Group Dynamics:ಸಮೂಹ ಗತಿ ಶಾಸ್ತ್ರ (Group Dynamics)
ಸಮೂಹ ಗತಿ ಶಾಸ್ತ್ರ ಗುಂಪುಗಳ ಅಧ್ಯಯನ ಮಾಡುವ ಜ್ಞಾನದ ಒಂದು ಶಾಖೆಯಾಗಿದೆ. ಗುಂಪುಗಳ ಸ್ವರೂಪ ಹಾಗೂ ಕಾರ್ಯ ನಿರ್ವಹಣೆಯ ಬಗೆ, ಗುಂಪುಗಳ ರಚನೆಯ ಬಗೆ, ಗುಂಪಿನ ಬೆಳವಣಿಗೆ ಹಾಗೂ ಪರಿಣಾಮಕಾರಿ ನಿರ್ವಹಣೆಗೆ ಸಹಾಯಕವಾಗುವ ಅಂಶಗಳೇನು? ಮತ್ತು ಸಮೂಹಗಳು ವ್ಯಕ್ತಿಯ ವರ್ತನೆಯ ಮೇಲೆ ಯಾವ ರೀತಿ ಪ್ರಭಾವ ಬೀರುತ್ತವೆ? ಎನ್ನುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಪ್ರಯತ್ನಿಸುತ್ತದೆ. ಸಮೂಹಗತಿ ಶಾಸ್ತ್ರವು ಗುಂಪಿನಲ್ಲಿರುವ ಸಾಮಾಜಿಕ ಸಂಬಂಧಗಳು ಮತ್ತು ಮಾನವೀಯ ವರ್ತನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
“ಡೈನಮಿಕ್’ ಎನ್ನುವ ಗ್ರೀಕ್ ಪದದ ಅರ್ಥ ಬಲ ಎಂದಾಗಿದೆ. ‘ಗ್ರೂಪ್ ಡೈನಮಿಕ್ಸ್’ ಎಂದರೆ ಗುಂಪಿನಲ್ಲಿ ಕಂಡು ಬರುವ ಬಲವಾಗಿದೆ. ಸಮೂಹಗತಿ ಶಾಸ್ತ್ರದಲ್ಲಿ ಗುಂಪು ವ್ಯಕ್ತಿಯ ಮೇಲೆ ಬೀರುವ ಪ್ರಭಾವ ಮತ್ತು ವ್ಯಕ್ತಿ ಗುಂಪಿನ ಮೇಲೆ ಬೀರುವ ಪ್ರಭಾವವನ್ನು ಅಧ್ಯಯನ ಮಾಡಲಾಗುವುದು. ನಮ್ಮ ಆಕಾಂಕ್ಷೆಗಳು, ಮನೋಧೋರಣೆಗಳು, ನಂಬಿಕೆಗಳು, ಚಾರಿತ್ರ್ಯ, ಭಾವನೆ, ವ್ಯಕ್ತಿತ್ವ ಮತ್ತು ವ್ಯಕ್ತಿಯ ಮೌಲ್ಯಗಳು ಗುಂಪಿನಿಂದ ಪ್ರಭಾವಿತವಾಗುತ್ತದೆ.
“ಸಮೂಹ ಗತಿ ಶಾಸ್ತ್ರವೆಂದರೆ ಸಮೂಹಗಳ ಸ್ವರೂಪ, ಅವುಗಳ ಬೆಳವಣಿಗೆಯ ನಿಯಮಗಳು, ವ್ಯಕ್ತಿಗಳೊಡನೆ, ಇತರೆ ಗುಂಪುಗಳೊಡನೆ ಅಥವಾ ಇತರೆ ಸಂಸ್ಥೆಗಳೊಡನೆ ಅವು ಹೊಂದಿರುವ ಸಂಬಂಧದ ಬಗ್ಗೆ ಹೆಚ್ಚಿನ ಜ್ಞಾನವನ್ನು ನೀಡುವ ಕ್ಷೇತ್ರವಾಗಿದೆ.”– ಕಾರ್ಟ್ ರೈಟ್ ಮತ್ತು ಝಾಂಡರ್
ಸಮೂಹ ಹೇಗೆ ಉದಯವಾಯಿತು? ವರ್ತಿಸುತ್ತದೆ ಎಂಬುದನ್ನು ಸಮೂಹ “ಸಮೂಹಗತಿ ಶಾಸ್ತ್ರವು ಸಮೂಹದ ವರ್ತನೆಯನ್ನು ವಿಶದೀಕರಿಸುತ್ತದೆ. ಹೇಗೆ ಬದಲಾವಣೆ ಹೊಂದುತ್ತದೆ. ವ್ಯಕ್ತಿಗಳ ಪರಿವರ್ತನೀಯ ಸಮ್ಮಿಶ್ರಣವಾಗಿ ಹೇಗೆ ಗತಿ ಶಾಸ್ತ್ರ ಅಭ್ಯಸಿಸುತ್ತದೆ.”– ಹೂಬರ್ಟ್ ಜಾನರ್
ಸಮೂಹ ಗತಿ ಶಾಸ್ತ್ರದ ಶೈಕ್ಷಣಿಕ ಮಹತ್ವ:
ಸಮೂಹಗತಿ ಶಾಸ್ತ್ರವು ತರಗತಿ ಗುಂಪಿನ ವರ್ತನೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಪ್ರಜಾಸತ್ತಾತ್ಮಕ ಜೀವನಕ್ಕೆ ಮತ್ತು ಉತ್ತಮ ಸಾಮಾಜಿಕ ಅರಿವಿಗೆ ಅಗತ್ಯವಾದ ಸಾಮಾಜಿಕ ಕೌಶಲಗಳನ್ನು ಬೆಳೆಸಲು ಸಹಾಯಕವಾಗುತ್ತದೆ. ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಸಹ ಪ್ರಜಾಸತ್ತಾತ್ಮಕ ನಾಗರೀಕರನ್ನಾಗಿ ತಯಾರು ಮಾಡಲು ನೆರವಾಗುತ್ತದೆ.
ಸಮೂಹ ತಾನು ಹೊಂದಿರುವ ಗುರಿಗಳನ್ನು ತಲುಪಲು ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳಲು ಮತ್ತು ಉತ್ತಮ ಸೇವೆ ಸಲ್ಲಿಸುವಂತೆ ಮಾಡಲು ಸಹಾಯಕವಾಗುತ್ತದೆ.
ತರಗತಿಯಲ್ಲಿ ಅಭಿಪ್ರೇರಣೆ, ಸಾಧನೆ, ನಡತೆ, ವಿದ್ಯಾರ್ಥಿ-ವಿದ್ಯಾರ್ಥಿ, ಹಾಗೂ ವಿದ್ಯಾರ್ಥಿ-ಶಿಕ್ಷಕರ ಸಂಬಂಧಗಳು ಗುಂಪಿನ ಸಾಮಾಜಿಕ ರಚನೆಯಿಂದ ಪ್ರಭಾವಿತವಾಗಿರುತ್ತವೆ. ತರಗತಿಯ ಗುಂಪುಗಳಲ್ಲಿ ಒಂದು ವೇಳೆ ಘರ್ಷಣೆಗಳು, ಭಯ, ಉದ್ವೇಗ ಅಥವಾ ಅನಗತ್ಯ ಸ್ಪರ್ಧೆಗಳಿದ್ದರೆ ಅದು ತರಗತಿಯ ಕಲಿಕೆಗೆ ಅಡ್ಡಿಯನ್ನುಂಟು ಮಾಡುತ್ತದೆ. ತರಗತಿಯ ಶಿಕ್ಷಕ ಸಮೂಹ ಗತಿ ಶಾಸ್ತ್ರದ ಮೂಲ ಜ್ಞಾನವನ್ನು ಹೊಂದಿದ್ದಲ್ಲಿ ತರಗತಿ ಗುಂಪಿನ ಸಾಮಾಜಿಕ ಹಾಗೂ ಭಾವನಾತ್ಮಕ ವಾತಾವರಣವನ್ನು ಸುಧಾರಿಸಬಹುದು. ಅಂತರ್ ಗುಂಪಿನ ಸಂಬಂಧಗಳನ್ನು ಸುಧಾರಿಸುವ ಮೂಲಕ ತರಗತಿಯ ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಕಾಪಾಡಬಹುದಾಗಿದೆ.
ಸಮೂಹದ ಅರ್ಥ:
ಶಾಲಾ ಸನ್ನಿವೇಶದಲ್ಲಿ ಅಂದರೆ ತರಗತಿ ಮತ್ತು ಆಟದ ಮೈದಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಅಂತರ್ ಕ್ರಿಯೆಯು ಗುಂಪುಗಳ ಮಧ್ಯೆ ನಡೆಯುತ್ತದೆ. ಶಿಕ್ಷಕರು, ಪೋಷಕರು, ಸಾಮಾನ್ಯ ಕಾರ್ಯಕರ್ತರು, ಮನೋವಿಜ್ಞಾನಿಗಳು ಮತ್ತು ಸಾಮಾಜಿಕ ಸಂಬಂಧಗಳನ್ನು ಸುಧಾರಿಸಲು ಬಯಸುವವರು ಸಾಮಾಜಿಕ ಅಂತರ್ ಕ್ರಿಯೆಯ ಪ್ರಕ್ರಿಯೆಯನ್ನು ಅರ್ಥ ವ್ಯಕ್ತಿಗಳ ಸಾಮಾಜಿಕ ವರ್ತನೆಯನ್ನು ಅಧ್ಯಯನ ಮಾಡಬೇಕಾಗುತ್ತದೆ.
ಸಮೂಹವನ್ನು ಹಲವಾರು ದೃಷ್ಟಿಕೋನಗಳಿಂದ ವ್ಯಾಖ್ಯಾನಿಸಿರುವುದನ್ನು ಕಾಣಬಹುದಾಗಿದೆ. ಕೆಲವೊಮ್ಮೆ ರಸ್ತೆಯಲ್ಲಿ, ಬಸ್ ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣದಲ್ಲಿ ಜನರು ಗುಂಪು ಗೂಡಿರುವುದನ್ನು ಕಾಣಬಹುದಾಗಿದೆ. ಆದರೆ ಈ ರೀತಿ ಗುಂಪುಗೂಡಿರುವ ವ್ಯಕ್ತಿಗಳ ಮಧ್ಯೆ ಯಾವುದೇ ಸಂಬಂಧ ಕಂಡುಬರುವುದಿಲ್ಲ. ಆದರೆ ಶಿಕ್ಷಕ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಪರಸರ ಸಂಬಂಧ ಹೊಂದಿರುವ ತರಗತಿ ಗುಂಪಿನ ಬಗೆ. ಒಂದು ಸಮೂಹದ ಸಫಲ ಕಾರ್ಯನಿರ್ವಹಣೆ ಆ ಸಮೂಹದ ಸದಸ್ಯರ ನಡುವೆ ಇರುವ ಪರಸ್ಪರ ಅರ್ಥ ಮಾಡಿಕೊಳ್ಳುವಿಕೆಯನ್ನು ಅವಲಂಬಿಸಿದೆ.
“ಸಮಾನ ಮನಸ್ಸಿನ, ಒಂದೇ ರೀತಿ ಆಲೋಚಿಸುವ ಹಾಗೂ ಒಟ್ಟಾಗಿ ಕಾರ್ಯ ನಿರ್ವಹಿಸುವ ಎರಡು ಅಥವಾ ಹೆಚ್ಚಿನ ವ್ಯಕ್ತಿಗಳ ಒಗ್ಗೂಡುವಿಕೆಯನ್ನು ಸಮೂಹ ಎನ್ನುವರು”.
“ಸಮೂಹವೆಂಬುದು ಪರಸ್ಪರ ಪಾತ್ರ ಮತ್ತು ಸ್ಥಾನ ಸಂಬಂಧಗಳನ್ನು ಹೊಂದಿರುವ ಅನೇಕ ವ್ಯಕ್ತಿಗಳ ಒಂದು ಸಾಮಾಜಿಕ ಘಟಕವಾಗಿದೆ. ಕೆಲವು ಮಟ್ಟಿಗೆ ಸ್ಥಿರತೆಯನ್ನು ಹೊಂದಿರುವ ಮತ್ತು ತಮ್ಮ ವರ್ತನೆಗಳನ್ನು ನಿಯಂತ್ರಿಸಿಕೊಳ್ಳಲು ಅಗತ್ಯವಾದ ತಮ್ಮದೇ ಆದ ನೀತಿ ಸಂಹಿತೆ ಅಥವಾ ನಿರ್ದಿಷ್ಟವಾದ ಮೌಲ್ಯಗಳನ್ನು ಹೊಂದಿರುತ್ತದೆ”.”
ಶರೀಫ್ ಮತ್ತು ಶರೀಫ್
“ಸಮೂಹವನ್ನು ಅಭಿಪ್ರೇರಣೆ ಮತ್ತು ಅಗತ್ಯತೆಗಳ ಪೂರೈಕೆಯ ಆಧಾರದ ಮೇಲೆ ವ್ಯಾಖ್ಯಾನಿಸಲಾಗಿದೆ. ವ್ಯಕ್ತಿಯು ಗುಂಪಿಗೆ ಸೇರಲು ಕಾರಣವೇನೆಂದರೆ ಅದು ಅವನ ಕೆಲವು ಅಗತ್ಯತೆಗಳನ್ನು ಪೂರೈಸುತ್ತದೆ ಮತ್ತು ಗುಂಪಿನ ಸದಸ್ಯತ್ವ ಅವನಿಗೆ ಮಸ್ವೀಕರಣವನ್ನೊದಗಿಸುತ್ತದೆ”.
—– ಬಾನ್
ಒಂದು ಸಮೂಹವೆಂದರೆ “ಸಮೂಹವನ್ನು ಗುರಿ ಮತ್ತು ಉದ್ದೇಶಗಳ ಆಧಾರದ ಮೇಲೆ ವ್ಯಾಖ್ಯಾನಿಸಲಾಗಿದೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಎರಡು ಅಥವಾ ಹೆಚ್ಚಿನ ವ್ಯಕ್ತಿಗಳು ಸಂಪರ್ಕ ಹೊಂದಿರುವುದು ಮತ್ತು ಅವರ ಸಂಪರ್ಕ ಆರ್ಥಪೂರ್ಣವೆಂದು ಭಾವಿಸುವವರು”.
–– ಮಿಲ್ಸ್
ಈ ಮೇಲ್ಕಂಡ ವ್ಯಾಖ್ಯೆಗಳಿಂದ ತಿಳಿದುಬರುವ ಅಂಶವೇನೆಂದರೆ ಗುಂಪಿನಲ್ಲಿ ಸದಸ್ಯರ ಮಧ್ಯೆ ಅಂತರ್‌ಕ್ರಿಯೆ ಕಂಡುಬರುತ್ತದೆ ಮತ್ತು ಅದು ಗುಂಪನ್ನು ಒಗ್ಗಟ್ಟಿನಲ್ಲಿಟ್ಟಿರುತ್ತದೆ.
ಸಮೂಹದ ಲಕ್ಷಣಗಳು :
ಸಮೂಹ ಹಲವು ಸದಸ್ಯರಿಂದ ಕೂಡಿದ ಒಂದು ಸಾಮಾಜಿಕ ಘಟಕ.
ಸಮೂಹವು ತನ್ನದೇ ಆದ ಸಂರಚನೆ ಹೊಂದಿರುವುದು. ಸಮೂಹದ ಸದಸ್ಯರು ಪರಸ್ಪರರೊಂದಿಗೆ ನಿಶ್ಚಿತ ಸ್ಥಾನ ಮತ್ತು ಪಾತ್ರ ಸಂಬಂಧ ಹೊಂದಿರುವರು.
ಸಮೂಹ ಎಲ್ಲಾ ಸದಸ್ಯರು ಒಪ್ಪಿಕೊಂಡ ಸಾಮಾನ್ಯ ಗುರಿಗಳನ್ನು ಹೊಂದಿರುತ್ತದೆ. ಸದಸ್ಯರು ಅವುಗಳನ್ನು ಸಾಧಿಸಲು ಶ್ರಮಿಸುವರು.
ಸಮೂಹವು ತನ್ನದೇ ಆದ ನೀತಿ ನಿಯಮಾವಳಿಗಳನ್ನು ಹೊಂದಿರುತ್ತದೆ.
ಸಮೂಹದ ಎಲ್ಲಾ ಸದಸ್ಯರ ಅಂತರ್‌ಕ್ರಿಯೆಗೆ ಅವಕಾಶವಿರುತ್ತದೆ.
ಸಮೂಹವು ತನ್ನದೇ ಆದ ನಾಯಕತ್ವ ನಮೂನೆಯನ್ನು ಹೊಂದಿರುತ್ತದೆ.
ಸಮೂಹದ ಪ್ರತಿಯೊಬ್ಬ ಸದಸ್ಯನೂ ನಿರ್ದಿಷ್ಟ ಪಾತ್ರ ನಿರ್ವಹಿಸಬೇಕಾಗುತ್ತದೆ.
ಇತರ ಸಮೂಹಗಳು ಮತ್ತು ಸಂಸ್ಥೆಗಳೊಡನೆ ತನ್ನದೇ ಆದ ರೀತಿಯ ಅಂತರ್ ಸಂಬಂಧ ಹೊಂದಿರುತ್ತದೆ.
ಮಾನವ ಸಂಘ ಜೀವಿಯಾಗಿರುವುದರಿಂದ ಹಿಂದಿನಿಂದಲೂ ಹಲವಾರು ರೀತಿಯ ಸಮೂಹಗಳನ್ನು ಸ್ಥಾಪಿಸಿಕೊಂಡಿದ್ದಾನೆ ಮಾಡುತ್ತದೆ. ಸಮೂಹದ ಪ್ರಯತ್ನ ಮತ್ತು ಚಟುವಟಿಕೆಗಳಿಂದಲೇ ಸಮಾಜವು ವಿವಿಧ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಗತಿಯನ್ನು ಸಮೂಹವು ಒಬ್ಬ ವ್ಯಕ್ತಿ ತನ್ನ ಪ್ರಾಥಮಿಕ ಹಾಗೂ Motivational ಅವಶ್ಯಕತೆಗಳೆಲ್ಲವನ್ನು ಪೂರೈಸಿಕೊಳ್ಳಲು ಸಹಾಯ ಸಾಧಿಸಲು ಸಾಧ್ಯವಾಗಿದೆ. ಸಮೂಹಗಳಲ್ಲಿ ಅನೇಕ ವಿಧಗಳನ್ನು ಕಾಣುತ್ತೇವೆ.
ಪ್ರಾಥಮಿಕ ಸಮೂಹ :
ಸದಸ್ಯರ ನಡುವೆ ನಿಕಟವಾದ ಮತ್ತು ಮುಖಾಮುಖಿ ಸಂಬಂಧವಿರುವ ಸಮೂಹವನ್ನು ಪ್ರಾಥಮಿಕ ಸಮೂಹವೆನ್ನುವರು.
ಉದಾ: ಕುಟುಂಬ, ಆಟದ ಗುಂಪುಗಳು, ಗ್ರಾಮ ಸಮುದಾಯ ಇತ್ಯಾದಿ.
ಅನುಷಂಗಿಕ ಸಮೂಹ :
ಇಂತಹ ಸಮೂಹಗಳಲ್ಲಿ ಸದಸ್ಯರು ವಿಶೇಷ ಆಸಕ್ತಿ ಅಥವಾ ಉದ್ದೇಶಗಳ ಸಾಧನೆಗಾಗಿ ಸಮೂಹ ರಚಿಸಿಕೊಂಡಿರುತ್ತಾರೆ. ಉದಾ: ಸಾಂಸ್ಕೃತಿಕ ಸಂಘ ಸಂಸ್ಥೆಗಳು, ಸಾಮಾಜಿಕ ಸೇವಾ ಸಂಸ್ಥೆಗಳು ಇತ್ಯಾದಿ.
ಔಪಚಾರಿಕ ಸಮೂಹ :
ಸಮೂಹವು ತನ್ನದೇ ಆದ ನಿರ್ದಿಷ್ಟ ನೀತಿ ನಿಯಮಗಳನ್ನು ಹೊಂದಿದ್ದು ಔಪಚಾರಿಕವಾಗಿ ಕಾರ್ಯ ನಿರ್ವಹಿಸುತ್ತದೆ. ಉದಾ: ಶಾಲೆ, ಕಛೇರಿ ಇತ್ಯಾದಿ.
ಅನೌಪಚಾರಿಕ ಸಮೂಹ:
ಸಮೂಹವು ಯಾವುದೇ ನಿರ್ದಿಷ್ಟ ನೀತಿ ನಿಯಮಗಳನ್ನು ಹೊಂದಿರದೇ ಅನೌಪಚಾರಿಕವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಉದಾ: ದೇವಸ್ಥಾನ, ಚರ್ಚು ಇತ್ಯಾದಿ.
ತರಗತಿ – ಒಂದು ಸಮೂಹ :
‘ತರಗತಿಯೂ ಕೂಡ ಒಂದು ಸಮೂಹದಂತೆ ಕಾರ್ಯ ನಿರ್ವಹಿಸುತ್ತದೆ. ಸಮೂಹದ ಲಕ್ಷಣಗಳನ್ನು ತರಗತಿ ಹೊಂದಿರುವುದರಿಂದ ಅದು ಒಂದು ಸಮೂಹವಾಗಿದೆ. ಪ್ರತಿ ಸಮೂಹವು ತನ್ನದೇ ಆದ ಸಂರಚನೆಯನ್ನು ಹೊಂದಿರುತ್ತದೆ. ಹಾಗೆಯೇ ತರಗತಿಯೂ ಕೂಡ ಒಂದು ನಿರ್ದಿಷ್ಟವಾದ ಸಂರಚನೆಯನ್ನು ಹೊಂದಿದೆ. ತರಗತಿಯು ಕಲಿಕೆಗೆ ಮತ್ತು ವ್ಯಕ್ತಿತ್ವ ವಿಕಾಸಕ್ಕಾಗಿ ಒಂದೆಡೆ ಸೇರಿರುವ ಸಮಾನ ಲಕ್ಷಣ ಹಾಗೂ ಉದ್ದೇಶಗಳನ್ನು ಹೊಂದಿರುವ ಮಕ್ಕಳ ಸಮೂಹವಾಗಿದೆ. ತರಗತಿಯು ಒಂದು ಬೋಧನಾ ಸಮೂಹವಾಗಿ, ತನ್ನ ಸದಸ್ಯರ ಅಗತ್ಯತೆಗಳನ್ನು ಈಡೇರಿಸಿ ಅವರು ಗುರಿ ತಲುಪುವಲ್ಲಿ ಸಹಾಯ ಮಾಡುತ್ತದೆ.
ತರಗತಿಯ ತನ್ನ ಎಲ್ಲಾ ಸದಸ್ಯರು ಸಮ್ಮತಿಸುವ ಒಂದು ಸಾಮಾನ್ಯ ಗುರಿಯನ್ನು ಹೊಂದಿರುತ್ತದೆ. ಎಲ್ಲಾ ಸದಸ್ಯರು ಆ ಗುರಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ಗುರಿಯನ್ನು ಯಶಸ್ವಿಯಾಗಿ ತಲುಪುವಲ್ಲಿ ಅವರ ಎಲ್ಲಾ ಪ್ರಯತ್ನಗಳು ಕೂಡಾ ಸಾಮೂಹಿಕವಾಗಿರುತ್ತವೆ. ಶಾಲೆ, ಶಿಕ್ಷಕ ಮತ್ತು ವಿದ್ಯಾರ್ಥಿಗಳು ಶಾಲೆಯ ಕಾರ್ಯಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಆ ಸಮೂಹದ ಸಂರಚನೆಯನ್ನು ನಿರ್ಧರಿಸುವ ಅಂಶಗಳಾಗಿರುತ್ತವೆ.
ತರಗತಿ ಸಮೂಹದ ಸಂರಚನೆಯು ಅಲ್ಲಿರುವ ವಿದ್ಯಾರ್ಥಿಗಳ ನಡುವಿನ ಅಂತರ್ ವ್ಯಕ್ತಿ ಸಂಬಂಧಗಳನ್ನು ಮತ್ತು ಅಂತರ್ ಕ್ರಿಯೆಗಳನ್ನು ಸೂಚಿಸುತ್ತದೆ. ಸಮೂಹದಲ್ಲಿನ ಅಂತರ್ ಸಂಬಂಧಗಳನ್ನು ನಾವು ಅದರ ಕಾರ್ಯಗಳ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳಬಹುದು.
ತರಗತಿಯು ಸಮೂಹವಾದುದರಿಂದ ತನ್ನದೇ ಆದ ನಾಯಕನನ್ನು ಹೊಂದಿರುತ್ತದೆ. ಸಮುದಾಯದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪದ್ಧತಿಗಳು ತರಗತಿಯ ನಾಯಕತ್ವದ ಮೇಲೆ ವಿಶಿಷ್ಟ ಪ್ರಭಾವ ಬೀರುತ್ತವೆ. ಶಿಕ್ಷಕನೇ ತರಗತಿಯ ನಾಯಕನಾಗಿರುತ್ತಾನೆ.
ಒಂದು ತರಗತಿ ಸಮೂಹದ ಸಂಬಂಧಗಳು ಕೇವಲ ಒಂದು ಸಮೂಹದಲ್ಲಿರುವ ವ್ಯಕ್ತಿಗಳಿಗೆ ಸೀಮಿತವಾಗಿರುವುದಿಲ್ಲ. ಒಂದು ತರಗತಿ ಇತರ ತರಗತಿಗಳೊಡನೆ ಸಂಪರ್ಕ ಹೊಂದಿರುತ್ತದೆ. ಇದರಿಂದ ವಿದ್ಯಾರ್ಥಿಗಳ ವರ್ತನೆಯ ಸುಧಾರಣೆಗೆ ಸಂವರ್ಧನೆಗೆ ಸದಾವಕಾಶ ದೊರೆಯುತ್ತದೆ. ಒಂದು ತರಗತಿಯು ವಿವಿಧ ಶಾಲಾ ಕಾರ್ಯಕ್ರಮಗಳಲ್ಲಿ ಇತರ ತರಗತಿಗಳೊಡನೆ ಕಾರ್ಯ ನಿರ್ವಹಿಸಬೇಕಾಗುವುದು. ಇಂತಹ ಯಾವುದೇ ಕಾರ್ಯಕ್ರಮಗಳ ಸಫಲತೆ ಮತ್ತು ಪರಿಣಾಮಗಳು ಸಮೂತ ಸಂಬಂಧಗಳ ವಿನ್ಯಾಸವನ್ನು ಅವಲಂಬಿಸಿರುತ್ತದೆ.
ತರಗತಿ ಸಮೂಹ ಪ್ರಕ್ರಿಯೆಗಳು :
ಒಂದು ಸಮೂಹ ನಿರ್ದಿಷ್ಟ ಸಂರಚನೆ ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತದೆ ಎಂಬುದನ್ನು ಈಗಾಗಲೇ ತಿಳಿದಿದ್ದೇವೆ. ಒಂದು ನಿರ್ದಿಷ್ಟ ಗುರಿ ಸಾಧಿಸಲು ಅಥವಾ ಕಾರ್ಯ ನಿರ್ವಹಿಸಲು ಗುಂಪಿನ ಸದಸ್ಯರು ಪರಸರ ಸಂಬಂಧದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಂತರ್ ವ್ಯಕ್ತಿ ಸಂಬಂಧವು ಗುಂಪಿನ ಪರಿಣಾಮಕಾರಿ ಕಾರ್ಯ ನಿರ್ವಹಣೆಯನ್ನು ನಿರ್ಧರಿಸುತ್ತದೆ. ಸಂವಹನ ಮತ್ತು ಅಂತರ್ ಕ್ರಿಯೆಗಳು ಗುಂಪಿನ ಒಗ್ಗಟ್ಟಿನ ಬಲವನ್ನು ಕಾಯ್ದುಕೊಳ್ಳುವಲ್ಲಿ ಯಾವ ರೀತಿ ಪಾತ್ರ ನಿರ್ವಹಿಸುತ್ತವೆ ಎಂಬುದನ್ನು ತಿಳಿಯಲು ಸಮೂಹದ ಗತಿ ಶೀಲ ಸ್ವರೂಪವನ್ನು ತಿಳಿಯಲು ಪ್ರಯತ್ನಿಸೋಣ. ಇದರ ಜೊತೆಗೆ ಒಗ್ಗಟ್ಟಿನ ಬಲವನ್ನು ಹೆಚ್ಚಿಸುವಂತಹ ಸಮೂಹದ ವಾತಾವರಣ ಹೇಗಿರಬೇಕೆಂಬುದನ್ನು ತಿಳಿಯೋಣ.
ತರಗತಿ ಸಮೂಹದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಸೂಕ್ತ ಪಾತ್ರ ನಿರ್ವಹಿಸುವ ಮೂಲಕ ತನ್ನ ವೈಯಕ್ತಿಕ ಬೆಳವಣಿಗೆ ಹಾಗೂ ಇಡೀ ಗುಂಪಿನ ಯಶಸ್ಸಿಗೆ ಪ್ರಯತ್ನಿಸಬೇಕು. ಸಮೂಹ ಯಾವಾಗಲೂ ನಿಶ್ಚಲ ಸ್ಥಿತಿಯಲ್ಲಿರುವುದಿಲ್ಲ. ಸಮೂಹದ ಸದಸ್ಯರ ಮಧ್ಯೆ ನಿರಂತರವಾಗಿ ಸಂವಹನ ಮತ್ತು ಅಂತರ್ ಕ್ರಿಯೆ ಕಂಡುಬರುತ್ತದೆ ಮತ್ತು ವ್ಯಕ್ತಿ ಹಾಗೂ ಸನ್ನಿವೇಶದ ಮಧ್ಯೆಯೂ ಸಹ ಅಂತರ್ ಕ್ರಿಯೆ ಕಂಡು ಬರುತ್ತದೆ. ಸಮೂಹವು ಚಲನಾತ್ಮಕವಾಗಿದ್ದಾಗ ಕಲಿಕೆಯನ್ನು ಹೆಚ್ಚಾಗಿ ಉತ್ತೇಜಿಸಬಹುದಾಗಿದೆ. ಇದಕ್ಕಾಗಿ ಶಿಕ್ಷಕನು ತರಗತಿ ಸಮೂಹದಲ್ಲಿ ನಡೆಯುವ ಅಂತರ್ ಕ್ರಿಯೆಯ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ತರಗತಿ ಸಮೂಹದ ವಿದ್ಯಾರ್ಥಿಗಳು ಕಲಿಕಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಾಗ ಪರಸ್ಪರ ಮುಕ್ತವಾಗಿ ಅಂತರ್‌ಕ್ರಿಯೆಯಲ್ಲಿ ತೊಡಗುತ್ತಾರೆ. ಅಂತರ್‌ವ್ಯಕ್ತಿ ಅಂತರ್‌ಕ್ರಿಯೆಗೆ ಸಂವಹನ ಅತ್ಯಾವಶ್ಯಕ. ಅಂತರ್‌ಕ್ರಿಯೆಯು ಪರಿಣಾಮಕಾರಿಯಾಗಬೇಕಾದರೆ ವಿದ್ಯಾರ್ಥಿಗಳು ಸಂವಹನದ ವಿವಿಧ ಪ್ರಕಾರಗಳು ಮತ್ತು ಕೌಶಲಗಳನ್ನು ಹೊಂದಿರಬೇಕು. ಇಂದಿನ ತರಗತಿಗಳಲ್ಲಿ ಕಲಿಕಾ ಪ್ರಕ್ರಿಯೆಯ ಸಂದರ್ಭಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುತ್ತದೆ. ತರಗತಿಯಲ್ಲಿ ವಿದ್ಯಾರ್ಥಿಗಳು ಕೇವಲ ನಿಷ್ಕ್ರಿಯ ಕೇಳುಗರಾಗಿರಬಾರದು. ಆದ್ದರಿಂದ ಶಿಕ್ಷಕನು ತರಗತಿಯಲ್ಲಿ ಸಕ್ರಿಯ ಅಂತರ್‌ಕ್ರಿಯೆಯನ್ನು ಉತ್ತೇಜಿಸಬೇಕು.
ಅಂತರ್‌ಕ್ರಿಯೆಯ ವಿಶ್ಲೇಷಣೆ :
ಅಮೇರಿಕಾದ ಶಿಕ್ಷಣ ತಜ್ಞರಾದ ನೆಡ್ ಫ್ಲಾಂಡರ್ಸ್ ರವರು ತರಗತಿ ವಾತಾವರಣದಲ್ಲಿ ವಿದ್ಯಾರ್ಥಿಗಳಲ್ಲಿ ಕಂಡು ಬರುವ ವರ್ತನಾ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಿ ವಿಶ್ಲೇಷಿಸಿರುತ್ತಾರೆ. ಈ ಅಧ್ಯಯನವು ತರಗತಿಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮಧ್ಯೆ ನಡೆಯುವ ಅಂತರ್ ಕ್ರಿಯೆಯನ್ನು ಕುರಿತದ್ದಾಗಿದೆ. ತರಗತಿಯಲ್ಲಿ ಶಿಕ್ಷಕರು ಬಹಳ ಸಮಯ ಮಾತನಾಡುವರೇ? ಅಥವಾ ವಿದ್ಯಾರ್ಥಿಗಳಿಗೆ ಮಾತನಾಡಲು ಅವಕಾಶ ನೀಡುವರೆ? ಶಿಕ್ಷಕರು ತಮ್ಮ ಬೋಧನಾ ವಿಧಾನದಲ್ಲಿ ಪ್ರಭುತ್ವ ಮಾದರಿ ಬಳಸುವರೆ? ಅಥವಾ ಪ್ರಜಾಸತ್ತಾತ್ಮಕ ಮಾದರಿಯನ್ನು ಬಳಸುವರೇ? ವಿದ್ಯಾರ್ಥಿಗಳು ಯಾವುದೇ ಪ್ರತಿಬಂಧವಿಲ್ಲದೇ ಮುಕ್ತವಾಗಿ ಮಾತನಾಡಲು ಸ್ವಾತಂತ್ರ್ಯವಿದೆಯೇ? ಅವರು ಮುಕ್ತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳುವರೇ? ಅಥವಾ ಅವರು ಶಿಕ್ಷಕರು ಹೇಳಿದ್ದನ್ನು ಕೇಳಿ ಒಪ್ಪಿಕೊಳ್ಳುವರೇ? ಇತ್ಯಾದಿ.
- ಫ್ಲಾಂಡರ್ಸ್ರವರು ತರಗತಿಯ ಅಂತರ್‌ಕ್ರಿಯೆಯಲ್ಲಿ ನೇರ ಹಾಗೂ ಪರೋಕ್ಷ ಪ್ರಭಾವಗಳನ್ನು ಗುರ್ತಿಸಿರುತ್ತಾರೆ. ಪ್ರಭುತ್ವ ಮಾದರಿ ಮತ್ತು ಶಿಕ್ಷಕ ಕೇಂದ್ರಿತ ಬೋಧನಾ ವಿಧಾನಗಳಲ್ಲಿ ನೇರ ಪ್ರಭಾವವನ್ನು ಗುರ್ತಿಸಿರುತ್ತಾರೆ. ಇಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ನಿಷ್ಕ್ರಿಯ ಕೇಳುಗರಾಗಿರುತ್ತಾರೆ. ಪ್ರಜಾಸತ್ತಾತ್ಮಕ ಹಾಗೂ ವಿದ್ಯಾರ್ಥಿ ಕೇಂದ್ರಿತ ತರಗತಿಯ ವಾತಾವರಣದಲ್ಲಿ ಪರೋಕ್ಷ ಪ್ರಭಾವವನ್ನು ಕಾಣುತ್ತಾರೆ. ಇಲ್ಲಿ ಶಿಕ್ಷಕರಿಗಿಂತ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಇವುಗಳ ಆಧಾರದ ಮೇಲೆ ಫ್ಲಾಂಡರ್ಸ್ರವರು ಅಂತರ್‌ಕ್ರಿಯೆಯ ವಿಶ್ಲೇಷಣಾ ಕ್ರಮವನ್ನು ರೂಪಿಸಿರುತ್ತಾರೆ. ಇದರಲ್ಲಿ ಒಟ್ಟು ಹತ್ತು ಅಂಶಗಳಿವೆ. ಮೊದಲಿನ ನಾಲ್ಕು ಪರೋಕ್ಷ ಪ್ರಭಾವವನ್ನು ನಂತರದ ಮೂರು ನೇರ ಪ್ರಭಾವವನ್ನು, 8 ಮತ್ತು 9ನೇ ಅಂಶಗಳು ವಿದ್ಯಾರ್ಥಿಗಳ ಮಾತನ್ನು ಮತ್ತು ಕೊನೆಯದು ಮೌನ ಅಥವಾ ಗೊಂದಲವನ್ನು ಸೂಚಿಸುತ್ತದೆ.