ವ್ಯಕ್ತಿತ್ವ ಮಾಪನ ವಿಧಾನಗಳು: (Assesment of personality):

ವ್ಯಕ್ತಿತ್ವ ಮಾಪನ ವಿಧಾನಗಳು: (Assesment of personality):

ವ್ಯಕ್ತಿತ್ವ ಮಾಪನ ವಿಧಾನಗಳು: (Assesment of personality):

ವ್ಯಕ್ತಿತ್ವ ಮಾಪನ ವಿಧಾನಗಳು: (Assesment of personality):ನಾವು ಯಾರನ್ನಾದರೂ ಭೇಟಿ ಮಾಡಿದಾಗ. ಮಾತನಾಡಿದಾಗ, ವ್ಯವಹರಿಸಿದಾಗ ಅವರ ಬಗ್ಗೆ ನಮ್ಮದೇ ಆದ ತೀರ್ಮಾನ ಕೈಗೊಳ್ಳುತ್ತೇವೆ. ನಾವು ಕೈಗೊಳ್ಳುವ ತೀರ್ಮಾನ ನಮ್ಮ ಅನುಭವ, ಅವಲೋಕನ, ಇತರರಿಂದ ಪಡೆದ ಮಾಹಿತಿ ಮುಂತಾದವುಗಳಿಂದ ಪ್ರಭಾವಿತವಾಗಿರುತ್ತದೆ. ಆದರೆ ಈ ತೀರ್ಪು ಯಾವುದೇ ವೈಜ್ಞಾನಿಕ ತಳಹದಿಯನ್ನು ಹೊಂದಿರುವುದಿಲ್ಲ. ಮನೋವಿಜ್ಞಾನಿಗಳು ವ್ಯಕ್ತಿತ್ವವನ್ನು ಮಾಪನ ಮಾಡಲು ಕೆಲವು ಔಪಚಾರಿಕ (Formal) ವಿಧಾನಗಳನ್ನು ಮನೋವೈಜ್ಞಾನಿಕ ಅಂಶಗಳ ಆಧಾರದ ಮೇಲೆ ರೂಪಿಸಿ ಬಳಕೆಗೆ ತಂದಿದ್ದಾರೆ.

ವ್ಯಕ್ತಿತ್ವ ಮಾಪನ ವಿಧಾನಗಳಲ್ಲಿ ಹಲವು ವಿಧಗಳಿವೆ. ಅವುಗಳೆಂದರೆ,

1. ಮನೋವೈಜ್ಞಾನಿಕ ಪರೀಕ್ಷೆಗಳು. 

2. ಸ್ವಯಂ ಮಾಹಿತಿ ಮಾಪನ ವಿಧಾನಗಳು.

3. ಪ್ರಕ್ಷೇಪಣಾ ವಿಧಾನಗಳು ಮತ್ತು

4. ವರ್ತನಾ ವಿಶ್ಲೇಷಣಾ ವಿಧಾನಗಳು.

ಮನೋವೈಜ್ಞಾನಿಕ ಪರೀಕ್ಷೆಗಳ ಬಗ್ಗೆ ಈಗಾಗಲೇ ಹಿಂದಿನ ಅಧ್ಯಾಯದಲ್ಲಿ ತಿಳಿದುಕೊಂಡಿದ್ದೀರಿ. ಈಗ ಇತರ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.

1. ಸ್ವಯಂ ಮಾಹಿತಿ ವಿಧಾನಗಳು(Self reporting measures):

ಅಸ್ಫೋರ್ಟನ ಪ್ರಕಾರ ಒಬ್ಬ ವ್ಯಕ್ತಿಯನ್ನು ಮಾಪನ ಮಾಡುವ ಉತ್ತಮ ವಿಧಾನವೆಂದರೆ, ಆತನೇ ತನ್ನ ಬಗ್ಗೆ ಮಾಹಿತಿ ನೀಡುವಂತೆ ಹೇಳುವುದು. ವ್ಯಕ್ತಿ ತಾನು ತನ್ನ ಬಗ್ಗೆ ಮಾಹಿತಿ ನೀಡಲು ಅನುಕೂಲವಾಗುವಂತಹ ವಿಧಾನಗಳನ್ನು ಮನೋವಿಜ್ಞಾನಿಗಳು ರೂಪಿಸಿ ಬಳಕೆಗೆ ತಂದಿದ್ದಾರೆ. ಅವುಗಳಲ್ಲಿ ಕೆಲವು ಸ್ವಯಂ ಮಾಹಿತಿ ಮಾಪನ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.

1) ಮಿನ್ನಸೋಟ ಬಹುಮುಖ ವ್ಯಕ್ತಿತ್ವ ಪ್ರಣಾಳಿಕೆ (MMPI):

ಇದು ವ್ಯಕ್ತಿತ್ವ ಮಾಪನದಲ್ಲಿ ಹೆಚ್ಚು ಬಳಕೆಯಲ್ಲಿರುವ ವಿಧಾನವಾಗಿದೆ. ‘ಹಾತವೇ ಮತ್ತು ಮೆಕಿನ್ಸಿ’ ಈ ಪ್ರಶ್ನಾವಳಿಯನ್ನು ರೂಪಿಸಿ ಬಳಕೆಗೆ ತಂದಿದ್ದಾರೆ. ಇದು ಮಾನಸಿಕ ಅಸ್ವಸ್ಥತೆಯನ್ನು ಗುರುತಿಸುವಲ್ಲಿ ಪರಿಣಾಮಕಾರಿ ವಿಧಾನ ಎನಿಸಿದೆ. ಪರಿಷ್ಕರಣೆಗೊಂಡ MMPI ಯಲ್ಲಿ ಒಟ್ಟು 567 ಪ್ರಶ್ನೆಗಳಿವೆ. ಈ 567 ಪ್ರಶ್ನೆಗಳನ್ನು ಹತ್ತು ಉಪಭಾಗಗಳಲ್ಲಿ ವಿಂಗಡಿಸಲಾಗಿದೆ. ಆ ಹತ್ತು ಉಪ ವಿಭಾಗಗಳೆಂದರೆ, ಮನೋವ್ಯಾಧಿ (Hypochondriasis).ಖಿನ್ನತೆ (Depression),ಹಿಸ್ಟೀರಿಯಾ (Hysteria),ಮನೋವಿಕೃತಿ (Psychopathic deviate), ಗಂಡ್ತನ-ಹೆಣ್ತನ (Masculinity – Feminity), ಸಂಬ್ರಾಂತಿ (Paranoia),ಸೈಕಸ್ಥೇನಿಯಾ (Psychasthenia),ಇಚ್ಚಿತ್ತ (schizophrenia),
ಉನ್ಮಾದ(Mania) ಮತ್ತು ಸಾಮಾಜಿಕ-ಅಂತರ್‌ಮುಖತ್ವ (Social-introversion), ಭಾರತದಲ್ಲಿ ಮಲ್ಲಿಕ್ ಮತ್ತು ಜೋತಿ ಎಂಬುವವರು ಎಂ.ಎಂ.ಪಿ.ಐ. ಮಾದರಿಯಲ್ಲಿ ‘ಜೋದ್‌ಪುರ ಬಹುಮುಖ ವ್ಯಕ್ತಿತ್ವ ಪ್ರಣಾಳಿಕೆಯನ್ನು (JMPI) ರೂಪಿಸಿದ್ದಾರೆ.

ಎಂ.ಎಂ.ಪಿ.ಐ. ನಲ್ಲಿ ಪ್ರತಿಯೊಂದು ಪ್ರಶ್ನೆಯ ಮುಂದೆ ‘ಹೌದು’, ‘ಇಲ್ಲ’ ‘ಹೇಳಲಾಗುವುದಿಲ್ಲ’ ಎಂಬ ಮೂರು ಉತ್ತರಗಳಿವೆ. ಪ್ರಯೋಗಾರ್ಥಿ ಪ್ರತಿಯೊಂದು ಪ್ರಶ್ನೆಯನ್ನು ಓದಿ ಅರ್ಥಮಾಡಿಕೊಂಡು ತನಗೆ ಸರಿ ಎನಿಸಿದ ಉತ್ತರದ ಸುತ್ತ ಒಂದು ವೃತ್ತವನ್ನು ಸುತ್ತಬೇಕು. ಹೀಗೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕು. ಉತ್ತರಿಸಲು ಕಾಲಮಿತಿ ಇಲ್ಲ, ಆದರೂ ಸಹ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಉತ್ತರಿಸಬೇಕು.

ಎಂ.ಎಂ.ಪಿ.ಐ. ನ ಅನುಕೂಲಗಳು ಮತ್ತು ಅನಾನುಕೂಲಗಳು:

ಅನುಕೂಲಗಳು :

ಅ) ವ್ಯಕ್ತಿಯ ಮನೋರೋಗದ ಲಕ್ಷಣಗಳನ್ನು ನಿಖರವಾಗಿ ಮಾಪನ ಮಾಡುತ್ತದೆ.

ಆ) ಪ್ರಶ್ನಾವಳಿ ಉದ್ದವಾಗಿರುವುದರಿಂದ ವ್ಯಕ್ತಿತ್ವದ ಅನೇಕ ಆಯಾಮಗಳನ್ನು ವಿವರವಾಗಿ ಅಧ್ಯಯನ ಮಾಡುತ್ತದೆ.

ಅನಾನುಕೂಲಗಳು :

ಪ್ರಶ್ನಾವಳಿ ತುಂಬಾ ಉದ್ದ (567)ವಿರುವುದರಿಂದ ಉತ್ತರಿಸುವ ವ್ಯಕ್ತಿಗೆ ಆಯಾಸವಾಗಿ ಅಡ್ಡಾದಿಡ್ಡಿ ಉತ್ತರಿಸಬಹುದು. ಆಗ ವ್ಯಕ್ತಿತ್ವ ಮಾಪನ ನಿಖರವಾಗಿರದಿರುವ ಸಾಧ್ಯತೆ ಇರುತ್ತದೆ.

2) 16 ವ್ಯಕ್ತಿತ್ವಾಂಶಗಳ ಪ್ರಶ್ನಾವಳಿ (16 PF):

ಈ ಪ್ರಶ್ನಾವಳಿಯನ್ನು ರೂಪಿಸಿದವನು ‘ಕೆಟಲ್’. ಅವನು ನಡೆಸಿದ ಅಧ್ಯಯನಗಳ ಆಧಾರದ ಮೇಲೆ ಈ ಪ್ರಶ್ನಾವಳಿಯನ್ನು ರೂಪಿಸಿದ್ದಾನೆ. ಇದರಲ್ಲಿ ಅನೇಕ ನುಡಿಗಟ್ಟು ಹೇಳಿಕೆಗಳಿವೆ (Declarative statement). ಹೇಳಿಕೆಗೆ ಕೊಟ್ಟಿರುವ ಪರ್ಯಾಯ ಉತ್ತರಗಳಲ್ಲಿ ಪ್ರಯೋಗಾರ್ಥಿ ಸೂಕ್ತವಾದುದನ್ನು ಆಯ್ಕೆ ಮಾಡುತ್ತಾನೆ.

ಹೆಚ್ಚು ಬಳಕೆಯಲ್ಲಿರುವ ಪ್ರಶ್ನಾವಳಿ ಎಂದರೆ 16 ಪಿ.ಎಫ್. ಇದನ್ನು ಅಭಿವೃದ್ಧಿಪಡಿಸಿದವರು ರೇಮಂಡ್ ಬಿ. ಕೆಟಲ್. ಇದು 16 ಪ್ರಮುಖ ಮೂಲಗುಣಗಳನ್ನು ಮಾಪನ ಮಾಡುವುದರಿಂದ ಇದನ್ನು 16 ಪಿ.ಎಫ್. ಎಂದು ಕರೆಯಲಾಯಿತು. ಇದನ್ನು 16 ವರ್ಷ ಮೇಲ್ಪಟ್ಟವರ ವ್ಯಕ್ತಿತ್ವ ಮಾಪನ ಮಾಡಲು ಬಳಸಲಾಗುವುದು. 16 ಪಿ.ಎಫ್.ನ್ನು ವಯೋಮಟ್ಟ ಹಾಗೂ ಶಿಕ್ಷಣ ಮಟ್ಟಕ್ಕೆ ಅನುಗುಣವಾಗಿ ಎ. ಬಿ. ಸಿ. ಡಿ, ಇ ಮತ್ತು ಎಫ್ ಎಂಬ ನಮೂನೆಗಳನ್ನು ರೂಪಿಸಲಾಗಿದೆ. ಕೆಟಲ್ ಪ್ರಕಾರ ವ್ಯಕ್ತಿತ್ವ ನಿರ್ಧಾರದಲ್ಲಿ ಅನುವಂಶೀಯತೆಯು ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಮೂಲಗುಣಗಳು ಅನುವಂಶೀಯತೆಯಿಂದ ಪ್ರಭಾವಿತವಾಗುತ್ತವೆ. 16 ಪಿ.ಎಫ್.ಮಾಪನ ಮಾಡುವ ಅಂಶಗಳೆಂದರೆ: ಬುದ್ಧಿಶಕ್ತಿ (ಶೈಕ್ಷಣಿಕ), ಕ್ರಿಯಾಶೀಲತೆ, ಆಹಂಬಲ, ನಂಬಿಕತ್ವ, ವಾಸ್ತವಿಕತೆ, ಮೃದುತ್ವ ಮುಂತಾದವು.

ಅನುಕೂಲಗಳು :

16 ಪಿ.ಎಫ್. ಅನ್ನು ವೃತ್ತಿ ಮಾರ್ಗದರ್ಶನದಲ್ಲಿ, ನಾಯಕತ್ವ ಗುಣ ನಿರ್ಧರಿಸುವಲ್ಲಿ ಮತ್ತು ವೃತ್ತಿಗೆ ಆಯ್ಕೆ ಮಾಡುವಲ್ಲಿ ಮುಂತಾದ ಕಡೆ ಬಳಸುವರು.

16PF, ಪರೀಕ್ಷೆಯನ್ನು ಹೈಸ್ಕೂಲ್ ವಿದ್ಯಾರ್ಥಿಗಳು ಹಾಗೂ ವಯಸ್ಕರಿಗೆ ನೀಡುಬಹುದು. ವೃತ್ತಿ ಮಾರ್ಗದರ್ಶನದಲ್ಲಿ 16 PF ತುಂಬಾ ಉಪಯುಕ್ತ ಎಂದು ತಿಳಿದುಬಂದಿದೆ.

3) ಐಸೆಕ್‌ ರವರ ವ್ಯಕ್ತಿತ್ವ ಪ್ರಣಾಳಿಕೆ (EPI):

ಇದರಲ್ಲಿ 57 ಪ್ರಶ್ನೆಗಳಿದ್ದು, ಪ್ರತಿಯೊಂದು ಪ್ರಶ್ನೆಯ ಮುಂದೆ ‘ಹೌದು-ಇಲ್ಲ’ ಎಂಬ ಎರಡು ಉತ್ತರಗಳಿವೆ. ಪ್ರಯೋಗಾರ್ಥಿ ಪ್ರತಿಯೊಂದು ಪ್ರಶ್ನೆಯನ್ನೂ ಓದಿ ಅರ್ಥಮಾಡಿಕೊಂಡು ತನಗೆ ಸೂಕ್ತ ಎನಿಸಿದ ಉತ್ತರದ ಸುತ್ತ ವೃತ್ತವನ್ನು ಸುತ್ತಬೇಕು. ಇಲ್ಲಿ ಸರಿ ಅಥವಾ ತಪ್ಪು ಎಂಬ ಉತ್ತರಗಳಿಲ್ಲ.

ಈ ಪ್ರಶ್ನಾವಳಿಯ 57 ಪ್ರಶ್ನೆಗಳಲ್ಲಿ 24 ಪ್ರಶ್ನೆಗಳು ಅಂತರ್‌ಮುಖಿ ಬಹಿರ್‌ಮುಖಿ ಆಯಾಮಕ್ಕೆ ಸಂಬಂಧಪಟ್ಟಿವೆ. ಉಳಿದ ಪ್ರಶ್ನೆಗಳಲ್ಲಿ 24 ಪ್ರಶ್ನೆಗಳು ವ್ಯಕ್ತಿ ಮನೋಬೇನಿಗನೆ ಅಥವಾ ಅಲ್ಲವೆ ಎಂಬುದನ್ನು ತಿಳಿಸುತ್ತವೆ. ಇನ್ನುಳಿದ 9 ಪ್ರಶ್ನೆಗಳು ವ್ಯಕ್ತಿ ಉತ್ತರಿಸುವಾಗ ಸುಳ್ಳು ಹೇಳಿದ್ದಾನೆಯೇ ಎಂಬುದನ್ನು ತಿಳಿಸುತ್ತವೆ. ಈ ಒಂಭತ್ತು ಪ್ರಶ್ನೆಗಳಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಸುಳ್ಳು ಉತ್ತರಗಳಿದ್ದರೆ ಆಗ ಪ್ರಯೋಗಾರ್ಥಿಯ ಉತ್ತರಗಳು ನಂಬಿಕೆಗೆ ಅರ್ಹವಲ್ಲ ಎಂದು ತಿರಸ್ಕರಿಸಲಾಗುವುದು. ಪ್ರಯೋಗಾರ್ಥಿಯ ಅಂತರ್‌ಮುಖಿ ಬಹಿರ್‌ಮುಖಿ ಆಯಾಮಕ್ಕೆ ಸಂಬಂಧಿಸಿದ ಪ್ರಶ್ನೆಗಳಲ್ಲಿ 17 ಕ್ಕಿಂತ ಹೆಚ್ಚು ಬಹಿರ್‌ಮುಖಿ ಉತ್ತರಗಳಿದ್ದರೆ, ಆಗ ಆತ ಬಹಿರ್‌ಮುಖಿ ಎಂದೂ, 7 ಕ್ಕಿಂತ ಕಡಿಮೆ ಬಹಿರ್‌ಮುಖಿ ಉತ್ತರಗಳಿದ್ದರೆ ಆತ ಅಂತರ್‌ಮುಖಿ ಎಂದೂ ತಿಳಿಯಬೇಕು.

ಮನೋಬೇನೆಗೆ ಸಂಬಂಧಿಸಿದ ಉತ್ತರಗಳಲ್ಲಿ 14 ಕ್ಕಿಂತ ಹೆಚ್ಚು ಮನೋಬೇನೆ ಸೂಚಕ ಉತ್ತರಗಳಿದ್ದರೆ ಆತ ಮನೋಬೇನಿಗನೆಂದು ತಿಳಿಯಬೇಕೆಂದೂ, ಮತ್ತು 4 ಕ್ಕಿಂತ ಕಡಿಮೆ ಮನೋಬೇನೆ ಸೂಚಕ ಉತ್ತರಗಳಿದ್ದರೆ ಪ್ರಯೋಗಾರ್ಥಿ ಸಮತೋಲನದ ವ್ಯಕ್ತಿತ್ವ ಉಳ್ಳವನೆಂದು ಭಾವಿಸಬೇಕೆಂದು ಐಸೆಂಕ್ ತಿಳಿಸಿದ್ದಾನೆ.

ಐಸೆಂಕ್‌ರವರು ನೀಡಿರುವ ಎರಡು ಆಯಾಮಗಳು 32 ವ್ಯಕ್ತಿತ್ವ ಗುಣಗಳಿಂದ ಕೂಡಿವೆ. ನಂತರ ಐಸೆಂಕ್ ಮತ್ತೊಂದು ಆಯಾಮವನ್ನು ಸೇರಿಸಿದ್ದಾನೆ. ಅದನ್ನು ಸೈಕೊಟಿಸಂ ಎಂದು ಕರೆದನು. ಇದು ಮನೋರೋಗಕ್ಕೊಳಗಾದವರು ಇತರರ ಬಗ್ಗೆ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ ಇರುವುದು, ಇತರರ ಜೊತೆಗೆ ಒರಟಾಗಿ ನಡೆದುಕೊಳ್ಳುವುದು ಹಾಗೂ ಸಾಮಾಜಿಕ ರೀತಿ-ನೀತಿಗಳನ್ನು ವಿರೋಧಿಸುವುದು ಮುಂತಾದ ಗುಣಗಳನ್ನು ಒಳಗೊಂಡಿದೆ. ಈ ಮೂರು ಆಯಾಮಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ವ್ಯಕ್ತಿ ದ್ವೇಷ ಸ್ವಭಾವ, ಸ್ವಾರ್ಥಿ ಮತ್ತು ಸಮಾಜ ವಿರೋಧಿ ಗುಣಗಳನ್ನು ಪ್ರದರ್ಶಿಸುತ್ತಾನೆ.

ಐಸೆಂಕ್‌ರವರ ಪ್ರಶ್ನಾವಳಿಯ ಉತ್ತಮ ಅಂಶವೆಂದರೆ ಪ್ರಶ್ನಾವಳಿ ಚಿಕ್ಕದಾಗಿದ್ದು ಉತ್ತರಿಸುವ ವ್ಯಕ್ತಿ ಯಾವುದೇ ಆಯಾಸವಿಲ್ಲದೆ ಸರಿಯಾಗಿ ಉತ್ತರಿಸುವ ಸಾಧ್ಯತೆ ಹೆಚ್ಚು.

ಈ ಪ್ರಶ್ನಾವಳಿಯ ದೋಷವೆಂದರೆ, ಪ್ರಯೋಗಾರ್ಥಿಯು ಮನೋಬೇನಿಗನೆ ಅಥವಾ ಅಲ್ಲವೆ ಮತ್ತು ಅಂತರ್‌ಮುಖಿಯೇ ಅಥವಾ ಬಹಿ‌ರ್ ಮುಖಿಯೇ ಎಂಬುದನ್ನು ಮಾತ್ರ ತಿಳಿಸುತ್ತದೆ. ವ್ಯಕ್ತಿತ್ವದ ಇತರ ಗುಣಗಳ ಮಾಪನ ಮಾಡುವುದಿಲ್ಲ.

3) ಪ್ರಕ್ಷೇಪಣ ಪರೀಕ್ಷೆಗಳು (Projective techniques):

ಸ್ವಯಂ ಮಾಹಿತಿ ಮಾಪನ ವಿಧಾನಗಳು ನೇರ ಮಾಪನ ವಿಧಾನಗಳಾಗಿವೆ. ಅಂದರೆ ಪ್ರಯೋಗಾರ್ಥಿಗೆ ತಾನು ಏನು ಮಾಹಿತಿ ನೀಡುತ್ತಿದ್ದೇನೆ ಎಂಬ ಅರಿವಿರುತ್ತದೆ. ಹೀಗೆ ಅರಿವು ಇರುವುದರಿಂದ ಕೆಲವು ವೇಳೆ ಉದ್ದೇಶಪೂರ್ವಕವಾಗಿಯೇ ಮಾಹಿತಿಗಳನ್ನು ತಡೆಹಿಡಿಯುವ ಸಾಧ್ಯತೆ ಇರುತ್ತದೆ. ಆಗ ನಮಗೆ ಬೇಕಾದ ಮಾಹಿತಿ ಸಿಗದಿರಬಹುದು ಮತ್ತು ವ್ಯಕ್ತಿತ್ವ ಮಾಪನದಲ್ಲಿ ನಿಖರತೆಯ ಸಾಧ್ಯತೆ ಕಡಿಮೆಯಾಗುವ ಸಂಭವವೂ ಇರುತ್ತದೆ.

ಫ್ರಾಯ್‌ನ ಪ್ರಕಾರ ನಮ್ಮ ವರ್ತನೆಯ ಮೇಲೆ ಅನೇಕ ಅಜ್ಞಾತ ಪ್ರೇರಣೆಗಳು ಪ್ರಭಾವ ಬೀರುತ್ತವೆ. ನೇರ ಮಾಪನ ವಿಧಾನಗಳು ಅಜ್ಞಾತ ಪ್ರೇರಣೆಗಳನ್ನು ಹೊರಗೆಳೆಯಲಾರವು. ಈ ಕೊರತೆಯನ್ನು ತೊಡೆದು ಹಾಕಲು ಮತ್ತು ಅಜ್ಞಾತ ಪ್ರೇರಣೆಗಳನ್ನು ಸಮರ್ಥವಾಗಿ ಹೊರಗೆಳೆಯಲು ಪರೋಕ್ಷ ಮಾಪನ ವಿಧಾನಗಳನ್ನು ಬಳಸಲಾಗುವುದು. ಪ್ರಕ್ಷೇಪಣ ಪರೀಕ್ಷೆಗಳು ಪರೋಕ್ಷ ಮಾಪನ ವಿಧಾನಗಳ ಗುಂಪಿಗೆ ಸೇರುತ್ತವೆ.

ನಮ್ಮ ವರ್ತನೆಯ ಮೇಲೆ ಪ್ರಭಾವ ಬೀರುವ ಅಜ್ಞಾತ ಪ್ರೇರಣೆಗಳನ್ನು ಹೊರಗೆಳೆಯುವ ಉದ್ದೇಶದಿಂದಲೇ ಪಕ್ಷೇಪಣ ಪರೀಕ್ಷೆಗಳನ್ನು ರೂಪಿಸಿ ಬಳಕೆಗೆ ತರಲಾಗಿದೆ. ವ್ಯಕ್ತಿ ತನ್ನ ಅಂತರಂಗದ ಅನಿಸಿಕೆಗಳನ್ನು, ಬಯಕೆಗಳನ್ನು, ಭಾವನೆಗಳನ್ನು ಮತ್ತು ಸಂಘರ್ಷಗಳನ್ನು ಅಸ್ಪಷ್ಟ ಚಿತ್ರ ಅಥವಾ ಸನ್ನಿವೇಶದ ಮೇಲೆ ಆರೋಪಿಸುತ್ತಾನೆ ಎಂಬ ತತ್ವದ ಆಧಾರದ ಮೇಲೆ ಪ್ರಕ್ಷೇಪಣ ಪರೀಕ್ಷೆಗಳನ್ನು ರೂಪಿಸಲಾಗಿದೆ. ಪ್ರಯೋಗಾರ್ಥಿ ನೀಡುವ ಉತ್ತರಗಳನ್ನು ತಜ್ಞರು ಅರ್ಥೈಸುತ್ತಾರೆ. ಮನೋವಿಜ್ಞಾನಿಗಳು ವಿವಿಧ ರೀತಿಯ ಪ್ರಕ್ಷೇಪಣ ಪರೀಕ್ಷೆಗಳನ್ನು ರೂಪಿಸಿ ಬಳಕೆಗೆ ತಂದಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

ರೊಶಾಕ್‌ರ ಮಸಿ-ಮಚ್ಚೆ ಪರೀಕ್ಷೆ (Rorschach’s Ink blot test).

3.ಎಬ್ಬಿಂಗ್ ಹಾಸ್‌ರವರ ವಾಕ್ಯ ಪೂರ್ಣ ಪರೀಕ್ಷೆ   (Sentence completion test).

ಮೇಲೆ ತಿಳಿಸಿದ ಪ್ರಕ್ಷೇಪಣ ಪರೀಕ್ಷೆಗಳ ಐಟಂಗಳು ಪರಸ್ಪರ ಭಿನ್ನವಾಗಿರುತ್ತವೆ. ಉದಾಹರಣೆಗೆ : ರೊಶಾಕ್‌ರ ಮಸಿ-ಮಚ್ಚೆ ಪರೀಕ್ಷೆಯಲ್ಲಿ ರಚನಾರಹಿತ ಮಸಿ-ಮಚ್ಚೆ ಚಿತ್ರಗಳಿರುತ್ತವೆ. ಈ ಚಿತ್ರಗಳಿಗೆ ತನ್ನದೇ ಆದ ರೂಪ, ಆಕಾರ ಇರುವುದಿಲ್ಲ. ಮಾರ್ಗನ್ ಮತ್ತು ಮುರೆಯವರ ವಿಷಯ ಸಂಜ್ಞಾನ ಪರೀಕ್ಷೆಯಲ್ಲಿ ಚಿತ್ರಗಳಿರುತ್ತವೆ. ಆದರೆ ಚಿತ್ರಗಳ ಹಿನ್ನಲೆ ಅಸ್ಪಷ್ಟವಾಗಿರುತ್ತದೆ. ಎಬ್ಬಿಂಗ್ ಹಾಸ್‌ರವರ ಪರೀಕ್ಷೆಯಲ್ಲಿ ಅಪೂರ್ಣ ವಾಕ್ಯಗಳಿರುತ್ತವೆ. ಹೀಗೆ ಪ್ರಕ್ಷೇಪಣ ಪರೀಕ್ಷೆಗಳು ಪರಸ್ಪರ ಭಿನ್ನವಾಗಿದ್ದರೂ ಅವುಗಳಲ್ಲಿ ಕೆಲವು ಸಾಮಾನ್ಯ ಲಕ್ಷಣಗಳಿವೆ.

1. ಐಟಂಗಳು (ಪ್ರಚೋದನೆಗಳು) ರಚನಾರಹಿತವಾಗಿರುತ್ತವೆ ಇಲ್ಲವೆ ಅಸ್ಪಷ್ಟ ಸನ್ನಿವೇಶಗಳನ್ನು ಪ್ರತಿಬಿಂಬಿಸುತ್ತವೆ.

2. ಪ್ರಯೋಗಾರ್ಥಿಗೆ ಪರೀಕ್ಷೆಯ ಉದ್ದೇಶವನ್ನು ತಿಳಿಸುವುದಿಲ್ಲ.

3. ಪ್ರಯೋಗಾರ್ಥಿಗೆ ಯಾವುದೇ ‘ಸರಿ’ ಅಥವಾ ‘ತಪ್ಪು’ ಉತ್ತರಗಳಿಲ್ಲ, ನೀನು ಕೊಡುವ ಉತ್ತರಗಳೇ ಸರಿಯಾದ ಉತ್ತರಗಳೆಂದು ತಿಳಿಸಲಾಗುವುದು.

4. ಪ್ರಯೋಗಾರ್ಥಿ ನೀಡುವ ಪ್ರತಿಯೊಂದು ಉತ್ತರವೂ ಆತನ ವ್ಯಕ್ತಿತ್ವದ ಪ್ರಮುಖ ಅಂಶವನ್ನು ತಿಳಿಸುತ್ತದೆ.

5. ಪ್ರಯೋಗಾರ್ಥಿಯ ಉತ್ತರಗಳ ವಿಶ್ಲೇಷಣೆ ಮತ್ತು ಅರ್ಥೈಸುವಿಕೆಯನ್ನು ನುರಿತ ತಜ್ಞರು ಮಾತ್ರ ಮಾಡುತ್ತಾರೆ. ಕೆಲವು ವೇಳೆ ಇದು ವ್ಯಕ್ತಿನಿಷ್ಟವಾಗಿರುವ ಸಾಧ್ಯತೆ ಇರುತ್ತದೆ. ಆದರೂ ಸಹ ವ್ಯಕ್ತಿತ್ವ ಮಾಪನದಲ್ಲಿ ಇವು ಪರಿಣಾಮಕಾರಿ ವಿಧಾನಗಳೆಂದು ಭಾವಿಸಲಾಗಿದೆ.

1. ರೊಶಾಕ್‌ನ ಮಸಿ-ಮಚ್ಚೆ ಪರೀಕ್ಷೆ :

ಹೆರ್‌ಮನ್ ರೊಶಾಕ್, 1924 ರಲ್ಲಿ ಈ ಪರೀಕ್ಷೆಯನ್ನು ರಚಿಸಿದನು. ಈ ಪರೀಕ್ಷೆಯಲ್ಲಿ 10 ಮಸಿಮಚ್ಚೆ ಚಿತ್ರಗಳಿವೆ. ಪ್ರತಿ ಮಸಿಮಚ್ಚೆ ಚಿತ್ರವನ್ನು “8X10” ಅಳತೆಯ ಬಿಳಿಯ ರಟ್ಟಿನ ಮೇಲೆ ಅಂಟಿಸಲಾಗಿರುತ್ತದೆ. ಇವುಗಳಲ್ಲಿ ಐದು ಚಿತ್ರಗಳು (1,4,5,6 ಮತ್ತು 7) ಬೂದು ಮತ್ತು ಕಪ್ಪು ಬಣ್ಣಗಳನ್ನು ಹೊಂದಿವೆ. ಎರಡು ಚಿತ್ರಗಳು (2 ಮತ್ತು 3 ನೇ ಚಿತ್ರ) ಬೂದು ಬಣ್ಣದ ಮೇಲೆ ಕೆಂಪು ಕಲೆಗಳನ್ನು ಹೊಂದಿವೆ. ಉಳಿದ ಮೂರು ಚಿತ್ರಗಳು (8, 9 ಮತ್ತು 10) ವಿವಿಧ ಬಣ್ಣಗಳಿಂದ ಕೂಡಿರುತ್ತವೆ.

ಪರೀಕ್ಷೆ ನೀಡುವ ವಿಧಾನ : ಪ್ರಯೋಗಾರ್ಥಿಯನ್ನು ನಿಶ್ಯಬ್ದವಾದ ಮತ್ತು ಒಳ್ಳೆಯ ಗಾಳಿ ಬೆಳಕು ಇರುವ

ಕೊಠಡಿಯಲ್ಲಿ ಆರಾಮವಾಗಿ ಕುಳ್ಳರಿಸಬೇಕು. ನಂತರ ಮಸಿಮಚ್ಚೆ ಚಿತ್ರಗಳನ್ನು ಸಂಖ್ಯಾನುಕ್ರಮದಲ್ಲಿ ಒಂದಾದ ಮೇಲೊಂದರಂತೆ ಪ್ರಯೋಗಾರ್ಥಿಗೆ ನೀಡಿ ‘ಇದು ನಿನಗೆ ಹೇಗೆ ಕಾಣುತ್ತದೆ’ ಎಂದು ಕೇಳಬೇಕು. ಪ್ರಯೋಗಾರ್ಥಿ ಚಿತ್ರವನ್ನು ತನಗಿಷ್ಟ ಬಂದ ರೀತಿಯಲ್ಲಿ ಹಿಡಿದುಕೊಳ್ಳಬಹುದು. ಚಿತ್ರ ನೋಡಿ ಪ್ರಯೋಗಾರ್ಥಿ ನೀಡುವ ಉತ್ತರಗಳನ್ನು ಚಾಚೂ ತಪ್ಪದೆ ಬರೆದುಕೊಳ್ಳಬೇಕು. ಒಂದು ಉತ್ತರ ನೀಡಿ ಸುಮ್ಮನಾದರೆ ಇನ್ನೂ ಹೆಚ್ಚು ಹೆಚ್ಚು ಪ್ರತಿಕ್ರಿಯೆ ನೀಡುವಂತೆ ಪ್ರೋತ್ಸಾಹಿಸಬೇಕು. ಹೀಗೆ ಪ್ರತಿ ಚಿತ್ರಕ್ಕೂ ಹಲವು ಉತ್ತರಗಳನ್ನು ನೀಡುವಂತೆ ಪ್ರಯೋಗಾರ್ಥಿಯನ್ನು ಒತ್ತಾಯಿಸುತ್ತಿರಬೇಕು. ಹೆಚ್ಚು ಪ್ರತಿಕ್ರಿಯೆ ನೀಡಿದಷ್ಟು ಪ್ರಯೋಗಾರ್ಥಿಯ ಅಂತರಂಗದಲ್ಲಿ ಇರುವುದೆಲ್ಲಾ ಹೊರಬರುತ್ತದೆ. ಆಗ ಆತನ ವ್ಯಕ್ತಿತ್ವವನ್ನು ನಿಖರವಾಗಿ ಮಾಪನ ಮಾಡಲು ಸಾಧ್ಯವಾಗುತ್ತದೆ.

ಅರ್ಥವಿವರಣೆ : ರೊಶಾಕ್‌ನ ಮಸಿಮಚ್ಚೆ ಪರೀಕ್ಷೆಯು ವ್ಯಕ್ತಿಯ ವ್ಯಕ್ತಿತ್ವದ ಕೆಲವು ಪ್ರಮುಖ ಅಂಶಗಳನ್ನು ಬಹಿರಂಗಗೊಳಿಸುತ್ತದೆ. ಅವುಗಳಲ್ಲಿ ಕೆಲವು ಮುಖ್ಯವಾದ ಅಂಶಗಳೆಂದರೆ,

1. ವ್ಯಕ್ತಿಯ ವರ್ತನೆಯ ಮೇಲೆ ಮನಸ್ಸಿನ ಹತೋಟಿ ಎಷ್ಟಿದೆ.

ಪ್ರಚೋದನೆಗಳಿಗೆ ವ್ಯಕ್ತಿ ಹೇಗೆ ಪ್ರತಿಕ್ರಿಯೆ ನೀಡುತ್ತಾನೆ. 2.

ಸವಾಲುಗಳನ್ನು ಯಾವ ರೀತಿ ಎದುರಿಸುತ್ತಾನೆ. 3.

4. ವ್ಯಕ್ತಿಯ ಕಲ್ಪನಾ ಸಾಮರ್ಥ್ಯ ಮತ್ತು ಸೃಜನಾತ್ಮಕತೆ ಎಷ್ಟಿದೆ.

5. ವ್ಯಕ್ತಿಯ ವ್ಯಕ್ತಿತ್ವ ಎಷ್ಟು ಪರಿಪಕ್ವವಾಗಿದೆ.

6. ಭಯ-ಭೀತಿಗಳು, ಕಾಮಕ್ರೋಧಗಳು, ಘರ್ಷಣೆಗಳು, ಅಭಿಪ್ರೇರಣೆಗಳು, ಆಸೆ-ಆಕಾಂಕ್ಷೆಗಳು ಆತನ ಉತ್ತರಗಳಲ್ಲಿ ವ್ಯಕ್ತವಾಗುತ್ತವೆ.

ಹೀಗೆ ವ್ಯಕ್ತಿ ತನಗೆ ತಿಳಿಯದಂತೆಯೇ ತನ್ನ ಮನಸ್ಸಿನಲ್ಲಿರುವುದನ್ನು ಹೊರಹಾಕುತ್ತಾನೆ. ಇದೇ ಈ ಪರೀಕ್ಷೆಯ ವೈಶಿಷ್ಟ್ಯ.

2. ವಿಷಯ ಸಂಜ್ಞಾನ ಪರೀಕ್ಷೆ (T.A.T) :

ಈ ಪರೀಕ್ಷೆಯನ್ನು 1935 ರಲ್ಲಿ ‘ಮಾರ್ಗನ್’ ಮತ್ತು ‘ಮುದ್ರೆ’ ರೂಪಿಸಿದರು. ವಿಷಯ ಸಂಜ್ಞಾನ ಪರೀಕ್ಷೆಯಲ್ಲಿ 30 ಚಿತ್ರಗಳಿವೆ. ಪ್ರತಿ ಚಿತ್ರವೂ ಕಪ್ಪು-ಬಿಳುಪು ಬಣ್ಣವನ್ನು ಹೊಂದಿದೆ ಮತ್ತು ಪ್ರತಿ ಚಿತ್ರದಲ್ಲಿ ವಿವಿಧ ಸಂದರ್ಭಗಳಲ್ಲಿ ಜನರು ಇರುವುದನ್ನು ಸೂಚಿಸುತ್ತದೆ. ಕೆಲವು ಚಿತ್ರಗಳನ್ನು ವಯಸ್ಕರಿಗೆ ನೀಡಬಲ್ಲವುಗಳಾದರೆ ಕೆಲವು ಚಿತ್ರಗಳನ್ನು ಮಕ್ಕಳಿಗೆ ನೀಡಬಹುದಾಗಿದೆ. ಕೆಲವು ಚಿತ್ರಗಳನ್ನು ಮಕ್ಕಳಿಗೂ ಹಾಗೂ ವಯಸ್ಕರಿಗೂ ನೀಡಬಹುದಾಗಿದೆ. ಮೂವತ್ತು ಚಿತ್ರಗಳಲ್ಲಿ 20 ಚಿತ್ರಗಳನ್ನು ಪ್ರಯೋಗದಲ್ಲಿ ಬಳಸುವುದು ಸೂಕ್ತ. ಕೆಲವು ವೇಳೆ ಇನ್ನೂ ಕಡಿಮೆ ಚಿತ್ರಗಳಿಂದ (ಸುಮಾರು 5) ವ್ಯಕ್ತಿತ್ವವನ್ನು ಯಶಸ್ವಿಯಾಗಿ ಮಾಪನ ಮಾಡಬಹುದು.

ಪ್ರಯೋಗ ವಿಧಾನ :- ಪ್ರಯೋಗಾರ್ಥಿಯನ್ನು ಕುರ್ಚಿಯಲ್ಲಿ ಆರಾಮವಾಗಿ ಕುಳ್ಳರಿಸಬೇಕು. ನಂತರ

ಒಮ್ಮೆಗೆ ಒಂದು ಚಿತ್ರ ಮಾತ್ರ ನೀಡಿ, ಆ ಚಿತ್ರದ ಬಗ್ಗೆ ಒಂದು ಕಥೆಯನ್ನು ಹೇಳುವಂತೆ ಅಥವಾ ಬರೆಯುವಂತೆ ಸೂಚನೆ ನೀಡಬೇಕು. ಆ ಚಿತ್ರದಲ್ಲಿರುವ ಪಾತ್ರಗಳ ಬಗ್ಗೆ ಸನ್ನಿವೇಶದ ಬಗ್ಗೆ ಒಂದು ಅರ್ಥವತ್ತಾದ ಕಥೆ ಬರೆಯುವಂತೆ ಹೇಳಬೇಕು. ಉದಾಹರಣೆಗೆ : ಚಿತ್ರದಲ್ಲಿರುವ ಸನ್ನಿವೇಶದಲ್ಲಿ ಮುಂದೆ ಏನಾಗಬಹುದು? ಚಿತ್ರದಲ್ಲಿರುವ ವ್ಯಕ್ತಿಗಳು ಏನು ಆಲೋಚಿಸುತ್ತಿದ್ದಾರೆ ಎಂಬ ಅಂಶಗಳನ್ನು ಕಥೆಯಲ್ಲಿ ಅಳವಡಿಸಬೇಕು.

ಕಥೆಯಲ್ಲಿ ಪಾತ್ರಗಳ ಸೃಷ್ಟಿ, ಕಥೆಯ ಆರಂಭ, ಅಂತ್ಯ, ಪಾತ್ರಗಳ ನಡುವಿನ ಸಂಬಂಧ, ಮುಂತಾದವು ಕಥೆ ಬರೆಯುವ ವ್ಯಕ್ತಿಯ ಅಂತರಂಗದ ಆಸೆ ಆಕಾಂಕ್ಷೆಗಳನ್ನು, ಘರ್ಷಣೆಗಳನ್ನು, ಅಭಿಪ್ರೇರಣೆಗಳನ್ನು ಪ್ರತಿಬಿಂಬಿಸುತ್ತವೆ.

ಭಾರತದಲ್ಲಿ ಉಮಾಚೌಧರಿಯವರು T.A.Tಯನ್ನು ನಮ್ಮ ದೇಶಕ್ಕೆ ಹೊಂದುವಂತೆ ಮಾರ್ಪಡಿಸಿ ರೂಪಿಸಿದ್ದಾರೆ. ಈ ವಿಧಾನ ರೋಶಾಕ್‌ನ ಮಸಿಮಚ್ಚೆ ಪರೀಕ್ಷೆಯಷ್ಟು ನಿಖರ ಮಾಪನ ಮಾಡದಿದ್ದರೂ T.A.T ಒಂದು ಉತ್ತಮವಾದ ವ್ಯಕ್ತಿತ್ವ ಮಾಪನ ವಿಧಾನ ಎಂದು ಪರಿಗಣಿಸಲಾಗಿದೆ.

3. ವಾಕ್ಯಪೂರ್ಣ ಪರೀಕ್ಷೆ:

ಎಬ್ಬಿಂಗ್ ಹಾಸ್‌ರವರ ವಾಕ್ಯಪೂರ್ಣ ಪರೀಕ್ಷೆಯಲ್ಲಿ ಅನೇಕ ಅಪೂರ್ಣ ವಾಕ್ಯಗಳಿರುತ್ತವೆ. ಪ್ರಯೋಗಾರ್ಥಿ ಓದಿದಾಗ ತನ್ನ ಮನಸ್ಸಿಗೆ ಅನಿಸಿದ ರೀತಿಯಲ್ಲಿ ತಕ್ಷಣ ಪೂರ್ಣಗೊಳಿಸಬೇಕು. ಹೀಗೆ ಎಲ್ಲ ವಾಕ್ಯಗಳನ್ನು ಓದಿ ಹೆಚ್ಚುಕಾಲ ಯೋಚನೆ ಮಾಡದೆ ತಕ್ಷಣ ತನ್ನ ಮನಸ್ಸಿಗೆ ಹೊಳೆದ ಪದ ಅಥವಾ ಪದಗಳಿಂದ ವಾಕ್ಯಗಳನ್ನು ಪೂರ್ಣಗೊಳಿಸಬೇಕು. ವಾಕ್ಯಪೂರ್ಣ ಪರೀಕ್ಷೆಯ ಕೆಲವು ಐಟಂಗಳು ಕೆಳಕಂಡಂತಿವೆ.

1. ನನ್ನ ತಂದೆ…………………
2. ನನ್ನ ಅತಿ ದೊಡ್ಡ ಭಯವೆಂದರೆ…………………
3.ನನ್ನ ತಾಯಿ ಬಗ್ಗೆ ಒಂದು ಅಭಿಮಾನದ ಮಾತೆಂದರೆ…………………

ಅಪೂರ್ಣ ವಾಕ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕಾಗಿರುವುದರಿಂದ ಹೆಚ್ಚು ಯೋಚಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಉತ್ತರಿಸುವ ವ್ಯಕ್ತಿಯ ಉತ್ತರಗಳು ಸುಪ್ತಚೇತನದಿಂದ ನಿರ್ದೇಶಿತವಾಗಿರುತ್ತವೆ. ಹೆಚ್ಚು ಯೋಚಿಸದೆ ನೀಡುವ ಉತ್ತರಗಳು ಆತನ ಆಸೆ, ಆಕಾಂಕ್ಷೆಗಳನ್ನು, ಭಯ, ಭೀತಿಗಳನ್ನು, ಸಂಘರ್ಷಗಳನ್ನು, ಅತೃಪ್ತ ಬಯಕೆಗಳನ್ನು ಪ್ರತಿಬಿಂಬಿಸುತ್ತವೆ ಎಂಬುದೇ ಪರೀಕ್ಷೆಯ ಹಿಂದಿರುವ ತತ್ವವಾಗಿದೆ.

Leave a Comment