ಪೀಠಿಕೆ: (Introduction)
ಪ್ರತಿಯೊಂದು ಮಗು ಜನನದ ಸಮಯದಲ್ಲಿ ಕೆಲವೊಂದು ಪ್ರತಿಕ್ರಿಯೆಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಪರಿಸರದಲ್ಲಿ ಸೂಕ್ತವಾದ ಪ್ರಚೋದನೆಗಳಿದ್ದಾಗ ಈ ಪ್ರತಿಕ್ರಿಯೆಗಳು ಯಾಂತ್ರಿಕವಾಗಿ (ಪ್ರತಿವರ್ತ ಕ್ರಿಯೆಗಳು) ಸಂಭವಿಸುತ್ತವೆ. ಮಗು ಬೆಳೆದಂತೆ ಮತ್ತು ಪ್ರಬುದ್ಧನಾಗುತ್ತಿದ್ದಂತೆ ಅವನು/ಅವಳು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ತೋರುವ ಸಾಮರ್ಥ್ಯವನ್ನು ಹೊಂದುತ್ತಾನೆ. ಉದಾಹರಣೆಗೆ ವ್ಯಕ್ತಿಯ ಭಾವಚಿತ್ರವನ್ನು ನೋಡಿ ಅದು ಒಬ್ಬರ ತಾಯಿ,ತಂದೆ ಅಥವಾ ಅಜ್ಜ ಎಂದು ಗುರುತಿಸುವುದು. ಅಹಾರವನ್ನು ಸೇವಿಸುವಾಗ ಚಮಚವನ್ನು ಬಳಸುವ ವಿಧಾನ ಹಾಗೂ ವರ್ಣಮಾಲೆಯ ಅಕ್ಷರಗಳನ್ನು ಗುರುತಿಸಿ, ಅವುಗಳಿಂದ ಪದಗಳನ್ನು ರಚಿಸುವುದು ಹೇಗೆ ಎಂದು ಕಲಿಯುವುದು ಇತ್ಯಾದಿ. ಹಾಗೆಯೇ ವ್ಯಕ್ತಿ ಒಂದು ನಿರ್ದಿಷ್ಟ ಪರಿಸರದಲ್ಲಿ ಇತರರು ಮಾಡುವ ಕೆಲಸವನ್ನು ಗಮನಿಸಿ ಅವುಗಳನ್ನು ಅನುಕರಿಸುತ್ತಾನೆ. ವಸ್ತುಗಳ ಹೆಸರುಗಳನ್ನು ಕಲಿಯುತ್ತಾನೆ ಮತ್ತು ಜ್ಞಾಪಕದಲ್ಲಿಡುತ್ತಾನೆ. ಉದಾಹರಣೆಗೆ ಪುಸ್ತಕ, ಕಿತ್ತಳೆ, ಮಾವು, ಹಸು, ಹುಡುಗ, ಹುಡುಗಿ ಇತ್ಯಾದಿ. ವ್ಯಕ್ತಿಯು ಪ್ರಬುದ್ಧನಾದಂತೆ ಅನೇಕ ಘಟನೆಗಳು ಮತ್ತು ವಸ್ತುಗಳನ್ನು ಗಮನಿಸಿ ಅವುಗಳ ವಿಶಿಷ್ಟ ಲಕ್ಷಣಗಳನ್ನು ಕಲಿಯುತ್ತಾನೆ. ವಸ್ತುಗಳನ್ನು ಪೀಠೋಪಕರಣ. ಹಣ್ಣುಗಳು ಇತ್ಯಾದಿ ಎಂದು ವರ್ಗಿಕರಿಸುತ್ತಾನೆ. ಸ್ಕೂಟರ್ ಅಥವಾ ಕಾರನ್ನು ಓಡಿಸಲು ಇತರರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಹ ಕಲಿಯುತ್ತಾನೆ. ಒಬ್ಬ ವ್ಯಕ್ತಿಯು ಕಷ್ಟಪಟ್ಟು ದುಡಿಯಲು ಅಥವಾ ಜೀವನದಲ್ಲಿ ನಿರಾಸಕ್ತಿ ಹೊಂದಲು, ಸಾಮಾಜಿಕ ಜ್ಞಾನವನ್ನು ಪಡೆಯಲು. ನುರಿತ ಹಾಗೂ ವೃತ್ತಿಪರತೆಯಲ್ಲಿ ಸಮರ್ಥನಾಗಲು ಕಲಿಕೆ ಕಾರಣವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಕಲಿಯುವ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯದಿಂದಾಗಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿ, ಅವನ ಜೀವನವನ್ನು ನಿರ್ವಹಿಸುತ್ತಾನೆ. ಈ ಅಧ್ಯಾಯವು ಕಲಿಕೆಯ ವಿವಿಧ ರೀತಿಯ ಅಂಶಗಳ ಮೇಲೆ ಕೇಂದ್ರೀಕೃತವಾಗಿದೆ. ಮೊದಲನೆಯದಾಗಿ ಕಲಿಕೆಯನ್ನು ಮಾನಸಿಕ ಪ್ರಕ್ರಿಯೆ ಎಂದು ನಿರೂಪಿಸಲಾಗಿದೆ. ಎರಡನೆಯದಾಗಿ ಒಬ್ಬ ವ್ಯಕ್ತಿ ಜೀವನದಲ್ಲಿ ಹೇಗೆ ಕಲಿಯುತ್ತಾ ಮುಂದೆ ಸಾಗುತ್ತಾನೆ ಎಂದು ವಿವರಿಸಲಾಗಿದೆ. ಮೂರನೇ ವಿಭಾಗದಲ್ಲಿ ಕಲಿಕೆಯ ಸಂದರ್ಭದಲ್ಲಿ ಸಂಭವಿಸುವ ಕೆಲವು ಪ್ರಾಯೋಗಿಕ ವಿದ್ಯಮಾನಗಳನ್ನು ವಿವರಿಸಲಾಗಿದೆ. ನಾಲ್ಕನೇ ವಿಭಾಗದಲ್ಲಿ ಕಲಿಕೆಯ ವೇಗ ಮತ್ತು ವ್ಯಾಪ್ತಿಯನ್ನು ನಿರ್ಧರಿಸುವ ವಿಭಿನ್ನ ಅಂಶಗಳು ಹಾಗೂ ಕಲಿಕೆಯ ವಿವಿಧ ಶೈಲಿಗಳನ್ನು ಮತ್ತು ಕಲಿಕಾ ನ್ಯೂನತೆಗಳ ಬಗ್ಗೆ ವಿವರಿಸಲಾಗಿದೆ.
ಕಲಿಕೆಯ ಸ್ವರೂಪ (Nature of Learning)
ಮಾದಕ ಮೇಲೆ ಸೂಚಿಸಿದಂತೆ ಕಲಿಕೆಯು ಮಾನವನ ವರ್ತನೆಯಲ್ಲಿ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ. ಇದು ಒಬ್ಬರ ಅನುಭವದಿಂದ ವರ್ತನೆಯಲ್ಲಾಗುವ ಬದಲಾವಣೆಗಳನ್ನು ಸೂಚಿಸುತ್ತದೆ. ಕಲಿಕೆಯನ್ನು “ಅನುಭವ ಅಥವಾ ಅಭ್ಯಾಸದಿಂದಾಗಿ ವರ್ತನೆಯಲ್ಲಿ ಉಂಟಾಗುವ ಬಹುತೇಕ ಶಾಶ್ವತವೆನ್ನಬಹುದಾದ ವರ್ತನೆ” ಎಂದು ವ್ಯಾಖ್ಯಾನಿಸಬಹುದು.
ಮಾದಕ ವಸ್ತುಗಳ ಬಳಕೆ,ಅಥವಾ ಆಯಾಸದಿಂದಾಗಿಯೂ ವರ್ತನೆಯಲ್ಲಿ ಬದಲಾವಣೆಗಳಾಗುತ್ತವೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಅಂತಹ ಬದಲಾವಣೆಗಳು ತಾತ್ಕಾಲಿಕವಾಗಿರುತ್ತವೆ. ಅದನ್ನು ಕಲಿಕೆ ಎಂದು ಪರಿಗಣಿಸಲಾಗುವುದಿಲ್ಲ. ಕಲಿಕೆಯನ್ನು ‘ಅನುಭವ ಮತ್ತು ಅಭ್ಯಾಸ’ದಿಂದ ವರ್ತನೆಯಲ್ಲುಂಟಾಗಬಹುದಾದ ಬಹುತೇಕ ಶಾಶ್ವತವೆನ್ನಬಹುದಾದ ವರ್ತನೆಗಳು ಎಂದು ವಿವರಿಸಲಾಗಿದೆ.
ಕಲಿಕೆಯ ಲಕ್ಷಣಗಳು
ಕಲಿಕೆಯ ಪ್ರಕ್ರಿಯೆಯು ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಮೊದಲ ಲಕ್ಷಣವೆಂದರೆ ಕಲಿಕೆ ಯಾವಾಗಲೂ ಕೆಲವು ರೀತಿಯ ಅನುಭವವನ್ನು ಒಳಗೊಂಡಿರುತ್ತದೆ. ನಾವು ಹಲವಾರು ಸಂದರ್ಭಗಳಲ್ಲಿ ಒಂದು ಘಟನೆಯು ನಿರ್ದಿಷ್ಟ ಅನುಕ್ರಮದಲ್ಲಿ ಸಂಭವಿಸುವುದನ್ನು ಅನುಭವಿಸುತ್ತೇವೆ. ಉದಾಹರಣೆಗೆ ಸೂರ್ಯಾಸ್ತದ ನಂತರ ಹಾಸ್ಟೆಲ್ ನಲ್ಲಿ ಗಂಟೆ ಬಾರಿಸಿದರೆ ಭೋಜನವು ಸಿದ್ಧವಾಗಿದೆ ಎಂದು ವ್ಯಕ್ತಿಯು ಕಲಿಯುತ್ತಾನೆ. ನಿರ್ದಿಷ್ಟ ರೀತಿಯಲ್ಲಿ ಏನನ್ನಾದರೂ ಮಾಡಿದ ನಂತರ ತೃಪ್ತಿಯ ಪುನರಾವರ್ತಿತ ಅನುಭವವು ಅಭ್ಯಾಸವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ.
ಕೆಲವೊಮ್ಮೆ ಒಂದೇ ಅನುಭವ ಕಲಿಕೆಗೆ ಕಾರಣವಾಗಬಹುದು. ಮಗು ಬೆಂಕಿ ಕಡ್ಡಿಯನ್ನು ಉಪಯೋಗಿಸಿ ಅವನ / ಅವಳ ಬೆರಳುಗಳನ್ನು ಸುಟ್ಟು ಹಾಕಿದರೆ ಅಂತಹ ಅನುಭವವು ಮಗುವಿಗೆ ಭವಿಷ್ಯದಲ್ಲಿ ಬೆಂಕಿ ಪೆಟ್ಟಿಗೆಯನ್ನು ಎಚ್ಚರಿಕೆಯಿಂದ ಉಪಯೋಗಿಸುವುದನ್ನು ಕಲಿಯುವಂತೆ ಮಾಡುತ್ತದೆ.
ಕಲಿಕೆಯಿಂದಾಗಿ ವರ್ತನೆಯಲ್ಲಾಗುವ ಬದಲಾವಣೆಗಳು ಬಹುತೇಕ ಶಾಶ್ವತವಾಗಿರುತ್ತವೆ. ಅವುಗಳನ್ನು ನಾವು ಶಾಶ್ವತ ಅಥವಾ ಕಲಿಕೆಯಲ್ಲಿ ಏರ್ಪಡದ ವರ್ತನೆಯ ಬದಲಾವಣೆಗಳಿಂದ ಪ್ರತ್ಯೇಕಿಸಬೇಕು. ಉದಾಹರಣೆಗೆ ವರ್ತನೆಗಳಲ್ಲಿ ಬದಲಾವಣೆಗಳು ಸಾಮಾನ್ಯವಾಗಿ ಆಯಾಸ, ಅಭ್ಯಾಸ ಮತ್ತು ಮಾದಕ ವಸ್ತುಗಳ ಬಳಕೆಯ ಪರಿಣಾಮಗಳಿಂದ ಉಂಟಾಗುತ್ತವೆ. ನೀವು ನಿಮ್ಮ ಮನೋವಿಜ್ಞಾನದ ಪಠ್ಯಪುಸ್ತಕವನ್ನು ಓದುತ್ತಿರುವಾಗ ಅಥವಾ ಕಾರನ್ನು ಚಲಾಯಿಸುತ್ತಿರುವಾಗ ಸ್ವಲ್ಪ ಸಮಯದ ನಂತರ ನಿಮಗೆ ದಣಿವಾದ ಅನುಭವವಾಗುತ್ತದೆ. ಆಗ ನೀವು ಪುಸ್ತಕವನ್ನು ಓದುವುದು ಅಥವಾ ಕಾರನ್ನು ಚಲಾಯಿಸುವುದನ್ನು ನಿಲ್ಲಿಸುವಿರಿ. ಇದು ಆಯಾಸದಿಂದಾಗಿ ವರ್ತನೆಯಲ್ಲಾದ ಬದಲಾವಣೆ ಹಾಗೂ ತಾತ್ಕಾಲಿಕವಾಗಿರುತ್ತದೆ. ಇದನ್ನು ಕಲಿಕೆ ಎಂದು ಪರಿಗಣಿಸಲಾಗುವುದಿಲ್ಲ.
ಇನ್ನೊಂದು ಪ್ರಕರಣವನ್ನು ತೆಗೆದುಕೊಳ್ಳೋಣ. ನಿಮ್ಮ ನಿವಾಸದ ಆಸುಪಾಸಿನಲ್ಲಿ ಮದುವೆ ನಡೆಯುತ್ತಿದೆ ಎಂದು ಭಾವಿಸೋಣ. ಇದು ಬಹಳಷ್ಟು ಶಬ್ದವನ್ನು ಉಂಟುಮಾಡುತ್ತದೆ ಮತ್ತು ತಡರಾತ್ರಿವರೆಗೆ ಮುಂದುವರಿಯುತ್ತದೆ. ಆರಂಭದಲ್ಲಿ ಶಬ್ದವು ನೀವು ಮಾಡುತ್ತಿರುವ ಕೆಲಸದಿಂದ ನಿಮ್ಮನ್ನು ವಿಚಲಿತಗೊಳಿಸುತ್ತದೆ. ಅದರಿಂದ ನೀವು ತೊಂದರೆ ಅನುಭವಿಸುತ್ತೀರಿ. ಶಬ್ದ ಮುಂದುವರಿದಾಗ ನೀವು ಕೆಲವು ನಿರ್ಧಿಷ್ಟ ಪ್ರತಿವರ್ತಗಳನ್ನು (orienting reflex) ಮಾಡುತ್ತೀರಿ. ಈ ಪ್ರತಿವರ್ತಗಳು ದುರ್ಬಲವಾಗುತ್ತವೆ ಮತ್ತು ಅಂತಿಮವಾಗಿ ಮಾಯವಾಗುತ್ತವೆ. ಇದು ಕೂಡ ಒಂದು ರೀತಿಯ ವರ್ತನೆಯ ಬದಲಾವಣೆ. ಪುಚೋದಕಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಈ ಬದಲಾವಣೆ ಉಂಟಾಗುತ್ತದೆ. ಇದನ್ನು ಅಭ್ಯಾಸ ಎಂದು ಕರೆಯಲಾಗುತ್ತದೆ.
ನಿದ್ರಾಜನಕ, ಮಾದಕ ವಸ್ತು ಅಥವಾ ಆಲೋಹಾಲ್ ಸೇವಿಸುವ ಜನರಲ್ಲಿ ಅದರ ಪರಿಣಾಮವು ಅವರ ಶಾರೀರಿಕ ಕ್ರಿಯೆಯ ಮೇಲೆ ಬೀಳುವುದರಿಂದ ಅವರ ವರ್ತನೆಗಳಲ್ಲಿ ಬದಲಾವಣೆಯಾಗುವುದನ್ನು ನೀವು ಗಮನಿಸಿರಬಹುದು. ಅಂತಹ ಬದಲಾವಣೆಗಳು ತಾತ್ಕಾಲಿಕವಾಗಿರುತ್ತವೆ ಹಾಗೂ ಅದರ ಪರಿಣಾಮ ಅಳಿಸಿ ಹೋದಂತೆ ಬದಲಾವಣೆಗಳು ಕಣ್ಮರೆಯಾಗುತ್ತವೆ. ಅಂತಹ ಬದಲಾವಣೆಗಳು
ಕಲಿಕೆಯಲ್ಲಿ ಮಾನಸಿಕ ಘಟನೆಗಳು ಕ್ರಮಾನುಗತಿಯಲ್ಲಿ ನಡೆಯುತ್ತವೆ. ನಾವು ಒಂದು ವಿಶಿಷ್ಟವಾದ ಕಲಿಕೆಯ ಪ್ರಯೋಗವನ್ನು ವಿವರಿಸಿದರೆ ಇದು ಸ್ಪಷ್ಟವಾಗುತ್ತದೆ. ಮನೋವಿಜ್ಞಾನಿಗಳು ವ್ಯಕ್ತಿಯು ಪದಗಳ ಪಟ್ಟಿಯನ್ನು ಹೇಗೆ ಕಲಿಯುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಸಕ್ತಿ ಹೊಂದಿದ್ದಾರೆ ಎಂದು ಭಾವಿಸೋಣ. ಇದನ್ನು ಅವರು ಈ ಕೆಳಗಿನ ಕ್ರಮಾನುಗತಿಯಲ್ಲಿ ಮಾಡುತ್ತಾರೆ.
1. ಕಲಿಯುವ ಮೊದಲು ವ್ಯಕ್ತಿಗೆ ಎಷ್ಟು ತಿಳಿದಿದೆ ಎಂದು ತಿಳಿಯಲು ಪೂರ್ವ ಪರೀಕ್ಷೆಯನ್ನು ಮಾಡುವುದು.
2. ನಿಗದಿತ ಸಮಯದಲ್ಲಿ ನೆನಪಿಟ್ಟುಕೊಳ್ಳಬೇಕಾದ ಪದಗಳ ಪಟ್ಟಿಯನ್ನು ಪ್ರಸ್ತುತಪಡಿಸುವುದು.
3. ಈ ಸಮಯದಲ್ಲಿ ಪದಗಳಿಂದ ಹೊಸ ಜ್ಞಾನವನ್ನು ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ.
4. ಪ್ರಕ್ರಿಯೆ ಪೂರ್ಣಗೊಂಡ ನಂತರ ಪಡೆದುಕೊಳ್ಳಲಾಗುತ್ತದೆ. (ಇದು ಕಲಿಕೆ) ಹೊಸ ಜ್ಞಾನವನ್ನು
5. ಸ್ವಲ್ಪ ಸಮಯ ಕಳೆದ ನಂತರ ಹೊಸ ಜ್ಞಾನವನ್ನು ವ್ಯಕ್ತಿಯಿಂದ ಪುನಃಸ್ಮರಣೆ ಮಾಡಿಸಲಾಗುತ್ತದೆ.
ಒಬ್ಬ ವ್ಯಕ್ತಿಯು ಈಗ ತಿಳಿದಿರುವ ಪದಗಳ ಸಂಖ್ಯೆಯನ್ನು ಅವನು ಪೂರ್ವ ಪರೀಕ್ಷೆಯಲ್ಲಿ ತಿಳಿದಿದ್ದ ಪದಗಳಿಗೆ ಹೋಲಿಸಿದಾಗ ಕಲಿಕೆಯು ನಡೆದಿದೆ ಎಂದು ಊಹಿಸಲಾಗುತ್ತದೆ.
ಹೀಗಾಗಿ ಕಲಿಕೆಯು ಊಹಿಸಿದ ಪ್ರಕ್ರಿಯೆಯಾಗಿದೆ ಮತ್ತು ಕಾರ್ಯಕ್ಷಮತೆಗಿಂತ ಭಿನ್ನವಾಗಿದೆ. ಕಾರ್ಯಕ್ಷಮತೆ ವ್ಯಕ್ತಿ ಅವಲೋಕಿಸಿದ ವರ್ತನೆ ಅಥವಾ ಪ್ರತಿಕ್ರಿಯೆಯಾಗಿದೆ. ನಾವು ಊಹಿಸುವುದು ಎಂಬ ಪದದ ಅರ್ಥವನ್ನು ಅರ್ಥ ಮಾಡಿಕೊಳ್ಳೋಣ. ನಿಮ್ಮ ಶಿಕ್ಷಕರು ಒಂದು ಕವಿತೆಯನ್ನು ನೆನಪಿಟ್ಟುಕೊಳ್ಳಲು ನಿಮ್ಮಲ್ಲಿ ಹೇಳುತ್ತಾರೆಂದು ಭಾವಿಸೋಣ. ನೀವು ಆ ಕವಿತೆಯನ್ನು ಹಲವಾರು ಬಾರಿ ಓದಿ ಅದನ್ನು ಕಲಿಯುತ್ತೀರಿ. ನಂತರ ಆ ಕವಿತೆಯನ್ನು ಪಠಿಸಲು ಹೇಳಿದಾಗ ನಿಮ್ಮಿಂದ ಅದು ಸಾಧ್ಯವಾಗುತ್ತದೆ. ನಿಮ್ಮಿಂದ ಕವಿತೆಯ ವಾಚನ ಸಾಧ್ಯವಾದಾಗ ನಿಮ್ಮ ಕಾರ್ಯಕ್ಷಮತೆಯ ಆಧಾರದ ಮೇಲೆ ನೀವು ಕವಿತೆಯನ್ನು ಕಲಿತಿದ್ದೀರಿ ಎಂದು ಶಿಕ್ಷಕರು ಊಹಿಸುತ್ತಾರೆ.
ಕಲಿಕೆ ಮಾದರಿಗಳು (Paradigms of Learning)
ಕಲಿಕೆಯು ಹಲವು ವಿಧಗಳಲ್ಲಿ ನಡೆಯುತ್ತದೆ. ಕೆಲವು ವಿಧಾನಗಳು ಸರಳ ಪ್ರತಿಕ್ರಿಯೆ ಹಾಗೂ ಇನ್ನು ಕೆಲವು ವಿಧಾನಗಳು ಸಂಕೀರ್ಣ ಪ್ರತಿಕ್ರಿಯೆಗಳ ಸ್ವಾಧೀನದಲ್ಲಿ ಬಳಸಲಾಗುತ್ತದೆ. ಈ ವಿಭಾಗದಲ್ಲಿ ನೀವು ಈ ಎಲ್ಲಾ ವಿಧಾನಗಳ ಬಗ್ಗೆ ಕಲಿಯುವಿರಿ. ಕಲಿಕೆಯು ತುಂಬಾ ಸರಳ ವಿಧಾನ ಅನುಬಂಧ. ಎರಡು ರೀತಿಯ ಅನುಬಂಧಗಳನ್ನು ಗುರುತಿಸಲಾಗಿದೆ. ಮೊದಲನೆಯದನ್ನು ಶಾಸ್ತ್ರೀಯ ಅನುಬಂಧ ಎಂದು ಕರೆಯಲಾಗುತ್ತದೆ ಹಾಗೂ ಎರಡನೆಯದನ್ನು ಸಾಧಕ ಅನುಬಂಧ ಎಂದು ಕರೆಯಲಾಗುತ್ತದೆ. ಇತರ ವಿಧಾನಗಳೆಂದರೆ ಅವಲೋಕನ ಕಲಿಕೆ, ಸಂಜ್ಞಾನಾತ್ಮಕ ಕಲಿಕೆ, ಶಾಬ್ಲಿಕ ಕಲಿಕೆ, ಪರಿಕಲ್ಪನಾ ಕಲಿಕೆ ಮತ್ತು ಕೌಶಲ್ಯ ಕಲಿಕೆ.
▪️ಶಾಸ್ತ್ರೀಯ ಕಲಿಕೆ (Classical Conditioning)
ಈ ರೀತಿಯ ಕಲಿಕೆಯನ್ನು ಮೊದಲಿಗೆ ಪರಿಶೋಧನೆ ಮಾಡಿದ ಕೀರ್ತಿ ರಷ್ಯಾ ದೇಶದ ಶಾರೀರಿಕ ವಿಜ್ಞಾನಿ ಇವಾನ್ ಪಾವ್‌ಲವ್ ಎಂಬುವರಿಗೆ ಸಲ್ಲುತ್ತದೆ. ಪಾವ್‌ಲವ್‌ನ ಅಧ್ಯಯನವು ನಾಯಿಯ ಬಾಯಿಯಲ್ಲಿ ಮಾಂಸದ ಚೂರುಗಳನ್ನು ಹಾಕಿದಾಗ ಅದರ ಹೊಟ್ಟೆಯಲ್ಲಿ ಜಠರ ರಸ ಉತ್ಪತ್ತಿ ಮತ್ತು ಬಾಯಿಯಲ್ಲಿ ಲಾಲರಸ ಉತ್ಪತ್ತಿಗೆ ಸಂಬಂಧಿಸಿತ್ತು. ಆದರೆ ಪ್ರಯೋಗದಲ್ಲಿ ನಾಯಿಗಳು ತಿನ್ನುವಾಗ ಮಾತ್ರವಲ್ಲದೆ ಆಹಾರದ ಖಾಲಿ ತಟ್ಟೆಯನ್ನು ನೋಡಿದಾಗಲೂ ಜೊಲ್ಲು ಸುರಿಸಿದವು. ಆದರೆ ಆಹಾರ ಕೊಡುವ ಮೊದಲೇ ನಾಯಿ ಜೊಲ್ಲು ಸುರಿಸುವುದನ್ನು ಗಮನಿಸಿದ ಪಾವ್‌ಲವ್ ತನ್ನ ಪ್ರಯೋಗದ ದಿಕ್ಕನ್ನು ಬದಲಾಯಿಸಿದನು. ಪಾವ್‌ಲವ್ ಈ ವಿದ್ಯಮಾನವನ್ನು ಅಧ್ಯಯನ ಮಾಡಲು ಒಂದು ಪ್ರಯೋಗವನ್ನು ಮಾಡಿದನು. ಮೊದಲು ಪಾವ್‌ಲವ್ ನಾಯಿಯನ್ನು ಒಂದು ಪೆಟ್ಟಿಗೆಯೊಳಗೆ ಇಟ್ಟು ಪ್ರಯೋಗಕ್ಕಾಗಿ ಸಜ್ಜುಗೊಳಿಸಿದನು. ಈ ನಡುವೆ ಸರಳ ಶಸ್ತ್ರಚಿಕಿತ್ಸೆ ನಡೆಸಿ, ನಾಯಿಯ ದವಡೆಗೆ ಟ್ಯೂಬ್‌ನ ಒಂದು ತುದಿಯನ್ನು ಅಳವಡಿಸಿ, ಇನ್ನೊಂದು ತುದಿಯನ್ನು ಆಳತೆಯ ಗ್ಲಾಸಿನಲ್ಲಿ ಹಾಕಲಾಯಿತು. ಪ್ರಯೋಗದ ಎರಡನೇ ಹಂತದಲ್ಲಿ ನಾಯಿಯನ್ನು ಹಸಿವಿನಿಂದ ಇರಿಸಲಾಯಿತು. ಆಹಾರವನ್ನು ನೀಡುವ ಮೊದಲು ಗಂಟೆಯ ಶಬ್ದವನ್ನು ಮಾಡಿ. ನಂತರ ನಾಯಿಗೆ ಆಹಾರ ನೀಡಿದನು. ಹೀಗೆ ಹಲವು ಬಾರಿ ಆಹಾರವನ್ನು ನೀಡುವ ಮೊದಲು ಗಂಟೆಯ ಶಬ್ದವನ್ನು ಮಾಡಲು ಪ್ರಾರಂಭಿಸಿದನು. ಹೀಗೆ ಮುಂದುವರಿದ ಕೆಲವು ಪ್ರಯತ್ನಗಳ ನಂತರ ನಾಯಿಯು ಆಹಾರ ನೀಡುವ ಮೊದಲೇ ಗಂಟೆಯ ಶಬ್ದಕ್ಕೆ ಜೊಲ್ಲು ಸುರಿಸಲು ಪ್ರಾರಂಭಿಸಿತು. ಇದನ್ನು ಅನುಬಂಧಿತ ಕಲಿಕೆ ಎನ್ನುವರು.