ಅನುವಂಶೀಯತೆ ಮತ್ತು ಪರಿಸರ (heredity and environment)

ಅನುವಂಶೀಯತೆ ಮತ್ತು ಪರಿಸರ (heredity and environment):ಅನುವಂಶೀಯತೆ :-“ಗುಣಲಕ್ಷಣಗಳು ವಂಶಪಾರಂಪರ್ಯವಾಗಿ (ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಹೊಂದುವುದಕ್ಕೆ ಅನುವಂಶೀಯತೆ ಎನ್ನುತ್ತೇವೆ”, ಪ್ರತಿಯೊಂದು ಪೀಳಿಗೆಯ ವಿಭಿನ್ನತೆಗೆ ಈ ಅನುವಂಶೀಯತೆಯೇ ಕಾರಣ. ಉದಾಹರಣೆಗೆ : ತಂದೆ-ತಾಯಿಯರಿಂದ ಗುಣಲಕ್ಷಣಗಳು ಅವರ ಮಕ್ಕಳಿಗೆ ವರ್ಗಾವಣೆಯಾಗುತ್ತವೆ. ಆದರೂ ಮಕ್ಕಳು ತಂದೆ-ತಾಯಿಯರಿಗಿಂತ ತಕ್ಕಮಟ್ಟಿಗೆ ಭಿನ್ನವಾದ ದೈಹಿಕ ಹಾಗೂ ಮಾನಸಿಕ ಲಕ್ಷಣಗಳನ್ನು ಹೊಂದಿರುತ್ತಾರೆ. ಜೊತೆಗೆ ಬೆಳೆದ ಪರಿಸರದ ಪ್ರಭಾವವನ್ನೂ ಕಾಣುತ್ತೇವೆ.
ಅನುವಂಶೀಯತೆ ಮತ್ತು ಪರಿಸರ ವ್ಯಕ್ತಿಯ ವರ್ತನೆಯ ಮೇಲೆ ಪ್ರಭಾವ ಬೀರುತ್ತವೆ. ವ್ಯಕ್ತಿಯ ವರ್ತನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಆತನ ಅನುವಂಶೀಯತೆ ಮತ್ತು ಪರಿಸರದ ಪ್ರಭಾವವನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ವರ್ತನೆಯ ಕಾರ್ಯ-ಕಾರಣ ಸಂಬಂಧವನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ. ಅನುವಂಶೀಯ ಲಕ್ಷಣಗಳು ಹೇಗೆ ವಂಶಪಾರಂಪರ್ಯವಾಗಿ ವರ್ಗಾವಣೆಯಾಗುತ್ತವೆ? ವ್ಯಕ್ತಿಯ ವರ್ತನೆಯ ಮೇಲೆ ಪರಿಸರ ಹೇಗೆ ಪ್ರಭಾವ ಬೀರುತ್ತದೆ? ಎಂಬ ಬಗ್ಗೆ ಈ ಅಧ್ಯಾಯ ಸಾದರಪಡಿಸುತ್ತದೆ.
ಜೀವಕೋಶ, ವರ್ಣತಂತುಗಳು, ಗುಣಾಣುಗಳು: (cell, chromosomes and genes)
ಮಾನವ ಶರೀರ ಇತರ ಜೀವಿಗಳಂತೆ ಅಸಂಖ್ಯಾತ ಜೀವಕೋಶಗಳಿಂದ ಆಗಿದೆ. ಈ ಕೋಶಗಳು ದೇಹದ ವಿವಿಧ ಭಾಗಗಳಲ್ಲಿ ವಿಭಿನ್ನ ಕಾರ್ಯನಿರ್ವಹಿಸುತ್ತವೆ ಮತ್ತು ರಚನೆಯಲ್ಲಿ ಕೂಡ ಭಿನ್ನವಾಗಿರುತ್ತವೆ. ಆದರೆ ಎಲ್ಲಾ ಕೋಶಗಳಲ್ಲೂ ಮೂಲ ಅಂಶಗಳು ಒಂದೇ ರೀತಿಯಾಗಿರುತ್ತವೆ.
ಪ್ರತಿಯೊಂದು ಜೀವಕೋಶದಲ್ಲಿ ಕೋಶಕೇಂದ್ರ ಎಂಬ ಭಾಗವಿದ್ದು, ಈ ಕೋಶ ಕೇಂದ್ರದಲ್ಲಿ ದಾರದಂತಹ ರಚನೆಯ ‘ವರ್ಣತಂತು’ಗಳು ಇರುತ್ತವೆ. ಈ ವರ್ಣತಂತುಗಳೇ ವಂಶವಾಹಿಗಳು. ಈ ವರ್ಣತಂತುಗಳ ಸಂಖ್ಯೆ ಶರೀರದ ಎಲ್ಲ ಕೋಶಗಳಲ್ಲೂ ಮತ್ತು ಎಲ್ಲ ಮಾನವರಲ್ಲೂ ಒಂದೇ ಆಗಿರುತ್ತದೆ. ಮಾನವ ಕೋಶದಲ್ಲಿ 46 ವರ್ಣತಂತುಗಳು ಇರುತ್ತವೆ. ಈ ವರ್ಣತಂತುಗಳು ಡಿ.ಎನ್.ಎ. (ಡಿ-ಆಕ್ಸಿ ರೈಬೋನ್ಯೂಕ್ಲಿಯಿಕ್ ಆಮ್ಲ) ಎಂಬ ರಾಸಾಯನಿಕ ವಸ್ತುವಿನಿಂದ ಆಗಿವೆ. ಈ ಡಿ.ಎನ್.ಎ. ಅಣು ಏಣಿ ಆಕಾರದ ರಚನೆ ಹೊಂದಿದೆ. ಈ ಡಿ.ಎನ್.ಎ. ಅಣು ಸೀಳಿಕೊಂಡು ದ್ವಿಗುಣಗೊಳ್ಳುವ ವಿಶೇಷ ಲಕ್ಷಣ ಹೊಂದಿದೆ. ಡಿ.ಎನ್.ಎ. ಯ ಈ ವಿಶೇಷ ಲಕ್ಷಣದಿಂದಾಗಿ ವರ್ಣತಂತುಗಳು ಸೀಳಿಕೊಂಡು ತಮ್ಮ ಪ್ರತಿರೂಪ ಸೃಷ್ಟಿಸಿ ದ್ವಿಗುಣಗೊಳ್ಳುವ ವಿಶಿಷ್ಟ ಗುಣ ಹೊಂದಿವೆ. ಈ ವರ್ಣತಂತುಗಳ ಮೇಲೆ ಗುಣಾಣುಗಳು ಎಂಬ ವಿಶಿಷ್ಟ ರಚನೆಗಳು ಇವೆ. ಈ ಗುಣಾಣುಗಳೇ ಗುಣಲಕ್ಷಣಗಳನ್ನು ನಿರ್ಧರಿಸುವ ಅಂಶಗಳು. ಉದಾಹರಣೆಗೆ: ಮೂಗಿನ ರಚನೆ, ಕಣ್ಣಿನ ಬಣ್ಣ, ಚರ್ಮದ ಬಣ್ಣ, ಇತ್ಯಾದಿ. ಹೀಗೆ ನಮ್ಮ ಎಲ್ಲ ಲಕ್ಷಣಗಳನ್ನು ನಿರ್ಧರಿಸಲು ಪ್ರತ್ಯೇಕ ಗುಣಾಣುಗಳು ನಿರ್ದಿಷ್ಟ ವರ್ಣತಂತುವಿನ ನಿರ್ದಿಷ್ಟ ಜಾಗದಲ್ಲಿ ಸ್ಥಿರೀಕರಣಗೊಂಡಿವೆ. ಈ ಗುಣಾಣುಗಳ ರಚನೆಯಲ್ಲಿ ಏನಾದರೂ ವ್ಯತ್ಯಾಸವಾದರೆ ಅವು ನಿರ್ಧರಿಸುವ ಗುಣದಲ್ಲಿ ಕೂಡ ಏರುಪೇರಾಗುತ್ತದೆ. ಇದು ವಂಶಪಾರಂಪರ್ಯವಾಗಿ ಮುಂದುವರಿಯುತ್ತದೆ.
ಕೋಶ ವಿಭಜನೆ – ಸಂಖ್ಯೆ ಅಗುಣಿತೀಕರಣ (ಮೈಟಾಸಿಸ್) – ಸಂಖ್ಯಾಕ್ಷೀಣ ಕೋಶವಿಭಜನೆ (ಮಿಯಾಸಿಸ್)
ಜೀವಿಗಳು ಎತ್ತರ ಮತ್ತು ಗಾತ್ರದಲ್ಲಿ ಬೆಳೆಯಬೇಕಾದರೆ ಶರೀರದ ಜೀವಕೋಶಗಳು ಸೀಳಿಕೊಂಡು ದ್ವಿಗುಣಗೊಳ್ಳಬೇಕು ಮತ್ತು ಬೆಳೆಯಬೇಕು. ಹೀಗೆ ಕೋಶಗಳು ಸೀಳಿಕೊಂಡು ದ್ವಿಗುಣಗೊಳ್ಳುವ ಕ್ರಿಯೆ ವಿಸ್ಮಯಕಾರಿಯಾಗಿದೆ.
ಸಂಖ್ಯೆ ಅಗುಣಿತೀಕರಣ ಕೋಶವಿಭಜನೆ (ಮೈಟಾಸಿಸ್) ಎಂದರೇನು?
ಒಂದು ಕೋಶ ವಿಭಜಿಸಿ ಎರಡಾಗಬೇಕಾದರೆ ಮೊದಲು ಆ ಜೀವಕೋಶದ ಕೋಶಕೇಂದ್ರದಲ್ಲಿರುವ ವರ್ಣತಂತುಗಳು ದ್ವಿಗುಣಗೊಳ್ಳುತ್ತವೆ. ಅಂದರೆ 46 ವರ್ಣತಂತುಗಳು 92 ಆಗುತ್ತವೆ. ಆಮೇಲೆ ಕ್ರಮಬದ್ದವಾಗಿ 46, 46 ವರ್ಣತಂತುಗಳು ಜೀವಕೋಶದ ಪರಸ್ಪರ ವಿರುದ್ಧ ದಿಕ್ಕಿನತ್ತ ಸೆಳೆಯಲ್ಪಡುತ್ತವೆ. ನಂತರ ಮಧ್ಯದಲ್ಲಿ ಗೋಡೆ ಏರ್ಪಟ್ಟು ಎರಡು ಕೋಶಗಳಾಗುತ್ತವೆ. ಹೀಗೆ ಎಲ್ಲ ಕೋಶಗಳು 46 ವರ್ಣತಂತುಗಳನ್ನು ಪಡೆಯುತ್ತವೆ. ಹೀಗೆ ಒಂದು ಜೀವಕೋಶ ಸೀಳಿಕೊಂಡು ಎರಡು ಕೋಶಗಳಾದಾಗ ಆ ಎರಡೂ ಕೋಶಗಳಲ್ಲೂ ತಾಯಿಕೋಶದಲ್ಲಿ ಇದ್ದಷ್ಟೇ ವರ್ಣತಂತುಗಳು ಇದ್ದರೆ ಅಂತಹ ಕೋಶವಿಭಜನೆಯನ್ನು ಸಂಖ್ಯೆ ಅಗುಣಿತೀಕರಣ ಕೋಶವಿಭಜನೆ ಎನ್ನುತ್ತೇವೆ. ಕೆಳಕಂಡ ಚಿತ್ರ ಸಂಖ್ಯೆ ಅಗುಣಿತೀಕರಣ ಕೋಶವಿಭಜನೆಯನ್ನು ತಿಳಿಸುತ್ತದೆ.
ಸಂಖ್ಯೆ ಅಗುಣಿತೀಕರಣ ಕೋಶ ವಿಭಜನೆ ನಿರಂತರವಾಗಿ ಶರೀರದ ಎಲ್ಲ ಭಾಗಗಳಲ್ಲೂ ನಡೆಯುತ್ತದೆ. ಹಳೆಯ ಕೋಶಗಳು ನಶಿಸಿ ಹೋಗಿ ಹೊಸಕೋಶಗಳ ಉತ್ಪತ್ತಿ ಸಂಖ್ಯೆ ಅಗುಣಿತೀಕರಣ ಕೋಶ ವಿಭಜನೆಯಿಂದ ಆಗುತ್ತದೆ.
ಸಂಖ್ಯಾಕ್ಷೀಣ ಕೋಶ ವಿಭಜನೆ (ಮಿಯಾಸಿಸ್) (Meiosis)
“ಒಂದು ಕೋಶ ವಿಭಜನೆ ಹೊಂದಿ ಎರಡು ಕೋಶಗಳಾದಾಗ ಆ ಎರಡೂ ಕೋಶಗಳಲ್ಲಿ ತಾಯಿಕೋಶದ ವರ್ಣತಂತುಗಳ ಅರ್ಧದಷ್ಟು ಸಂಖ್ಯೆಯ ವರ್ಣತಂತುಗಳು ಇದ್ದರೆ ಅಂತಹ ಕೋಶವಿಭಜನೆಯನ್ನು ಸಂಖ್ಯಾಕ್ಷೀಣ ಕೋಶವಿಭಜನೆ ಎಂದು ಕರೆಯುವರು”. ಕೆಳಕಂಡ ಚಿತ್ರ ಸಂಖ್ಯಾಕ್ಷೀಣ ಕೋಶ ವಿಭಜನೆಯನ್ನು ಸೂಚಿಸುತ್ತದೆ.
ಲಿಂಗಾಣು ಉತ್ಪತ್ತಿ :- ಗಂಡುಲಿಂಗಾಣು ಮತ್ತು ಹೆಣ್ಣು ಲಿಂಗಾಣು (gametes formation)
ಹೆಣ್ಣು ಮತ್ತು ಗಂಡು ಪ್ರೌಢಾವಸ್ಥೆ ತಲುಪಿದಾಗ (ಹದಿ ವಯಸ್ಸು) ಪ್ರಜನನ ಗ್ರಂಥಿಗಳಾದ ಸ್ತ್ರೀಯರ ಅಂಡಾಶಯ ಮತ್ತು ಪುರುಷರ ವೃಷಣಗಳಲ್ಲಿ ಲಿಂಗಾಣುಗಳ ಉತ್ಪತ್ತಿ ಪ್ರಾರಂಭವಾಗುತ್ತದೆ. ಹೆಣ್ಣು ಮತ್ತು ಗಂಡು ಲಿಂಗಾಣುಗಳ ಸಂಮ್ಮಿಲನದಿಂದ ಹೊಸ ಜೀವದ ಉಗಮವಾಗುತ್ತದೆ.
ಹೆಣ್ಣು ಲಿಂಗಾಣು ಅಥವಾ ಅಂಡಾಣು ಉತ್ಪತ್ತಿ oogenesis-Female gamete formation)
ಸ್ತ್ರೀಯರ ಅಂಡಾಶಯದಲ್ಲಿ ಬಲಿತ ಅಂಡಕೋಶವು ಮೊದಲು ಸಂಖ್ಯಾಕ್ಷೀಣ ವಿಭಜನೆ ಹೊಂದುತ್ತದೆ. ಇದರಿಂದ ಉತ್ಪತ್ತಿಯಾದ ಎರಡು ಕೋಶಗಳು ಮತ್ತೆ ಸಂಖ್ಯೆ ಅಗುಣಿತೀಕರಣ ವಿಭಜನೆ ಹೊಂದಿ ನಾಲ್ಕು ಕೋಶಗಳು ಆಗುತ್ತವೆ. ಈ ನಾಲ್ಕುಕೋಶಗಳಲ್ಲಿ ಮೂರು ಗರ್ಭಧರಿಸುವ ಗುಣ ಹೊಂದಿರುವುದಿಲ್ಲ. ಒಂದು ಮಾತ್ರ ಗರ್ಭಧರಿಸುವ ಗುಣ ಹೊಂದಿರುತ್ತದೆ. ಇದೇ ‘ಅಂಡಾಣು ಅಥವಾ ಅಂಡ’ ಅಂಡಾಣು ಉತ್ಪತ್ತಿಯನ್ನು ಕೆಳಕಂಡ ಚಿತ್ರ ಸ್ಪಷ್ಟವಾಗಿ ವಿವರಿಸುತ್ತದೆ.
ಸ್ತ್ರೀಯರಲ್ಲಿ ಪ್ರತಿ ತಿಂಗಳು ಒಂದು ಅಂಡಾಣು ಉತ್ಪತ್ತಿಯಾಗುತ್ತದೆ. ಇದು ಗರ್ಭಾಂಕುರಗೊಳ್ಳದಿದ್ದರೆ ಋತು ಸ್ರಾವದ ರೂಪದಲ್ಲಿ ಹೊರ ಹಾಕಲ್ಪಡುತ್ತದೆ. ಇದನ್ನೇ ಮುಟ್ಟಾಗುವುದು ಎನ್ನುವರು. ಅಂಡಾಣುಗಳ ಉತ್ಪತ್ತಿ ಸ್ತ್ರೀ ಋತುಮತಿ ಆದ ದಿನದಿಂದ ಮುಟ್ಟು ನಿಲ್ಲುವವರೆಗೆ (ಸುಮಾರು 45-50 ವರ್ಷ ವಯಸ್ಸು) ಮುಂದುವರಿಯುತ್ತದೆ. ಸ್ತ್ರೀ ಗರ್ಭಧರಿಸಿದ ಸಮಯದಲ್ಲಿ ಅಂಡಾಣುಗಳ ಉತ್ಪತ್ತಿ ಆಗುವುದಿಲ್ಲ. ಮಗುವಿನ ಜನನದ ನಂತರ ಅಂಡಾಣು ಉತ್ಪತ್ತಿ ಮತ್ತೆ ಪ್ರಾರಂಭವಾಗುತ್ತದೆ. ಅಂಡಾಣು ಉತ್ಪತ್ತಿ ಕ್ರಿಯೆಯನ್ನು ಲೈಂಗಿಕ ರಸದೂತಗಳು ನಿಯಂತ್ರಿಸುತ್ತವೆ. ಒಬ್ಬ ಸ್ತ್ರೀ ತನ್ನ ಜೀವಮಾನದಲ್ಲಿ 300-400 ಅಂಡಾಣುಗಳನ್ನು ಉತ್ಪತ್ತಿ ಮಾಡುವಳು.
ಶುಕ್ರಾಣು ಅಥವಾ ಗಂಡು ಲಿಂಗಾಣು ಉತ್ಪತ್ತಿ (spermetogenesis-Male gamete formation)
ಹುಡುಗ ಹದಿವಯಸ್ಸಿಗೆ ಬಂದಾಗ ವೃಷಣಗಳು ಕ್ರಿಯಾಶೀಲವಾಗುತ್ತವೆ. ಲೈಂಗಿಕ ರಸದೂತಗಳು ಉತ್ಪತ್ತಿಯಾಗಿ ಲೈಂಗಿಕ ಲಕ್ಷಣಗಳ ಬೆಳವಣಿಗೆಗೆ ನಾಂದಿ ಹಾಡುತ್ತವೆ. ಜೊತೆಗೆ ಶುಕ್ರಾಣುಗಳ ಅಥವಾ ವಿರ್ಯಾಣುಗಳ ಉತ್ಪತ್ತಿಗೆ ಕಾರಣವಾಗುತ್ತವೆ.
ವೃಷಣಗಳಲ್ಲಿ ಬಲಿತ ಕೋಶಗಳು ಮೊದಲು ಸಂಖ್ಯಾಕ್ಷೀಣ ಕೋಶವಿಭಜನೆ ಹೊಂದುತ್ತವೆ. ನಂತರ ಸಂಖ್ಯೆ ಅಗುಣಿತೀಕರಣ ಕೋಶವಿಭಜನೆ ಹೊಂದಿ ಶುಕ್ರಾಣುಗಳು ಉತ್ಪತ್ತಿಯಾಗುತ್ತವೆ. ಶುಕ್ರಾಣು ಉತ್ಪತ್ತಿಯನ್ನು ಕೆಳಗಿನ ಚಿತ್ರ ಸ್ಪಷ್ಟವಾಗಿ ವಿವರಿಸುತ್ತದೆ.
ಶುಕ್ರಾಣುಗಳಲ್ಲಿ ಸಹ ಅಂಡಾಣುವಿನಂತೆಯೇ 23 ವರ್ಣತಂತುಗಳು ಮಾತ್ರ ಇರುತ್ತವೆ. ಒಟ್ಟಾರೆ ಲಿಂಗಾಣುಗಳಲ್ಲಿ ಮೂಲಕೋಶದ ಅರ್ಧದಷ್ಟು ವರ್ಣತಂತುಗಳು ಮಾತ್ರ ಇರುತ್ತವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಂತರ ಅಂಡಾಣು ಮತ್ತು ಶುಕ್ರಾಣು ಮಿಲನವಾಗಿ “ಯುಗ್ಗ’ (ಗರ್ಭಾಂಕುರಗೊಂಡ ಕೋಶ)ವಾದಾಗ ಆ ಯುಗ್ಧದಲ್ಲಿ ಮತ್ತೆ 46 ವರ್ಣತಂತುಗಳು ಇರುತ್ತವೆ. ನಂತರ ಈ ಯುಗ್ಧ ಸಂಖ್ಯೆ ಅಗುಣಿತೀಕರಣ ಕೋಶವಿಭಜನೆ ಹೊಂದಿ ಬೆಳೆದು ಶಿಶುವಾಗಿ ಮಾರ್ಪಾಡು ಹೊಂದುತ್ತದೆ. ಪ್ರಕೃತಿಯ ಈ ವಿಸ್ಮಯ ಒಂದು ಪವಾಡವೆಂದೇ ಹೇಳಬಹುದು!
ಗರ್ಭಾಂಕುರ ಅಥವಾ ಗರ್ಭಧಾರಣೆ ಎಂದರೇನು? (fertilization)
ಸ್ತ್ರೀಯರಲ್ಲಿ ಅಂಡಾಣು ಉತ್ಪತ್ತಿಯಾದ ಮೇಲೆ ಅದು ಅಂಡನಾಳದಲ್ಲಿ ನೆಲೆಸಿರುತ್ತದೆ. ಏಕೆಂದರೆ ಅಂಡಾಣುವಿಗೆ ಚಲಿಸುವ ಗುಣ ಇರುವುದಿಲ್ಲ. ಪುರುಷ ಮತ್ತು ಸ್ತ್ರೀ ಮಿಲನದಿಂದ ಶುಕ್ರಾಣುಗಳು ಸ್ತ್ರೀಯ ಯೋನಿ ಮೂಲಕ ಅಂಡನಾಳದಲ್ಲಿರುವ ಅಂಡಾಣು ಬಳಿ ಸಾಗುತ್ತವೆ. ಶುಕ್ರಾಣುಗಳಿಗೆ ಬಾಲವಿದ್ದು ಚಲಿಸುವ ಗುಣ ಹೊಂದಿರುವುದರಿಂದ ಅವು ಅಂಡನಾಳದಲ್ಲಿ ತೆವಳುತ್ತಾ ಸಾಗುತ್ತವೆ. ಲಕ್ಷಗಟ್ಟಲೆ ಶುಕ್ರಾಣುಗಳಲ್ಲಿ ಒಂದು ಶುಕ್ರಾಣು ಮಾತ್ರ ಅಂಡಾಣು ಒಳಗೆ ಪ್ರವೇಶಿಸುತ್ತದೆ. ಹೀಗೆ ಅಂಡಾಣುವಿನಲ್ಲಿರುವ 23 ವರ್ಣತಂತುಗಳ ಜೊತೆ ಶುಕ್ರಾಣುವಿನಲ್ಲಿರುವ 23 ವರ್ಣತಂತುಗಳು ಜೊತೆಗೂಡಿ 46 ಅಥವಾ 23 ಜೊತೆ ವರ್ಣತಂತುಗಳಾಗುತ್ತವೆ. ಈ ಸಂಖ್ಯೆ ಮಾನವ ಜೀವಕೋಶದಲ್ಲಿ ಇರಬೇಕಾದ ವರ್ಣತಂತುಗಳು. ಹೀಗೆ ರೂಪುಗೊಂಡ ಯುಗ್ಧ ನಂತರ ಗರ್ಭಕೋಶದಲ್ಲಿ ನೆಲೆಗೊಂಡು ಬೆಳೆದು ಶಿಶುವಾಗಿ ಜನಿಸುತ್ತದೆ.
“ಹೀಗೆ ಅಂಡಾಣು ಮತ್ತು ಶುಕ್ರಾಣು ಮಿಲನಗೊಂಡು ಯುಗವಾಗುವ ಕ್ರಿಯೆಯೇ ಗರ್ಭಾಂಕುರ ಅಥವಾ ಗರ್ಭಧಾರಣೆ.”
ಶುಕ್ರಾಣುಗಳ ಗಾತ್ರ ಅಂಡಾಣುವಿಗಿಂತ ಚಿಕ್ಕದಾಗಿರುತ್ತದೆ. ಅಂಡಾಣು ಗಾತ್ರ ಸುಮಾರು 0.1 ಮಿ.ಮೀ. ಇದ್ದರೆ ಶುಕ್ರಾಣು ಗಾತ್ರ ಸುಮಾರು 0.01 ಮಿ.ಮೀ. ಆಗಿರುತ್ತದೆ. ಕೆಲವು ಸ್ತ್ರೀಯರು ಒಮ್ಮೆಗೆ ಒಂದಕ್ಕಿಂತ ಹೆಚ್ಚು ಅಂಡಾಣುಗಳನ್ನು ಉತ್ಪತ್ತಿ ಮಾಡುವ ಗುಣ ಹೊಂದಿರುತ್ತಾರೆ. ಆಗ ಅವಳಿ ತ್ರಿವಳಿ ಇತ್ಯಾದಿ ಜನಿಸುತ್ತವೆ.
ಲಿಂಗ ನಿರ್ಧಾರ (ಹೆಣ್ಣು – ಗಂಡು ಜನನ) (sex determination)
ಮಾನವನ 23 ಜೊತೆ ವರ್ಣತಂತುಗಳಲ್ಲಿ 22 ಜೊತೆ ವ್ಯಕ್ತಿಯ ವಿವಿಧ ಗುಣಲಕ್ಷಣಗಳನ್ನು ನಿರ್ಧರಿಸುತ್ತವೆ. ಇವುಗಳಿಗೆ ‘ಆಟೋಸೋಮ್ಸ್’ (ಲಿಂಗೇತರ ವರ್ಣತಂತುಗಳು) ಎನ್ನುವರು. ಇನ್ನುಳಿದ ಒಂದು ಜೊತೆ ವರ್ಣತಂತುಗಳು ‘ಲಿಂಗ ವರ್ಣತಂತುಗಳು’ ಅಂದರೆ ಇವು ಲಿಂಗ ನಿರ್ಧರಿಸುವ ವರ್ಣತಂತುಗಳು. ಹೆಣ್ಣು ಅಥವಾ ಗಂಡು ಎಂದು ಈ ಲಿಂಗವರ್ಣತಂತುಗಳು ನಿರ್ಧರಿಸುತ್ತವೆ.
ಹೆಣ್ಣು ‘X’ ಲಿಂಗ ವರ್ಣತಂತು ಇರುವ ಅಂಡಾಣುಗಳನ್ನು ಮಾತ್ರ ಉತ್ಪತ್ತಿ ಮಾಡುತ್ತಾಳೆ. ಆದರೆ ಗಂಡು ‘X’ ಮತ್ತು ‘Y’ ಎಂಬ ಲಿಂಗವರ್ಣತಂತುಗಳಿರುವ ಎರಡು ರೀತಿಯ ಶುಕ್ರಾಣಗಳನ್ನು ಉತ್ಪತ್ತಿ ಮಾಡುತ್ತಾನೆ. ಒಂದು ವೇಳೆ ‘X’ ಲಿಂಗ ವರ್ಣತಂತು ಇರುವ ಶುಕ್ರಾಣು ಅಂಡಾಣು ಜೊತೆ ಸೇರಿದರೆ ಆಗ ಹುಟ್ಟುವ ಮಗು ‘XX’ ಲಿಂಗ ವರ್ಣತಂತುಗಳಿರುವ ಹೆಣ್ಣಾಗುತ್ತದೆ. ಅಥವಾ ಒಂದು ವೇಳೆ ‘Y’ ಲಿಂಗವರ್ಣತಂತು ಇರುವ ಶುಕ್ರಾಣು ಅಂಡಾಣು ಜೊತೆ ಸೇರಿದರೆ ‘XY’ ಲಿಂಗವರ್ಣತಂತುಗಳಿರುವ ಗಂಡಾಗುತ್ತದೆ. ಅಂದರೆ ‘XX’ ಲಿಂಗವರ್ಣತಂತುಗಳಿದ್ದರೆ ಹುಟ್ಟುವ ಮಗು ಹೆಣ್ಣು ಮತ್ತು ‘XY’ ಲಿಂಗವರ್ಣತಂತುಗಳಿದ್ದರೆ ಹುಟ್ಟುವ ಮಗು ಗಂಡು ಎಂಬುದನ್ನು ನೆನಪಿನಲ್ಲಿಡಬೇಕು. ಆದ್ದರಿಂದ ‘Y’ ಲಿಂಗವರ್ಣತಂತು ಗಂಡು ಹುಟ್ಟಿಗೆ ಕಾರಣವಾದ ಚಿಕ್ಕವರ್ಣತಂತು.
ಪ್ರಬಲ ಗುಣಾಣು ಮತ್ತು ದುರ್ಬಲ ಗುಣಾಣು ಎಂದರೇನು? (Dominance and recessive genes)
ನಮಗೆ ತಿಳಿದಿರುವಂತೆ ಪ್ರತಿಯೊಂದು ಗುಣಲಕ್ಷಣವನ್ನು ನಿರ್ಧರಿಸಲು ಗುಣಾಣುಗಳು (genes) ವರ್ಣತಂತುಗಳ ಮೇಲೆ ಇರುತ್ತವೆ. ಒಂದು ನಿರ್ದಿಷ್ಟ ಗುಣಲಕ್ಷಣವನ್ನು ಎರಡು ಗುಣಾಣುಗಳು ನಿರ್ಧರಿಸುತ್ತವೆ. ಅಂದರೆ ತಂದೆಯಿಂದ ಬಂದ ವರ್ಣತಂತುವಿನ ಮೇಲೆ ಇರುವ ಗುಣಾಣು ಮತ್ತು ತಾಯಿಯಿಂದ ಬಂದ ವರ್ಣತಂತುವಿನ ಮೇಲೆ ಇರುವ ಗುಣಾಣು ಈ ಎರಡು ಗುಣಾಣುಗಳಲ್ಲಿ ಯಾವುದು ಪ್ರಬಲವಾಗಿರುವುದೋ ಆ ಲಕ್ಷಣ
ಹುಟ್ಟುವ ಮಗುವಿನಲ್ಲಿ ಕಂಡುಬರುತ್ತದೆ. ಇದೇ ‘ಪ್ರಬಲ ಗುಣ’ ಹಾಗೆಯೇ ಯಾವುದು ಹುಟ್ಟುವ ಮಗುವಿನಲ್ಲಿ ಕಂಡುಬರದೆ ಸುಪ್ತವಾಗಿರುವುದೋ ಅದು ದುರ್ಬಲ ಗುಣ ಎನ್ನವರು. ಉದಾಹರಣೆಗೆ : ತಂದೆಗೆ ಗುಂಗುರು ಕೂದಲು ಇದ್ದು, ತಾಯಿಗೆ ನೀಳ ಕೂದಲು ಇದ್ದಾಗ ಮತ್ತು ಅವರಿಗೆ ಹುಟ್ಟುವ ಮಗುವಿನಲ್ಲಿ ಗುಂಗುರು ಕೂದಲು ಇದ್ದರೆ, ಆಗ ತಂದೆಯಿಂದ ಬಂದ ಗುಂಗುರು ಕೂದಲಿಗೆ ಕಾರಣವಾದ ಗುಣಾಣು ‘ಪ್ರಬಲ’ ಎಂದೂ, ತಾಯಿಯಿಂದ ಬಂದ ನೀಳ ಕೂದಲಿಗೆ ಕಾರಣವಾದ ಗುಣಾಣು ‘ದುರ್ಬಲ’ ಎಂದೂ, ಹೇಳಲಾಗುವುದು. ಹೀಗೆ ತಂದೆ-ತಾಯಿಯರ ಯಾವ ಗುಣಗಳು ಮಗುವಿನಲ್ಲಿ ಕಂಡುಬರುವವೋ ಅವು ಪ್ರಬಲ ಮತ್ತು ಕಂಡುಬರದೆ ಸುಪ್ತವಾಗಿರುವ ಗುಣಗಳು ದುರ್ಬಲ ಎಂದು ಅರಿಯಬೇಕು.
ಹ್ಯಾಪ್ಲಾಯ್ಡ್ ಮತ್ತು ಡಿಪ್ಲಾಯ್ಡ್ (ಏಕಗುಣಿ ಮತ್ತು ದ್ವಿಗುಣಿ ವರ್ಣತಂತುಗಳು)
ಮಾನವ ಜೀವಕೋಶದ 23 ಜೊತೆ ಅಥವಾ 46 ವರ್ಣತಂತುಗಳನ್ನು ‘ದ್ವಿಗುಣಿ’ ವರ್ಣತಂತುಗಳು ಎನ್ನುವರು. ಆದರೆ ಲಿಂಗಾಣುಗಳಲ್ಲಿರುವ ’23’ ವರ್ಣತಂತುಗಳನ್ನು ‘ಏಕಗುಣಿ’ ವರ್ಣತಂತುಗಳು ಎನ್ನುವರು. ದ್ವಿಗುಣಿ ವರ್ಣತಂತುಗಳನ್ನು ‘2n’ ಸಂಖ್ಯೆ ಎಂದೂ, ಏಕಗುಣಿ ವರ್ಣತಂತುಗಳನ್ನು ‘n’ ಸಂಖ್ಯೆ ಎಂದೂ ಸಂಬೋಧಿಸುವರು.
ಮ್ಯುಟೇಷನ್ (ಹಠಾತ್ ಬದಲಾವಣೆ) ಎಂದರೇನು?
ನಮ್ಮ ವಂಶವಾಹಿಗಳಾದ ವರ್ಣತಂತುಗಳು ಹಾಗೂ ಗುಣಾಣುಗಳು ಡಿ.ಎನ್.ಎ. ಎಂಬ ರಾಸಾಯನಿಕ ವಸ್ತುಗಳಿಂದ ಆಗಿವೆ ಎಂಬ ಬಗ್ಗೆ ಈಗಾಗಲೇ ತಿಳಿದಿದ್ದೀರಿ. ಈ ಡಿ.ಎನ್.ಎ ಎಂಬ ರಾಸಾಯನಿಕ ವಸ್ತುವಿನ ರಚನೆಯಲ್ಲಿ ಕೆಲವು ವೇಳೆ ಕಾರಣಾಂತರದಿಂದ ಇದ್ದಕ್ಕಿದ್ದಂತೆ ಬದಲಾವಣೆ ಉಂಟಾಗುತ್ತದೆ. ಇದರಿಂದ ಗುಣಾಣು ಅಥವಾ ವರ್ಣತಂತುವಿನ ರಚನೆಯಲ್ಲಿ ಬದಲಾವಣೆ ಆಗುವುದರಿಂದ ಅದು ನಿರ್ಧರಿಸುವ ಗುಣಲಕ್ಷಣವೂ ಶಾಶ್ವತವಾಗಿ ಬದಲಾಗುತ್ತವೆ. ಮತ್ತು ಈ ಲಕ್ಷಣ ಮುಂದೆ ವಂಶಪಾರಂಪರ್ಯವಾಗಿ ಮುಂದುವರಿಯುತ್ತದೆ. “ಹೀಗೆ ವರ್ಣತಂತು ಮತ್ತು ಗುಣಾಣುಗಳ ಸಂಖ್ಯೆ ಹಾಗೂ ರಚನೆಯಲ್ಲಿ ಆಗುವ ಹಠಾತ್ ಬದಲಾವಣೆಯನ್ನು ‘ಮ್ಯುಟೇಷನ್’ ಎನ್ನುವರು”. ಅಣುವಿಕಿರಣಗಳ ಪ್ರಭಾವದಿಂದ, ರಾಸಾಯನಿಕ ವಸ್ತುಗಳ ಪ್ರಭಾವದಿಂದ, ಇತರ ತಿಳಿಯದ ಕಾರಣಗಳಿಂದಲೂ ಮ್ಯುಟೇಷನ್ ಉಂಟಾಗಬಹುದು. ಉದಾಹರಣೆಗೆ: ಕಪ್ಪು ಕಣ್ಣುಗಳ ತಂದೆ-ತಾಯಿಗೆ ಬೆಕ್ಕು ಕಣ್ಣಿರುವ ಮಗು ಜನಿಸಬಹುದು. ಇದಕ್ಕೆ ಒಂದು ಕಾರಣ ಮ್ಯುಟೇಷನ್ ಅಂದರೆ ಕಪ್ಪು ಕಣ್ಣಿನ ಬಣ್ಣಕ್ಕೆ ಕಾರಣವಾದ ಗುಣಾಣುನಲ್ಲಿ ಹಠಾತ್ ಬದಲಾವಣೆ ಆಗಿ ಅದು ಬೆಕ್ಕು ಕಣ್ಣುಗಳಿಗೆ ಕಾರಣವಾಗುತ್ತದೆ. ಮುಂದೆ ಬೆಕ್ಕುಕಣ್ಣು ಆ ಮಗುವಿನ ಮುಂದಿನ ಸಂತತಿಯಲ್ಲಿ ಕಂಡುಬರಬಹುದು. ಹೀಗೆ ಮ್ಯುಟೇಷನ್, ಗುಣಾಣು ಅಥವಾ ವರ್ಣತಂತು ರಚನೆಯಲ್ಲಿ ಶಾಶ್ವತ ಬದಲಾವಣೆ ಉಂಟುಮಾಡುತ್ತದೆ.
ಜನನ ಪೂರ್ವ ಅವಧಿ (Prenatal Period)
ಗರ್ಭಾಂಕುರಗೊಂಡು ಶಿಶು ಜನಿಸುವವರೆಗಿನ ಕಾಲವನ್ನು ಜನನಪೂರ್ವ ಅವಧಿ ಎನ್ನುವರು. ಇದು ಒಟ್ಟು 266 ದಿನಗಳು ಅಥವ 38 ವಾರಗಳು ಜನನಪೂರ್ವ ಅವಧಿಯಲ್ಲಿ ಮೂರು ಹಂತಗಳನ್ನು ಕಾಣುತ್ತೇವೆ.
ಅವುಗಳೆಂದರೆ 1) ಅಂಡಾವಧಿ 2) ಭ್ರೂಣಾವಧಿ ಮತ್ತು 3) ಪಿಂಡಾವಧಿ.
1) ಅಂಡಾವಧಿ :- ಗರ್ಭಾಂಕುರಗೊಂಡ ದಿನದಿಂದ, 15 ದಿನಗಳವರೆಗಿನ ಕಾಲವನ್ನು ಅಂಡಾವಧಿ ಎನ್ನುವರು. ಗರ್ಭಾಂಕುರಗೊಂಡು ಉಂಟಾದ ಯುಗ್ಧವು ನಿರಂತರವಾಗಿ ಸಂಖ್ಯೆ ಆಗುಣಿತೀಕರಣ ಕೋಶವಿಭಜನೆ ಹೊಂದುತ್ತಾ ಒಂದು ಸಣ್ಣ ಚೆಂಡಿನ ರೂಪ ತಾಳುತ್ತದೆ. ಇದೇ ಅಂಡಾವಧಿ.
2) ಭ್ರೂಣಾವಧಿ :- 16 ನೇ ದಿನದಿಂದ 60ನೇ ದಿನದವರೆಗಿನ ಕಾಲವನ್ನು ಭ್ರೂಣಾವಧಿ ಎನ್ನುವರು. ಈ ಅವಧಿಯಲ್ಲಿ ಸಣ್ಣ ಚೆಂಡಿನ ರೂಪವು ರೂಪಾಂತರಗೊಂಡು ಎಲ್ಲ ಅಂಗಾಂಗಗಳಿರುವ ಸುಮಾರು 3 ಇಂಚು ಉದ್ದದ ಭ್ರೂಣವಾಗುತ್ತದೆ.
3) ಪಿಂಡಾವಧಿ:- 61ನೇ ದಿನದಿಂದ ಮಗು ಜನಿಸುವವರೆಗಿನ ಕಾಲವನ್ನು ಪಿಂಡಾವಧಿ ಎನ್ನುವರು. ಈ ಅವಧಿಯಲ್ಲಿ ಎಲ್ಲ ಅಂಗಾಂಗಗಳು ಪೂರ್ಣವಾಗಿ ಬೆಳವಣಿಗೆ ಹೊಂದುತ್ತವೆ. ಈ ಅವಧಿ ಅತಿ ದೀರ್ಘಕಾಲದ ಜನನಪೂರ್ವ ಅವಧಿ.
ಅವಳಿಗಳು :-
ಒಬ್ಬ ತಾಯಿಗೆ ಒಮ್ಮೆಗೆ ಎರಡು ಮಕ್ಕಳು ಜನಿಸಿದರೆ ಅವುಗಳನ್ನು ಅವಳಿಗಳು ಎನ್ನುವರು. ಅವಳಿಗಳಲ್ಲಿ
ಎರಡು ವಿಧ:
1) ತದ್ರೂಪ ಅವಳಿಗಳು ಮತ್ತು 2) ಭಿನ್ನ ಅವಳಿಗಳು.
1) ತದ್ರೂಪ ಅವಳಿಗಳು (Identical Twins)
ಒಂದೇ ಯುಗ್ಮದಿಂದ ಜನಿಸಿದ ಎರಡು ಶಿಶುಗಳನ್ನು ತದ್ರೂಪ ಅವಳಿಗಳು ಎನ್ನುವರು. ಈ ಶಿಶುಗಳು ರೂಪ, ಆಕಾರ, ಎತ್ತರ ಮತ್ತು ಲಿಂಗ, ಎಲ್ಲದರಲ್ಲಿಯೂ ಒಂದೇ ರೀತಿಯಾಗಿರುತ್ತವೆ. ಯುಗ್ಧ ಮೊದಲ ಸಂಖ್ಯೆ ಅಗುಣಿತೀಕರಣ ವಿಭಜನೆ ಹೊಂದುವಾಗ ಕೋಶಗಳು ಅಂಟಿಕೊಂಡಿರದೆ ಪರಸ್ಪರ ಸಂಪೂರ್ಣವಾಗಿ ಬೇರ್ಪಟ್ಟು, ಎರಡೂ ಕೋಶಗಳು ಎರಡು ಭ್ರೂಣಗಳಾಗಿ ಬೆಳೆದು ತದ್ರೂಪ ಅವಳಿಗಳು ಉಂಟಾಗುತ್ತವೆ.
2) ಭಿನ್ನ ಅವಳಿಗಳು ಅಥವಾ ಭ್ರಾತೃ ಅವಳಿಗಳು : (Fraternal twins)
ಎರಡು ಪ್ರತ್ಯೇಕ ಯುಗ್ಧಗಳಿಂದ ರೂಪುಗೊಂಡ ಅವಳಿಗಳನ್ನು ಭಿನ್ನ ಅವಳಿಗಳು ಎನ್ನುವರು. ಕೆಲವು ಸ್ತ್ರೀಯರು ಏಕಕಾಲದಲ್ಲಿ ಎರಡು ಅಂಡಾಣುಗಳನ್ನು ಉತ್ಪತ್ತಿ ಮಾಡುವರು. ಈ ಎರಡೂ ಅಂಡಾಣುಗಳು ಎರಡು ವೀರ್ಯಾಣುಗಳ ಜೊತೆ ಮಿಲನಗೊಂಡು ಎರಡು ಯುಗಗಳಾಗುತ್ತವೆ. ಈ ಎರಡೂ ಯುಗ್ಧಗಳು ಬೆಳೆದು ಎರಡು ಶಿಶುಗಳಾಗುತ್ತವೆ. ಎರಡು ಬೇರೆ ಬೇರೆ ಅಂಡಾಣುಗಳಿಂದ ಹುಟ್ಟಿದ ಎರಡೂ ಮಕ್ಕಳು ರೂಪ ಮತ್ತು ಆಕಾರದಲ್ಲಿ ಭಿನ್ನವಾಗಿರುತ್ತವೆ. ಲಿಂಗ ಒಂದೇ ಆಗಿರಬಹುದು ಅಥವಾ ಬೇರೆ ಬೇರೆ ಆಗಿರಬಹುದು. ಅಂದರೆ ಎರಡೂ ಗಂಡು ಅಥವಾ ಎರಡೂ ಹೆಣ್ಣು ಅಥವಾ ಒಂದು ಹೆಣ್ಣು ಮತ್ತು ಒಂದು ಗಂಡು ಆಗಿರಬಹುದು.
4. ಎರಡು ಪ್ರತ್ಯೇಕ ಯುಗ್ಧಗಳಿಂದ ರೂಪುಗೊಂಡ ಅವಳಿಗಳನ್ನು ಭಿನ್ನ ಅವಳಿಗಳು ಎನ್ನುವರು. ಕೆಲವು ಸ್ತ್ರೀಯರು ಏಕಕಾಲದಲ್ಲಿ ಎರಡು ಅಂಡಾಣುಗಳನ್ನು ಉತ್ಪತ್ತಿ ಮಾಡುವರು. ಈ ಎರಡೂ ಅಂಡಾಣುಗಳು ಎರಡು ವೀರ್ಯಾಣುಗಳ ಜೊತೆ ಮಿಲನಗೊಂಡು ಎರಡು ಯುಗಗಳಾಗುತ್ತವೆ. ಈ ಎರಡೂ ಯುಗ್ಧಗಳು ಬೆಳೆದು ಎರಡು ಶಿಶುಗಳಾಗುತ್ತವೆ. ಎರಡು ಬೇರೆ ಬೇರೆ ಅಂಡಾಣುಗಳಿಂದ ಹುಟ್ಟಿದ ಎರಡೂ ಮಕ್ಕಳು ರೂಪ ಮತ್ತು ಆಕಾರದಲ್ಲಿ ಭಿನ್ನವಾಗಿರುತ್ತವೆ. ಲಿಂಗ ಒಂದೇ ಆಗಿರಬಹುದು ಅಥವಾ ಬೇರೆ ಬೇರೆ ಆಗಿರಬಹುದು. ಅಂದರೆ ಎರಡೂ ಗಂಡು ಅಥವಾ ಎರಡೂ ಹೆಣ್ಣು ಅಥವಾ ಒಂದು ಹೆಣ್ಣು ಮತ್ತು ಒಂದು ಗಂಡು ಆಗಿರಬಹುದು.
ಕೆಲವು ಮಹಿಳೆಯರು ಅಪರೂಪಕ್ಕೆ ಮೂರು, ನಾಲ್ಕು, ಐದು, ಆರು ಇತ್ಯಾದಿ ಮಕ್ಕಳುಗಳಿಗೆ ಏಕಕಾಲದಲ್ಲಿ ಜನ್ಮ ನೀಡುವರು. ಮೂರು ಮಕ್ಕಳಾದರೆ ತ್ರಿವಳಿಗಳು, ನಾಲ್ಕಾದರೆ ಚತುರ್ವಳಿಗಳು, ಆರು ಮಕ್ಕಳು ಜನಿಸಿದರೆ ಷಟ್‌ಳಿಗಳು, ಇತ್ಯಾದಿ. ಈ ರೀತಿ ಬಹು ಅವಳಿಗಳ ಜನನಕ್ಕೆ ಅನವಂಶೀಯತೆ ಕೃತಕ ಗರ್ಭಧಾರಣೆ, ಮುಂತಾದವು ಕಾರಣವಾಗಿವೆ.
ಸಯಾಮಿ ಅವಳಿಗಳು (Siamese twins)
ಸಯಾಮಿ ಅವಳಿಗಳೂ ಕೂಡ ತದ್ರೂಪ ಅವಳಿಗಳೇ. ಆದರೆ ಇಲ್ಲಿ ಯುಗ್ಧ ಪ್ರಥಮ ವಿಭಜನೆ ಹೊಂದಿದಾಗ ಆ ಎರಡೂ ಕೋಶಗಳು ಭಾಗಶಃ ಬೇರ್ಪಡುತ್ತವೆ. ಅಂದರೆ ಒಂದು ಭಾಗದಲ್ಲಿ ಅಂಟಿಕೊಂಡೇ ಇರುತ್ತವೆ. ಹೀಗೆ ಅಂಟಿಕೊಂಡ ಎರಡೂ ಕೋಶಗಳು ಎರಡು ಭ್ರೂಣಗಳಾಗಿ ಬೆಳೆಯುತ್ತವೆ. ಇಂತಹ ಮಕ್ಕಳು ತಲೆಭಾಗದಲ್ಲೋ ಅಥವಾ ಹೊಟ್ಟೆ ಭಾಗದಲ್ಲೋ ಅಥವಾ ಎದೆ ಭಾಗ ಅಥವಾ ಕಾಲುಗಳ ಭಾಗದಲ್ಲೋ ಅಂಟಿಕೊಂಡೇ ಹುಟ್ಟುತ್ತವೆ. ಥೈಲಾಂಡ್ ದೇಶದ ಸಯಾಮಿ ಎಂಬ ಊರಿನಲ್ಲಿ ಜನಿಸಿದ ಇಂತಹ ಇಬ್ಬರು ಶಿಶುಗಳು ಅಂಟಿಕೊಂಡೇ ಬೆಳೆದು ಪ್ರಸಿದ್ಧರಾಗಿದ್ದರು. ಆದ್ದರಿಂದ ಹೀಗೆ ಜನಿಸುವ ಶಿಶುಗಳಿಗೆ ಸಯಾಮಿ ಅವಳಿಗಳೆಂದೇ ಕರೆಯುವರು. ಇಂತಹ ಮಕ್ಕಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಬೇರ್ಪಡಿಸಬಹುದು. ಆದರೆ ಎರಡೂ ಮಕ್ಕಳೂ ಬದುಕುಳಿಯುವ ಸಾಧ್ಯತೆ ಕಡಿಮೆ. ಮೆದುಳು ಅಥವಾ ಹೃದಯ ಒಂದೇ ಆಗಿದ್ದರೆ ಆಗ ಶಸ್ತ್ರಕ್ರಿಯೆ ಮಾಡಿ ಬೇರ್ಪಡಿಸುವುದು ಕಷ್ಟಕರ.
ವರ್ಣತಂತು ವಿಕೃತಿ (Chromosomal abnormality)
ವಂಶವಾಹಿಗಳಾದ ವರ್ಣತಂತುಗಳು ಮತ್ತು ಗುಣಾಣುಗಳ ರಚನೆ, ಕಾರ್ಯ ಹಾಗೂ ಸಂಖ್ಯೆಯಲ್ಲಿ ಕಂಡುಬರುವ ದೋಷಗಳು ವರ್ಣತಂತು ವಿಕೃತಿ ಉಂಟುಮಾಡುತ್ತವೆ. ಈ ವಿಕೃತಿ ಶಾಶ್ವತ ಮತ್ತು ಗುಣಪಡಿಸಲು ಅಸಾಧ್ಯವಾದುದು. ಇಂತಹ ದೋಷಗಳು ವಂಶಪಾರಂಪರ್ಯವಾಗಿ ಮುಂದುವರಿಯುತ್ತವೆ. ವರ್ಣತಂತು ವಿಕೃತಿಗಳಿಗೆ ಪ್ರಮುಖ ಕಾರಣಗಳೆಂದರೆ ಗರ್ಭಿಣಿ ತಾಯಿ ಪದೇ ಪದೇ ಕ್ಷ-ಕಿರಣಗಳ ಪ್ರಭಾವಕ್ಕೆ ಒಳಪಡುವುದು. ಅಪೌಷ್ಟಿಕತೆ, ಮುಟ್ಟು ನಿಲ್ಲುವ ಸಮಯದಲ್ಲಿ ಗರ್ಭಧರಿಸುವುದು, ದುರ್ಬಲ ಅಂಡಾಣು ಅಥವಾ ವಿರ್ಯಾಣು, ಮಾದಕ ವಸ್ತು ಮತ್ತು ಅಪಾಯಕಾರಿ ಔಷಧಿಗಳ ಸೇವನೆ, ಮುಂತಾದವು. ಕೆಲವು ಪ್ರಮುಖ ವರ್ಣತಂತು ವಿಕೃತಿಗಳನ್ನು ಕೆಳಗೆ ವಿವರಿಸಲಾಗಿದೆ.
1. ಡೌನ್ಸ್ ಲಕ್ಷಣ Down Syndrome)
‘ಮಂಗೋಲ್ಡನ’ ಎಂದು ಹಿಂದೆ ಕರೆಯಲಾಗುತ್ತಿತ್ತು. ಈಗ ಮಂಗೋಲ್ಡನ ಪದದ ಬದಲಾಗಿ ‘ಡೌನ್ಸ್ ಲಕ್ಷಣ’ ಎಂದು ಕರೆಯುವರು. ಈ ವರ್ಣತಂತು ವಿಕೃತಿಯನ್ನು 1886 ರಲ್ಲಿ ‘ಲ್ಯಾಂಗ್‌ಡನ್‌ಡೌನ್’ ಎಂಬ ವ್ಯಕ್ತಿ ಪತ್ತೆಹಚ್ಚಿದ್ದರಿಂದ ಆತನ ಹೆಸರಿನಿಂದಲೇ ಇದನ್ನು ಕರೆಯಲಾಗುತ್ತಿದೆ. ಒಂದು ಹೆಚ್ಚುವರಿ ವರ್ಣತಂತು ಇರುವುದರಿಂದ ಡೌನ್ಸ್ ಲಕ್ಷಣದ ಮಕ್ಕಳು ಜನಿಸುವರು. ಅಂದರೆ 46 ವರ್ಣತಂತುಗಳಿಗೆ ಬದಲಾಗಿ ಈ ಮಕ್ಕಳಲ್ಲಿ 47 ವರ್ಣತಂತುಗಳಿರುತ್ತವೆ. ವರ್ಣತಂತುಗಳ 21 ನೇ ಜೊತೆಯಲ್ಲಿ ಮೂರು ವರ್ಣತಂತುಗಳಿರುತ್ತವೆ. ಆದ್ದರಿಂದ ಇವರನ್ನು ಟ್ರೈಸೋಮಿ-21 ಎಂದೂ ಕರೆಯುವರು. ತಾಯಂದಿರಲ್ಲಿ ಅಂಡಾಣು ಉತ್ಪತ್ತಿ ಆಗುವ ಸಮಯದಲ್ಲಿ ಸಂಖ್ಯಾಕ್ಷೀಣ ಕೋಶವಿಭಜನೆ ಆಗುವಾಗ 21ನೇ ಜೊತೆ ಬೇರ್ಪಡದೆ ಅಂಡಾಣುವಿನಲ್ಲಿ ಹೆಚ್ಚುವರಿ ವರ್ಣತಂತುವಾಗಿ ಬರುತ್ತದೆ. ಇದರಿಂದ ಡೌನ್ಸ್ ಲಕ್ಷಣ ಎಂಬ ಬುದ್ದಿಮಾಂದ್ಯತೆ ಉಂಟಾಗುತ್ತದೆ.




