ವ್ಯಕ್ತಿತ್ವ (Personality)

ವ್ಯಕ್ತಿತ್ವ (Personality)

ವ್ಯಕ್ತಿತ್ವ (Personality)

ವ್ಯಕ್ತಿತ್ವ (Personality):ವ್ಯಕ್ತಿತ್ವ’ ಎಂಬ ಪದವನ್ನು ಸಾಮಾನ್ಯವಾಗಿ ಹಲವು ಅರ್ಥಗಳಲ್ಲಿ ಬಳಸುತ್ತೇವೆ. ಎತ್ತರ ಹಾಗೂ ಆಕರ್ಷಕ ರೂಪವುಳ್ಳ ವ್ಯಕ್ತಿಯನ್ನು ನೋಡಿ ಉತ್ತಮ ವ್ಯಕ್ತಿತ್ವ ಎಂದು ಕೆಲವರಿಗೆ ಅನಿಸಿದರೆ, ಮತ್ತೆ ಕೆಲವರಿಗೆ, ಸ್ಪುರದ್ರೂಪಿ ಅಲ್ಲದಿದ್ದರೂ ಒಳ್ಳೆಯ ಗುಣ. ನಡವಳಿಕೆ, ಬುದ್ಧಿಚಾತುರ್ಯ ನೋಡಿ ಒಳ್ಳೆಯ ಆದರ್ಶ ವ್ಯಕ್ತಿತ್ವ ಎನಿಸುತ್ತದೆ. ಹೀಗೆ ವಿವಿಧ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ವ್ಯಕ್ತಿತ್ವ ಎಂದು ಹೇಳುವುದು ನಮ್ಮ ಸಮಾಜದ ಸಂಪ್ರದಾಯ. ಹಾಗಾದರೆ ಜನರ ಈ ಅಭಿಪ್ರಾಯ ತಪ್ಪೆ? ಖಂಡಿತಾ ತಪ್ಪಲ್ಲ, ಎಲ್ಲರೂ ವ್ಯಕ್ತಿತ್ವ ಎಂದರೇನು ಎಂದು ಭಾಗಶಃ ತಿಳಿದಿದ್ದಾರೆ.

ವ್ಯಕ್ತಿತ್ವ ಎಂಬುದು ಹಲವು ಶಾರೀರಿಕ ಹಾಗೂ ಮಾನಸಿಕ ಗುಣಗಳನ್ನೊಳಗೊಂಡ ಒಟ್ಟು ರೂಪ. ವ್ಯಕ್ತಿತ್ವ ಸಂದರ್ಭಕ್ಕೆ ಅನುಗುಣವಾಗಿ ಬದಲಾವಣೆ ಹೊಂದುವುದು ಸಹಜ. ಆದರೆ ಎಲ್ಲಾ ಸಂದರ್ಭಗಳಲ್ಲೂ ವ್ಯಕ್ತಿತ್ವದ ಕೆಲವು ಮೂಲಗುಣಗಳು ಬದಲಾವಣೆಯಾಗುವುದಿಲ್ಲ. ಉದಾಹರಣೆಗೆ:ಗಾಂಧೀಜಿ ಚಿಕ್ಕಂದಿನಿಂದಲೂ ಅಹಿಂಸೆ. ಸತ್ಯಾಗ್ರಹ, ಸರಳತೆ, ಪ್ರಾಮಾಣಿಕತೆಗಳನ್ನು ಪಾಲಿಸಿದರು ಮತ್ತು ಇತರರಿಗೆ ಆದರ್ಶಪ್ರಾಯರಾದರು. ಅವರ ವ್ಯಕ್ತಿತ್ವದ ಈ ಗುಣಗಳು ಎಂತಹ ಸಂದರ್ಭದಲ್ಲೂ ಬದಲಾವಣೆ ಹೊಂದಲಿಲ್ಲ. ಅದೇ ರೀತಿ ಎಲ್ಲ ವ್ಯಕ್ತಿಗಳಲ್ಲೂ ವ್ಯಕ್ತಿತ್ವದ ಕೆಲವು ಮೂಲಗುಣಗಳು ಎಂದೆಂದಿಗೂ ಬದಲಾಗುವುದಿಲ್ಲ.

ಎಲ್ಲರೂ ಮನುಷ್ಯರೇ ಆದರೂ ಎಲ್ಲರ ನಡವಳಿಕೆಗಳು ಒಂದೇ ರೀತಿ ಇರುವುದಿಲ್ಲ. ಒಂದೇ ಮನೆಯ ಮಕ್ಕಳ ನಡವಳಿಕೆಗಳು ಬೇರೆ ಬೇರೆ ರೀತಿ ಇರುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಅದೇ ರೀತಿ ಎಲ್ಲರ ವ್ಯಕ್ತಿತ್ವಗಳು ಭಿನ್ನ, ಯಾವುದೇ ಇಬ್ಬರು ವ್ಯಕ್ತಿಗಳ ವ್ಯಕ್ತಿತ್ವ ಸಂಪೂರ್ಣವಾಗಿ ಒಂದೇ ರೀತಿ ಇರಲು ಸಾಧ್ಯವಿಲ್ಲ, ತದ್ರೂಪ ಅವಳಿಗಳ ವ್ಯಕ್ತಿತ್ವ ಕೂಡ ನೂರಕ್ಕೆ ನೂರರಷ್ಟು ಹೋಲಿಕೆಯಾಗುವುದಿಲ್ಲ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಆದ್ದರಿಂದ ವ್ಯಕ್ತಿತ್ವ ವಿಶಿಷ್ಟವಾದದ್ದು (Personality is unique) ವ್ಯಕ್ತಿತ್ವ ರೂಪಗೊಳ್ಳುವಿಕೆ ಯಲ್ಲಿ ಶಾರೀರಿಕ, ಮಾನಸಿಕ, ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಪ್ರಭಾವ ಪ್ರಮುಖವಾದುದು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ವ್ಯಕ್ತಿತ್ವದ ಅಧ್ಯಯನವು ಮನೋವಿಜ್ಞಾನಿಗಳಿಗೆ ಒಂದು ಆಸಕ್ತಿಯುತ ಕ್ಷೇತ್ರ ಎನಿಸಿದೆ.

ಅರ್ಥ :

“ವ್ಯಕ್ತಿತ್ವ” ಎಂಬ ಕನ್ನಡ ಪದದ ಸಮಾನಾಂತರ ಇಂಗ್ಲೀಷ್ ಪದ “Personality”. Personality ಎಂಬ ಪದವು ಲ್ಯಾಟಿನ್ ಭಾಷೆಯ “Persona” ಎಂಬ ಪದದಿಂದ ಬಂದಿದೆ. ಲ್ಯಾಟಿನ್ ಭಾಷೆಯಲ್ಲಿ ಪರೋನ ಎಂದರೆ ‘ಮುಸುಕು’ ಅಥವಾ “ಮುಖವಾಡ” ಎಂದು ಅರ್ಥ. ಹಿಂದೆ ರೋಮ್ ಹಾಗೂ ಗ್ರೀಕ್ ನಾಟಕಗಳಲ್ಲಿ ಪಾತ್ರದಾರಿಗಳು ಆಯಾಯಾ ಪಾತ್ರಗಳಿಗೆ ಒಪ್ಪುವ ಮುಖವಾಡ ಧರಿಸಿ ಆ ಪಾತ್ರಗಳಿಗೆ ಜೀವ ತುಂಬಿ ನಟಿಸುತ್ತಿದ್ದುದರಿಂದ ಈ ಅರ್ಥ ಬಂದಿದೆ. ನಮ್ಮ ಪೌರಾಣಿಕ ನಾಟಕಗಳಲ್ಲಿ ಕೂಡ. ರಾವಣನ ಹತ್ತು ತಲೆಗಳನ್ನು ಧರಿಸಿ ನಟಿಸುವುದು, ಗಣೇಶ, ಹನುಮ, ಜಾಂಬುವಂತ, ಮುಂತಾದ ಪಾತ್ರಗಳ ಮುಖವಾಡ ಧರಿಸಿ ಆ ಪಾತ್ರಗಳಿಗೆ ಒಪ್ಪುವಂತೆ ನಟಿಸುವುದನ್ನು ನಾವೆಲ್ಲರೂ ನೋಡಿರುತ್ತೇವೆ ಅಲ್ಲವೆ?

ನಿರೂಪಣೆಗಳು (Definitions):

ವ್ಯಕ್ತಿತ್ವವನ್ನು ವಿವಿಧ ಮನೋವಿಜ್ಞಾನಿಗಳು ತಮ್ಮದೇ ಆದ ರೀತಿಯಲ್ಲಿ ನಿರೂಪಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದ

ಒಂದು ನಿರೂಪಣೆ ಕೆಳಕಂಡಂತಿದೆ.

1. ಆಲೋರ್ಟ್ ಪ್ರಕಾರ : “ಸಮಯಕ್ಕೆ ತಕ್ಕಂತೆ ವಿಶಿಷ್ಟ ರಿತಿಯಲ್ಲಿ ಪರಿಸರಕ್ಕೆ ಹೊಂದಿಕೊಳ್ಳಲು

ಸಹಾಯಕವಾದ ಹಲವು ಮಾನಸಿಕ ಗುಣಗಳ ಸಂಘಟನಾ ವ್ಯವಸ್ಥೆಯೇ ವ್ಯಕ್ತಿತ್ವ”, (Personality is the dynamic organization with in the individual of those psychological systems that determine his unique adjustment to his environment).

ವ್ಯಕ್ತಿತ್ವ ವರ್ಗಿಕರಣ: Approaches to Personality):

ವ್ಯಕ್ತಿತ್ವವನ್ನು ಅಧ್ಯಯನ ಮಾಡಲು ಮತ್ತು ವರ್ಗೀಕರಿಸಲು ಮನೋವಿಜ್ಞಾನಿಗಳು ಎರಡು ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಅವುಗಳೆಂದರೆ 1) ಪ್ರರೂಪ ವಿಧಾನ ಮತ್ತು 2) ಗುಣ ವಿಧಾನ.

1. ಪ್ರರೂಪ ವಿಧಾನಗಳು :- ಅವಗಾಹನೆಗೆ ನಿಲುಕುವ ವರ್ತನೆಯ ಗುಣಗಳನ್ನು ಆಧರಿಸಿ ಮಾಡಲಾದ

ವ್ಯಕ್ತಿತ್ವ ವರ್ಗೀಕರಣವನ್ನು ಪ್ರರೂಪ ವಿಧಾನ ಎನ್ನುವರು. ಪ್ರಾಚೀನ ಕಾಲದಲ್ಲಿ ಗ್ರೀಕ್ ವೈದ್ಯ ಹಿಪ್ಪೋಕ್ರೆಟನು ವ್ಯಕ್ತಿತ್ವವನ್ನು 4 ಬಗೆಗಳಾಗಿ ವಿಂಗಡಿಸಿದನು.

Sanguine, Phlegmatic, Melancholic ಮತ್ತು Choleric ಆ ನಾಲ್ಕು ವರ್ಗಗಳು.

ನಂತರ ನಮ್ಮ ದೇಶದ ಪ್ರಾಚೀನ ವೈದ್ಯನಾದ ಚರಕ, ವ್ಯಕ್ತಿತ್ವವನ್ನು ವಾತ, ಪಿತ್ತ ಮತ್ತು ಕಫ ಎಂದು ತ್ರಿದೋಷ ಅಂಶಗಳ ಆಧಾರದ ಮೇಲೆ ವಿಂಗಡಿಸಿದನು.

ನಂತರ ವ್ಯಕ್ತಿತ್ವವನ್ನು ತ್ರಿಗುಣಗಳನ್ನು ಆಧರಿಸಿ ವರ್ಗೀಕರಣ ಮಾಡಲಾಯಿತು. ಆ ತ್ರಿಗುಣಗಳೆಂದರೆ

1) ಸತ್ವಗುಣ 2) ರಜೋಗುಣ ಮತ್ತು 3) ತಾಮಸ ಗುಣ.

1) ಸತ್ವಗುಣ :- ಈ ಗುಣಗಳ ವ್ಯಕ್ತಿಗಳು ಪ್ರಾಮಾಣಿಕರು, ಕರ್ತವ್ಯಪರರು. ಶಿಸ್ತುಬದ್ಧರು ಹಾಗೂ ಲೌಕಿಕ ವ್ಯವಹಾರದಿಂದ ದೂರವಿರುವವರಾಗಿರುತ್ತಾರೆ. ಋಷಿಮುನಿಗಳು, ಸಮಾಜ ಸೇವಕರು, ಇಂತಹ ವರ್ಗಕ್ಕೆ ಸೇರುತ್ತಾರೆ.

2) ರಜೋಗುಣ :- ರಜೋಗುಣವುಳ್ಳ ವ್ಯಕ್ತಿಗಳು ಸದಾ ಚಟುವಟಿಕೆಯಿಂದ ಇರುತ್ತಾರೆ. ಅತಿಯಾದ ಆಸೆ, ಅಧಿಕಾರದ ದಾಹ ಹೊಂದಿರುತ್ತಾರೆ. ಇತರರ ಏಳಿಗೆ ಬಗ್ಗೆ ಅಸೂಯೆ, ಅತೃಪ್ತಿ ಇವರಲ್ಲಿ ಹೆಚ್ಚು. ಹಣ, ಆಸ್ತಿ, ವ್ಯಾಮೋಹ ಇವರಲ್ಲಿ ತೀವ್ರವಾಗಿರುತ್ತದೆ.

3) ತಾಮಸ ಗುಣ :- ಇವರಲ್ಲಿ ಕೋಪ-ತಾಪ ಜಾಸ್ತಿ. ಖಿನ್ನತೆ, ಸೋಮಾರಿತನ, ಆಸಹಾಯಕತೆ, ಮುಂತಾದ ಗುಣಗಳು ಹೆಚ್ಚು ಕಂಡುಬರುತ್ತವೆ. ಈ ಗುಣಗಳು ಎಲ್ಲರಲ್ಲೂ ಕಂಡುಬರುತ್ತವೆ. ಆದರೆ ಈ ಮೂರು ಗುಣಗಳಲ್ಲಿ ಯಾವ ಗುಣ ಹೆಚ್ಚಾಗಿರುತ್ತದೋ ಆ ವರ್ಗಕ್ಕೆ ವ್ಯಕ್ತಿ ಸೇರುತ್ತಾನೆ. ಹೀಗೆ ಪ್ರಾಚೀನ ಕಾಲದಲ್ಲಿ ತ್ರಿಗುಣಗಳ ಆಧಾರದ ಮೇಲೆ ವ್ಯಕ್ತಿತ್ವವನ್ನು ವರ್ಗೀಕರಿಸಲಾಗಿತ್ತು.

ಯೂಂಗ್‌ ವ್ಯಕ್ತಿತ್ವ ವರ್ಗಿಕರಣ :

ಸ್ವಿಸ್ ಮನೋವಿಜ್ಞಾನಿ ಕಾರ್ಲ್ ಯೂಂಗ್‌ನು ವ್ಯಕ್ತಿತ್ವವನ್ನು ಎರಡು ವರ್ಗಗಳಾಗಿ ವಿಂಗಡಿಸಿದನು. ಆ ವರ್ಗಗಳೆಂದರೆ 1) ಅಂತರ್ ಮುಖಿಗಳು ಮತ್ತು 2) ಬಹಿರ್ ಮುಖಿಗಳು. ಇವನ ವರ್ಗೀಕರಣವನ್ನು ಬಹುಮಂದಿ ಮೆಚ್ಚಿಕೊಂಡರು.

1) ಅಂತರ್ ಮುಖಿಗಳು :- ಇವರು ಒಬ್ಬರೇ ಇರಲು ಇಷ್ಟಪಡುವರು. ಇತರರ ಜೊತೆ ಬೆರೆಯಲು

ಇಷ್ಟಪಡುವುದಿಲ್ಲ. ನಾಚಿಕೆ ಸ್ವಭಾವದವರು, ಘರ್ಷಣೆ, ಜಗಳಗಳಿಂದ ದೂರ ಇರಬಯಸುತ್ತಾರೆ. ಒಳಾಂಗಣ ಕ್ರೀಡೆಗಳು ಇವರಿಗೆ ಇಷ್ಟ, ಚೆಸ್, ಕೇರಂ, ಇಂತಹ ಆಟಗಳನ್ನು ಆಡುವರು. ಭಾವನೆಗಳನ್ನು ಹತ್ತಿಕ್ಕುವರು. ಮನೋರೋಗಿಗಳಾದರೆ ಇಚ್ಚಿತ್ತ ಎಂಬ ಮನೋರೋಗಕ್ಕೆ ತುತ್ತಾಗುವರು.

2) ಬಹಿರ್ ಮುಖಿಗಳು :- ಇವರು ಸ್ನೇಹಪ್ರಿಯರು. ಇತರರ ಜೊತೆ ಸುಲಭವಾಗಿ ಬೆರೆಯುವರು.

ಸಾಹಸ ಪ್ರವೃತ್ತಿಯವರು. ಭಾವನೆಗಳನ್ನು ಮುಚ್ಚುಮರೆ ಇಲ್ಲದೆ ವ್ಯಕ್ತಪಡಿಸುವರು. ಜನಸಂಪರ್ಕ ಇರುವ ಕೆಲಸಗಳನ್ನು ಇಷ್ಟಪಡುವರು. ಹೊರಾಂಗಣ ಕ್ರೀಡೆಗಳಾದ ಪುಟ್‌ಬಾಲ್, ವಾಲಿಬಾಲ್, ಕ್ರಿಕೆಟ್ ಮುಂತಾದ ಆಟಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಒಂದು ವೇಳೆ ಮನೋರೋಗಿಗಳಾದರೆ ಉನ್ಮಾದ-ವಿಷಾದ ಎಂಬ ಮನೋರೋಗಕ್ಕೆ ಈಡಾಗುವರು.

3) ಉಭಯ ಮುಖಗಳು :- ಅಂತರ್‌ಮುಖಿಗಳು ಹಾಗೂ ಬಹಿರ್‌ಮುಖಿಗಳ ಲಕ್ಷಣಗಳನ್ನು ತೋರುವ ವ್ಯಕ್ತಿಗಳನ್ನು ಉಭಯ ಮುಖಿಗಳು ಎನ್ನುವರು. ಉಭಯ ಮುಖಿ ವರ್ಗವನ್ನು ತದನಂತರ ಸೇರಿಸಲಾಯಿತು. ಬಹುಸಂಖ್ಯೆಯ ಜನರು ಉಭಯ ಮುಖಿ ವರ್ಗಕ್ಕೆ ಸೇರಿರುತ್ತಾರೆ.

ಫ್ರೀಡ್‌ ಮನ್ ಮತ್ತು ರೋಸೆನ್ಮನ್ ರವರ ವ್ಯಕ್ತಿತ್ವ ವರ್ಗಿಕರಣ :

ಫ್ರೀಡ್‌ಮನ್ ಮತ್ತು ರೋಸೆನ್‌ಮನ್. ವ್ಯಕ್ತಿತ್ವವನ್ನು ‘A’ ಮತ್ತು ‘B’ ವಿಧಗಳಾಗಿ ವರ್ಗೀಕರಿಸಿದ್ದಾರೆ.

‘A’ – ವಿಧದ ವ್ಯಕ್ತಿತ್ವವುಳ್ಳ ಜನರು ಆತುರದ ಸ್ವಭಾವದವರಾಗಿರುತ್ತಾರೆ. ಅತಿಯಾದ ಹುಮ್ಮಸ್ಸು, ತಾಳ್ಮೆ ಇರುವುದಿಲ್ಲ, ಎಲ್ಲಾ ಕೆಲಸಗಳು ತಮ್ಮ ಮೇಲೆಯೇ ಬಿದ್ದಿವೆ ಎಂದು ಭಾವಿಸುವರು ಮತ್ತು ವಿಶ್ರಾಂತಿ ಹೊಂದದೆ ನಿರಂತರ ಚಟುವಟಿಕೆಯಿಂದ ಇರುತ್ತಾರೆ. ಹೀಗಾಗಿ ಇವರಿಗೆ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧೀ

ಕಾಯಿಲೆಗಳು ಹೆಚ್ಚು.

‘B’ ವಿಧದ ವ್ಯಕ್ತಿತ್ವ ಉಳ್ಳವರ ಗುಣಗಳು A – ವಿಧದ ವ್ಯಕ್ತಿತ್ವ ಗುಣಗಳಿಗೆ ತದ್ವಿರುದ್ಧವಾಗಿರುತ್ತವೆ. ಅಂದರೆ ಇವರು ತುಂಬಾ ನಿಧಾನ, ತಾಳ್ಮೆ ಹೆಚ್ಚು. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ಒತ್ತಡಕ್ಕೆ ಒಳಗಾಗುವುದಿಲ್ಲ.

ಮೋರಿಸ್ ಎಂಬುವವರು ‘A’ ಮತ್ತು ‘B’ ವಿಧಗಳ ಜೊತೆ ‘C’ ವಿಧವನ್ನು ಸೇರಿಸಿದ್ದಾರೆ. ‘C’ ವಿಧದ

ವ್ಯಕ್ತಿತ್ವ ಉಳ್ಳವರು ಮೃದು ಸ್ವಭಾವದವರು. ಸಹಕರಿಸುವ ಮನೋಭಾವದವರು. ಮೇಲಾಧಿಕಾರಿಗಳಿಗೆ

ವಿಧೇಯರಾಗಿರುತ್ತಾರೆ. ತಮ್ಮ ಕೋಪ-ತಾಪವನ್ನು ನುಂಗಿಕೊಳ್ಳುತ್ತಾರೆ. ‘C’ ವಿಧದ ವ್ಯಕ್ತಿತ್ವದವರು ಕ್ಯಾನ್ಸರ್

ಕಾಯಿಲೆಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು.

ಇತ್ತೀಚೆಗೆ ‘D’ ವಿಧದ ವ್ಯಕ್ತಿತ್ವವನ್ನು ಸೇರಿಸಲಾಗಿದೆ. ‘D’ ವಿಧದ ವ್ಯಕ್ತಿತ್ವ ಉಳ್ಳವರು ದುಃಖಿಗಳು, ಸ್ವಯಂ ನಿಂದನೆ ಮಾಡಿಕೊಳ್ಳುವರು ಮತ್ತು ಖಿನ್ನತೆ (depression)ಗೆ ಒಳಗಾಗುವರು.

ಪ್ರರೂಪ ವಿಧಾನದ ವ್ಯಕ್ತಿತ್ವ ವರ್ಗೀಕರಣ ತುಂಬಾ ಆಸಕ್ತಿಯುತ ಮತ್ತು ಸರಳ. ಆದರೆ ಮಾನವನ ವರ್ತನೆ ತುಂಬಾ ಸಂಕೀರ್ಣ ಮತ್ತು ವೈವಿಧ್ಯಮಯವಾಗಿರುತ್ತದೆ. ಜನರನ್ನು ಇಂತದೇ ವರ್ಗ ಎಂದು ವರ್ಗೀಕರಿಸುವುದು ತುಂಬಾ ಕಷ್ಟದ ಕೆಲಸ.

2. ಗುಣ ವಿಧಾನ (Trait Approach):

ಕೆಲವು ನಿರ್ದಿಷ್ಟ ವ್ಯಕ್ತಿತ್ವದ ಗುಣಗಳನ್ನು ಗಮನದಲ್ಲಿ ಇಟ್ಟುಕೊಂಡು ಇತರರನ್ನು ನಾವು ವರ್ಣಿಸುತ್ತೇವೆ.

ಉದಾಹರಣೆಗೆ : ಪ್ರಾಮಾಣಿಕ, ಮೃದು ಸ್ವಭಾವದವನು, ಆಹಂಕಾರಿ, ಪ್ರೇಮಮಯಿ, ಉದಾರಿ, ಇತ್ಯಾದಿಯಾಗಿ ವರ್ಣಿಸುತ್ತೇವೆ. ಈ ಅಂಶಗಳನ್ನೇ ವ್ಯಕ್ತಿತ್ವದ ಗುಣಗಳು ಎನ್ನುವರು.

ಜಿ.ಆಲ್ಬರ್ಟ್ ಹಾಗೂ ರೇಮಂಡ್ ವ್ಯಕ್ತಿತ್ವದ ವಿಶೇಷ ಗುಣಗಳನ್ನು ಕುರಿತು ವಿವರವಾಗಿ ಅಧ್ಯಯನ ಮಾಡಿದ್ದಾರೆ.

ಕೆಟಲ್ ರವರು ‘ಗುಣ ವಿಶ್ಲೇಷಣೆ’ (factor analysis) ವಿಧಾನದಿಂದ ವ್ಯಕ್ತಿತ್ವದ ಎರಡು ರೀತಿಯ ಗುಣಗಳನ್ನು ಗುರ್ತಿಸಿದ್ದಾರೆ. ಅವುಗಳೆಂದರೆ ಮೂಲ ಗುಣಗಳು ಮತ್ತು ಮೇಲೆ ಗುಣಗಳು,

ಮೂಲ ಗುಣಗಳು ಸ್ಥಿರವಾದವು ಮತ್ತು ವ್ಯಕ್ತಿತ್ವ ರೂಪಿಸುವ ಅಂಶಗಳು, ಬಾಹ್ಯದಲ್ಲಿ ವ್ಯಕ್ತವಾಗುವುದಿಲ್ಲ ಮತ್ತು ಇವು ಪರಿಸರದ ಪ್ರಭಾವದಿಂದ ಬದಲಾವಣೆ ಹೊಂದುವುದಿಲ್ಲ. ಕೆಟಲ್ ’16’ ಮೂಲ ಗುಣಗಳನ್ನು ಗುರ್ತಿಸಿದ್ದಾನೆ. ಕೆಟಲ್ ವ್ಯಕ್ತಿತ್ವದ ಗುಣಗಳನ್ನು ಮಾಪನ ಮಾಡಲು 16′ ವ್ಯಕ್ತಿತ್ವ ಗುಣಗಳ ಪ್ರಶ್ನಾವಳಿಯನ್ನು ರಚಿಸಿದ್ದಾನೆ (16PF). ಇದು ಹೆಚ್ಚು ಬಳಕೆಯಲ್ಲಿರುವ ವ್ಯಕ್ತಿತ್ವ ಮಾಪನ ವಿಧಾನವಾಗಿದೆ.

ಮೇಲೈ ಗುಣಗಳು ಮೂಲ ಗುಣಗಳ ಪ್ರಭಾವದಿಂದ ರೂಪುಗೊಂಡಿವೆ. ಇವು ಶಾಶ್ವತವಲ್ಲ, ಪರಿಸರದ ಪ್ರಭಾವದಿಂದ ಬದಲಾಗುತ್ತವೆ ಮತ್ತು ಬಾಹ್ಯದಲ್ಲಿ ವ್ಯಕ್ತವಾಗುತ್ತವೆ.

ಕೆಟಲ್ ಕೆಲವು ಮೂಲ ಗುಣಗಳನ್ನು ಗುರ್ತಿಸಿದ್ದಾನೆ. ಅವುಗಳಲ್ಲಿ ಕೆಲವು ಮೂಲ ಗುಣಗಳು ಕೆಳಕಂಡಂತಿವೆ.

1. ಸುಲಭವಾಗಿ ಬೇಸರಗೊಳ್ಳುವುದು V/S ಸಂಯಮ ಮತ್ತು ಸ್ಥಿರತೆ ತೋರುವುದು.

2. ವಿಧೇಯತೆ V/S ದರ್ಪ

3. ಶಿಸ್ತುರಹಿತ V/S ಶಿಸ್ತುಬದ್ಧ

4. ನಂಬಿಕೆ V/S ಸಂಶಯ

ಕೆಟಲ್ ಮೂಲಗುಣಗಳನ್ನು ಸಾಮರ್ಥ್ಯ ಗುಣಗಳು, ಸ್ವಭಾವ ಗುಣಗಳು ಮತ್ತು ಚಲನಾತ್ಮಕ ಗುಣಗಳೆಂದು ಮೂರು ರೀತಿ ವಿಂಗಡಿಸಿದ್ದಾನೆ.

ಸಾಮರ್ಥ್ಯ ಗುಣಗಳು : ಬದುಕಿನಲ್ಲಿ ಕೆಲವು ಗುರಿ ಸಾಧನೆಗೆ ಸಹಾಯಕವಾಗುವ ಕೌಶಲಗಳನ್ನು ಸಾಮರ್ಥ್ಯ ಗುಣಗಳು ಎನ್ನುವರು. ಉದಾ:- ಬುದ್ದಿಶಕ್ತಿ ಒಂದು ಸಾಮರ್ಥ್ಯಗುಣ ಅದೇ ರೀತಿ ವ್ಯಕ್ತಿಯ ಸ್ವಭಾವಕ್ಕೆ ಸಂಬಂಧಿಸಿದ ಮೂಲ ಗುಣಗಳನ್ನು ಸ್ವಭಾವ ಗುಣಗಳು ಎನ್ನುವರು. ಉದಾ: ಸ್ನೇಹಮಯಿಯಾಗಿರುವುದು ಅಥವಾ ಮಂಕಾಗಿರುವುದು.

ಚಲನಾತ್ಮಕ ಗುಣಗಳು ವ್ಯಕ್ತಿಯ ಆಸಕ್ತಿ ಮತ್ತು ಪ್ರೇರಣೆಗೆ ಸಂಬಂಧಪಟ್ಟಿವೆ. ಉದಾ:ಮಹತ್ವಾಕಾಂಕ್ಷಿ ಯಾಗಿರುವುದು ಅಥವಾ ವಿನೋದ ಸ್ವಭಾವದವನಾಗಿರುವುದು.

ಕೆಟಲ್ ವ್ಯಕ್ತಿತ್ವದ ಮೂಲಗುಣಗಳನ್ನು ಮಾಪನ ಮಾಡುವ ಪ್ರಶ್ನಾವಳಿಯನ್ನು ರೂಪಿಸಿದ್ದಾನೆ. ಈ ಪ್ರಶ್ನಾವಳಿ 16 ಪ್ರಮುಖ ಮೂಲಗುಣಗಳನ್ನು ಗುರುತಿಸಬಲ್ಲದು. ಕೆಟಲ್ ರಚಿಸಿದ ಪ್ರಶ್ನಾವಳಿ, 16 ಪಿಎಫ್’ (16 ವ್ಯಕ್ತಿತ್ವ ಅಂಶಗಳು) ಎಂದು ಪ್ರಸಿದ್ಧವಾಗಿದೆ.

ಮೇಲೆ ಗುಣಗಳು ಗುಂಪುಗುಂಪಾಗಿರುತ್ತವೆ ಮತ್ತು ವರ್ತನೆಯಲ್ಲಿ ವ್ಯಕ್ತವಾಗುತ್ತವೆ. ಇವುಗಳನ್ನು ಸುಲಭವಾಗಿ ಅವಲೋಕಿಸಬಹುದು (ಆದರೆ ಮೂಲಗುಣಗಳು ವರ್ತನೆಯಲ್ಲಿ ವ್ಯಕ್ತವಾಗುವುದಿಲ್ಲ). ಉದಾ:- ಸ್ನೇಹಮಯಿ, ಮಾತುಗಾರ, ಸಂಘಜೀವಿ ಮುಂತಾದವು.

ವ್ಯಕ್ತಿತ್ವವನ್ನು ಮಾಪನ ಮಾಡಲು ಪ್ರರೂಪ ವಿಧಾನಕ್ಕಿಂತ ಗುಣವಿಧಾನ ಉತ್ತಮವಾದುದೆಂದು ಹಲವು ಮನೋವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಗುಣ ವಿಧಾನ :- ವ್ಯಕ್ತಿತ್ವ ಗುಣಗಳು ವ್ಯಕ್ತಿಯ ವರ್ತನೆಯನ್ನು ನಿರಂತರವಾಗಿ ನಿರ್ಧರಿಸುವ ಅಂಶಗಳು. ಒಬ್ಬ ವ್ಯಕ್ತಿ ಒಂದು ಪ್ರಚೋದನೆಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದು ಆತನ ವ್ಯಕ್ತಿತ್ವ ಗುಣವನ್ನು ತೋರಿಸುತ್ತದೆ. ಒಂದು ಪ್ರಚೋದನೆಗೆ ಬೇರೆ ಬೇರೆ ವ್ಯಕ್ತಿಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಇದಕ್ಕೆ ಕಾರಣ ಪ್ರತಿಯೊಬ್ಬ ವ್ಯಕ್ತಿಯ ಗುಣಗಳು ವಿಶಿಷ್ಟವಾದವು.

ಜಿ.ಆಲೋರ್ಟ್‌ನ ವ್ಯಕ್ತಿತ್ವ ಸಿದ್ಧಾಂತ:

ಗುಣವಿಧಾನವನ್ನು ಪ್ರತಿಪಾದಿಸಿದ ಪ್ರಥಮ ಮನೋವಿಜ್ಞಾನಿ ಎಂದರೆ, ಜಿ.ಆಲೋರ್ಟ್. ಆಲೋರ್ಟನು ವ್ಯಕ್ತಿತ್ವ ಗುಣಗಳಲ್ಲಿ ವಿಶಿಷ್ಟ ಗುಣಗಳು (Individual traits) ಮತ್ತು ಸಾಮಾನ್ಯ ಗುಣಗಳು (Common traits) ಎಂದು ಎರಡು ರೀತಿಯ ಗುಣಗಳಲ್ಲಿ ಗುರ್ತಿಸಿದ್ದಾನೆ. ಒಂದು ರೀತಿಯಲ್ಲಿ ಎಲ್ಲಾ ಗುಣಗಳೂ ವಿಶಿಷ್ಟ ಗುಣಗಳೇ ಆಗಿವೆ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿ ಇತರರಿಗಿಂತ ಭಿನ್ನವಾಗಿರುತ್ತಾನೆ.

ಆದರೂ ಸಹ, ಒಂದು ನಿರ್ದಿಷ್ಟ ಸಂಸ್ಕೃತಿಯ ಜನರು ನಿರಂತರವಾಗಿ ಒಂದೇ ರೀತಿಯ ಸಾಮಾಜಿಕ ಅಂಶಗಳಿಂದ ಪ್ರಭಾವಿತರಾಗಿರುವುದರಿಂದ ಅವರಲ್ಲಿ ಒಂದೇ ರೀತಿಯ ವರ್ತನೆಯನ್ನು ಕಾಣಬಹುದಾಗಿದೆ. ಒಂದೇ ರೀತಿಯ ವರ್ತನೆಗೆ ಕಾರಣವಾದ ವ್ಯಕ್ತಿಯ ಗುಣಗಳನ್ನು ಸಾಮಾನ್ಯ ಗುಣಗಳು ಎನ್ನುವರು.

ಆಲ್ನೋರ್ಟನು ಮತ್ತೆ, ಮೂರು ರೀತಿಯ ವ್ಯಕ್ತಿತ್ವ ಗುಣಗಳನ್ನು ಗುರ್ತಿಸಿದ್ದಾನೆ. ಅವುಗಳೆಂದರೆ ಪ್ರಧಾನಗುಣಗಳು (Cardinal traits), ಗುಣಗಳು (Central traits) 2 ដ (Secondary traits).

1. ಪ್ರಧಾನ ಗುಣಗಳು :- ಒಬ್ಬ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಅತಿ ಪ್ರಬಲವಾದ ಗುಣವನ್ನು ಪ್ರಧಾನ ಗುಣ ಎನ್ನುವರು. ವ್ಯಕ್ತಿಯ ಎಲ್ಲ ರೀತಿಯ ವರ್ತನೆಗಳಿಗೂ ಈ ಪ್ರಧಾನಗುಣವೇ ಆಧಾರವಾಗಿರುತ್ತದೆ. ಇಂತಹ ಪ್ರಧಾನ ಗುಣಗಳನ್ನು ಕೆಲವು ವೇಳೆ ಪ್ರಮುಖ ಐತಿಹಾಸಿಕ ವ್ಯಕ್ತಿಗಳಿಗೆ ಹೋಲಿಸಲಾಗುತ್ತದೆ. ಉದಾ:- ಗಾಂಧೀಜಿ ರೀತಿಯ ವ್ಯಕ್ತಿತ್ವ, ಏಸು ರೀತಿ, ನೆಪೋಲಿಯನ್ ರೀತಿ, ಮೆಕೆವೆಲ್ಲಿ ರೀತಿ, ಮುಂತಾಗಿ. ಇಂತಹ ವ್ಯಕ್ತಿತ್ವ ಗುಣಗಳು ಬಹಳ ಅಪರೂಪ.

2. ಮುಖ್ಯ ಗುಣಗಳು :- ಪ್ರಧಾನ ಗುಣಗಳಿಲ್ಲದ ಬಹುಸಂಖ್ಯೆಯ ಜನರಿಗೆ ಮುಖ್ಯ ಗುಣಗಳೇ ನಿರ್ಣಾಯಕ ಗುಣಗಳಾಗುತ್ತವೆ. ಮುಖ್ಯ ಗುಣಗಳನ್ನು ದರೀಕರಣ ಮಾಪಕಗಳಿಂದ ಮಾಪನಮಾಡಬಹುದು. ಈ ಮುಖ್ಯ ಗುಣಗಳು ವ್ಯಕ್ತಿಯ ವ್ಯಕ್ತಿತ್ವದಲ್ಲಿ ಎದ್ದುಕಾಣುವ ಗುಣಗಳಾಗಿರುತ್ತವೆ. ಉದಾ: ಬುದ್ದಿವಂತ, ಪ್ರಾಮಾಣಿಕ, ಸಂಕೋಚ ಸ್ವಭಾವ ಇತ್ಯಾದಿ ಇವುಗಳನ್ನು ಊಹಿಸುವುದು ಅಥವಾ ಗುರುತಿಸುವುದು ಸುಲಭ.

3.ಉಪ ಗುಣಗಳು :- ಉಪವ್ಯಕ್ತಿತ್ವ ಗುಣಗಳು ಅಷ್ಟೇನೂ ಪ್ರಮುಖ ಗುಣಗಳಲ್ಲ, ತುಂಬ ಸೂಕ್ಷ್ಮವಾಗಿ ಗಮನಿಸದ ಹೊರತು ಅವು ಯಾರ ಗಮನಕ್ಕೂ ಬರುವುದಿಲ್ಲ. ಉದಾ: ಗಾಬರಿಗೊಳ್ಳುವುದು. ತಾಳ್ಮೆ ಇಲ್ಲದಿರುವುದು ಮುಂತಾದವು.

ಸಿಗಂಡ್ ಫ್ರಾಯ್ಡ್ನ ಮನೋವಿಶ್ಲೇಷಣಾ ವಾದ (Psychodynamic Approach):

ಸಿಗ್ನಂಡ್‌ ಫ್ರಾಯ್ಡನ ಮನೋವಿಶ್ಲೇಷಣಾ ವಾದ ತುಂಬಾ ಪ್ರಸಿದ್ಧವಾದ ವಿಧಾನವಾಗಿದೆ. ಈತ ತನ್ನ ಬಳಿ ಚಿಕಿತ್ಸೆಗಾಗಿ ಬರುತ್ತಿದ್ದ ರೋಗಿಗಳನ್ನು ಅಧ್ಯಯನ ಮಾಡಿ ಈ ವಾದವನ್ನು ಮಂಡಿಸಿದನು. ಸಿಟ್ಕಂಡ್ ಫ್ರಾಯ್ಡ್ ಪ್ರಕಾರ ರೋಗಿಗಳನ್ನು ಮುಕ್ತವಾಗಿ ಮಾತನಾಡಲು ಅವಕಾಶ ನೀಡಿದರೆ ಅವರು ತಮ್ಮ ಮನಸ್ಸಿನಲ್ಲಿ ಇರುವುದನ್ನೆಲ್ಲಾ ಮಾತಿನಲ್ಲಿ ಹೊರ ಹಾಕುವುದರಿಂದ ಮಾತನಾಡಿದ ಮೇಲೆ ಮನಸ್ಸಿನ ಭಾರ ಕಡಿಮೆಯಾಗಿ ಆರಾಮ ಎನಿಸುತ್ತಿತ್ತು. ಇದನ್ನು ‘ಮುಕ್ತ ಸಹಚರ್ಯೆ’ (free association) ಎಂದು ಕರೆದನು. ‘ಕನಸುಗಳ ವಿಶ್ಲೇಷಣೆ’ ಮಾಡುವುದರಿಂದ ಮತ್ತು ತಪ್ಪುಗಳನ್ನು ವಿಶ್ಲೇಷಿಸುವುದರಿಂದ ಒಳಮನಸ್ಸಿನ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದನು.

ಸಿಗಂಡ್ ಫ್ರಾಯ್ಡ್ ಪ್ರಕಾರ ಮನಸ್ಸು ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲನೆಯದು ಚೇತನ (Conscious). ಚೇತನವು ಜಾಗೃತಾವಸ್ಥೆಯ ಆಲೋಚನೆಗಳು, ಭಾವನೆಗಳು ಮತ್ತು ಕ್ರಿಯೆಗಳನ್ನು ಒಳಗೊಂಡಿರುತ್ತದೆ. ಎರಡನೆಯ ಮನಸ್ಸಿನ ಭಾಗ ಅರೆಚೇತನ (Preconscious). ಇದು ಮನುಷ್ಯ ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾತ್ರ ಅರಿವಿಗೆ ಬರುವ ಮನಸ್ಸಿನ ಭಾಗವಾಗಿರುತ್ತದೆ. ಮನಸ್ಸಿನ ಮೂರನೇ ಭಾಗವೇ ಸುಪ್ತ ಚೇತನ (unconscious). ಇದು ಮನುಷ್ಯನ ಅರಿವಿಗೆ ನಿಲುಕದ ಮಾನಸಿಕ ಚಟುವಟಿಕೆಗಳನ್ನೊಳಗೊಂಡಿರುತ್ತದೆ.

ಸಿಗಂಡ್ ಫ್ರಾಯ್ಡ್ ಪ್ರಕಾರ ಸುಪ್ತ ಚೇತನದಲ್ಲಿ ಅತೃಪ್ತ ಬಯಕೆಗಳು, ಘರ್ಷಣೆಗಳು, ಆಸೆ-ಆಕಾಂಕ್ಷೆಗಳು, ಹಿಂಸಾತ್ಮಕ ಪ್ರವೃತ್ತಿಗಳು, ಲೈಂಗಿಕ ಬಯಕೆಗಳು ಅಡಗಿರುತ್ತವೆ. ಇವು ವ್ಯಕ್ತಿಯ ಅರಿವಿಗೆ ಬಾರದಂತೆ ಅವನ ವರ್ತನೆಯ ಮೇಲೆ ಪ್ರಭಾವ ಬೀರುತ್ತವೆ. ಈ ಬಯಕೆಗಳನ್ನು ಸಮಾಜ ಸಮ್ಮತ ರೀತಿಯಲ್ಲಿ ಪೂರೈಸಿಕೊಳ್ಳಲು ಹೆಣಗುತ್ತಾನೆ. ಅದು ಸಾಧ್ಯವಾಗದೆ ಅವುಗಳನ್ನು ದಮನ ಮಾಡಿದಾಗ ಆತನ ವರ್ತನೆಯಲ್ಲಿ ಏರುಪೇರು ಉಂಟಾಗುತ್ತದೆ. ಇದನ್ನೇ ಅಪಸಾಮಾನ್ಯ ವರ್ತನೆ ಎನ್ನುವರು. ಮರೆವು, ತಪ್ಪು ಉಚ್ಚಾರಣೆ, ಹಾಸ್ಯ ಚಟಾಕಿಗಳು ಮತ್ತು ಕನಸುಗಳನ್ನು ವಿಶ್ಲೇಷಣೆ ಮಾಡಿದಾಗ ಅವನ ಸುಪ್ತ ಚೇತನದಲ್ಲಿ ಏನಿದೆ ಎಂಬುದು ತಿಳಿಯುತ್ತದೆ ಎಂದು ಸಿಗ್ನಂಡ್ ಫ್ರಾಯ್ಡ್ ಹೇಳಿದ್ದಾನೆ. ಇದನ್ನೇ ಫ್ರಾಯ್ಡ್ ‘ಮನೋವಿಶ್ಲೇಷಣೆ’ (Psychoanalysis) ಎಂದು ಹೇಳಿದ್ದಾನೆ. ಮನೋವಿಶ್ಲೇಷಣಾ ಚಿಕಿತ್ಸೆಯ ಮೂಲ ಉದ್ದೇಶ ಸುಪ್ತ ಚೇತನದಲ್ಲಿ ದಮನ ಮಾಡಲ್ಪಟ್ಟಿರುವ ಬಯಕೆಗಳನ್ನು ಹಾಗೂ ಘರ್ಷಣೆಗಳನ್ನು ಹೊರಗೆಳೆಯುವ ಮೂಲಕ ವ್ಯಕ್ತಿಯ ಸ್ವಯಂ ಅರಿವನ್ನು ಹೆಚ್ಚಿಸುವುದು ಮತ್ತು ಹೆಚ್ಚು ಸಮತೋಲನ ಬದುಕು ಬದುಕುವಂತೆ ಮಾಡುವುದು.

ಸಿಗ್ನಂಡ್ ಫ್ರಾಯ್ಡ್ ಪ್ರಕಾರ ನಮ್ಮ ವ್ಯಕ್ತಿತ್ವ ಮೂರು ರಚನಾಂಗಗಳನ್ನೊಳಗೊಂಡಿದೆ. ಅವುಗಳೆಂದರೆ ಇದ್(id), ಅಹಂ (ego), ಮಹದಹಮ್ (Super ego).

• ಇದ್ (id): ಮನುಷ್ಯ ಸಹಜ ಬಯಕೆಗಳ ಕೇಂದ್ರವಾಗಿದೆ. ಮೂಲ ಅಗತ್ಯಗಳ (Primary needs) ತಕ್ಷಣ ಪೂರೈಕೆಗೆ ಸಂಬಂಧಪಟ್ಟಿದೆ. ಇದು ಖುಷಿ ತತ್ವ (Pleasure Principle) ವನ್ನು ಆಧರಿಸಿದೆ. ಅಂದರೆ ತನ್ನ ಬಯಕೆ ಹೇಗಾದರೂ ಸರಿ ತಕ್ಷಣ ಈಡೇರಬೇಕು ಎಂಬುದಕ್ಕೆ ಸಂಬಂಧಿಸಿದೆ. ಇದ್‌ಗೆ ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳ ಪರಿವೆ ಇರುವುದಿಲ್ಲ ಅಥವಾ ಅದು ಅದಕ್ಕೆ ಬೇಕಾಗಿಲ್ಲ. ಎಳೆಯ ವಯಸ್ಸಿನಲ್ಲಿ ಇದ್ ಕ್ರಿಯಾಶೀಲವಾಗಿರುತ್ತದೆ.

• ಅಹಂ (ego):- ವ್ಯಕ್ತಿ ಬೆಳೆದಂತೆ ನಾನು. ನನ್ನದು, ಎಂಬ ಅಹಂ ಬೆಳೆಯುತ್ತದೆ. ಅಹಂನ ಬೆಳವಣಿಗೆಗೆ ಆಧಾರ ಇದ್. ವಾಸ್ತವದ ಹಿನ್ನಲೆಯಲ್ಲಿ ತನ್ನ ಸಹಜ ಪ್ರವೃತ್ತಿಗಳನ್ನು (ಬಯಕೆಗಳು) ಈಡೇರಿಸಿಕೊಳ್ಳುವುದು ಅಹಂನ ಕೆಲಸ, ಅಹಂ ‘ನೈಜ ತತ್ವ’ (Reality Principle)ದ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಅನೇಕ ವೇಳೆ ಇದ್ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಉದಾಹರಣೆಗೆ : ಒಬ್ಬ ಬಾಲಕ ಐಸ್‌ಕ್ರೀಮ್ ನೋಡಿದಾಗ ‘ಇದ್’, ಐಸ್ಕ್ರೀಮನ್ನು ಕಿತ್ತುಕೊಂಡು ಓಡಿಹೋಗಿ ತಿನ್ನು ಎನ್ನುತ್ತದೆ. ಆಗ ‘ಅಹಂ’ ಕಿತ್ತುಕೊಂಡು ಹೋದರೆ, ಅವರು ಹಿಡಿದು ಶಿಕ್ಷೆ ಕೊಡುತ್ತಾರೆ ಎಂದು ಎಚ್ಚರಿಸುತ್ತದೆ. ಆಗ ಹುಡುಗನಿಗೆ ಕೇಳಿ ಪಡೆದು ತಿನ್ನುವುದೇ ಉತ್ತಮ ಎಂದು ತಿಳಿಯುತ್ತದೆ. ಹೀಗೆ ಇದ್‌ಗೆ ನ್ಯಾಯ-ಅನ್ಯಾಯಗಳ ಗೊಡವೆ ಬೇಕಾಗಿಲ್ಲ. ಆದರೆ ಅಹಂ ವಾಸ್ತವದ ಹಿನ್ನಲೆಯಲ್ಲಿ ತಾಳ್ಮೆಯಿಂದ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

• ಮಹದಹಂ (Super ego):- ಮಹದಹಂ ಅನ್ನು ಮನಸ್ಸಿನ ಕಾರ್ಯನಿರ್ವಹಣೆಯ ನೈತಿಕ ಭಾಗ ಎನ್ನುವರು. ಮಹದಹಂ ಯಾವುದೇ ಬಯಕೆಯ ಪೂರೈಕೆ ನೈತಿಕ ಹಿನ್ನಲೆಯಲ್ಲಿ ಸರಿಯೇ ಅಥವಾ ತಪ್ಪೇ ಎಂಬ ಅರಿವನ್ನುಂಟು ಮಾಡುತ್ತದೆ. ಸಾಮಾಜೀಕರಣ ಪ್ರಕ್ರಿಯೆಯ ಮೂಲಕ ಇದ್‌ನ್ನು ನಿಯಂತ್ರಿಸುವ ಕಾರ್ಯವನ್ನು ಮಹದಹಂ ಮಾಡುತ್ತದೆ. ಉದಾಹರಣೆಗೆ: ಒಬ್ಬ ಬಾಲಕನಿಗೆ ಐಸ್‌ಕ್ರೀಮ್ ಕದಿಯುವುದು ತಪ್ಪು ಆದರೆ ಹಣಕೊಟ್ಟು ಕೊಂಡು ತಿನ್ನುವುದು ತಪ್ಪಲ್ಲ, ಎಂಬ ಅರಿವು ಮಹದಹಂನಿಂದ ಬರುತ್ತದೆ.

ಮನಸ್ಸಿನ ಇದ್, ಅಹಂ ಮತ್ತು ಮಹದಹಂ ಎಂಬ ಮೂರು ರಚನಾಂಗಗಳ ನಡುವೆ ಸಮನ್ವಯತೆ ಇದ್ದಾಗ ವ್ಯಕ್ತಿಯ ವರ್ತನೆ ಸಮತೋಲನ ಉಳ್ಳದ್ದಾಗಿರುತ್ತದೆ. ಒಂದು ವೇಳೆ ಈ ಮೂರರಲ್ಲಿ ಯಾವುದು ಪ್ರಬಲವಾದರೂ ವ್ಯಕ್ತಿತ್ವದಲ್ಲಿ ಏರುಪೇರು ಉಂಟಾಗುತ್ತದೆ ಎಂದು ಫ್ರಾಯ್ಡ್ ಅಭಿಪ್ರಾಯ ಪಟ್ಟಿದ್ದಾನೆ.

ಫ್ರಾಯ್ಡ್ ಪ್ರಕಾರ ಇದ್ ಎರಡು ಪ್ರವೃತ್ತಿಗಳಿಂದ ಪ್ರೇರಿತವಾಗಿರುತ್ತದೆ. ಅವುಗಳೆಂದರೆ ‘ಉಳಿವು ಅಳಿವಿನ ಪ್ರವೃತ್ತಿ’ (Life instinct and death instinct). ಅವುಗಳಲ್ಲಿ ಫ್ರಾಯ್ಡ್ ಉಳಿವಿನ ಪ್ರವೃತ್ತಿಗೆ ಹೆಚ್ಚು ಗಮನ ನೀಡುತ್ತಾನೆ. ಫ್ರಾಯ್ಡ್ ಪ್ರಕಾರ ಇದ್ ಕಾಮವಾಂಛ (Libido)ಯಿಂದ ಪ್ರಭಾವಿತವಾಗಿರುತ್ತದೆ. ಹೇಗಾದರೂ ಸರಿ ತನ್ನ ಲೈಂಗಿಕ ಬಯಕೆಗಳನ್ನು ಈಡೇರಿಸಿಕೊಳ್ಳಬೇಕೆಂಬುದೇ ಇದ್‌ನ ತತ್ವ, ಕಾಮವಾಂಛ ಒಂದು ಪ್ರಬಲ ಲೈಂಗಿಕ ಬಯಕೆ. ಇದರ ತೃಪ್ತಿಯೇ ಇದ್‌ನ ಧೈಯ.

Leave a Comment