Human Development:ಮಾನವ ವಿಕಾಸ (Human Development)

Human Development: ವಿಕಾಸ ಅರ್ಥ :- ವಿಕಾಸ ಎಂಬ ಪದದ ಅರ್ಥ ‘ಪ್ರಗತಿ’ ಅಥವಾ ‘ವೃದ್ಧಿ’ ಅಥವಾ ಪರಿವರ್ತನೆ
ಎಂದಾಗುತ್ತದೆ. ಇಲ್ಲಿ ವಿಕಾಸ ಎಂಬ ಪದವನ್ನು ವಿಶೇಷ ಅರ್ಥದಲ್ಲಿ ಬಳಸಲಾಗಿದೆ. ಯಾವುದೇ ವ್ಯಕ್ತಿಯಲ್ಲಿ ಸುವ್ಯವಸ್ಥಿತ ಹಾಗೂ ಪ್ರಗತಿದಾಯಕ ರೀತಿಯಲ್ಲಿ ಉಂಟಾಗುವ ಪರಿವರ್ತನೆಗೆ ವಿಕಾಸ ಎಂದು ಕರೆಯುತ್ತಾರೆ. ಅಂತಹ ಪ್ರಗತಿ ದೇಹದ ಗಾತ್ರ ಮತ್ತು ಪ್ರಮಾಣಗಳಲ್ಲಿ ಮಾತ್ರ ಆಗಿರದೆ ದೇಹದ ವಿವಿಧ ರಚನೆಗಳು ಮತ್ತು ಅವುಗಳನ್ನು ಸಂಘಟಿಸುವ ಒಂದು ಪ್ರಕ್ರಿಯೆಯಾಗಿರುತ್ತದೆ.
ಹುಟ್ಟಿನಿಂದ ಸಾಯುವವರೆಗೂ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ. ದೈಹಿಕ ಬದಲಾವಣೆ, ಆಲೋಚನೆಯಲ್ಲಿ ಬದಲಾವಣೆ, ಭಾಷೆ ಬಳಕೆಯಲ್ಲಿ ಬದಲಾವಣೆ ಹಾಗೂ ಸಾಮಾಜಿಕ ಸಂಬಂಧಗಳಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ. ಈ ಬದಲಾವಣೆಗಳು ಸಮಗ್ರವಾಗಿ ಆಂದರೆ ಶಾರೀರಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ವಿಷಯಗಳಲ್ಲಿ ನಿರಂತರವಾಗಿ ನಡೆಯುತ್ತಿರುತ್ತವೆ. ವಿಕಾಸದ ವಿವಿಧ ಹಂತಗಳಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ. ವೃದ್ಧಾಪ್ಯದಲ್ಲಿ ಅವನತಿಯನ್ನು ಕಾಣುತ್ತೇವೆ. ವಿಕಾಸ ಎಂಬುದು ಪ್ರಗತಿದಾಯಕ ಕ್ರಮಬದ್ದ ಹಾಗೂ ಊಹಿಸಬಹುದಾದ ಬದಲಾವಣೆ. ಇದು ಗರ್ಭಾಂಕುರದಿಂದ ಆರಂಭವಾಗಿ ಜೀವನದುದ್ದಕ್ಕೂ ಸಾಗುತ್ತದೆ.
ವಿಕಾಸವು ಶಾರೀರಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಅಂಶಗಳಿಂದ ಪ್ರಭಾವಿತವಾಗಿದೆ. ಶಾರೀರಿಕ ವಿಕಾಸವು ಪ್ರಮುಖವಾಗಿ ಪೋಷಕರಿಂದ ಪಡೆದ ಅನುವಂಶೀಯ ಅಂಶಗಳಿಂದ ನಿರ್ಧಾರವಾಗುತ್ತದೆ. ಉದಾಹರಣೆಗೆ ನಮ್ಮ ಶಾರೀರಿಕ ಲಕ್ಷಣಗಳು ವಿಕಾಸದಲ್ಲಿ ಮಾನಸಿಕ ಪ್ರಕ್ರಿಯೆಗಳ ಪಾತ್ರವನ್ನು ಆತನ ಸಾಮಾಜಿಕ ಹಾಗೂ ಭಾವನಾತ್ಮಕ ಪ್ರಕ್ರಿಯೆಗಳಾದ ಸಮಾಜದೊಂದಿಗಿನ ಬಾಂದವ್ಯ, ಸ್ಪರ್ಧೆ ಹಾಗೂ ಸಹಕಾರ ಮನೋಭಾವ ಹಾಗೂ ಆತನ ವೈಫಲ್ಯಗಳಲ್ಲಿ ಕಾಣಬಹುದು.
ಆಲೋಚನೆ, ವಿವೇಚನೆ, ಸಮಸ್ಯೆ ಬಗೆಹರಿಸುವುದು. ತೀರ್ಮಾನ ಕೈಗೊಳ್ಳುವುದು ಮುಂತಾದ ಪ್ರಕ್ರಿಯೆಗಳು ವ್ಯಕ್ತಿಯ ವಿಕಾಸದಲ್ಲಿ ಜೀವನದುದ್ದಕ್ಕೂ ಪ್ರಭಾವ ಬೀರುತ್ತವೆ.
ಜೀವಿತಾವಧಿ ಮತ್ತು ವಿಕಾಸ :
ಜೀವಿತಾವಧಿ ದೃಷ್ಟಿಯಲ್ಲಿ ವಿಕಾಸದ ಅಧ್ಯಯನವು ಕೆಳಕಂಡ ಅಂಶಗಳನ್ನೊಳಗೊಂಡಿದೆ.
1. ವಿಕಾಸ ಜೀವನಪರ್ಯಂತ ಅಂದರೆ ಗರ್ಭಾಂಕುರಗೊಂಡಂದಿನಿಂದ ಮುಪ್ಪಾಗುವವರೆಗೂ ಮುಂದುವರಿಯುತ್ತದೆ.
2. ಮಾನವ ವಿಕಾಸದ ಪ್ರಕ್ರಿಯೆಗಳಾದ ಜೈವಿಕ. ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಗಳು ವ್ಯಕ್ತಿಯ ಜೀವನದುದ್ದಕ್ಕೂ ಪರಸ್ಪರ ಬೆರೆತುಕೊಂಡಿರುತ್ತವೆ.
3. ವಿಕಾಸ ಎಂಬುದು ಬಹುಮುಖಿ ವಿಕಾಸದ ಕೆಲವು ಮುಖಗಳು ಪ್ರಗತಿ ಹೊಂದಿದರೆ ಮತ್ತೆ ಕೆಲವು ಮುಖಗಳು ಅವನತಿಯತ್ತ ಸಾಗುತ್ತವೆ. ಉದಾಹರಣೆಗೆ : ವಯಸ್ಸಾದಂತೆ ಮಾನವ ಪ್ರಬುದ್ಧ ತೀರ್ಮಾನಗಳನ್ನು ತೆಗೆದುಕೊಳ್ಳಲು ಶಕ್ತನಾಗುತ್ತಾನೆ. ಆದರೆ ವಯಸ್ಸಾದಂತೆ ಅವನ ಕಾರ್ಯಗತಿ ನಿಧಾನವಾಗುತ್ತಾ ಬರುತ್ತದೆ ಮತ್ತು ಕೆಲಸದಲ್ಲಿ ದಕ್ಷತೆ ಹಾಗೂ ನಿಖರತೆ ಕುಂದುತ್ತದೆ.
4. ವಿಕಾಸ ಮಾರ್ಪಡುವ ಗುಣ ಹೊಂದಿದೆ. ಅಂದರೆ ವ್ಯಕ್ತಿಯ ಸಾಮಾರ್ಥ್ಯ ಹಾಗೂ ಕೌಶಲಗಳಲ್ಲಿ ಜೀವನದುದ್ದಕ್ಕೂ ಅನೇಕ ಮಾರ್ಪಾಡುಗಳನ್ನು ಕಾಣಬಹುದಾಗಿದೆ.
5. ವಿಕಾಸದ ಮೇಲೆ ಆಯಾಯ ಕಾಲಮಾನದ ಘಟನಾವಳಿಗಳ ಪ್ರಭಾವವನ್ನು ನಿಚ್ಚಳವಾಗಿ ಕಾಣುತ್ತೇವೆ. ಉದಾಹರಣೆಗೆ : ಸ್ವಾತಂತ್ರ್ಯಪೂರ್ವದ ಒಬ್ಬ 20 ವರ್ಷ ವಯಸ್ಸಿನ ತರುಣನ ಅನುಭವಗಳಿಗೂ ಮತ್ತು ಇಂದಿನ 20 ವರ್ಷ ವಯಸ್ಸಿನ ತರುಣನ ಅನುಭವಗಳಿಗೂ ಅಜಗಜಾಂತರ ವ್ಯತ್ಯಾಸ ಗುರ್ತಿಸಬಹುದು.
6. ಮಾನವನ ವಿಕಾಸ ಹಲವು ವಿಜ್ಞಾನಗಳ ಅಧ್ಯಯನ ವಿಷಯವಾಗಿದೆ. ಅವುಗಳೆಂದರೆ ಮನೋವಿಜ್ಞಾನ, ಪ್ರಾಚ್ಯವಸ್ತುವಿಜ್ಞಾನ, ಸಮಾಜ ವಿಜ್ಞಾನ ಮತ್ತು ನರವಿಜ್ಞಾನ. ಈ ಎಲ್ಲ ವಿಜ್ಞಾನಗಳು ಮಾನವ ವಿಕಾಸದ ಬಗ್ಗೆ ತಮ್ಮದೇ ಸೈದ್ಧಾಂತಿಕ ಹಿನ್ನಲೆಯಲ್ಲಿ ಉತ್ತರ ಹುಡುಕುತ್ತಿವೆ.
7. ವ್ಯಕ್ತಿಯ ವರ್ತನೆ ಹಲವಾರು ಅಂಶಗಳ ಪ್ರಭಾವಕ್ಕೆ ಒಳಗಾಗಿರುತ್ತದೆ. ಆ ಅಂಶಗಳೆಂದರೆ ಅನುವಂಶೀಯತೆ, ಸಮಾಜ-ಸಾಂಸ್ಕೃತಿಕ ಅಂಶಗಳು, ಚಾರಿತ್ರಿಕ ಅಂಶಗಳು, ಮುಂತಾದವು.
ವಿಕಾಸದ ಮೇಲೆ ಪ್ರಭಾವ ಬೀರುವ ಅಂಶಗಳು :
ವ್ಯಕ್ತಿಯಲ್ಲಿ ಅಂತಗರ್ತವಾಗಿರುವ ಅನುವಂಶೀಯ ಅಂಶಗಳನ್ನು ತಳಿ ಲಕ್ಷಣಗಳು ಎನ್ನುವರು. ಈ ತಳಿ ಲಕ್ಷಣಗಳು ವ್ಯಕ್ತಿಯ ನಡವಳಿಕೆಯಲ್ಲಿ ವ್ಯಕ್ತವಾಗುವುದನ್ನು ‘ಗಮನಿಸಬಹುದಾದ ಬಾಹ್ಯಲಕ್ಷಣಗಳು’ ಎನ್ನುವರು. ಅಂದರೆ ಆತನ ಆಕಾರ, ಎತ್ತರ, ಬಣ್ಣ, ಕಣ್ಣು, ಕೂದಲು, ಮುಖಚರ್ಯೆ ಹಾಗೂ ಆತನ ಮಾನಸಿಕ ಲಕ್ಷಣಗಳಾದ ಬುದ್ಧಿಶಕ್ತಿ, ಕ್ರಿಯಾಶೀಲತೆ, ವ್ಯಕ್ತಿತ್ವ, ಮುಂತಾದವು. ವ್ಯಕ್ತಿಯ ಬಾಹ್ಯ ಲಕ್ಷಣಗಳು, ಅನುವಂಶೀಯ ಅಂಶಗಳು ಮತ್ತು
ಹುಟ್ಟಿ ಬೆಳೆದ ಪರಿಸರಗಳ ಪರಸ್ಪರ ಪ್ರಭಾವದಿಂದ ರೂಪುಗೊಂಡ ಲಕ್ಷಣಗಳಾಗಿವೆ. ವಂಶವಾಹಿಗಳು ವ್ಯಕ್ತಿಯ ವಿಕಾಸಕ್ಕೆ ನೀಲನಕ್ಷೆ ಮತ್ತು ವೇಳಾಪಟ್ಟಿಯನ್ನು ಒದಗಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಗೆ ತನ್ನ ತಂದೆ-ತಾಯಿಗಳಿಂದ ಬಂದಿರುವ ವಂಶವಾಹಿಗಳ ರಚನೆ ವಿಶಿಷ್ಟವಾಗಿರುತ್ತದೆ. ಆದ್ದರಿಂದ ಈ ವಿಶಿಷ್ಟ ವಂಶವಾಹಿಗಳು ಪ್ರತಿಯೊಬ್ಬ ವ್ಯಕ್ತಿ ಇತರರಿಗಿಂತ ಭಿನ್ನವಾಗಿರಲು ಕಾರಣ ಎನಿಸಿವೆ.
ವ್ಯಕ್ತಿ ತಾನು ಜನ್ಮದತ್ತವಾಗಿ ಪಡೆದುಕೊಂಡಿರುವ ಅಂಶಗಳು ಆತನ ಆಸಕ್ತಿ ಪರಿಸರವನ್ನು ನಿರ್ಧರಿಸುತ್ತವೆ. ಉದಾಹರಣೆಗೆ : ಸಂಗೀತ ಅಥವಾ ಕ್ರೀಡೆಯಲ್ಲಿ ವಿಶೇಷ ಪ್ರತಿಭೆ ಜನ್ಮದತ್ತವಾಗಿ ಬಂದಿರುತ್ತದೆ. ಆದರೆ ಈ ಪ್ರತಿಭೆ ಪರಿಪಕ್ವಗೊಳ್ಳಲು ಸೂಕ್ತ ಪರಿಸರದ ಅವಶ್ಯಕತೆ ಇರುತ್ತದೆ. ಆದ್ದರಿಂದ ಸಂಗೀತದ ಪ್ರತಿಭೆ ಇರುವ ವ್ಯಕ್ತಿ ತನ್ನ ಪ್ರತಿಭೆ ಪರಿಪಕ್ವಗೊಳ್ಳಲು ಬೇಕಾದ ಸಂಗೀತ ತರಬೇತಿಗೆ ಒಲವು ತೋರುತ್ತಾನೆ. ಹಾಗೆಯೇ ಕ್ರೀಡೆಗಳಲ್ಲಿ ಪ್ರತಿಭೆ ಹೊಂದಿರುವ ವ್ಯಕ್ತಿ ತನ್ನ ಪ್ರತಿಭೆ ಹೊರಹೊಮ್ಮಲು ಸೂಕ್ತ ಪರಿಸರವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಆದ್ದರಿಂದ ಪರಿಸರ ಹಾಗೂ ಜನ್ಮದತ್ತ ಅಂಶಗಳು ಪರಸ್ಪರ ಪ್ರಭಾವ ಬೀರುವ ಅಂಶಗಳಾಗಿವೆ. ಸೂಕ್ತ ಪರಿಸರ ಇಲ್ಲದೆ ಹುಟ್ಟಿನಿಂದ ಬಂದ ಪ್ರತಿಭೆ ವಿಕಸನಗೊಳ್ಳಲಾರದು.
ಸನ್ನಿವೇಶ ಮತ್ತು ವಿಕಾಸ :- ವಿಕಾಸ ಶೂನ್ಯದಲ್ಲಿ ನಡೆಯುವುದಿಲ್ಲ. ವಿಕಾಸ ಅಥವಾ ಬೆಳವಣಿಗೆಗೆ ಸೂಕ್ತ
ಸಾಮಾಜಿಕ – ಸಾಂಸ್ಕೃತಿಕ ಪರಿಸರ ಅಗತ್ಯ. ವ್ಯಕ್ತಿಯು ತಾನು ಜೀವನದಲ್ಲಿ ದಾಟುವ ಬಾಲ್ಯ, ಶಾಲಾದಿನಗಳು, ಅಧಿವಯಸ್ಸು, ಕಾಲೇಜುಶಿಕ್ಷಣ, ಯೌವ್ವನ, ವೃತ್ತಿಆಯ್ಕೆ, ವಿವಾಹ, ಮಕ್ಕಳು, ನಿವೃತ್ತಿ, ವೃದ್ಧಾಪ್ಯ, ಇತ್ಯಾದಿಗಳೆಲ್ಲವೂ ವ್ಯಕ್ತಿಯ ಅನುವಂಶೀಯ ಅಂಶಗಳು ಹಾಗೂ ಆತ ಬೆಳೆದುಬಂದ ಪರಿಸರದ ಪರಸ್ಪರ ಪ್ರಭಾವದಿಂದ ನಿರ್ಧಾರವಾಗುತ್ತದೆ. ವ್ಯಕ್ತಿಯ ಜೀವಮಾನದಲ್ಲಿ ಆತನ ಪರಿಸರದಲ್ಲಿ ಬದಲಾವಣೆಗಳನ್ನು ಕಾಣಬಹುದು.
‘ಮೂಲ ವ್ಯವಸ್ಥೆ’, ವ್ಯಕ್ತಿ ತಾನು ಹುಟ್ಟಿದ ಹಾಗೂ ಬೆಳೆದುಬಂದ ಪರಿಸರವನ್ನು ಸೂಚಿಸುತ್ತದೆ. ಅಂದರೆ, ಕುಟುಂಬ, ಗೆಳೆಯರು. ಶಿಕ್ಷಕರು, ಹಾಗೂ ಆತನ ನೆರೆಹೊರೆ. ‘ಮಧ್ಯಮ ವ್ಯವಸ್ಥೆ’ಯು ವ್ಯಕ್ತಿ ಹಾಗೂ ವಿವಿಧ ಸನ್ನಿವೇಶಗಳ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ಉದಾಹರಣೆಗೆ ತಂದೆ-ತಾಯಿ ಹಾಗೂ ಮಕ್ಕಳ ನಡುವಿನ ಸಂಬಂಧ. ಗೆಳೆಯರ ಜೊತೆಗಿನ ಸಂಬಂಧ. ಶಿಕ್ಷಕರ ಜೊತೆಗಿನ ಸಂಬಂಧ, ಇತ್ಯಾದಿ. ‘ಬಾಹ್ಯವ್ಯವಸ್ಥೆ’ ಎಂಬುದು ವ್ಯಕ್ತಿ ನೇರವಾಗಿ ಪಾಲ್ಗೊಳ್ಳದ ‘ಆದರೆ ಆತನ ಮೇಲೆ ಪ್ರಭಾವಬೀರುವ ಸಾಮಾಜಿಕ ಸನ್ನಿವೇಶಗಳನ್ನು ಸೂಚಿಸುತ್ತದೆ.
ಉದಾಹರಣೆಗೆ : ತಂದೆ-ತಾಯಿಗೆ ವರ್ಗಾವಣೆಯಾದಾಗ ಅಲ್ಲಿನ ಸನ್ನಿವೇಶಗಳು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವೋ ಅಥವಾ ಅನಾನುಕೂಲವೋ ಎಂಬ ಬಗ್ಗೆ ಆತಂಕಗೊಳ್ಳುತ್ತಾರೆ ಮತ್ತು ಮಕ್ಕಳ ಜೊತೆಗಿನ ತಮ್ಮ ಸಂಬಂಧಕ್ಕೆ ಎಲ್ಲಿ ಧಕ್ಕೆಯಾಗುತ್ತದೆ ಎಂದು ತಳಮಳಪಡುತ್ತಾರೆ. ‘ಸ್ಕೂಲ ಅಥವಾ ವಿಶಾಲ ವ್ಯವಸ್ಥೆ’ ಎಂಬುದು ವ್ಯಕ್ತಿ ವಾಸಿಸುವ ಸಾಂಸ್ಕೃತಿಕ ಸನ್ನಿವೇಶವನ್ನು ಸೂಚಿಸುತ್ತದೆ. ‘ಕಾಲಾನುಸಾರ ವ್ಯವಸ್ಥೆ’ ಎಂಬುದು ವ್ಯಕ್ತಿಯ ಬದುಕಿನ ವಿವಿಧ ಘಟನಾವಳಿಗಳನ್ನು ಸೂಚಿಸುತ್ತದೆ. ಅಂದರೆ ಸಾಮಾಜಿಕ ಮತ್ತು ಚಾರಿತ್ರಿಕ ಸನ್ನಿವೇಶಗಳಾದ ತಂದೆ-ತಾಯಿಯರ ವಿವಾಹ ವಿಚ್ಚೇದನ, ಕುಟುಂಬದ ಆರ್ಥಿಕ ಮುಗ್ಗಟ್ಟು, ಮುಂತಾದವು ಮಗುವಿನ ಬೆಳವಣಿಗೆಯ (ವಿಕಾಸ) ಮೇಲೆ ದುಷ್ಪರಿಣಾಮ ಬೀರುತ್ತದೆ.
ಬೊನ್‌ಫೆನ್ ಬೆನ್ನರ್ ಪ್ರಕಾರ ಮಗುವಿನ ವಿಕಾಸ (ಬೆಳವಣಿಗೆ) ಆತನ ಸುತ್ತಮುತ್ತಲಿನ ಸಂಕೀರ್ಣ ಸನ್ನಿವೇಶ ಹಾಗೂ ಪರಿಸರದಿಂದ ಪ್ರಭಾವಿತವಾಗಿರುತ್ತದೆ.
ವಿಕಾಸದ ಹಂತಗಳ ಸ್ಕೂಲನೋಟ:
ಮನುಷ್ಯ ತನ್ನ ಜೀವನದಲ್ಲಿ ಹಲವು ಹಂತಗಳನ್ನು ದಾಟುತ್ತಾನೆ. ಕೆಲವು ಹಂತಗಳಲ್ಲಿ ಬದುಕಿಗೆ ಅಗತ್ಯವಾದ ಕೌಶಲಗಳನ್ನು ಬಹಳ ಸುಲಭವಾಗಿ ಮತ್ತು ಯಶಸ್ವಿಯಾಗಿ ಕಲಿಯುತ್ತಾನೆ. ಬದುಕಿನ ವಿವಿಧ ಹಂತಗಳಲ್ಲಿ ನಾವು ಮೈಗೂಡಿಸಿಕೊಳ್ಳಬೇಕಾದ ಕೌಶಲಗಳನ್ನು ಮತ್ತು ಜ್ಞಾನವನ್ನು ಗಳಿಸುವುದನ್ನು ‘ಏಕಾಸಕಾರ್ಯಗಳು’ ಎನ್ನುವರು.
ಜನನಪೂರ್ವ ಹಂತ :-
ಮಗುವಿನ ಜನನಪೂರ್ವ ಹಂತದ ಬೆಳವಣಿಗೆ ತಾಯಿಯ ವಯಸ್ಸು, ಆರೋಗ್ಯ, ಪೌಷ್ಟಿಕತೆ, ಮನಸ್ಸಿನ ಸ್ಥಿತಿಗತಿ, ಮುಂತಾದವುಗಳನ್ನು ಅವಲಂಬಿಸಿದೆ. ತಾಯಿ ಯಾವುದೇ ಸೋಂಕಿನಿಂದ ಬಳಲಿದರೂ ಅದು ಆಕೆಯ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಬಹುದು. ಉದಾಹರಣೆಗೆ : ರುಬೆಲ್ಲಾ (ಜರ್ಮನ್ ದಡಾರ), ಜನನೇಂದ್ರಿಯಗಳ ಕಾಯಿಲೆಗಳು, ಹೆಚ್.ಐ.ವಿ., ಮುಂತಾದ ಮಾರಕ ರೋಗಗಳು ಮಗುವಿನ ವಂಶವಾಹಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಪರಿಸರದಿಂದ ಬಂದ ಅನೇಕ ರಾಸಾಯನಿಕಗಳು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಮಾರಕವಾಗಿವೆ. ಅವುಗಳೆಂದರೆ ಮಾದಕ ವಸ್ತು ಸೇವನೆ (ಗಾಂಜಾ, ಹೆರಾಯಿನ್, ಎಲ್.ಎಸ್.ಡಿ. ಇತ್ಯಾದಿ) ಆಲ್ಲೋಹಾಲ್ ಸೇವನೆ. ತಂಬಾಕು ಸೇವನೆ, ಕಲುಷಿತ ಗಾಳಿ, ನೀರು. ಇತ್ಯಾದಿಗಳಲ್ಲಿರುವ ಇಂಗಾಲದ ಡೈ-ಆಕ್ಸೆಡ್, ಸೀಸ, ಪಾದರಸ, ಮುಂತಾದ ವಿಷಕಾರಿ ವಸ್ತುಗಳು ಗರ್ಭದಲ್ಲಿರುವ ಶಿಶುವಿನ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತವೆ. ಅಲ್ಲದೆ ಪದೇ ಪದೇ ಗರ್ಭಿಣಿಯನ್ನು ಕ್ಷ-ಕಿರಣದ ಪ್ರಭಾವಕ್ಕೆ ಒಳಪಡಿಸುವುದು ಕೂಡ ಗರ್ಭದಲ್ಲಿರುವ ಶಿಶುವಿನ ವಂಶವಾಹಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೀಗೆ ಅನೇಕ ಅಂಶಗಳು ಜನಪೂರ್ವ ಅವಧಿಯಲ್ಲಿ ಮಗುವಿನ ಬೆಳವಣಿಗೆಗೆ ಮಾರಕವಾಗಿವೆ.
ಶೈಶವಾವಸ್ಥೆ :-
ಶೈಶವದಲ್ಲಿ ಮಗು ಬದುಕಲು ಅಗತ್ಯವಿರುವ ಚಟುವಟಿಕೆಗಳಾದ ಉಸಿರಾಟ, ಮೊಲೆ ಚೀಪುವುದು, ನುಂಗುವುದು ಮತ್ತು ಮಲಮೂತ್ರ ವಿಸರ್ಜನೆಯಂತಹ ಕಾರ್ಯಚಟುವಟಿಕೆಗಳು ಕಂಡುಬರುತ್ತವೆ. ಮಗು ಹುಟ್ಟಿದ ಮೊದಲ ವಾರದಲ್ಲಿ ಕಂಡು ಬರುವ ಬೆಳವಣಿಗೆಗಳೆಂದರೆ, ಬೆಳಕು ಮತ್ತು ಶಬ್ದ ಯಾವ ಕಡೆಯಿಂದ ಬರುತ್ತಿದೆ ಎಂಬುದನ್ನು ಮಗು ಗುರ್ತಿಸಬಲ್ಲದು. ತಾಯಿಯ ಧ್ವನಿ, ಇತರ ಮಹಿಳೆಯರ ಧ್ವನಿ ನಡುವೆ ವ್ಯತ್ಯಾಸ ಗುರ್ತಿಸಬಲ್ಲದು ಮತ್ತು ನಾಲಿಗೆ ಹೊರಚಾಚುವುದು, ಬಾಯಿ ತೆರೆಯುವುದು ಮುಂತಾದ ಸನ್ನೆಗಳನ್ನು ಅನುಕರಿಸಬಲ್ಲದು.
ಚಲನೆಯ ವಿಕಾಸ (Motor development) :-
ಎಳೆ ಶಿಶುವಿನ ಚಲನೆಗಳು ಯಾಂತ್ರಿಕ ಪ್ರತಿಕ್ರಿಯೆಗಳು (reflexes). ಅವು ಹುಟ್ಟಿನಿಂದಲೇ ಬಂದ ಲಕ್ಷಣಗಳು. ಮಕ್ಕಳಲ್ಲಿ ಕಂಡು ಬರುವ ಯಾಂತ್ರಿಕ ವರ್ತನೆಗಳೆಂದರೆ ಕೆಮ್ಮುವುದು. ಕಣ್ಣು ಮಿಟುಕಿಸುವುದು. ಆಕಳಿಸುವುದು ಇತ್ಯಾದಿ. ಇವು ಜೀವನಪರ್ಯಂತ ಕಂಡುಬರುತ್ತವೆ. ಮೆದುಳು ವಿಕಸನಗೊಂಡಂತೆ ಇತರ ಕೆಲವು ಯಾಂತ್ರಿಕ ವರ್ತನೆಗಳು ಕಾಣೆಯಾಗುತ್ತವೆ ಮತ್ತು ಇಚ್ಚಾಪೂರ್ವಕ ವರ್ತನೆಗಳು ವಿಕಸನಗೊಳ್ಳುತ್ತವೆ.
ದೇಹ ಬೆಳೆದಂತೆ ಮೆದುಳು ಬೆಳೆಯುತ್ತದೆ. ಸ್ನಾಯುಗಳು ಮತ್ತು ನರಮಂಡಲದ ಬೆಳವಣಿಗೆಯಿಂದಾಗಿ ಮಗುವಿನ ಕೌಶಲಗಳು ಹೆಚ್ಚು ಪ್ರಬುದ್ಧವಾಗುತ್ತವೆ. ಮೂಲ ಶಾರೀರಿಕ ಕ್ರಿಯೆಗಳಾದ ವಸ್ತುಗಳನ್ನು ಹಿಡಿದುಕೊಳ್ಳುವುದು. ತೆವಳುವುದು. ಕುಳಿತುಕೊಳ್ಳುವುದು. ನಡೆಯುವುದು, ಓಡುವುದು ಮುಂತಾದವುಗಳು ಬೆಳೆಯುತ್ತವೆ.
ಸಂವೇದನಾ ಸಾಮರ್ಥ್ಯಗಳು :- ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ತಾಯಿಯ ಧ್ವನಿಯನ್ನು ಗುರ್ತಿಸುವ
ಹಾಗೂ ಇತರ ಸಂವೇದನಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಆಗ ತಾನೆ ಜನಿಸಿದ ಮಗು ಪ್ರಚೋದನೆ ಬಂದ ಕಡೆ ನೋಡುತ್ತವೆ. ಹೊರತು ಮುಖವನ್ನು ದಿಟ್ಟಿಸಿ ನೋಡಲಾರದು. ಆದರೆ ದಿನಗಳು ಕಳೆದಂತೆ ಮಗು ನೋಡುವ ಆದ್ಯತೆ ಬದಲಾಗುತ್ತಾ ಹೋಗುತ್ತದೆ. ನವಜಾತ ಶಿಶುವಿನ ದೃಷ್ಟಿ ವಯಸ್ಕರ ದೃಷ್ಟಿಗೆ ಹೋಲಿಸಿದರೆ ಅತಿ ಕಡಿಮೆ ಎಂದು ಹೇಳಬಹುದು. ಮಗುವಿಗೆ ಆರು ತಿಂಗಳು ಆಗುವ ವೇಳೆಗೆ ದೃಷ್ಟಿ ಸಾಕಷ್ಟು ಸುಧಾರಿಸಿರುತ್ತದೆ. ಮಗುವಿಗೆ ಒಂದು ವರ್ಷ ತುಂಬುವ ವೇಳೆಗೆ ಮಗುವಿನ ದೃಷ್ಟಿಯಷ್ಟೇ ಇರುತ್ತದೆ. ನವಜಾತ ಶಿಶು ಬಣ್ಣಗಳನ್ನು ಗುರ್ತಿಸಬಲ್ಲದೆ? ಒಂದು ಅಂದಾಜಿನ ಪ್ರಕಾರ ನವಜಾತ ಶಿಶು ಕೆಂಪು ಮತ್ತು ಬಿಳಿಬಣ್ಣಗಳ ನಡುವಿನ ವ್ಯತ್ಯಾಸ ಗುರ್ತಿಸಬಲ್ಲದು. ಆದರೆ ಒಟ್ಟಾರೆ ನವಜಾತ ಶಿಶು ಬಣ್ಣಗಳನ್ನು ಗುರ್ತಿಸಲಾರದು ಮತ್ತು ಮಗು ಬಣ್ಣಗಳನ್ನು ಗುರ್ತಿಸುವ ಸಾಮರ್ಥ್ಯ ಮಗುವಿಗೆ ಮೂರು ತಿಂಗಳು ಆಗುವ ವೇಳೆಗೆ ಹೆಚ್ಚುತ್ತದೆ.
ನವಜಾತ ಶಿಶುವಿನ ಶಬ್ದಗ್ರಹಿಕೆ ಸಾಮರ್ಥ್ಯ ಹೇಗಿರುತ್ತದೆ? ಮಗು ಹುಟ್ಟಿದ ಕೂಡಲೇ ಶಬ್ದಗಳನ್ನು ಗ್ರಹಿಸಬಲ್ಲದು. ಮಗು ಬೆಳವಣಿಗೆಯಾದಂತೆ ಶಬ್ದಗಳ ವ್ಯತ್ಯಾಸಗಳನ್ನು ಗುರ್ತಿಸುವ ಸಾಮರ್ಥ್ಯ ಹೆಚ್ಚುತ್ತದೆ. ನವಜಾತಶಿಶು ಸ್ಪರ್ಶಕ್ಕೆ ಪ್ರತಿಕ್ರಿಯಿಸುತ್ತದೆ. ವಾಸನೆ ಮತ್ತು ರುಚಿ ಗ್ರಹಿಸುವ ಸಾಮರ್ಥ್ಯ ಕೂಡ ನವಜಾತ ಶಿಶುವಿನಲ್ಲಿ ಕಂಡುಬರುತ್ತದೆ.
ಸಂಜ್ಞಾನಾತ್ಮಕ ಬೆಳವಣಿಗೆ :
ಮಗು ಹುಟ್ಟಿದಾಗಿನಿಂದ ಅಧಿವಯಸ್ಸಿಗೆ ಬರುವವರೆಗೆ ಚಿಂತನಾ ಸಾಮರ್ಥ್ಯದಲ್ಲಿ ವಿವಿಧ ಹಂತಗಳನ್ನು ದಾಟುತ್ತದೆ ಎಂದು ನಂಬಲಾಗಿದೆ.
ಪಿಯಾಜೆಯವರ ಸಂಜ್ಞಾನಾತ್ಮಕ ಬೆಳವಣಿಗೆಯ ವಿವಿಧ ಹಂತಗಳಲ್ಲಿ ನಿರ್ದಿಷ್ಟ ಸ್ವರೂಪದ ಆಲೋಚನಾ ಸಾಮರ್ಥ್ಯ ಮಕ್ಕಳಲ್ಲಿ ಕಂಡುಬರುತ್ತದೆ. ಮಕ್ಕಳ ಆಲೋಚನಾ ಸಾಮರ್ಥ್ಯದಲ್ಲಿ ಹಂತದಿಂದ ಹಂತಕ್ಕೆ ಹೆಚ್ಚಿನ ಪಕ್ವತೆ ಕಂಡುಬರುತ್ತದೆ. ಒಬ್ಬ 16 ವರ್ಷ ವಯಸ್ಸಿನ ಹುಡುಗನ ಆಲೋಚನಾ ಸಾಮರ್ಥ್ಯ 8 ವರ್ಷ ವಯಸ್ಸಿನ ಹುಡುಗನ ಆಲೋಚನಾ ಸಾಮರ್ಥ್ಯಕ್ಕಿಂತ ಭಿನ್ನ ಮತ್ತು ಹೆಚ್ಚು ಪಕ್ವಗೊಂಡಿರುವುದು ಕಂಡುಬರುತ್ತದೆ. ಮಗುವಿನ ಬೆಳವಣಿಗೆಯ ಪ್ರಾರಂಭದ ಎರಡು ವರ್ಷಗಳಲ್ಲಿ ಮಗು ನೋಡುವ, ಆಲಿಸುವ, ಸ್ಪರ್ಶಿಸುವ, ಬಾಯಿಯಲ್ಲಿ ಹಾಕಿಕೊಳ್ಳುವ ಮತ್ತು ಹಿಡಿದುಕೊಳ್ಳುವ ಮೂಲಕ ತನ್ನ ಪ್ರಪಂಚವನ್ನು ಆಸ್ವಾದಿಸುತ್ತದೆ. ನವಜಾತ ಶಿಶು ವರ್ತಮಾನದಲ್ಲಿ ಬದುಕುತ್ತದೆ. ಅಂದರೆ ಅದರ ಕಣ್ಣಿಗೆ ಕಾಣದಿರುವುದು ಅಸ್ತಿತ್ವದಲ್ಲಿ ಇಲ್ಲ. ಉದಾಹರಣೆಗೆ ಮಗುವಿನ ಮುಂದಿರುವ ಒಂದು ಆಟದ ಬೊಂಬೆಯನ್ನು ಬಚ್ಚಿಟ್ಟರೆ ನವಜಾತ ಶಿಶು ಅದನ್ನು ಹುಡುಕಲಾರದು, ಏನೂ ಆಗಿಲ್ಲದಂತೆ ವರ್ತಿಸುತ್ತದೆ. ಬೊಂಬೆ ಅಸ್ತಿತ್ವದಲ್ಲಿ ಇಲ್ಲ ಎಂಬುದು ಮಗುವಿನ ಅನಿಸಿಕೆ. ಪಿಯಾಜೆ ಪ್ರಕಾರ ಈ ಹಂತದಲ್ಲಿ ಮಗು ತನ್ನ ಸಂವೇದನಾ ಅನುಭವಗಳಿಂದಾಚೆಗೆ ಯೋಚಿಸಲಾರದು. ‘ವಸ್ತು ಸ್ಥಿರತೆ’ – ಅಂದರೆ ವಸ್ತು ಕಣ್ಣ ಮುಂದೆ ಇಲ್ಲದಿದ್ದರೂ ಅದು ಇದೆ ಎಂಬ ಅರಿವು ಮಗುವಿಗೆ ಎಂಟು ತಿಂಗಳು ಆಗುವ ವೇಳೆಗೆ ವಸ್ತು ಸ್ಥಿರತೆಯ ಭಾಗಶಃ ಅನುಭವ ಆಗುತ್ತದೆ. ನವಜಾತ ಶಿಶುಗಳಲ್ಲಿ ಮೌಖಿಕ ಸಂವಹನೆ ಕಂಡು ಬರುತ್ತದೆ. ಭಾಷಾ ಬೆಳವಣಿಗೆ ಮಗು ಬಾಯಿಯಲ್ಲಿ ಶಬ್ದಗಳನ್ನು ಹೊರಡಿಸುವ ಮೂಲಕ 3-6 ತಿಂಗಳ ವಯಸ್ಸಿನಲ್ಲಿ ಕಂಡುಬರುತ್ತದೆ.
ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆ (Social and emotional development):
ಮಗು ಹುಟ್ಟಿನಿಂದಲೇ ಸಾಮಾಜಿಕ ಜೀವಿ. ಶಿಶು ಗೂಗೂ, ಬೂಬೂ ಎಂದು ಶಬ್ದ ಮಾಡುವ ಮೂಲಕ ತಾಯಿ ಹಾಗೂ ಇತರ ಚಿರಪರಿಚಿತ ಮುಖಗಳನ್ನು ಗುರ್ತಿಸುತ್ತದೆ. 6 ರಿಂದ 8 ತಿಂಗಳಾಗುವ ವೇಳೆಗೆ ಮಗು ತನ್ನ ತಾಯಿಯ ಸನಿಹಕ್ಕಾಗಿ ಹಾತೊರೆಯುತ್ತದೆ. ತಾಯಿಯಿಂದ ದೂರ ಮಾಡಿದಾಗ ಅಥವಾ ಅಪರಿಚಿತ ಮುಖಗಳನ್ನು ಕಂಡಾಗ ಮಗು ಆಳುವ ಮೂಲಕ ಅಸಹನೆಯನ್ನು ವ್ಯಕ್ತಪಡಿಸುತ್ತದೆ. ತನ್ನ ಚಿರಪರಿಚಿತರನ್ನು ಮತ್ತೆ ಕೂಡಿಕೊಂಡಾಗ ಮಗು ತನ್ನ ತೃಪ್ತಿಯನ್ನು ಮುಗುಳ್ಳಗೆ ಮೂಲಕ, ತಬ್ಬಿಕೊಳ್ಳುವ ಮೂಲಕ ವ್ಯಕ್ತಪಡಿಸುತ್ತದೆ. ತಂದೆ-ತಾಯಿಯರ ಜೊತೆ ಮಗು ಬೆಳೆಸಿಕೊಳ್ಳುವ ಭಾವನಾತ್ಮಕ ಅನುಬಂಧಕ್ಕೆ ‘ಬಾಂದವ್ಯ’ ಎನ್ನುತ್ತೇವೆ. ಹರೊ ಮತ್ತು ಹಲ್ಲೊ (1962) ನಡೆಸಿದ ಒಂದು ಅಧ್ಯಯನದಲ್ಲಿ ಕೋತಿಮರಿಗಳನ್ನು ಅವು ಹುಟ್ಟಿದ 8 ಗಂಟೆಗಳಲ್ಲಿ ತಾಯಿಯಿಂದ ಬೇರ್ಪಡಿಸಿ ಆರು ತಿಂಗಳ ಕಾಲ ಎರವಲು ತಾಯಿಯರ ಬಳಿ ಬೆಳೆಸಲಾಯಿತು. ಆ ಎರವಲು ತಾಯಿಯರು ಒಬ್ಬ ತಾಯಿ, ತಂತಿಯಿಂದ ಮಾಡಿದ ಕೋತಿ, ಮತ್ತೊಂದು ಎರವಲು ತಾಯಿ ಬಟ್ಟೆಯಿಂದ ಮಾಡಿದ ಕೋತಿ, ತಂತಿ ಕೋತಿ ಮತ್ತು ಬಟ್ಟೆ ಕೋತಿಗಳು ಸಮಾನವಾಗಿ ಮರಿಗಳಿಗೆ ಹಾಲು ನೀಡಿ ಪೋಷಿಸಿದವು. ಆದರೆ ಮರಿಗಳು ತಂತಿಕೋತಿಗಿಂತ ಬಟ್ಟೆಕೋತಿಗಳ ಬಳಿ ಹೆಚ್ಚು ಆಶ್ರಯ ಪಡೆದವು. ಇದಕ್ಕೆ ಕಾರಣ ಕೇವಲ ದೈಹಿಕ ಅಗತ್ಯಗಳನ್ನು ಪೂರೈಸಿದ ಮಾತ್ರಕ್ಕೆ ಬಾಂದವ್ಯ ಬೆಳೆಯುವುದಿಲ್ಲ. ಜೊತೆಗೆ ಸಾಮಿಪ್ಯದಲ್ಲಿ ಸುಖದ ಅನುಭವ ಬೇಕು. ಮರಿಗಳಿಗೆ ತಂತಿ ಕೋತಿಯ ಬಳಿ ಸುಖದ ಅನುಭವ ಸಿಗಲಿಲ್ಲ. ಆದರೆ ಬಟ್ಟೆ ಕೋತಿ ತನ್ನ ಮೆತ್ತನೆಯ ಗುಣದಿಂದ ಮರಿಗಳಿಗೆ ಸುಖದ ಅನುಭವ ನೀಡಿತು. ಹಾಗಾಗಿ ಮೆತ್ತನೆಯ ಬಟ್ಟೆ ಕೋತಿಯನ್ನು ಮರಿಗಳು ಹೆಚ್ಚು ಆಶ್ರಯಿಸಿದವು. ಹಾಗೆಯೇ ಮಕ್ಕಳು ತಮಗೆ ಇಷ್ಟವಾದ ಬೊಂಬೆ ಅಥವಾ ಮೆತ್ತನೆಯ ಹೊದಿಕೆಗೆ ಅತಿಯಾದ ಬಾಂದವ್ಯ ತೋರಿಸುವುದನ್ನು ನಾವು ಕಾಣುತ್ತೇವೆ. ಮಕ್ಕಳಿಗೆ ಗೊತ್ತು. ಏನೆಂದರೆ ಬೊಂಬೆ ಅಥವಾ ಮೆತ್ತನೆಯ ಹೊದಿಕೆ ಅವರ ತಾಯಿಯಲ್ಲ ಎಂದು. ಆದರೂ ಅವು ಮಗುವಿಗೆ ಸುಖದ ಅನುಭವ ನೀಡುವುದರಿಂದ ಅವುಗಳಿಗೆ ಅಂಟಿಕೊಂಡಿರುತ್ತದೆ. ಮಗು ಬೆಳೆದಂತೆ ತನ್ನ ತನದ ಅರಿವು ಹೆಚ್ಚಾದಂತೆ ತಾನು ಅತಿಯಾಗಿ ಪ್ರೀತಿಸುತ್ತಿದ್ದ ಬೊಂಬೆ ಅಥವಾ ಇತರ ವಸ್ತುಗಳನ್ನು ತ್ಯಜಿಸುತ್ತದೆ.
ಕೋತಿ ಮರಿಗಳಂತೆಯೇ ಮಾನವ ಮಗು ಕೂಡ ತನ್ನ ಅವಶ್ಯಕತೆಗಳನ್ನು ಪೂರೈಸುವ ಲಾಲನೆ-ಪಾಲನೆ ಮಾಡುವ ತಾಯಿ ಅಥವಾ ಇತರರ ಜೊತೆ ಪ್ರೀತಿಯ ಸಂಕೇತಗಳನ್ನು ವ್ಯಕ್ತಪಡಿಸುತ್ತದೆ. ಎರಿಕ್ ಎರಿಕ್‌ಸನ್ (1968) ಪ್ರಕಾರ ಮಗುವಿನ ಮೊದಲ ವರ್ಷದ ಬೆಳವಣಿಗೆ ಬಾಂದವ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಂಬಿಕೆ ಅಥವಾ ಅಪನಂಬಿಕೆ ಹಂತವನ್ನು ಪ್ರತಿನಿಧಿಸುತ್ತದೆ. ಈ ಹಂತದಲ್ಲಿ ದೊರೆಯುವ ದೈಹಿಕ ಹಾಗೂ ಮಾನಸಿಕ ಸುಖಾನುಭವವು ಮಗುವಿಗೆ ತನ್ನ ಪ್ರಪಂಚದ ಬಗ್ಗೆ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳುವಂತೆ ಮಾಡುತ್ತದೆ. ಮಗುವಿನಲ್ಲಿ ನಂಬಿಕೆಯ ಭಾವನೆ ಮೂಡಬೇಕಾದರೆ ತಂದೆ-ತಾಯಿಯರು ತುಂಬಾ ಜವಾಬ್ದಾರಿಯುತವಾದ ಮತ್ತು ಅತಿ ಎಚ್ಚರಿಕೆಯ ಪಾಲನೆ-ಪೋಷಣೆ ಮಾಡಬೇಕು. ತಂದೆ-ತಾಯಿಯರು ಮಕ್ಕಳನ್ನು ಆತ್ಮೀಯತೆಯಿಂದ ಯಾವುದೇ ಆತಂಕಕ್ಕೆ ಎಡೆಮಾಡಿಕೊಡದೆ ಪ್ರೀತಿಯಿಂದ ಬೆಳೆಸಿದರೆ ಮಕ್ಕಳು ಬದುಕಿನ ಬಗ್ಗೆ ಮತ್ತು ಇತರರ ಬಗ್ಗೆ ಸಕಾರಾತ್ಮಕ ಭಾವನೆ ತಳೆಯುತ್ತಾರೆ. ಒಂದು ವೇಳೆ ತಂದೆ-ತಾಯಿಯರು ಮಕ್ಕಳ ಭಾವನೆಗಳಿಗೆ ಸ್ಪಂದಿಸದಿದ್ದರೆ ಮಕ್ಕಳಲ್ಲಿ ಸದಾ ತಪ್ಪು ಹುಡುಕಿ ದಂಡಿಸುತ್ತಿದ್ದರೆ, ಅಂತಹ ಮಕ್ಕಳಲ್ಲಿ ತಮ್ಮ ಬಗ್ಗೆ ಹಾಗೂ ಇತರರ ಬಗ್ಗೆ ಅಪನಂಬಿಕೆ ಬೆಳೆಯುತ್ತದೆ ಮತ್ತು ಅಭದ್ರತಾ ಭಾವನೆಯಿಂದ ಬಳಲುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ಬೆಳೆಯುವುದಿಲ್ಲ. ಆದರೆ ಪ್ರೀತಿಯ ವಾತಾವರಣದಲ್ಲಿ ಬೆಳೆದ ಮಕ್ಕಳು ಸಕಾರಾತ್ಮಕವಾಗಿ ಯೋಚಿಸುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚು ಮಕ್ಕಳ ಉತ್ತಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕುಟುಂಬದ ಆರೋಗ್ಯಕರ ವಾತಾವರಣ ಪ್ರಮುಖ ಕಾರಣವಾಗಿದೆ.
ಬಾಲ್ಯ :-
ಶೈಶಾವಸ್ಥೆಗೆ ಹೋಲಿಸಿದರೆ ಬಾಲ್ಯದಲ್ಲಿ ಬೆಳವಣಿಗೆ ನಿಧಾನಗತಿಯಲ್ಲಿ ಸಾಗುತ್ತದೆ. ಬಾಲ್ಯದಲ್ಲಿ ದೈಹಿಕ ಬೆಳವಣಿಗೆ ಜಾಸ್ತಿಯಾಗುತ್ತದೆ. ತೂಕ ಹೆಚ್ಚುತ್ತದೆ, ನಡೆಯಲು, ಓಡಲು, ನೆಗೆಯಲು ಮತ್ತು ಆಟಗಳನ್ನು ಆಡಲು ಆರಂಭಿಸುತ್ತದೆ. ಸಾಮಾಜಿಕವಾಗಿ ಮಗು ತನ್ನ ಮನೆ ಪರಿಸರ ಬಿಟ್ಟು ನೆರೆಹೊರೆ ಹಾಗೂ ಶಾಲೆಗೆ ಕಾಲಿಡುತ್ತದೆ. ಜೀವನದಲ್ಲಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ತೀರ್ಮಾನಿಸುವ ನೈತಿಕತೆ ಬೆಳೆಯುತ್ತದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಜೀವನದಲ್ಲಿ ಗುರಿಯೊಂದನ್ನು ಇಟ್ಟುಕೊಂಡು ಅದನ್ನು ಸಾಧಿಸುವ ದಿಕ್ಕಿನಲ್ಲಿ ಸಾಗುವುದು. ಹಿರಿಯರ ನಿರೀಕ್ಷೆಗಳನ್ನು ಈಡೇರಿಸುವುದು ಮುಂತಾದ ಗುಣಗಳನ್ನು ಕಾಣುತ್ತೇವೆ. ಮೆದುಳಿನ ಬೆಳವಣಿಗೆ ಜೊತೆಗೆ ತನ್ನ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ವಿಪುಲ ಅವಕಾಶಗಳು ದೊರೆಯುತ್ತವೆ. ಇದೆಲ್ಲದರಿಂದ ಬಾಲ್ಯದಲ್ಲಿ ಸಂಜ್ಞಾನಾತ್ಮಕ ಬೆಳವಣಿಗೆ ವೃದ್ಧಿಯಾಗುತ್ತದೆ.
ದೈಹಿಕ ಬೆಳವಣಿಗೆ :-
ಆರಂಭದ ದೈಹಿಕ ಬೆಳವಣಿಗೆ ಎರಡು ತತ್ವಗಳನ್ನು ಆಧರಿಸಿದೆ.
1) ಬೆಳವಣಿಗೆ ತಲೆಯಿಂದ ಕಾಲಿನೆಡೆಗೆ [Cephalo caudal] ಸಾಗುತ್ತದೆ. ಮಕ್ಕಳು ಮೊದಲು ದೇಹದ ಮೇಲ್ಬಾಗದ ಮೇಲೆ ನಿಯಂತ್ರಣ ಸಾಧಿಸುವರು. ನಂತರ ದೇಹದ ಕೆಳಭಾಗದ ಮೇಲೆ ನಿಯಂತ್ರಣ ಹೊಂದುವರು. ಶೈಶವಾವಸ್ಥೆಯಲ್ಲಿ ಮಗುವಿನ ತಲೆ ದೇಹದ ಇತರ ಭಾಗಗಳಿಗಿಂತ ದೊಡ್ಡದಾಗಿರುತ್ತದೆ. ಹಾಗೆಯೇ ಮಕ್ಕಳು ಮೊದಲು ತೆವಳುತ್ತಾರೆ. ಅಂದರೆ ಆಗ ಕೈಗಳನ್ನು ಆಧಾರವಾಗಿಟ್ಟುಕೊಂಡು ತೆವಳುತ್ತವೆ. ಏಕೆಂದರೆ ಕೈಗಳು: ಕಾಲಿಗಿಂತ ಮೊದಲು ಬಲಿಷ್ಟಗೊಂಡಿರುತ್ತವೆ. ಆಮೇಲೆ ಮಕ್ಕಳು ನಿಧಾನವಾಗಿ ನಿಲ್ಲುವುದು ಮತ್ತು ನಡೆಯುವುದನ್ನು ಕಲಿಯುವರು.
2) ಬೆಳವಣಿಗೆ ದೇಹದ ಮಧ್ಯಭಾಗದಿಂದ ಶರೀರದ ಅಂಚಿನ ಕಡೆಗೆ ಸಾಗುತ್ತದೆ. (Proximo distal) ಅಂದರೆ ಮಕ್ಕಳು ಮೊದಲು ದೇಹದ ಮುಂಡಭಾಗದ ಮೇಲೆ ನಿಯಂತ್ರಣ ಸಾಧಿಸುವರು. ಕ್ರಮೇಣ ದೇಹದ ತುದಿ ಅಂಚಿನ ಅಂಗಾಂಗಗಳ ಮೇಲೆ ನಿಯಂತ್ರಣ ಸಾಧಿಸುವರು. ಶಿಶುಗಳು ಪ್ರಾರಂಭದಲ್ಲಿ ವಸ್ತುಗಳನ್ನು ಹಿಡಿಯಲು ಪೂರ್ಣದೇಹ ತಿರುಗಿಸುತ್ತವೆ. ಕ್ರಮೇಣ ಕೈಚಾಚಿ ವಸ್ತುಗಳನ್ನು ಹಿಡಿಯುವುದನ್ನು ಕಲಿಯುತ್ತವೆ. ಇಂತಹ ಬದಲಾವಣೆಗೆ ನರಮಂಡಲದ ಬೆಳವಣಿಗೆ ಕಾರಣವಾಗಿದೆ.
ಮಕ್ಕಳು ಬೆಳೆದಂತೆ ಸಣ್ಣಗೆ ಕಾಣುತ್ತಾರೆ. ಏಕೆಂದರೆ ಆಗ ದೇಹದ ಮುಂಡ ಭಾಗ ಉದ್ದಗೊಳ್ಳುತ್ತದೆ. ಮತ್ತು ಶರೀರದ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ದೇಹದ ಇತರ ಭಾಗಗಳಿಗಿಂತ ತಲೆ ಮತ್ತು ಮೆದುಳು ವೇಗವಾಗಿ ಬೆಳವಣಿಗೆ ಹೊಂದುತ್ತವೆ. ಮೆದುಳಿನ ವಿಕಾಸ ಅತಿ ಮುಖ್ಯವಾದುದು. ಏಕೆಂದರೆ ವಿವಿಧ ಸಾಮರ್ಥ್ಯಗಳಾದ ಕಣ್ಣು ಮತ್ತು ಕೈಗಳ ಹೊಂದಾಣಿಕೆಗೆ ಲೇಖನಿ ಹಿಡಿದು ಬರೆಯುವುದು, ಮುಂತಾದವು ಮೆದುಳಿನ ಪಕ್ವತೆಯನ್ನು ಅವಲಂಬಿಸಿವೆ. ಬಾಲ್ಯಾವಸ್ಥೆಯ ಮಧ್ಯ ಹಾಗೂ ಅಂತ್ಯ ಭಾಗದಲ್ಲಿ ಮಕ್ಕಳು ಎತ್ತರ ಮತ್ತು ಗಾತ್ರದಲ್ಲಿ ಶೀಘ್ರ ಬೆಳವಣಿಗೆ ತೋರುವರು. ಇದಕ್ಕೆ ದೇಹದ ಅಸ್ತಿಪಂಜರದ ಬೆಳವಣಿಗೆ ಮತ್ತು ಸ್ನಾಯುಗಳ ವಿಕಾಸವೇ ಕಾರಣ.
ಗತಿ (ಚಲನೆ) ವಿಕಾಸ:- ಬಾಲ್ಯದಲ್ಲಿ ಕಂಡುಬರುವ ಗತಿ (ಚಲನೆ) ವಿಕಾಸ ಎಂದರೆ ಕೈಕಾಲುಗಳ ಸೂಕ್ತ
ಬಳಕೆ, ಆತ್ಮ ವಿಶ್ವಾಸದಿಂದ ಓಡಾಡುವುದು, ಪರಿಸರದ ಜೊತೆ ಉದ್ದೇಶಪೂರ್ವಕ ವರ್ತನೆ, ಇತ್ಯಾದಿ. ಬೆರಳುಗಳ ಸೂಕ್ತ ಬಳಕೆ ಮತ್ತು ಕಣ್ಣು-ಕೈಗಳ ಸಮನ್ವಯತೆ ಬಾಲ್ಯದಲ್ಲಿ ಸಾಕಷ್ಟು ಸುಧಾರಿಸುತ್ತದೆ. ಈ ಅವಧಿಯಲ್ಲಿಯೇ ಎಡಗೈ ಬಳಕೆ ಅಥವಾ ಬಲಗೈ ಬಳಕೆಯ ಪ್ರಾಮುಖ್ಯತೆ ಕಂಡುಬರುತ್ತದೆ. ಬಾಲ್ಯದಲ್ಲಿ ಕಂಡುಬರುವ ಪ್ರಮುಖ ಚಲನಾ ಕೌಶಲಗಳನ್ನು ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ.
ಬಾಲ್ಯದಲ್ಲಿ ಸಂಜ್ಞಾನಾತ್ಮಕ ಬೆಳವಣಿಗೆ :- ಬಾಲ್ಯದಲ್ಲಿ ‘ವಸ್ತು ಸ್ಥಿರತೆ’ (object permanence)
ಪರಿಕಲ್ಪನೆ ಬೆಳವಣಿಗೆಯಾಗುತ್ತದೆ. ಇದರಿಂದ ಮಗು ವಸ್ತುಗಳನ್ನು ಮಾನಸಿಕ ಸಂಕೇತಗಳ ಮೂಲಕ ಪ್ರತಿನಿಧಿಸುತ್ತದೆ. ಆದರೆ ಮಾನಸಿಕವಾಗಿ ಮಾಡಿದ್ದನ್ನು ದೈಹಿಕವಾಗಿ ಮಾಡುವ ಸಾಮರ್ಥ್ಯ ಮಗುವಿಗೆ ಬೆಳವಣಿಗೆಯಾಗಿರುವುದಿಲ್ಲ. ಪಿಯಾಜೆ ಸಿದ್ಧಾಂತದ ಪ್ರಕಾರ ಬಾಲ್ಯದ ಆರಂಭದಲ್ಲಿ ಸಂಕ್ರಿಯಾತ್ಮಕ ಪೂರ್ವ ಆಲೋಚನೆ ಮೇಲೆ ಸಂಜ್ಞಾನಾತ್ಮಕ ಬೆಳವಣಿಗೆ ಕೇಂದ್ರೀಕೃತವಾಗಿರುತ್ತದೆ. ಭೌತಿಕವಾಗಿ ಇಲ್ಲದ ವಸ್ತುವನ್ನು ಮಾನಸಿಕವಾಗಿ ಪ್ರತಿನಿಧಿಸುವ ಸಾಮರ್ಥ್ಯವನ್ನು ಮಗು ಪಡೆದುಕೊಳ್ಳುತ್ತದೆ. ಮಕ್ಕಳು, ಗಿಡ, ಮರ, ನಾಯಿ, ಮನೆ, ಮನುಷ್ಯ, ಇತ್ಯಾದಿ ಚಿತ್ರಗಳನ್ನು ಬಿಡಿಸುವುದನ್ನು ನೀವು ಗಮನಿಸಿರಬಹುದು. ಈ ಸಾಂಕೇತಿಕ ಆಲೋಚನಾ ಸಾಮರ್ಥ್ಯ ಮಕ್ಕಳ ಮಾನಸಿಕ ಪ್ರಪಂಚವನ್ನು ವಿಸ್ತರಿಸುತ್ತದೆ. ಸಾಂಕೇತಿಕ ಆಲೋಚನಾ ಸಾಮರ್ಥ್ಯ ಅಧಿಕಗೊಳ್ಳುತ್ತಾ ಸಾಗುತ್ತದೆ. ಸಂಕ್ರಿಯಾತ್ಮಕ ಪೂರ್ವ ಆಲೋಚನೆಯ ಪ್ರಮುಖ ಲಕ್ಷಣವೆಂದರೆ ಸ್ವಕೇಂದ್ರೀಕೃತ ಆಲೋಚನೆ ಅಂದರೆ ಮಕ್ಕಳು ಪ್ರಪಂಚವನ್ನು ತಮ್ಮದೇ ದೃಷ್ಟಿಯಲ್ಲಿ ನೋಡುತ್ತಾರೆ ಮತ್ತು ಇತರರ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ. ಈ ಸ್ವಕೇಂದ್ರಿತ ಆಲೋಚನೆಯ ಪರಿಣಾಮವಾಗಿ ಮಕ್ಕಳು ಜೀವರಹಿತ ವಸ್ತುಗಳಿಗೂ ಜೀವ ತುಂಬುತ್ತಾರೆ. ಉದಾಹರಣೆಗೆ ಕಾರ್ಟೂನ್ ಚಿತ್ರಗಳನ್ನು ಮಕ್ಕಳು ಜೀವಂತ ಬೊಂಬೆಗಳೆಂದು ಭಾವಿಸುತ್ತಾರೆ. ಜಾರಿಬಿದ್ದ ಮಗು ನೆಲ ನನ್ನನ್ನು ಬೀಳಿಸಿತು ಎನ್ನುತ್ತದೆ, ತಾನು ತಪ್ಪು ಹೆಜ್ಜೆ ಇಟ್ಟು ಜಾರಿಬಿದ್ದೆ ಎಂದು ಹೇಳುವುದಿಲ್ಲ. ಮಕ್ಕಳು ಬೆಳೆದಂತೆ ಸುಮಾರು 4 ರಿಂದ 7 ವರ್ಷ ವಯಸ್ಸಿನ ಅವಧಿಯಲ್ಲಿ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅವುಗಳಿಗೆ ಉತ್ತರ ಬಯಸುತ್ತಾರೆ. ಉದಾಹರಣೆಗೆ : ಆಕಾಶ ಏಕೆ ನೀಲಿಯಾಗಿದೆ? ಮರಗಳು ಹೇಗೆ ಬೆಳೆಯುತ್ತವೆ? ಇತ್ಯಾದಿ ಪ್ರಶ್ನೆ ಕೇಳುತ್ತಾರೆ. ಇದರಿಂದ ಮಕ್ಕಳಿಗೆ ವಸ್ತುಗಳು ಏಕೆ ಹೀಗಿವೆ ಎಂದು ತಿಳಿಯುತ್ತದೆ. ಪಿಯಾಜೆ ಇದನ್ನು ಅಂತರ್ ಜ್ಞಾನ ಆಲೋಚನೆ ಎಂದು ಕರೆದನು. ಈ ಹಂತದ ಮತ್ತೊಂದು ಲಕ್ಷಣ ಎಂದರೆ ‘ಕೇಂದ್ರೀಕೃತ ಪ್ರವೃತ್ತಿ’ ಅಂದರೆ ಒಂದು ಘಟನೆಯನ್ನು ಅರ್ಥಮಾಡಿಕೊಳ್ಳಲು ಆ ಘಟನೆಯ ಒಂದೇ ಅಂಶದ ಮೇಲೆ ಗಮನ ಕೇಂದ್ರೀಕರಿಸುವುದು. ಉದಾಹರಣೆಗೆ ಒಂದು ಮಗು ಗಿಡ್ಡ ಮತ್ತು ಅಗಲವಾದ ಲೋಟಕ್ಕೆ ಬದಲಾಗಿ ಉದ್ದ ಲೋಟದಲ್ಲಿ ಹಣ್ಣಿನ ರಸ ಕೊಡಲು ಒತ್ತಾಯಿಸುವುದು. ಎರಡೂ ಲೋಟಗಳೂ ಒಂದೇ ಪ್ರಮಾಣದ ರಸವನ್ನು ಹಿಡಿಸುವ ಸಾಮರ್ಥ್ಯ ಹೊಂದಿದ್ದರೂ ಉದ್ದ ಲೋಟ ಮಗುವಿನ ಗಮನ ಸೆಳೆಯುತ್ತದೆ.
ಮಕ್ಕಳು ಬೆಳೆದಂತೆ 7 ರಿಂದ 11 ನೇ ವಯಸ್ಸಿನಲ್ಲಿ ಅಂತರ್‌ಜ್ಞಾನ ಆಲೋಚನೆಗೆ ಬದಲಾಗಿ ತರ್ಕಬದ್ದ ಆಲೋಚನೆ ಕಾಣಿಸಿಕೊಳ್ಳುತ್ತದೆ. ಈ ಹಂತವನ್ನು ‘ಮೂರ್ತಕ್ರಿಯಾತ್ಮಕ’ ‘ಆಲೋಚನಾ ಹಂತ’ ಎನ್ನುವರು. ಈ ಹಂತದಲ್ಲಿ ಮಕ್ಕಳು ಹಿಂದೆ ಭೌತಿಕವಾಗಿ ಮಾಡಿದ್ದನ್ನು ಮಾನಸಿಕವಾಗಿ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳುವರು. ಮೂರ್ತ ಕ್ರಿಯಾತ್ಮಕ ಆಲೋಚನೆಗಳು ವಸ್ತುಗಳನ್ನು ಬದಲಾಯಿಸಿ (ಅಥವಾ ತಿರುಗು ಮುರುಗು) ನೋಡುವ ಸಾಮರ್ಥ್ಯವನ್ನೊಳಗೊಂಡಿದೆ. ಉದಾಹರಣೆಗೆ ಒಬ್ಬ ಚಿಕ್ಕ ಬಾಲಕ (7 ರಿಂದ 11 ವರ್ಷ) ನ ಮುಂದೆ ಏಕರೂಪದ ಎರಡು ಮಣ್ಣಿನ ಚೆಂಡುಗಳನ್ನು ಇಡಲಾಯಿತು. ಅವುಗಳಲ್ಲಿ ಒಂದನ್ನು ಉದ್ದದ ದಾರದ ರೀತಿ ಎಳೆದು ರೂಪ ಬದಲಾಯಿಸಲಾಯಿತು. ಮತ್ತೊಂದನ್ನು ಹಾಗೆಯೇ ಇಡಲಾಯಿತು. ನಂತರ ಆ ಎರಡರಲ್ಲಿ ಯಾವುದರಲ್ಲಿ ಮಣ್ಣು ಜಾಸ್ತಿ ಇದೆ ಎಂದು ಕೇಳಲಾಯಿತು. ಆಗ ಎರಡರಲ್ಲಿಯೂ ಒಂದೇ ಪ್ರಮಾಣದ ಮಣ್ಣು ಇದೆ ಎಂದು ಬಾಲಕ ತಿಳಿಸಿದನು. ಇದರಿಂದ ಮಗುವಿನಲ್ಲಿ ವಸ್ತುವಿನ ರೂಪ ಬದಲಾದರೂ ಅದರ ಪ್ರಮಾಣ ಬದಲಾಗದು ಎಂಬ ತಿರುಗು ಮುರುಗು ಮಾಡುವ ಸಾಮರ್ಥ್ಯ ಮಗುವಿನಲ್ಲಿದೆ ಎಂದು ಸ್ಪಷ್ಟವಾಗುತ್ತದೆ. ಇದನ್ನೇ ಮೂರ್ತ ಕ್ರಿಯಾತ್ಮಕ ಆಲೋಚನೆ ಎನ್ನುವರು.
ಸಾಮಾಜಿಕ- ಭಾವನಾತ್ಮಕ ಬೆಳವಣಿಗೆ :-
ಮಕ್ಕಳ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯ ಪ್ರಮುಖ ಅಂಶಗಳೆಂದರೆ, ನಾನು (ಅಹಂ) ಲಿಂಗ (ಹೆಣ್ಣು ಅಥವಾ ಗಂಡು) ಮತ್ತು ನೈತಿಕತೆ ಬೆಳವಣಿಗೆ ಬಾಲ್ಯದ ಆರಂಭದಲ್ಲಿ ಅಹಂಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಬೆಳವಣಿಗೆಗಳು ಕಂಡುಬರುತ್ತವೆ. ಸಾಮಾಜೀಕರಣದ ಪರಿಣಾಮವಾಗಿ ತಾನು ಯಾರೆಂದು ಮತ್ತು ಯಾರ ಜೊತೆ ಗುರ್ತಿಸಿಕೊಳ್ಳಬೇಕು ಎಂಬ ಪರಿಜ್ಞಾನ ಬೆಳೆಯುತ್ತದೆ.
ಸ್ವತಂತ್ರ ಮನೋಭಾವ ಬೆಳವಣಿಗೆಯು ಮಕ್ಕಳು ಯಾವುದೇ ವಿಷಯವನ್ನು ತಮಗೆ ಇಷ್ಟಬಂದ ರೀತಿಯಲ್ಲಿ ಮಾಡುವಂತೆ ಮಾಡುತ್ತದೆ. ಮಕ್ಕಳ ಈ ಸ್ವತಂತ್ರ ಪ್ರವೃತ್ತಿಗೆ ತಂದೆ-ತಾಯಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಮಕ್ಕಳಲ್ಲಿ ಜವಾಬ್ದಾರಿ ಹೊರುವ ಪ್ರವೃತ್ತಿ ಇಲ್ಲವೆ ಅಪರಾಧಿ ಭಾವನೆ ಬೆಳೆಯುತ್ತದೆ. ಎಂದು ಎರಿಕ್‌ಸನ್ ಹೇಳಿದ್ದಾನೆ. ಉದಾಹರಣೆಗೆ : ಓಡಲು, ನೆಗೆಯಲು ಮತ್ತು ಸೈಕಲ್ ಓಡಿಸಲು ಮಕ್ಕಳಿಗೆ ಮುಕ್ತ ಅವಕಾಶ ನೀಡಿ ಪ್ರೋತ್ಸಾಹಿಸಿದರೆ ಮತ್ತು ಅವರು ಕೇಳುವ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರೆ ಅವರಲ್ಲಿ ಮುನ್ನುಗ್ಗುವ ಸ್ವಭಾವ ಬೆಳೆಯುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಒಂದು ವೇಳೆ ಹಾಗೆ ಮಾಡದೆ ಓಡಬೇಡ. ನೆಗೆಯಬೇಡ, ಸೈಕಲ್ ಓಡಿಸಬೇಡ ಬಿದ್ದರೆ ಗಾಯವಾಗುತ್ತದೆ. ಇತ್ಯಾದಿ ಹೇಳಿದರೆ ಮತ್ತು ತಲಹರಟೆ ಪ್ರಶ್ನೆಗಳು ನಿನ್ನವು. ಬಾಯಿ ಮುಚ್ಚು, ಇತ್ಯಾದಿ ಗದರಿಸಿದರೆ ಮಕ್ಕಳಲ್ಲಿ ಒಂದು ರೀತಿಯ ಅಪರಾದಿ ಮನೋಭಾವ ಬೆಳೆಯುತ್ತದೆ ಮತ್ತು ಆತ್ಮವಿಶ್ವಾಸ ಕಮರಿ ಹೋಗುತ್ತದೆ. ಇದು ಮಕ್ಕಳ ಭವಿಷ್ಯದ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಲ್ಯದ ಆರಂಭದ ದಿನಗಳಲ್ಲಿ ಸ್ವಯಂ ಅರಿವು ತಾನು ಎತ್ತರ, ಕುಳ್ಳು, ನಾನು ಹುಡುಗ ಅಥವಾ ಹುಡುಗಿ ಇತ್ಯಾದಿಗಳಿಗೆ ಸೀಮಿತವಾಗಿರುತ್ತದೆ. ಬಾಲ್ಯದ ಮಧ್ಯಭಾಗ ಮತ್ತು ಬಾಲ್ಯದ ಕಡೆಯ ದಿನಗಳಲ್ಲಿ ತಾನು ಬುದ್ದಿವಂತ, ಸುಂದರ, ಹೆಸರುವಾಸಿ, ಇತ್ಯಾದಿ ಆಂತರಿಕ ಅಂಶಗಳ ಮೇಲೆ ತಾನು ಏನು ಎಂಬುದನ್ನು ಮಗು ವ್ಯಕ್ತಪಡಿಸುತ್ತದೆ. ದೈಹಿಕ ಹಾಗೂ ಮಾನಸಿಕ ಅಂಶಗಳ ಜೊತೆಗೆ ಸಾಮಾಜಿಕ ಅಂಶಗಳಾದ ನಾನು ಶಾಲೆಯ ಕ್ರಿಕೆಟ್ ಆಟಗಾರ ಅಥವಾ ಟೆನಿಸ್ ಆಟಗಾರ, ಅಥವಾ ತಾನು ಶಾಲೆಯ ಸಂಗೀತ ಅಥವಾ ಪರಿಸರ ಕ್ಲಬ್ ಸದಸ್ಯ, ಇತ್ಯಾದಿಯಾಗಿ ಕೂಡ ಮಗು ತನ್ನನ್ನು ಪರಿಚಯಿಸಿಕೊಳ್ಳುತ್ತದೆ. ಇತರರ ಜೊತೆ ಹೋಲಿಸಿಕೊಳ್ಳುವ ಮೂಲಕ ತಾನು ಏನು ಮಾಡಬಲ್ಲೆ ಅಥವಾ ಮಾಡಲಾರೆ ಎಂಬುದನ್ನು ವ್ಯಕ್ತಪಡಿಸುವ ಮೂಲಕ ಸಹ ಮಗು ತನ್ನ ಸ್ವಯಂ ಅರಿವನ್ನು ತಿಳಿಸುತ್ತದೆ. ಉದಾಹರಣೆಗೆ ನನಗೆ ರಾಮನಿಗಿಂತ ಹೆಚ್ಚು ಅಂಕಗಳು ಬಂದಿವೆ ಅಥವಾ ನಾನು ತರಗತಿಯಲ್ಲಿ ಇತರರಿಗಿಂತ ವೇಗವಾಗಿ ಓಡಬಲ್ಲೆ. ಇಂತಹ ಬೆಳವಣಿಗೆಗಳ ಮೂಲಕ ವ್ಯಕ್ತಿ ತಾನು ಇತರರಿಗೆ ಭಿನ್ನ ಎಂಬುದನ್ನು ಸ್ಥಾಪಿಸುತ್ತಾನೆ.
ಮಕ್ಕಳು ಶಾಲೆಗೆ ಪ್ರವೇಶಿಸಿದ ಮೇಲೆ ಅವರ ಸಾಮಾಜಿಕ ಪ್ರಪಂಚ ಮನೆಯಿಂದ ಆಚೆಗೆ ವಿಸ್ತರಿಸುತ್ತದೆ. ತನ್ನ ಸಮವಯಸ್ಕರು ಅಥವಾ ಸಹಪಾಠಿಗಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತದೆ. ಹೀಗೆ ಇತರ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದರಿಂದ ಅವರ ಸರ್ವತೋಮುಖ ಬೆಳವಣಿಗೆಯಾಗುತ್ತದೆ.