Emotions: ಸಂವೇಗಗಳ ಎರಡು ಭಾಗಗಳು

Emotions: ಸಂವೇಗಗಳ ಎರಡು ಭಾಗಗಳು

Emotions


1) ಹಿತಕರ ಸಂವೇಗಗಳು (pleasant emotions)

2) ಅಹಿತಕರ ಸಂವೇಗಗಳು

1) ಹಿತಕರ ಸಂವೇಗಗಳು (pleasant emotions) :-

ವ್ಯಕ್ತಿಗೆ ಹಾಗೂ ಇತರರಿಗೆ ಹಿತ ಉಂಟುಮಾಡುವ ಸಂವೇಗಗಳನ್ನು ಹಿತಕರ ಸಂವೇಗಗಳು ಎನ್ನುವರು. ಪ್ರಮುಖವಾದ ಹಿತಕರ ಸಂವೇಗಗಳೆಂದರೆ ಸಂತೋಷ, ಆನಂದ, ಉಲ್ಲಾಸ, ಪ್ರೀತಿ, ಮಮತೆ, ಕರುಣೆ, ದಯೆ, ಅನುಕಂಪ (ಅನುಭೂತಿ) ಸಹ ಅನುಭೂತಿ, ಇತ್ಯಾದಿ.

2) ಅಹಿತಕರ ಸಂವೇಗಗಳು (unpleasant) :-

ವ್ಯಕ್ತಿಗೆ ಹಾಗೂ ಇತರರಿಗೆ ಆಹಿತವನ್ನು ಉಂಟುಮಾಡುವ ಸಂವೇಗಗಳನ್ನು ಅಹಿತಕರ ಸಂವೇಗಗಳು ಎಂದು ಕರೆಯುವರು. ಅವುಗಳೆಂದರೆ ಭಯ, ಕೋಪ, ದುಃಖ, ದ್ವೇಷ, ಅಸೂಯೆ. ಮಾತ್ಸರ್ಯ ಅಥವಾ ಹೊಟ್ಟೆಕಿಚ್ಚು, ಇತ್ಯಾದಿ.

ಸಂವೇಗಗಳನ್ನು ಮತ್ತೊಂದು ರೀತಿಯಲ್ಲಿ ಅ) ಪ್ರಾಥಮಿಕ ಅಥವಾ ಮೂಲ ಸಂವೇಗಗಳು ಮತ್ತು

ಆ) ಅನುಷಂಗಿಕ ಸಂವೇಗಗಳು ಎಂದು ವಿಂಗಡಿಸಲಾಗಿದೆ. ಪ್ರಾಥಮಿಕ ಸಂವೇಗಗಳು ಸಾರ್ವತ್ರಿಕ ಹಾಗೂ ಶಾರೀರಿಕ ಆಧಾರವನ್ನು ಹೊಂದಿವೆ. ಉದಾಹರಣೆಗೆ : ಕೋಪ, ಭಯ, ಸಂತೋಷ, ದುಃಖ, ಅಸಹ್ಯ, ಇತ್ಯಾದಿ. ಅನುಷಂಗಿಕ ಸಂವೇಗಗಳು ಹಲವು ಸಂವೇಗಗಳ ಮಿಶ್ರಣವಾಗಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಹಾಸ್ಯ, ಪ್ರೀತಿ, ಅಪರಾಧಿ ಮನೋಭಾವ, ಮಾತ್ಸರ್ಯ, ಮುಂತಾದವು.

“ಒಂದು ರೋಮಾಂಚಕಾರಿ ಸನ್ನಿವೇಶವನ್ನು ಆಸ್ವಾದಿಸಿದಾಗ ನಮ್ಮ ಶರೀರ ಹಾಗೂ ಭಾವನೆಗಳಲ್ಲಿ ಉಂಟಾಗುವ ಬದಲಾವಣೆಗಳನ್ನು ಸಂವೇಗ ಎನ್ನುವರು”, ಎಂದು ‘ಕ್ಯಾನನ್’ ನಿರೂಪಿಸಿದ್ದಾನೆ.

ದೈನಂದಿನ ಬದುಕಿನಲ್ಲಿ ಸಂವೇಗಗಳು ನಿರ್ವಹಿಸುವ ಪಾತ್ರವನ್ನು ಮನೋವಿಜ್ಞಾನಿಗಳು ಗುರ್ತಿಸಿದ್ದಾರೆ.

ಅವುಗಳೆಂದರೆ.

1) ಕಾರ್ಯನಿರ್ವಹಣೆಗಾಗಿ ಪೂರ್ವಸಿದ್ದತೆ :-

ಸಂವೇಗ ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಡುವೆ ಸೇತುವೆ (ಅಥವಾ ಕೊಂಡಿ) ಯಂತೆ ಕೆಲಸ ಮಾಡುತ್ತದೆ. ಉದಾಹರಣೆಗೆ : ಒಂದು ನಾಯಿ ನಮ್ಮನ್ನು ಅಟ್ಟಿಸಿಕೊಂಡು ಬಂದಾಗ ತೀವ್ರವಾದ ಭಯ ಉಂಟಾಗುತ್ತದೆ. ಭಯ ಅನುಕಂಪಿನರಗಳನ್ನು ಪ್ರಚೋದಿಸುವುದರಿಂದ ಶಾರೀರಿಕ ಚಟುವಟಿಕೆ ಅಧಿಕಗೊಂಡು, ರಭಸವಾಗಿ ಓಡಿಹೋಗುವಂತೆ ಮಾಡುತ್ತದೆ.

2) ಭವಿಷ್ಯದ ವರ್ತನೆಯನ್ನು ನಿರ್ಧರಿಸುತ್ತದೆ :

ಸಂವೇಗಗಳು ಬಾಹ್ಯ ಹಾಗೂ ಆಂತರಿಕ ಪ್ರಚೋದನೆಗಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ನಮ್ಮನ್ನು ಜಾಗೃತಗೊಳಿಸುತ್ತವೆ. ಉದಾಹರಣೆಗೆ : ಮೇಲಿನ ಉದಾಹರಣೆಯಲ್ಲಿ ನಾಯಿ ನಮ್ಮನ್ನು ಅಟ್ಟಿಸಿಕೊಂಡು ಬಂದಾಗ ಅಪಾಯದಿಂದ ತಪ್ಪಿಸಿಕೊಳ್ಳುವಂತೆ ಭಯ ನಮ್ಮನ್ನು ಜಾಗೃತಗೊಳಿಸಿ ಅಲ್ಲಿಂದ ಓಡಿಹೋಗುವಂತೆ ಮಾಡುತ್ತದೆ. ಇದರಿಂದ ನಾಯಿಯಿಂದ ಕಡಿತಕ್ಕೆ ಒಳಗಾಗುವುದು ತಪ್ಪುತ್ತದೆ. ಹಾಗೆಯೇ ಹಿತಕರ ಸಂವೇಗಗಳು ನಮ್ಮ ವರ್ತನೆಗಳು ಅಥವಾ ಪ್ರತಿಕ್ರಿಯೆಗಳು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡುತ್ತವೆ. ಉದಾಹರಣೆಗೆ : ಕಷ್ಟಪಟ್ಟು ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಬಂದಾಗ ತುಂಬಾ ಸಂತೋಷವಾಗುತ್ತದೆ ಮತ್ತು ಮುಂದೆ ಇನ್ನೂ ಹೆಚ್ಚು ಶ್ರಮಪಟ್ಟು ಅಭ್ಯಾಸ ಮಾಡುವ ಹುಮ್ಮಸ್ಸು ಬರುತ್ತದೆ.

3) ಇತರರ ಜೊತೆಗಿನ ಸಂವಹನ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುತ್ತದೆ :

ಇತರರ ಜೊತೆ ನಾವು ವಿಚಾರ ವಿನಿಮಯ ಮಾಡಿಕೊಳ್ಳುವಾಗ ಸಂವೇಗಭರಿತ ಹಾವಭಾವಗಳು, ಮಾತಿನ ದಾಟಿ ಮತ್ತು ಮುಖಚರ್ಯೆ. ಮುಂತಾದವು ನಮ್ಮ ಸಂವಾದ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುತ್ತದೆ.

ಎಲ್ಲ ರೀತಿಯ ಸಂವೇಗಗಳಲ್ಲೂ ಎರಡು ರೀತಿಯ ಅಂಶಗಳಿರುವುದನ್ನು ಕಾಣುತ್ತೇವೆ. ಅವುಗಳೆಂದರೆ

1) ಗುಣಾತ್ಮಕ ಅಂಶಗಳು ಮತ್ತು

ii) ಪರಿಮಾಣಾತ್ಮಕ ಅಂಶಗಳು.

1) ಗುಣಾತ್ಮಕ ಅಂಶಗಳು :-

ನಮ್ಮ ಭಾವನೆಗಳನ್ನು ಪದಗಳಲ್ಲಿ ವಿವರಿಸಿದಾಗ ಆ ಭಾವನೆ ಸಕಾರಾತ್ಮಕವಾದುದೆ ಅಥವಾ ನಕಾರಾತ್ಮಕವಾದುದೆ ಎಂದು ತಿಳಿಯುತ್ತದೆ. ಉದಾಹರಣೆಗೆ : ಪ್ರೀತಿ, ಸ್ನೇಹ, ಭಯ, ಅಭದ್ರತೆ, ಇತ್ಯಾದಿಗಳನ್ನು ಮಾತುಗಳಲ್ಲಿ ವಿವರಿಸುವಾಗ ಅದರ ಗುಣಾತ್ಮಕ ಅಂಶದ ಅರಿವಾಗುತ್ತದೆ.

ii) ಪರಿಮಾಣಾತ್ಮಕ ಅಂಶಗಳು :-

ನಮ್ಮ ಸಂವೇಗಗಳು ಎಷ್ಟು ತೀವ್ರ ಪ್ರಮಾಣದಲ್ಲಿ ಅಂದರೆ ಸ್ವಲ್ಪ, ಗಂಭೀರ, ವಿಪರೀತ, ಅದ್ಭುತ, ಬಹಳ ಇತ್ಯಾದಿಯಾಗಿ ಮಾತುಗಳಲ್ಲಿ ವಿವರಿಸಿದಾಗ ಸಂವೇಗದ ಪ್ರಮಾಣ ಎಷ್ಟೆಂಬುದು ತಿಳಿಯುತ್ತದೆ.

ಹಿತಕರ ಸಂವೇಗಗಳು (pleasant emotions or positive emotions):

ಈಗಾಗಲೇ ತಿಳಿದಿರುವಂತೆ ವ್ಯಕ್ತಿಗೆ ಹಾಗೂ ಇತರರಿಗೆ ಹಿತವನ್ನುಂಟುಮಾಡುವಂತಹ ಸಂವೇಗಗಳನ್ನು ಹಿತಕರ ಸಂವೇಗಗಳೆನ್ನುವರು. ಅವುಗಳಲ್ಲಿ ಕೆಲವು ಹಿತಕರ ಸಂವೇಗಗಳ ಬಗ್ಗೆ ತಿಳಿದುಕೊಳ್ಳೋಣ.

1) ಆನಂದ, ಸಂತೋಷ, ಉಲ್ಲಾಸ (Joy, happiness and elation):

ಆನಂದ ಒಂದು ಹಿತಕರ ಸಂವೇಗ- ಆನಂದದ ಹ್ರಸ್ವ (mild) ರೂಪವೇ ಸಂತೋಷ, ಖುಷಿ (pleasure) ಇತ್ಯಾದಿ. ಶೈಶವಾವಸ್ಥೆಯಲ್ಲಿ ಶಾರೀರಿಕ ಅಂಶಗಳಿಂದ ಆನಂದ ಸಿಗುತ್ತದೆ. ಮೂರು ತಿಂಗಳ ಮಗು ಮುಗಳಗೆ ಮೂಲಕ ಮತ್ತು ನಗುವ ಮೂಲಕ ತನ್ನ ಆನಂದವನ್ನು ವ್ಯಕ್ತಪಡಿಸುತ್ತದೆ. ಮಗುವಿಗೆ ಕಚಗುಳಿ ಕೊಡುವುದರಿಂದ ಮತ್ತು ಆತ್ಮೀಯ ಅಪ್ಪುಗೆಯಿಂದ ಮಗುವಿನಲ್ಲಿ ಆನಂದದ ಅನುಭವ ಆಗುವುದನ್ನು ಕಾಣುತ್ತೇವೆ. ಮಗು ತನ್ನ ತಾಯಿಯನ್ನು ನೋಡಿದಾಗ ಅತಿಯಾದ ಆನಂದವನ್ನು ವ್ಯಕ್ತಪಡಿಸುತ್ತದೆ. ತಾಯಿಯ ತೋಳಪ್ಪುಗೆ ಮತ್ತು ಎದೆಗೆ ಅವುಚಿಕೊಳ್ಳುವುದರಿಂದ ಮಗುವಿನಲ್ಲಿ ಆನಂದದ ಅಲೆಗಳನ್ನೇ ಎಬ್ಬಿಸುತ್ತದೆ. ಆಟದ ಬೊಂಬೆಗಳು ಮಗುವಿನಲ್ಲಿ ಆನಂದ ಉಂಟುಮಾಡುವ ಮತ್ತೊಂದು ಅಂಶ ಮತ್ತು ವಸ್ತುಗಳನ್ನು ಮನಬಂದಂತೆ ಚಲ್ಲಾಪಿಲ್ಲಿ ಮಾಡುವುದರಿಂದ ಮಗುವಿಗೆ ಆನಂದ ಸಿಗುತ್ತದೆ. ಮಕ್ಕಳು ಬೆಳೆದಂತೆ ಆನಂದ ಮತ್ತು ಸಂತೋಷ ಬೇರೆ ಬೇರೆ ಮೂಲಗಳಿಂದ ದೊರೆಯುತ್ತದೆ. ಉದಾಹರಣೆಗೆ : ಶಾಲೆಯಲ್ಲಿ ಕಲಿಕೆ ಹಾಗೂ ಇತರ ಚಟುವಟಿಕೆಗಳಲ್ಲಿ ಎಲ್ಲರಿಗಿಂತ ಉತ್ತಮ ಸಾಧನೆ ಮಾಡಿದಾಗ ಮಗುವಿಗೆ ಅತಿಯಾದ ಆನಂದ ದೊರೆಯುತ್ತದೆ. ಯುವಕರಲ್ಲಿ ತಾವು ಅಂದುಕೊಂಡಿದ್ದ ಗುರಿ ಸಾಧನೆಯಾದಾಗ ಅತಿಯಾದ ಆನಂದ ಉಂಟಾಗುತ್ತದೆ. ಮನಸ್ಸು ಆನಂದಭರಿತವಾದಾಗ ನಗು. ಮುಗುಳ್ಳಗೆ ಹಾಗೂ ಆರಾಮವಾಗಿ ಮೈಚೆಲ್ಲಿ ಮಲಗುವ ಮೂಲಕ ವ್ಯಕ್ತಿ ತನ್ನ ಸಂತೃಪ್ತಿಯನ್ನು ಪ್ರದರ್ಶಿಸುತ್ತಾನೆ.

ಸಂತೋಷ :-

ಆನಂದದ ಸರಳ ರೂಪವೇ ಸಂತೋಷ ನಮಗೆ ಬೇಕಾದದ್ದು ದೊರೆತಾಗ ಅಥವಾ ನಾವು ಅಂದುಕೊಂಡಂತೆ ಆದಾಗ ನಮಗೆ ಸಂತೋಷವಾಗುತ್ತದೆ. ಉದಾಹರಣೆಗೆ : ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಉತ್ತಮ ಅಂಕಗಳು ದೊರೆತಾಗ ಮನೆಮಂದಿಗೆಗೆಲ್ಲಾ ಸಂತೋಷವಾಗುತ್ತದೆ. ಉತ್ತಮರ ಸ್ನೇಹ ಸಂಪರ್ಕ ಸಂತೋಷವನ್ನುಂಟು ಮಾಡುತ್ತದೆ. “ಸಜ್ಜನರ ಸಂಘ ಹೆಚ್ಚೇನು ಸವಿದಂತೆ” ಎಂಬ ಗಾದೆ ಮಾತು ನಮಗಾಗುವ ಸಂತೋಷದ ಅನುಭವದಿಂದಲೇ ಹುಟ್ಟುಕೊಂಡಿದೆ.

ಸಂತೋಷವಾದಾಗ ನಮ್ಮ ಶರೀರದ ಪ್ರತಿಕ್ರಿಯೆ ಎಂದರೆ ಹೃದಯ ಬಡಿತ ಮತ್ತು ರಕ್ತದ ಒತ್ತಡದ ಏರಿಕೆಯಾಗುತ್ತದೆ. ಉಸಿರಾಟದ ಏರಿಳಿತದಿಂದ ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಿಳಿದುಬಂದಿದೆ. ಸಂತೋಷವಾದಾಗ ಮುಖ ಅರಳುವುದರಿಂದ ತುಟಿ ತೆರೆಯಲ್ಪಟ್ಟು ಹಲ್ಲುಗಳು ಕಾಣುತ್ತವೆ. ಈ ಚಿಹ್ನೆಗಳು ವ್ಯಕ್ತಿಗೆ ಸಂತೋಷವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತವೆ.

ಪ್ರೀತಿ (Love) :

ಇದು ಒಂದು ತೀವ್ರವಾದ ಹಿತಕರ ಸಂವೇಗ, ಪ್ರೀತಿ ಎಂಬ ಸಂವೇಗವನ್ನು ಅರ್ಥಮಾಡಿಕೊಳ್ಳಲು ಮನೋವಿಜ್ಞಾನಿಗಳು ಪ್ರಯೋಗಾತ್ಮಕ ಪ್ರಯತ್ನ ಮಾಡಿದ್ದಾರೆ. ಪ್ರೀತಿ ಅಥವಾ ಪ್ರೇಮವೆಂಬುದು ಸನ್ನಿವೇಶವನ್ನು ಅವಲಂಬಿಸಿದೆ. ತಂದೆ ತಾಯಿಯರು ಮಕ್ಕಳ ಬಗ್ಗೆ ತೋರುವ ಪ್ರೀತಿಗೂ, ಮಕ್ಕಳು ತಂದೆ ತಾಯಿಯರ ಬಗ್ಗೆ ತೋರುವ ಪ್ರೀತಿಗೂ ವ್ಯತ್ಯಾಸವಿದೆ. ಹಾಗೆಯೇ ರಾಷ್ಟ್ರಪ್ರೇಮಿ ಮತ್ತು ಹೆತ್ತವರ ಬಗೆಗಿನ ಪ್ರೇಮಕ್ಕೂ ವ್ಯತ್ಯಾಸವಿದೆ. ರಾಷ್ಟ್ರಪ್ರೇಮ ಅಮೂರ್ತವಾದುದು. ಆದರೆ ಹೆತ್ತವರ ಬಗೆಗಿನ ಪ್ರೇಮ ಮಧುರಭಾವಗಳನ್ನೊಳಗೊಂಡಿದ್ದಾಗಿರುತ್ತದೆ ಮತ್ತು ವೈಯಕ್ತಿಕವಾದುದಾಗಿರುತ್ತದೆ.

ಆವೇಶಭರಿತವಾದ ಪ್ರೇಮ ತೀವ್ರತರವಾದದ್ದು. ಹುಡುಗ-ಹುಡುಗಿಯರ ನಡುವಿನ ಪ್ರೇಮ ಆವೇಶಭರಿತವಾದ ಪ್ರೇಮ, ಹಾಗೆಯೇ ಸಂಗೀತ, ಕಲೆ, ಸಾಹಿತ್ಯ, ಮುಂತಾದವುಗಳ ಬಗೆಗಿನ ಪ್ರೇಮದಲ್ಲಿ ಮಾನಸಿಕ ತಲ್ಲೀನತೆಯ ಪರಿಣಾಮವಾಗಿ ಅದೂ ಕೂಡ ಒಂದು ರೀತಿಯ ಪ್ರೇಮ ಎಂದೇ ಹೇಳಬಹುದು, ಆವೇಶಭರಿತ ಪ್ರೇಮದಲ್ಲಿ ಒಬ್ಬರೊನ್ನೊಬ್ಬರು ಅಗಲಿರುವುದು ಸಹಿಸಲಾಗದ ಮಾನಸಿಕ ಯಾತನೆ ಎನಿಸುತ್ತದೆ. ಪ್ರೇಮಿಗಳ ಅಗಲಿಕೆ ಇದಕ್ಕೊಂದು ಒಳ್ಳೆಯ ಉದಾಹರಣೆ. ಅನುಕಂಪದ ಪ್ರೀತಿಯಲ್ಲಿ ಇತರರ ಬಗ್ಗೆ ಕಳಕಳಿ ಹಾಗೂ ಕಾಳಜಿಯನ್ನು ಕಾಣುತ್ತೇವೆ. ಪ್ರೀತಿ ಒಂದು ರೀತಿ ಅನುವಂಶಿಕವಾದುದು. ಎಲ್ಲ ದೇಶ, ಜಾತಿ, ಜನಾಂಗಗಳಲ್ಲೂ ಹಾಗೂ ಪ್ರಾಣಿಗಳಲ್ಲೂ ಪ್ರೀತಿಯನ್ನು ಕಾಣುತ್ತೇವೆ. ಆದರೆ ಪ್ರೀತಿಯ ಅಭಿವ್ಯಕ್ತಿ ಸಂಸ್ಕೃತಿಯಿಂದ ಸಂಸ್ಕೃತಿಗೆ ಭಿನ್ನವಾಗಿರುತ್ತದೆ. ಹಾಗಾಗಿ ಪ್ರೀತಿ ಎಂದರೇನು ಎಂದು ನಿರೂಪಿಸುವುದು ತುಂಬಾ ಕಷ್ಟಕರವಾಗಿದೆ.

ಮಮತೆ (Affection):

ಒಂದು ಪ್ರಾಣಿ ಅಥವಾ ವ್ಯಕ್ತಿಯ ಬಗ್ಗೆ ನಾವು ತೋರುವ ಹಿತಕರ ವರ್ತನೆಯೇ ಮಮತೆ. ಇದು ಆತ್ಮೀಯತೆ, ಅನುಕಂಪ, ಕಳಕಳಿ, ಅದರ ಮತ್ತು ಸಹಾಯದ ಮನೋಭಾವವನ್ನೊಳ ಗೊಂಡಿರುತ್ತದೆ. ತನ್ನ ಅವಶ್ಯಕತೆಗಳನ್ನು ಪೂರೈಸುವವರ ಬಗ್ಗೆ ಹಿತಕರ ಮನೋಭಾವವನ್ನು ವ್ಯಕ್ತಪಡಿಸುತ್ತದೆ. ಪ್ರೀತಿ ಮಮತೆ ತೋರುವವರ ಬಗ್ಗೆ ಮಗು ಅತಿಯಾದ ಆತ್ಮೀಯತೆ ಪ್ರದರ್ಶಿಸುತ್ತದೆ. ಅದೇರೀತಿ ಆಟದ ಬೊಂಬೆಗಳ ಬಗ್ಗೆ ಹಾಗೂ ಪ್ರಾಣಿಗಳ ಬಗ್ಗೆ ಮಕ್ಕಳು ಅತಿಯಾದ ಬಾಂಧವ್ಯ ಮತ್ತು ಮಮತೆಯನ್ನು ವ್ಯಕ್ತಪಡಿಸುತ್ತಾರೆ. ಮಮತೆಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಾಗ ಅಲ್ಲಿ ಒಳ್ಳೆಯ ಬಾಂಧವ್ಯ ವೃದ್ಧಿಯಾಗುತ್ತದೆ. ಮಕ್ಕಳು ದೊಡ್ಡವರಾದಂತೆ ದೈಹಿಕ ಅಪ್ಪುಗೆಯಿಂದ ತೋರುತ್ತಿದ್ದ ಮಮತೆಯನ್ನು ಬಿಟ್ಟು ಮಾತುಗಳಲ್ಲಿ ವ್ಯಕ್ತಪಡಿಸುವುದನ್ನು ಕಲಿಯುವರು.

ವಯಸ್ಕರಲ್ಲಿ ಮಮತೆಯ ಅಭಿವ್ಯಕ್ತಿ ಮೇಲೆ ಸಂಸ್ಕೃತಿಯ ಪ್ರಭಾವವನ್ನು ಕಾಣುತ್ತೇವೆ. ಪರಸ್ಪರ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಮೂಲಕ ವಯಸ್ಕರು ತಮ್ಮ ಮಮತೆಯನ್ನು ವ್ಯಕ್ತಪಡಿಸುತ್ತಾರೆ.

ಅನುಭೂತಿ ಮತ್ತು ಸಹಾನುಭೂತಿ (Sympathy and empathy)

ಅನುಭೂತಿ ಸಹಾನುಭೂತಿಗಳು ಉನ್ನತಮಟ್ಟದ ಹಿತಕರ ಸಂವೇಗಗಳು ಎನ್ನುವರು. ಇತರರ ನೋವು-ನಲಿವುಗಳನ್ನು ಹಂಚಿಕೊಳ್ಳುವುದೇ ಅನುಭೂತಿ ಅಥವಾ ಅನುಕಂಪ ಅಥವಾ ಇತರರ ಕಷ್ಟ-ಸುಖಗಳಲ್ಲಿ ಪಾಲ್ಗೊಂಡು ಅವರ ಹಿತಬಯಸುವುದು. ಮತ್ತು ಕೈಲಾದ ಸಹಾಯ ಹಸ್ತ ನೀಡುವುದು ಅನುಭೂತಿಯ ತಿರುಳು. ಮನುಷ್ಯ ಸ್ವಭಾವತಃ ಸಂಘಜೀವಿಯಾದ್ದರಿಂದ ಇತರರ ನೋವು ನಲಿವುಗಳಲ್ಲಿ ಸಹಜವಾಗಿಯೇ ಪಾಲ್ಗೊಳ್ಳುತ್ತಾನೆ.

ಅನುಭೂತಿ ಎಂದರೆ ಇತರರ ಕಷ್ಟ-ಸುಖಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೈಲಾದ ಸಹಾಯ ಮಾಡುವುದು. ಆದರೆ ಇಲ್ಲಿ ಇತರರ ಕಷ್ಟ ಸುಖಗಳು ನಮ್ಮ ಕಷ್ಟ ಸುಖಗಳಾಗಿರುವುದಿಲ್ಲ. ಉದಾಹರಣೆಗೆ ಬಂಧುಗಳಲ್ಲಿ ಅಥವಾ ಆಪ್ತವಲಯದಲ್ಲಿ ಯಾರಾದರೂ ತೀರಿಕೊಂಡರೆ ತಕ್ಷಣ ಅವರ ಮನೆಗೆ ಧಾವಿಸುತ್ತೇವೆ. ಸಾಂತ್ವನ ಹೇಳುತ್ತೇವೆ. ಅಲ್ಲಿ ಅವಶ್ಯಕವಿರುವ ಎಲ್ಲ ಕೆಲಸಕಾರ್ಯಗಳು ಸುಗಮವಾಗಿ ನಡೆಯಲು ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತೇವೆ. ಆದರೆ ಅವರ ಕಷ್ಟಗಳು ಅವರ ಮನ ಕಲಕಿರುವಷ್ಟು ನಮ್ಮ ಮನಸ್ಸನ್ನು ತಟ್ಟಿರುವುದಿಲ್ಲ. ಆದರೂ ಮರುಕ ಪಡುತ್ತೇವೆ. ಸಮಾಧಾನ ಹೇಳುತ್ತೇವೆ. ಹೀಗೆ ಮಾಡುವುದರಿಂದ ಅವರಿಗೂ ಒಂದು ರೀತಿಯ ಮಾನಸಿಕ ತೃಪ್ತಿ ಸಿಗುತ್ತದೆ. ಇದು ಸಮಾಜದಲ್ಲಿ ಅಗತ್ಯವಿರುವ ಒಂದು ಹಿತಕರ ಸಂವೇಗ ಬಾಲ್ಯದಿಂದಲೇ ಮಕ್ಕಳಲ್ಲಿ ಅನುಭೂತಿ ಅಥವಾ ಅನುಕಂಪವನ್ನು ಬೆಳೆಸುವುದು ವ್ಯಕ್ತಿ ಹಾಗೂ ಸಮಾಜದ ದೃಷ್ಟಿಯಿಂದ ಒಳ್ಳೆಯದು.

ಸಹ ಅನುಭೂತಿ ಅಥವಾ ತದನುಭೂತಿ (empathy) :

ಇತರರ ಕಷ್ಟ ಸುಖಗಳು ತನ್ನ ಕಷ್ಟ ಸುಖಗಳೆಂದೇ ಭಾವಿಸಿ ಪಾಲ್ಗೊಳ್ಳುವುದಕ್ಕೆ ಸಹಅನುಭೂತಿ ಅಥವಾ ತದನುಭೂತಿ ಎನ್ನುತ್ತೇವೆ. ಇದು ಅನುಭೂತಿಗಿಂತ ಉನ್ನತವಾದ ಹಿತಕರ ಸಂವೇಗ. ಇಲ್ಲಿ ಅನನ್ಯತೆ ಅಥವಾ ತಾದಾತ್ಮಾತೆ ಇರುತ್ತದೆ. ಇತರರ ನೋವು-ನನಲಿವುಗಳನ್ನು ಸಹಅನುಭೂತಿ ವ್ಯಕ್ತಪಡಿಸುವ ವ್ಯಕ್ತಿಯೂ ಅನುಭವಿಸುತ್ತಾನೆ. ಸಂಕಟದಲ್ಲಿರುವ ವ್ಯಕ್ತಿ ಅನುಭವಿಸುವ ಭಾವನೆಗಳನ್ನು ನೋಡುವ ವ್ಯಕ್ತಿಯೂ ಅನುಭವಿಸುತ್ತಾನೆ. ನಾಯಕ ಅಥವಾ ನಾಯಕಿ ಆಳುತ್ತಿದ್ದರೆ ನೋಡುವ ವ್ಯಕ್ತಿಯೂ ದುಃಖ ಅನುಭವಿಸುತ್ತಾನೆ. ಮುಗ್ಧಮನಸ್ಸುಗಳು ಬೇಗ ತಾದಾಕ್ಷ್ಯತೆ ಅನುಭವಿಸುತ್ತವೆ. ಇತರರ ನೋವು ನಲಿವುಗಳಿಗೆ ಬೇಗ ಸ್ಪಂದಿಸುತ್ತವೆ. ಗ್ರಾಮೀಣ ಪ್ರದೇಶದ ಜನರಲ್ಲಿ ನಗರ ಪ್ರದೇಶದ ಜನರಿಗಿಂತ ಹೆಚ್ಚಿನ ತಾದಾತ್ಮತೆಯನ್ನು ಕಾಣಬಹುದಾಗಿದೆ.

ಒಟ್ಟಾರೆ. ಅನುಭೂತಿ ಮತ್ತು ಸಹ ಅನುಭೂತಿಗಳು ಉತ್ತಮ ಹಿತಕರ ಸಂವೇಗಗಳಾಗಿದ್ದು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಈ ಸಂವೇಗಗಳನ್ನು ಬೆಳೆಸುವುದು ಸಮಾಜದ ದೃಷ್ಟಿಯಿಂದ ಹಾಗೂ ವ್ಯಕ್ತಿಯದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆ ಎನ್ನಬಹುದು.

ಅಹಿತಕರ ಸಂವೇಗಗಳು :-

ವ್ಯಕ್ತಿಯ ನೆಮ್ಮದಿ ಮತ್ತು ಸಮಾಜದ ನೆಮ್ಮದಿಗೆ ಭಂಗ ಉಂಟುಮಾಡುವ ಸಂವೇಗಗಳನ್ನು ಅಹಿತಕರ ಸಂವೇಗಗಳೆನ್ನುವರು. ಅಹಿತಕರ ಸಂವೇಗಗಳಲ್ಲಿ ಪ್ರಮುಖವಾದ ಕೆಲವು ಸಂವೇಗಗಳನ್ನು ಈಗ ಚರ್ಚಿಸೋಣ.

1) ಕೋಪ :-

ವ್ಯಕ್ತಿ ತೋರುವ ಉದ್ರಿಕ್ತ ಪ್ರತಿಕ್ರಿಯೆಯೇ ಕೋಪ, ಸಮಾಜದಲ್ಲಿರುವ ಅನ್ಯಾಯ, ಅಸಮಾನತೆ, ವಂಚನೆ, ಪಕ್ಷಪಾತ, ಇತ್ಯಾದಿಗಳು ವ್ಯಕ್ತಿಯಲ್ಲಿ ಅತಿಯಾದ ಕೋಪವನ್ನುಂಟು ಮಾಡುತ್ತವೆ. ಅವಮಾನ, ಅವಹೇಳನ. ಅವಕಾಶಗಳನ್ನು ತಪ್ಪಿಸುವುದು, ದೈಹಿಕ ಆಕ್ರಮಣ ಮುಂತಾದವುಗಳಿಂದಲೂ ವ್ಯಕ್ತಿ ಕೋಪಗೊಳ್ಳುತ್ತಾನೆ. ‘ಕೋಪ ಎಂದರೆ ವೈರತ್ವ, ಹಗೆತನ ಹಾಗೂ ಅಸಂತೋಷದಿಂದ ಕೂಡಿದ ತೀವ್ರವಾದ ಭಾವನೆ’. ಮಕ್ಕಳಿಗೆ ಬೇಕಾದುದು ದೊರೆಯದಿದ್ದಾಗ ಅಥವಾ ಮಕ್ಕಳು ಮಾಡುತ್ತಿರುವುದು ಸರಿಯಲ್ಲ ‘ನಿಲ್ಲಿಸು’ ಎಂದಾಗ ಅವರಿಂದ ವಸ್ತುಗಳನ್ನು ಕಸಿದುಕೊಂಡಾಗ, ಮಕ್ಕಳಿಗೆ ತುಂಬಾ ಸಿಟ್ಟು ಬರುತ್ತದೆ. ಮಗು ಬೆಳೆದಂತೆ ಸಾಮಾಜಿಕ ಸನ್ನಿವೇಶಗಳು ಕೋಪವನ್ನು ವ್ಯಕ್ತಪಡಿಸುವುದರ ಮೇಲೆ ಪ್ರಭಾವ ಬೀರುತ್ತವೆ. ವ್ಯಕ್ತಿಯ ಆತ್ಮಗೌರವಕ್ಕೆ ಧಕ್ಕೆಯಾದಾಗ, ವೈಯಕ್ತಿಕ ವಿಷಯಗಳಲ್ಲಿ ಇತರರು ಅನಗತ್ಯವಾಗಿ ಪದೇಪದೇ ಮೂಗು ತೂರಿಸಿದಾಗ ವ್ಯಕ್ತಿಯಲ್ಲಿ ಅತಿಯಾದ ಕೋಪವುಂಟಾಗುತ್ತದೆ. ಅವಮಾನ ಮಾಡುವುದು ಅಥವಾ ಇತರರ ಮುಂದೆ ಹೀಯಾಳಿಸುವುದರಿಂದಲೂ ವ್ಯಕ್ತಿಗೆ ಅಸಹನೀಯ ಕೋಪ ಬರುತ್ತದೆ. ವಯಸ್ಸಾದಂತೆ ಕೋಪದ ಕಾರಣಗಳು ಮತ್ತು ಕೋಪ ವ್ಯಕ್ತಪಡಿಸುವಿಕೆ ವಿಧಾನಗಳು ಬದಲಾಗುತ್ತವೆ. ಮಕ್ಕಳು ಕಿರುಚಿಕೊಳ್ಳುವುದು, ಆಳುವುದು, ಬಿದ್ದು ಒದ್ದಾಡುವುದು, ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡುವುದು, ಮುಂತಾದ ವಿಧಾನಗಳ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಾರೆ. ದೊಡ್ಡವರು ಬಾಯಿಮಾತಿನಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಾರೆ. ಕೆಲವರು ಅತಿ ಸೌಮ್ಯರೀತಿಯಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದರೆ ಮತ್ತೆ ಕೆಲವರು ಆಕ್ರಮಣ ಅಥವಾ ದಾಳಿ ಮಾಡುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಾರೆ. ಕೋಪವ್ಯಕ್ತ ಪಡಿಸುವಿಕೆಯಲ್ಲಿ ಸಕ್ರಿಯ ವರ್ತನೆ ಮತ್ತು ನಿಷ್ಕ್ರಿಯ ವರ್ತನೆ ಎಂದು ಎರಡು ವಿಧಗಳನ್ನು ಕಾಣುತ್ತೇವೆ. ಸಕ್ರಿಯ ವರ್ತನೆಯಲ್ಲಿ ವ್ಯಕ್ತಿ ಕೋಪಬಂದಾಗ ತನ್ನ ಕೋಪಕ್ಕೆ ಕಾರಣರಾದವರನ್ನು ದೈಹಿಕವಾಗಿ ಹಾಗೂ ಮಾತುಗಳಲ್ಲಿ ಆಕ್ರಮಣ ಮಾಡುತ್ತಾನೆ. ಆದರೆ ನಿಷ್ಕ್ರಿಯ ವರ್ತನೆಯಲ್ಲಿ ವ್ಯಕ್ತಿ ಕೋಪವನ್ನು ತನ್ನೊಳಗೆ ಅನುಭವಿಸುತ್ತಾನೆ.

ಕೋಪಗೊಂಡಾಗ ಅಡ್ರಿನಲ್ ಗ್ರಂಥಿ ‘ಅಡ್ರಿನಾಲಿನ್’ ಎಂಬ ಅಂತಃಸ್ರಾವವನ್ನು ರಕ್ತಕ್ಕೆ ಸುರಿಸುವುದರಿಂದ ವ್ಯಕ್ತಿಯಲ್ಲಿ ಅತಿಯಾದ ಚಟುವಟಿಕೆ ಕಂಡುಬರುತ್ತದೆ. ಅತಿಯಾದ ರೋಷ, ಆವೇಶ, ಆವೇಗ ಉಂಟಾಗುತ್ತದೆ. ರಕ್ತದ ಒತ್ತಡ ಮತ್ತು ಹೃದಯಬಡಿತ ಹೆಚ್ಚಾಗುತ್ತದೆ. ಉಸಿರಾಟದ ವೇಗ ಹೆಚ್ಚಾಗುತ್ತದೆ. ಸ್ನಾಯುಗಳು ಸೆಟೆದುಕೊಳ್ಳುತ್ತವೆ. ಮೆದುಳಿನಲ್ಲಿ ನರವಾಹಿಗಳು ಅತಿಯಾಗಿ ಬಿಡುಗಡೆಯಾಗುವುದರಿಂದ ಶರೀರದಲ್ಲಿ ಅತಿಯಾದ ಚೈತನ್ಯ ಉಂಟಾಗುತ್ತದೆ ಮತ್ತು ತುರ್ತು ಸನ್ನಿವೇಶವನ್ನು ಎದುರಿಸಲು ಶರೀರವನ್ನು ಸನ್ನದ್ದುಗೊಳಿಸುತ್ತವೆ. ಹೀಗೆ ಕೋಪಗೊಂಡಾಗ ಶರೀರ ಹಾಗೂ ಮನಸ್ಸಿನಲ್ಲಿ ಅತಿಯಾದ ಚಟುವಟಿಕೆ ಕಂಡುಬರುತ್ತದೆ.

ಕೋಪ ಎಲ್ಲರಲ್ಲೂ ಕಂಡುಬರುತ್ತದೆ. ಕೋಪಕ್ಕೆ ಜೈವಿಕ ಮೌಲ್ಯವಿದೆ. ಅದರಲ್ಲೂ ಪ್ರಾಣಿಗಳು ತಮ್ಮ ಜೀವಕ್ಕೆ ಅಪಾಯ ಒದಗಿದಾಗ ಕೋಪದಿಂದ ಪ್ರತಿಭಟಿಸದಿದ್ದರೆ ಅವುಗಳ ಜೀವಕ್ಕೆ ಸಂಚಕಾರ ಉಂಟಾಗುತ್ತದೆ. ಆದ್ದರಿಂದ ತಮ್ಮ ಜೀವರಕ್ಷಣೆಗಾಗಿ ಕೋಪದಿಂದ ಪ್ರತಿಭಟಿಸಲೇ ಬೇಕಾಗುತ್ತದೆ. ಉದಾಹರಣೆಗೆ : ಹಾವು ಶತ್ರುವನ್ನು ಕಂಡಾಗ ಬುಸುಗುಟ್ಟದಿದ್ದರೆ ಅದರ ಸಂತತಿಯೇ ನಾಶವಾಗುತ್ತಿತ್ತು. ಹೀಗೆ ವಿವಿಧ ಪ್ರಾಣಿ-ಪಕ್ಷಿಗಳು ತಮ್ಮ ಹಾಗೂ ತಮ್ಮ ಮರಿಗಳ ರಕ್ಷಣೆಗಾಗಿ ರೋಷದಿಂದ ಹೋರಾಟ ಮಾಡಲೇಬೇಕಾಗುತ್ತದೆ. ಅದೇ ರೀತಿ ಮನುಷ್ಯ ಕೂಡ ತನಗೆ ಅನ್ಯಾಯವಾದಾಗ ಸರಳೋಪಾಯಗಳಿಗೆ ಜನ ಮಣಿಯದಿದ್ದಾಗ ಕೋಪದಿಂದ ಪ್ರತಿಭಟಿಸದಿದ್ದರೆ, ನ್ಯಾಯ ಸಿಗುವುದಿಲ್ಲ ಅಥವಾ ತಪ್ಪು ಮಾಡಿದವರಿಗೆ ತಮ್ಮ ತಪ್ಪಿನ ಅರಿವಾಗುವುದಿಲ್ಲ. ಮಕ್ಕಳು ತುಂಬಾ ಹಟಮಾಡುತ್ತಿದ್ದಾಗ ಸಾಮ, ದಾನ, ಭೇದ ವಿಧಾನಗಳು ಫಲಿಸದಿದ್ದಾಗ ಕೋಪದಿಂದ ದಂಡ ತೆಗೆದುಕೊಂಡಾಗ ಮಕ್ಕಳು ಹಟಬಿಟ್ಟು ತಮ್ಮ ತಪ್ಪಿನ ಅರಿವಾಗಿ ಹೇಳಿದಂತೆ ಕೇಳಿದ ಉದಾಹರಣೆಗಳಿವೆ. ಹಾಗೆಂದು ಕೋಪದಿಂದ ದಂಡ ಪ್ರಯೋಗ ಅನಿವಾರ್ಯ ಎಂದು ಭಾವಿಸಬಾರದು. ದಂಡ ಕೇವಲ ಬೆದರಿಕೆಯ ಅಸ್ತ್ರವಾಗಬೇಕೇ ವಿನಾ ಮಕ್ಕಳ ಮೇಲೆ ಪ್ರಯೋಗಿಸಲು ಬಳಸಬಾರದು.

ಕೋಪ ಮಾಡಿಕೊಳ್ಳುವುದು ಬದುಕಿನಲ್ಲಿ ಅನಿವಾರ್ಯವೇನಲ್ಲ. ಕೆಲವು ಬಾರಿ ಮಾತ್ರ ಅನಿವಾರ್ಯ ಎನಿಸಬಹುದು. ಆಗ ಮಾತ್ರ ಎಷ್ಟು ಬೇಕೋ ಅಷ್ಟು ಮಾತ್ರ ಕೋಪ ತೋರಿಸಬೇಕು. ಅನಗತ್ಯವಾಗಿ ಪದೇಪದೇ ಕೋಪಮಾಡಿಕೊಳ್ಳುವುದರಿಂದ, ಎಲ್ಲರ ಮೇಲೂ ಕೂಗಾಡುವುದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಸಂಬಂಧಗಳು ಹಾಳಾಗುತ್ತವೆ. ಅತಿ ಕೋಪಿಷ್ಟನನ್ನು ಯಾರೂ ಇಷ್ಟಪಡುವುದಿಲ್ಲ, ಬದುಕಿನಲ್ಲಿ ಒಂಟಿಯಾಗುತ್ತಾನೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ತನ್ನ ಕೋಪದ ಮೇಲೆ ನಿಯಂತ್ರಣ ಸಾಧಿಸುವುದು ಅತ್ಯಗತ್ಯವಾಗಿದೆ. ಕೋಪವನ್ನು ನಿಯಂತ್ರಿಸಲು ಮನೋವಿಜ್ಞಾನಿಗಳು ಕೆಲವು ವಿಧಾನಗಳನ್ನು ಸೂಚಿಸಿದ್ದಾರೆ. ಅವು ಕೆಳಕಂಡಂತಿವೆ.

1) ಕೋಪ ಬಂದಾಗ ನಿಧಾನವಾಗಿ ಮತ್ತು ಧೀರ್ಘವಾಗಿ ಉಸಿರಾಡಬೇಕು. ಆಗ ಹೃದಯ ಬಡಿತ ಕಮ್ಮಿಯಾಗುತ್ತದೆ.

2) ಕೋಪಬಂದಾಗ ಕೋಪದ ಸನ್ನಿವೇಶ ಉಂಟಾಗುವುದಕ್ಕೆ ತಾನೆಷ್ಟು ಕಾರಣ ಎಂದು ಯೋಚಿಸು. ಕಾರಣ ಸ್ಪಷ್ಟವಾದಾಗ ಕೋಪ ತಾನಾಗಿಯೇ ಇಳಿಯುತ್ತದೆ.

3) ಕೋಪ ಬಂದಾಗ ಆ ಜಾಗಬಿಟ್ಟು ದೂರಹೋಗು. ಸಾಧ್ಯವಾದರೆ ನಿನ್ನ ಮನಸ್ಸಿಗೆ ಹಿತ ನೀಡುವ ವ್ಯಕ್ತಿಯ ಜೊತೆ ಮಾತನಾಡು, ಅವರ ಸಾಂತ್ವನದ ಮಾತುಗಳಿಂದ ಮನಸ್ಸು ತಿಳಿಯಾಗುತ್ತದೆ.

4) ಕೋಪದ ಕಾರಣದ ಬಗ್ಗೆ ತರ್ಕಬದ್ಧವಾಗಿ ಯೋಚಿಸು.

5) ನಿನ್ನ ವಾದವನ್ನು ಜಾಗರೂಕತೆಯಿಂದ ಪ್ರತಿಪಾದಿಸು, ಆಕ್ರಮಣಕಾರಿ ವರ್ತನೆ ತೋರುವುದು ಬೇಡ.

6) ಕ್ರಮಬದ್ಧವಾದ ವ್ಯಾಯಾಮ, ಯೋಗ, ಧ್ಯಾನ, ವಾಯುಸಂಚಾರ, ಮುಂತಾದ ಆರೋಗ್ಯ ಉತ್ತಮ ಪಡಿಸುವ ಚಟುವಟಿಕೆಗಳನ್ನು ನಿನ್ನ ದೈನಂದಿನ ಬದುಕಿನಲ್ಲಿ ಚಾಚೂ ತಪ್ಪದೆ ಪಾಲಿಸು. ಇದರಿಂದ ನಿನ್ನ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಆರೋಗ್ಯಕರ ಆಲೋಚನೆಗಳು ಬೆಳೆಯಲು ಸಹಾಯವಾಗುತ್ತದೆ.

7) ಕೋಪ ಬಂದಾಗ ಒಂದರಿಂದ ಹತ್ತರವರೆಗೆ ಎಣಿಸು, ಕೋಪಶಮನವಾಗುತ್ತದೆ.

8) ಕೋಪಬಂದಾಗ ಮೆತ್ತನೆಯ ದಿಂಬು ಅಥವಾ ವಸ್ತುವಿಗೆ ಗುದ್ದುವುದರಿಂದ ಮಾನಸಿಕ ಸೆಟೆತ ತಗ್ಗುತ್ತದೆ. ಕೋಪ ಇಳಿಯುತ್ತದೆ.

9) ಮನಕ್ಕೆ ಸಾಂತ್ವನ ನೀಡುವ ‘ಮಂಕು ತಿಮ್ಮನ ಕಗ್ಗ’ ‘ಭಗವದ್ಗೀತೆ’ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಓದು. ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

ಅಂತಿಮವಾಗಿ ಕೋಪವೆಂಬುದು ವಿಷವಿದ್ದಂತೆ, ವ್ಯಕ್ತಿಯ ದೇಹ ಮತ್ತು ಮನಸ್ಸನ್ನು ನಾಶ ಮಾಡುತ್ತದೆ. ಕೋಪವನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಕಷ್ಟ. ಆದರೆ ಅದರ ಮೇಲೆ ನಿಯಂತ್ರಣ ಸಾಧಿಸಬಹುದು. ಸಂದರ್ಭೋಚಿತವಾಗಿ ಎಷ್ಟು ಬೇಕೋ ಅಷ್ಟು ಕೋಪ ಪ್ರದರ್ಶಿಸುವುದು ಒಳ್ಳೆಯದು. ಯಾರು ತಮ್ಮ ಕೋಪವನ್ನು ನಿಯಂತ್ರಿಸಬಲ್ಲರೋ ಅವರು ಜೀವನದಲ್ಲಿ ಯಶಸ್ವಿಯಾಗಬಲ್ಲರು. ಇತರರ ಪ್ರೀತಿ ವಿಶ್ವಾಸಗಳಿಸಬಲ್ಲರು. ‘ಕೋಪ ಎಂಬುದು ಪಾಪಿ’, ‘ಕೋಪದಲ್ಲಿ ಕತ್ತರಿಸಿಕೊಂಡ ಮೂಗು ಮತ್ತೆ ಸರಿಹೋಗದು’ ಎಂಬಂತಹ ಗಾದೆ ಮಾತುಗಳನ್ನು ಸದಾ ನೆನಪಿಡು.

“ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ ।ಕೊರತೆಯೊಂದನು ನೀನು ನೆನೆನೆನೆದು ಕೆರಳಿ || ಧರೆಯಲ್ಲವನು ಶಪಿಸಿ, ಮನದಿ ನರಕವ ನಿಲಿಸಿ | ನರಳುವುದು ಬದುಕೇನೋ? – ಮಂಕುತಿಮ್ಮ |

6) ಭಯ (Fear):

ಭಯ ಎಂಬುದು ಒಂದು ನಕಾರಾತ್ಮಕ ಮತ್ತು ಅಹಿತಕಾರಿ ಭಾವನೆ. ಮುಂದೆ ಅಪಾಯ ಎದುರಾಗುತ್ತದೆ ಎಂಬ ಆಲೋಚನೆಯಿಂದ ಭಯ ಉಂಟಾಗುತ್ತದೆ. ಭಯದಿಂದ ಆ ಸನ್ನಿವೇಶದಿಂದ ಓಡಿಹೋಗಲು ಅಥವಾ ಹೋರಾಡಲು ಸಿದ್ಧತೆ ನಡೆಯುತ್ತದೆ.

ಕೋಪದಂತೆಯೇ ಭಯಕ್ಕೂ ಕೂಡ ಜೈವಿಕ ಮೌಲ್ಯವಿದೆ. ದುರ್ಬಲ ಪ್ರಾಣಿಗಳು, ಕೀಟಗಳು ಹಾಗೂ ಪಕ್ಷಿಗಳು ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಅಲ್ಲಿಂದ ಪಲಾಯನ ಮಾಡುತ್ತವೆ. ಕೀಟಗಳು, ಪಕ್ಷಿಗಳು ಸಣ್ಣ ಸದ್ದಾದರೂ ಹಾರಿ ಹೋಗುತ್ತವೆ. ಶತ್ರು ಬಲಿಷ್ಠನಾದಾಗ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಭಯ ಅನುಕೂಲವಾಗಿದೆ. ಮನುಷ್ಯನಲ್ಲಿ ಸ್ವಲ್ಪ ಮಟ್ಟಿನ ಭಯ ವ್ಯಕ್ತಿ ತನ್ನ ಗುರಿಸಾಧನೆಯತ್ತ ಎಚ್ಚರದಿಂದ ಸಾಗಲು ಸಹಾಯ ಮಾಡುತ್ತದೆ. ಅಪಾಯದ ಮೂನ್ಸೂಚನೆ ತಿಳಿದಾಗ ವ್ಯಕ್ತಿ ಜಾಗ್ರತೆವಹಿಸುತ್ತಾನೆ. ಆಗ ಅಪಾಯದಿಂದ ಪಾರಾಗಲು ಅನುಕೂಲವಾಗುತ್ತದೆ. ಆದರೆ ಅತಿಯಾದ ಭಯ ಮನುಷ್ಯನಲ್ಲಿ ಅನೇಕ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ. ಆದ್ದರಿಂದ ಭಯವನ್ನು ನಿಯಂತ್ರಿಸುವುದು ಅವಶ್ಯಕವಾಗಿದೆ.

ಮಕ್ಕಳು ಒಂದು ಸಣ್ಣ ಶಬ್ದವಾದರೂ ಹೆದುರುತ್ತವೆ. ತೊಟ್ಟಿಲಲ್ಲಿರುವ ಮಗು ಕೂಡ ಶಬ್ದಕ್ಕೆ ಹೆದರುತ್ತದೆ. ಮಕ್ಕಳು ಅಮ್ಮನಿಂದ ದೂರವಾದಾಗ, ಕತ್ತಲೆ ಕೋಣೆಯಲ್ಲಿ ಬಿಟ್ಟಾಗ, ಪ್ರಾಣಿಗಳನ್ನು ಕಂಡಾಗ, ಅಪರಿಚಿತರನ್ನು ನೋಡಿದಾಗ, ಹೆದರಿ ಅಳುತ್ತವೆ ಅಥವಾ ಕಿರುಚಿಕೊಳ್ಳುತ್ತವೆ. ಮಕ್ಕಳು ಬೆಳೆದಂತೆ ಇಂತಹ ಭಯಗಳು ಕಡಿಮೆಯಾಗುತ್ತವೆ. ಅಧಿವಯಸ್ಸಿನಲ್ಲಿ ಹಾಗೂ ದೊಡ್ಡವರಲ್ಲಿ ಭಯಪಡುವ ಸನ್ನಿವೇಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಅನೇಕರು ಜಿರಲೆ ನೋಡಿ ಹೆದರುವುದನ್ನು ನೀವು ನೋಡಿರಬಹುದು. ಜಿರಲೆಯಿಂದ ಯಾವುದೇ ಅಪಾಯವಿಲ್ಲ. ಆದರೂ ಹೆದರುತ್ತಾರೆ. ಇಂತಹ ಭಯಗಳನ್ನು ಅತಿಭೀತಿ (Phobia) ಎನ್ನುವರು.

ಇಂತಹ ಅತಿಭೀತಿ ವಿವಿಧ ವಸ್ತುಗಳು, ಸನ್ನಿವೇಶಗಳು ಹಾಗೂ ಪ್ರಾಣಿಗಳಿಂದಲೂ ಉಂಟಾಗಬಹುದು.

‘ಅತಿಭೀತಿ ಎಂಬುದು ಒಂದು ಅರ್ಥರಹಿತವಾದ. ಆಸಂಬದ್ಧವಾದ, ಹತ್ತಿಕ್ಕಲಾಗದ, ತೀವ್ರ ಸ್ವರೂಪದ ಭಯ’. ಚಿಕ್ಕಂದಿನಲ್ಲಿ ಯಾವುದೋ ಘಟನೆಯಿಂದ ಭಯ ಉಂಟಾಗುತ್ತದೆ. ದಿನಕಳೆದಂತೆ ಘಟನೆ ಮರೆತು ಹೋಗುತ್ತದೆ. ಆದರೆ ಭಯಮಾತ್ರ ಹಾಗೆಯೇ ಇರುತ್ತದೆ. ಮುಂದೆ ಒಂದು ಚಿಕ್ಕ ಪ್ರಚೋದನೆಯಾದರೂ ತೀವ್ರಸ್ವರೂಪದ ಭಯ ಉಂಟಾಗುತ್ತದೆ. ನೀರಿನ ಭಯ(hydrophobia) ಬೆಂಕಿಯ ಭಯ(pyrophobia), ಪ್ರಾಣಿಭಯ (Zoophobia), ಕತ್ತಲೆ ಕೋಣೆ ಭಯ, ಎತ್ತರ ಪ್ರದೇಶದ ಭಯ, ಇತ್ಯಾದಿ ಅತಿಭೀತಿಗಳನ್ನು ಕಾಣುತ್ತೇವೆ. ಅತಿಭೀತಿಯನ್ನು ವರ್ತನಾ ಚಿಕಿತ್ಸೆಯಿಂದ ಗುಣಪಡಿಸಬಹುದು.

ಉದ್ವಿಗ್ನತೆ :- (Anxiety)

ಉದ್ವಿಗ್ನತೆ ಎಂಬುದು ಮತ್ತೊಂದು ರೀತಿಯ ಭಯ, ಉದ್ವಿಗ್ನತೆ ಎಂಬುದು ಒಂದು ಆಂತರಿಕ ಭಯ, ಕಾರಣ ಅಸ್ಪಷ್ಟ, ಉದ್ವಿಗ್ನತೆಯಿಂದ ವ್ಯಕ್ತಿ ನಿರಂತರವಾಗಿ ಚಡಪಡಿಸುತ್ತಿರುತ್ತಾನೆ. ನಿಂತಕಡೆ ನಿಲ್ಲದೆ, ಕುಳಿತಕಡೆ ಕೂರದೆ ಒದ್ದಾಡುತ್ತಿರುತ್ತಾನೆ. ಕೆಲವು ಕಲ್ಪಿತ ಅಪಾಯಗಳು, ನಕಾರಾತ್ಮಕ ಆಲೋಚನೆಗಳು, ವಿಫಲತೆಯ ಭಯ, ಆತ್ಮವಿಶ್ವಾಸದ ಕೊರತೆ, ಅಪಕ್ವ ಮನಸ್ಸು, ಮುಂತಾದವು ಉದ್ವಿಗ್ನತೆಗೆ ಕಾರಣ ಎಂದು ಹೇಳಬಹುದು. ಉದ್ವಿಗ್ನತೆಯಿಂದ ಬಳಲುವ ವ್ಯಕ್ತಿಯ ಕಾರ್ಯದಕ್ಷತೆ ತಗ್ಗುತ್ತದೆ. ಸಾಮರ್ಥ್ಯ ಇದ್ದರೂ ಉದ್ವಿಗ್ನತೆಯಿಂದ ಅಸಮರ್ಥತೆಯನ್ನು ತೋರುತ್ತಾನೆ. ತನ್ನ ಕಾರ್ಯದಲ್ಲಿ ವಿಫಲನಾಗುತ್ತಾನೆ. ಕೈಗಳು ಒದ್ದೆಯಾಗುತ್ತವೆ. ಉಸಿರಾಟ ಹೆಚ್ಚಾಗುತ್ತದೆ. ಪದೇಪದೇ ಮೂತ್ರ ವಿಸರ್ಜನೆ, ಕೆಲವು ವೇಳೆ ಭೇದಿ ಕಾಣಿಸಿಕೊಳ್ಳುವುದು, ಗಂಟಲಲ್ಲಿ ಏನೋ ಸಿಕ್ಕಿಕೊಂಡಂತಾಗಿರುವುದು, ಇತ್ಯಾದಿ ಚಿಹ್ನೆಗಳು ಕಂಡುಬರುತ್ತವೆ. ಇತರ ಚಿಹ್ನೆಗಳೆಂದರೆ, ಎದೆಬಡಿತ, ಎದೆನೋವು, ತಲೆನೋವು, ಹೊಟ್ಟೆನೋವು, ವಾಂತಿಬಂದಂತಾಗುವುದು, ಏಕಾಗ್ರತೆ ಇಲ್ಲದಿರುವುದು, ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಉದ್ವಿಗ್ನತೆ ಸ್ವಾಯತ್ತ ನರಮಂಡಲದಿಂದ ನಿಯಂತ್ರಿಸಲ್ಪಡುತ್ತದೆ. ಉದ್ವಿಗ್ನತೆಯ ಬಾಹ್ಯಲಕ್ಷಣಗಳೆಂದರೆ, ಚರ್ಮ ಬಿಳಿಚಿಕೊಳ್ಳುವುದು. ಕೈಕಾಲುಗಳು ನಡಗುವುದು, ಕಣ್ಣಾಲಿಗಳು ದೊಡ್ಡದಾಗುವುದು. ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಉದ್ವಿಗ್ನತೆ ಕ್ಷಣಿಕವಾಗಿರಬಹುದು ಇಲ್ಲವೆ ಧೀರ್ಘಕಾಲದವರೆಗೆ ಮುಂದುವರಿಯಬಹುದು.

Leave a Comment