಕೌಶಲ ಬೆಳೆಸಿಕೊಳ್ಳುವುದು, ಮುಂತಾದವುಗಳಿಂದ ಆರೋಗ್ಯಕರ ಆಲೋಚನೆಗಳನ್ನು ಮತ್ತು ಜ್ಞಾನವನ್ನು ವೃದ್ಧಿಸಿಕೊಳ್ಳುವುದು.

ಹೀಗೆ ಅನೇಕ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹಿತಕರ ಸಂವೇಗಗಳನ್ನು ವೃದ್ಧಿಮಾಡಿಕೊಳ್ಳಬಹುದು.

ಸಂವೇಗಾತ್ಮಕ ಬುದ್ಧಿ ಶಕ್ತಿ (Emotional Intelligence – E.I.)

ಸಂವೇಗಾತ್ಮಕ ಬುದ್ಧಿಶಕ್ತಿ ಎಂಬ ಪದವನ್ನು ಮೂಲತಃ ರೂಪಿಸಿ ಬಳಕೆಗೆ ತಂದವರು ‘ಪೀಟ‌ರ್ ಸಲೋವಿ’ ಮತ್ತು ‘ಜಾನ್ ಮೇಯರ್’ (1990). “ಸಂವೇಗಾತ್ಮಕ ಬುದ್ದಿಶಕ್ತಿ ಎಂಬುದು ವಿಷಯಗಳ ನಿರ್ವಹಣೆ, ಅಭಿವ್ಯಕ್ತಿ, ಮತ್ತು ತನ್ನದೇ ಸಂವೇಗಗಳ (ಭಾವನೆ) ಮೇಲೆ ಹತೋಟಿ ಸಾಧಿಸುವುದು ಹಾಗೂ ಇತರರ ಸಂವೇಗಗಳನ್ನು (ಭಾವನೆಗಳು) ಅರ್ಥಮಾಡಿಕೊಳ್ಳುವುದು ಮತ್ತು ಅರ್ಥೈಸುವ ಸಾಮರ್ಥ್ಯವನ್ನು ಒಳಗೊಂಡಿದೆ.”

ಸಂವೇಗಾತ್ಮಕ ಬುದ್ಧಿಶಕ್ತಿಯು ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡಿದೆ ಎಂದು ಮೇಯರ್ ಮತ್ತು ಸಲೋವೆ 1997 ರಲ್ಲಿ ತಿಳಿಸಿದ್ದಾರೆ. ಅವುಗಳೆಂದರೆ :

1. ತನ್ನ ಹಾಗೂ ಇತರರ ಸಂವೇಗಗಳನ್ನು ನಿಖರವಾಗಿ ಗ್ರಹಿಸುವುದು ಮತ್ತು ಸಂವೇಗಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವುದು.

2. ತನ್ನ ಆಲೋಚನೆ, ನೆನಪು, ತೀರ್ಮಾನ ಕೈಗೊಳ್ಳುವಿಕೆ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವಿಕೆ ಮೇಲೆ ಸಂವೇಗದ ಪ್ರಭಾವವನ್ನು ಅರಿತುಕೊಳ್ಳುವುದು.

3. ಸಂವೇಗಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ವಿಶ್ಲೇಷಿಸುವುದು. ಇದು ಆಗಾಗ್ಗೆ ಸಂಕೀರ್ಣ ಮತ್ತು ವಿರೋದಾಭಾಸವನ್ನು ಒಳಗೊಂಡಿರುತ್ತದೆ.

4. ಅಹಿತಕರ ಸಂವೇಗಗಳನ್ನು ನಿಗ್ರಹಿಸುವ ಮತ್ತು ಹಿತಕರ ಸಂವೇಗಗಳನ್ನು ಪೋಷಿಸುವ ಮತ್ತು ಸಂವೇಗಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ವೃದ್ಧಿಮಾಡಿಕೊಳ್ಳುವುದು.

ಮನೋವಿಜ್ಞಾನಿ ಹಾಗೂ ಪತ್ರಕರ್ತ ‘ಡೇನಿಯಲ್ ಗೋಲೆಮನ್’ 1995 ರಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ವರ್ತನಾ ವಿಜ್ಞಾನದ ಬಗ್ಗೆ ಬರೆಯುತ್ತಾ: ‘ಸಂವೇಗಾತ್ಮಕ ಬುದ್ಧಿಶಕ್ತಿಯು (E.I) ಸಂತೋಷಕರ ಮತ್ತು ಉಪಯುಕ್ತ ಜೀವನ ನಡೆಸುವಲ್ಲಿ ಬುದ್ಧಿಶಕ್ತಿ (1.Q) ಗಿಂತ ಬಹಳ ಮುಖ್ಯ’ ಎಂದು ಹೇಳಿದ್ದಾನೆ. ಗೋಲೆಮನ್ ಪ್ರಕಾರ ಸಂವೇಗಾತ್ಮಕ ಬುದ್ಧಿಮತ್ತೆ (E.Q.) ಐದು ಪ್ರಮುಖ ಭಾಗಗಳನ್ನೊಳಗೊಂಡಿದೆ. ಅವುಗಳೆಂದರೆ

1. ನಮ್ಮದೇ ಸಂವೇಗಗಳನ್ನು (ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು.

2. ನಮ್ಮ ಸಂವೇಗಗಳನ್ನು ನಿಯಂತ್ರಿಸುವುದು.

3. ನಮ್ಮನ್ನು ನಾವೇ ಉತ್ತೇಜಿಸಿಕೊಳ್ಳುವುದು (ಪ್ರೇರೇಪಿಸಿಕೊಳ್ಳುವುದು)

4. ಇತರರ ಭಾವನೆಗಳನ್ನು (ಸಂವೇಗಗಳನ್ನು ಗುರ್ತಿಸುವುದು ಅಥವಾ ಅರ್ಥಮಾಡಿಕೊಳ್ಳುವುದು.

5. ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಅಥವಾ ನಿಭಾಯಿಸುವುದು.

Leave a Comment