Prosocial behavior: ಸಾಮಾಜಿಕ ಕಳಕಳಿ ವರ್ತನೆ (Prosocial behavior):

Prosocial behavior: ಸಾಮಾಜಿಕ ಕಳಕಳಿ ವರ್ತನೆ (Prosocial behavior):

Prosocial behavior

Prosocial behavior:ಸಾಮಾಜಿಕ ಕಳಕಳಿ ವರ್ತನೆಯಿಂದ ವ್ಯಕ್ತಿಗೆ ಯಾವ ಅನುಕೂಲವೂ ಆಗುವುದಿಲ್ಲ. ಆದರೆ ಸಮಾಜಕ್ಕೆ ಸಾಕಷ್ಟು ಅನುಕೂಲವಾಗುತ್ತದೆ. ಸಾಮಾಜಿಕ ಕಳಕಳಿ ವರ್ತನೆಯಿಂದ ವ್ಯಕ್ತಿಗೆ ಕೆಲವು ವೇಳೆ ಅಪಾಯ ಒದಗಬಹುದು. ಉದಾಹರಣೆಗೆ : ದೊಂಬಿ ಗಲಾಟೆಯಲ್ಲಿ ಜನರಿಗೆ ಸಹಾಯ ಮಾಡಲು ಧಾವಿಸುವ ವ್ಯಕ್ತಿ ಕೆಲವು ವೇಳೆ ತಾನೇ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಅದೇ ರೀತಿ ಇಬ್ಬರ ಜಗಳ ಬಿಡಿಸಲು ಹೋದ ವ್ಯಕ್ತಿ ತಾನೇ ಅಪಾಯಕ್ಕೆ ಸಿಕ್ಕಿಹಾಕಿಕೊಂಡ ಅನೇಕ ನಿದರ್ಶನಗಳನ್ನು ನಾವೆಲ್ಲಾ ಕೇಳಿದ್ದೇವೆ ಹಾಗೂ ನೋಡಿದ್ದೇವೆ.

ಸಾಮಾಜಿಕ ಕಳಕಳಿ ವರ್ತನೆ ಕುರಿತು ಅನೇಕ ಅಧ್ಯಯನಗಳು 1960 ರ ದಶಕದಲ್ಲಿ ನಡೆದವು. ಈ ಅಧ್ಯಯನಗಳು ಹೆಚ್ಚಾಗಿ ಸಾಮಾಜಿಕ ಕಳಕಳಿ ವರ್ತನೆಯ ಮೇಲೆ ಪ್ರಭಾವ ಬೀರುವ ಬಾಹ್ಯ ಅಂಶಗಳನ್ನು ಕುರಿತು ಅಧ್ಯಯನ ನಡೆಸಿ ತಾತ್ವಿಕ ವಿವರಣೆ ನೀಡಿವೆ.

ಸಾಮಾಜಿಕ ಕಳಕಳಿ ವರ್ತನೆಯ ಕೆಲವು ಉದಾಹರಣೆಗಳು :

1. ಅಮೆರಿಕಾದ ನ್ಯೂಯಾರ್ಕ್ ನಗರ ಹೆದ್ದಾರಿಯಲ್ಲಿ 60 ವರ್ಷ ವಯಸ್ಸಿನ ವ್ಯಕ್ತಿ ಟ್ರಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಆತನಿಗೆ ಹೃದಯಾಘಾತವಾಯಿತು. ಅದೇ ದಾರಿಯಲ್ಲಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಟ್ರಕ್ ಚಾಲಕನ ನೆರೆವಿಗೆ ಧಾವಿಸಿ ಬಂದು ಪ್ರಥಮ ಚಿಕಿತ್ಸೆ ನೀಡಿದರು ಹಾಗೂ ಅಂಬ್ಯೂಲನ್ಸ್‌ಗೆ ಕರೆ ಮಾಡಿದರು. ನಂತರ ಅಂಬ್ಯೂಲನ್ಸ್ ಮೂಲಕ ಆಸ್ಪತ್ರೆ ತಲುಪಿದ ವ್ಯಕ್ತಿ ಬದುಕುಳಿದ.

2. ಎರಡು ವರ್ಷಗಳ ಹಿಂದೆ ಮಂತ್ರಾಲಯದ ಸಮೀಪ ನದಿಯಲ್ಲಿ ದಿಢೀರ್ ಪ್ರವಾಹ ಬಂದು ಮಂತ್ರಾಲಯ ನೀರಿನಲ್ಲಿ ಮುಳುಗಿತು. ಅನೇಕ ಪ್ರವಾಸಿಗರು ಪ್ರವಾಹದಲ್ಲಿ ಸತ್ತರು. ಮಂತ್ರಾಲಯದ ಗುರುಗಳನ್ನು ರಕ್ಷಿಸಲು ಹೆಲಿಕಾಪ್ಟರ್‌ನಲ್ಲಿ ಕರ್ನಾಟಕ ಸರ್ಕಾರದ ಸಚಿವೆಯೊಬ್ಬರು ಹೋಗುತ್ತಿದ್ದರು. ರಸ್ತೆ ಮಧ್ಯೆಯಲ್ಲಿ ಪ್ರವಾಹದಲ್ಲಿ ಬನ್ನೊಂದರಲ್ಲಿದ್ದ ಪ್ರಯಾಣಿಕರು ಮುಳುಗುವ ಭೀತಿಯಲ್ಲಿ ಹೆಲಿಕಾಪ್ಟರ್ ಕಡೆ ಸಹಾಯ ಮಾಡುವಂತೆ ಕೈಬೀಸುತ್ತಿದ್ದರು. ಇದನ್ನು ಗಮನಿಸಿದ ಸಚಿವೆ ಮೊದಲು ಬಸ್ಸಿನಲ್ಲಿದ್ದ ಜನರನ್ನು ರಕ್ಷಿಸುವಂತೆ ಹೆಲಿಕಾಪ್ಟರ್‌ನಲ್ಲಿದ್ದ ರಕ್ಷಣಾ ಸಿಬ್ಬಂದಿಗೆ ಸೂಚಿಸಿದರು. ಅದರಂತೆ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಯಿತು. ನಂತರ ಮಂತ್ರಾಲಯದ ಗುರುಗಳನ್ನು ರಕ್ಷಿಸಲಾಯಿತು. ಸಚಿವೆಯ ಸಮಯ ಪ್ರಜ್ಞೆ ಹಾಗೂ ಸಾಮಾಜಿಕ ಕಳಕಳಿ ಇದರಲ್ಲಿ ಬಿಂಬಿತವಾಯಿತು.

3. 1964, ಮಾರ್ಚ್ 13, ಮುಂಜಾನೆ. ನ್ಯೂಯಾರ್ಕ್ ನಗರದ ಕಿಟ್ಟಿ ತನ್ನ ಕೆಲಸದಿಂದ ಮನೆಗೆ ವಾಪಸಾಗುತ್ತಿದ್ದಳು. ಇನ್ನೇನು ಆಕೆ ತನ್ನ ಮನೆಯೊಳಗೆ ಪ್ರವೇಶಿಸಬೇಕು ಎನ್ನುವಾಗ ವ್ಯಕ್ತಿಯೊಬ್ಬ ಚಾಕು ಹಿಡಿದು ಅಟ್ಟಿಸಿಕೊಂಡು ಬಂದ, ಆಕೆ ಓಡಿದಳು. ಆತ ಇನ್ನೂ ಜೋರಾಗಿ ಓಡಿ ಆಕೆಗೆ ಮನಬಂದಂತೆ ಚಾಕುವಿನಿಂದ ಇರಿದನು. ಆಕೆ ಸಹಾಯಕ್ಕಾಗಿ ಕೂಗಿಕೊಂಡಳು. ಎಲ್ಲ ಮನೆಗಳಲ್ಲಿ ದೀಪಗಳು ಬೆಳಗಿದವು. ಆದರೆ ಯಾರೂ ಹೊರಬರಲಿಲ್ಲ. ಆಕೆ ನಿರ್ಜೀವವಾಗುವರೆಗೂ ಆತ ಇರಿಯುತ್ತಲೇ ಇದ್ದ. ನಂತರ ವಿಚಾರಣೆಯಿಂದ ತಿಳಿಯಿತು. ಏನೆಂದರೆ ಆತ ಚಾಕುವಿನಿಂದ ಇರಿಯುತ್ತಿದ್ದುದನ್ನು 38 ಜನರು ನೋಡಿದ್ದರು. ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ಜನರ ಈ ರೀತಿಯ ಹೇಡಿತನಕ್ಕೆ ಕಾರಣ ಏನು?

‘ಡಾರ್ಲಿ ಮತ್ತು ಲಾಟಾನ್ಸ್’ (Darley and Latance) ವಾದದ ಪ್ರಕಾರ ಸಹಾಯಕ್ಕಾಗಿ ವ್ಯಕ್ತಿಯೊಬ್ಬ ಕೂಗಿಕೊಳ್ಳುತ್ತಿರುವಾಗ ನೋಡುಗರ ಜವಾಬ್ದಾರಿ ಸ್ಪಷ್ಟ. ಏನೆಂದರೆ ಆ ವ್ಯಕ್ತಿಯ ನೆರವಿಗೆ ಧಾವಿಸುವುದು. ಆದರೆ ನೋಡುಗರು ಅಧಿಕ ಸಂಖ್ಯೆಯಲ್ಲಿದ್ದಾಗ ಯಾರಾದರೊಬ್ಬರು ಸಹಾಯ ಮಾಡಬಹುದು ಎಂದು ಪ್ರತಿಯೊಬ್ಬರೂ ಯೋಚಿಸುವುದರಿಂದ ಯಾರೂ ಸಹಾಯಕ್ಕೆ ಬರುವುದಿಲ್ಲ. ಕಿಟ್ಟಿಯ ವಿಷಯದಲ್ಲಿ ಆಗಿದ್ದು ಕೂಡ ಇದೇ. ಒಟ್ಟು 38 ಮಂದಿ ನೋಡಿದರು ಅವರಲ್ಲಿ ಯಾರೊಬ್ಬರೂ ಸಹಾಯಕ್ಕೆ ಧಾವಿಸುವ ಸಾಧ್ಯತೆ 1/38 ಮಾತ್ರ. ಅಂದರೆ ನೋಡುಗರ ಸಂಖ್ಯೆ ಹೆಚ್ಚಿದಷ್ಟು ಸಹಾಯ ಮಾಡುವವರ ಸಂಖ್ಯೆ ತುಂಬಾ ಕಡಿಮೆ. ಇದನ್ನು ‘ಜವಾಬ್ದಾರಿಯ ವಿಸರಣೆ’ (diffusion of responsibility), ಎಂದು ಕರೆಯುವರು.

ಬೆಂಗಳೂರಿನಂತಹ ನಗರಗಳಲ್ಲಿ ಆಗಾಗ ಅಪಘಾತಗಳಾಗಿ ಸಹಾಯಕ್ಕಾಗಿ ಜನ ಕೂಗಿಕೊಳ್ಳುವಾಗ ಎಲ್ಲರೂ ನೋಡುತ್ತಾ ಓಡಾಡುತ್ತಾರೆ ಆದರೆ, ಯಾರೂ ಸಹಾಯಕ್ಕೆ ಧಾವಿಸುವುದಿಲ್ಲ. ಮೇಲೆ ತಿಳಿಸಿದ ತತ್ವವೇ ಇಲ್ಲೂ ಕೂಡ ಕಾರ್ಯನಿರ್ವಹಿಸುತ್ತದೆ ಎಂದು ಹೇಳಬಹುದು.

ಸಾಮಾಜಿಕ ಕಳಕಳಿ ವರ್ತನೆಯ ಮೇಲೆ ಪ್ರಭಾವ ಬೀರುವ ಅಂಶಗಳು:

(Factors influencing Pro social behavior):

1. ಸಾಮಾಜಿಕ ಕಳಕಳಿ ಹುಟ್ಟಿನಿಂದಲೇ ಬಂದ ಒಂದು ಸಹಜ ಪ್ರವೃತ್ತಿ. ಮನುಷ್ಯ ತನ್ನ ಪ್ರಭೇದ (Species) ದವರ ರಕ್ಷಣೆಗೆ ಧಾವಿಸುತ್ತಾನೆ. ಈ ಪರೋಪಕಾರಿ ಬುದ್ದಿ (Altruism) ಇರುವುದರಿಂದ ಮಾನವ ಪ್ರಭೇದ ಬದುಕುಳಿದಿದೆ.

2. ಸಾಮಾಜಿಕ ಕಳಕಳಿ ಕಲಿಕೆಯಿಂದ ಪ್ರಭಾವಿತವಾಗುತ್ತದೆ. ಕುಟುಂಬದ ಹಿರಿಯರಲ್ಲಿ ಸಾಮಾಜಿಕ ಕಳಕಳಿ ಇದ್ದರೆ ಅವರ ಜೊತೆ ಬೆಳೆದ ಮಕ್ಕಳು ಅದನ್ನು ನೋಡಿ ತಾವೂ ಕೂಡ ಸಾಮಾಜಿಕ ಕಳಕಳಿ ವರ್ತನೆ ತೋರುವರು. ಸಾಮಾಜಿಕ ಕಳಕಳಿ ಇಲ್ಲದ ಕುಟುಂಬದ ವಾತಾವರಣದಲ್ಲಿ ಬೆಳೆದ ಮಕ್ಕಳಲ್ಲಿ ಸಹಜವಾಗಿಯೇ ಸಾಮಾಜಿಕ ಕಳಕಳಿ ವರ್ತನೆ ಕಂಡುಬರುವ ಸಾಧ್ಯತೆ ತುಂಬಾ ಕಡಿಮೆ.

3. ನಮ್ಮ ಸಾಂಸ್ಕೃತಿಕ ಅಂಶಗಳು ಸಾಮಾಜಿಕ ಕಳಕಳಿ ವರ್ತನೆ ಮೇಲೆ ಪ್ರಭಾವ ಬೀರುತ್ತವೆ. ಕೆಲವು ಸಮಾಜ ಸಂಸ್ಕೃತಿಗಳಲ್ಲಿ ಇತರರಿಗೆ ಸಹಾಯ ಹಸ್ತ ಚಾಚುವುದನ್ನು ಪ್ರೋತ್ಸಾಹಿಸಲಾಗುವುದು. ಸ್ವಾವಲಂಬಿತನವನ್ನು ಪ್ರೋತ್ಸಾಹಿಸುವ ಸಮಾಜಗಳಲ್ಲಿ ಸಾಮಾಜಿಕ ಕಳಕಳಿ ವರ್ತನೆ ಕಡಿಮೆ. ಇತರರ ಮೇಲೆ ಅವಲಂಬಿತರಾಗದಿರುವುದನ್ನು ಕಲಿಯುವರು.

4. ಕೆಲವು ಸನ್ನಿವೇಶಗಳು ಸಾಮಾಜಿಕ ಕಳಕಳಿ ವರ್ತನೆಯನ್ನು ತೋರಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತವೆ. ಆ ಸನ್ನಿವೇಶಗಳೆಂದರೆ :

ಅ) ಸಾಮಾಜಿಕ ಜವಾಬ್ದಾರಿ :- ಸಹಾಯದ ಅನಿವಾರ್ಯತೆ ಇರುವವರಿಗೆ ಸಹಾಯ ಮಾಡಬೇಕಾದುದು ನಮ್ಮ ಧರ್ಮ ಎಂಬ ನಂಬಿಕೆಯ ಪರಿಣಾಮವಾಗಿ ಸಹಾಯ ಹಸ್ತ ಚಾಚುತ್ತೇವೆ.

ಆ) ಪರಸ್ಪರ ಸಹಾಯ ಮಾಡುವುದು :- ನಮಗೆ ಕಷ್ಟದಲ್ಲಿ ಸಹಾಯ ಮಾಡಿದವರಿಗೆ ನಾವು ಸಹಾಯ ಮಾಡಲು ಮುಂದಾಗುವುದು.

ಇ) ಸಹಾಯ ಮಾಡುವುದು ಸರಿ ಎನಿಸಿದಾಗ ನಾವು ಸಹಾಯ ಮಾಡುತ್ತೇವೆ.

ಉದಾಹರಣೆಗೆ : ಜೂಜಿನಲ್ಲಿ ಎಲ್ಲ ಕಳೆದುಕೊಂಡವನಿಗೆ ಸಹಾಯ ಮಾಡುವುದಕ್ಕಿಂತ ಪ್ರವಾಹದಲ್ಲಿ ಎಲ್ಲ ಕಳೆದುಕೊಂಡವನಿಗೆ ಸಹಾಯ ಮಾಡುವುದು ಒಳ್ಳೆಯದು ಎಂದು ಸಹಾಯ ಮಾಡುತ್ತೇವೆ.

ಸಹಾನುಭೂತಿ (empathy) : ಇತರರ ಕಷ್ಟ ಸುಖಗಳು ತನ್ನ ಕಷ್ಟ ಸುಖಗಳೆಂದೇ ಭಾವಿಸಿ ಅವರ ಜೊತೆ ಸ್ಪಂದಿಸುವುದಕ್ಕೆ ಸಹಾನುಭೂತಿ ಅಥವಾ ತದನುಭೂತಿ ಎನ್ನುವರು.

ಅತಿಯಾದ ಸಹಾನುಭೂತಿ (empathy) ಗುಣ ಇರುವವರಲ್ಲಿ ಸಾಮಾಜಿಕ ಕಳಕಳಿ ಹೆಚ್ಚು. ಸಂಕಷ್ಟದಲ್ಲಿರುವ

ವ್ಯಕ್ತಿಯನ್ನು ನೋಡಿ ಆತನ ನೋವುಗಳಿಗೆ ಪ್ರತಿಸ್ಪಂದಿಸುವ ಗುಣ ಸಹಾನುಭೂತಿ ಇರುವವರಿಗೆ ಹೆಚ್ಚಾಗಿರುತ್ತದೆ. ಉದಾಹರಣೆಗೆ : ಮದರ್ ತೆರೇಸ, ಬಾಬಾ ಆಮೈ, ಮಹಾತ್ಮ ಗಾಂಧಿ, ಮುಂತಾದ ಮಹನೀಯರು ಯಾವಾಗಲೂ ಇತರರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದ್ದರು. ಇತರರಿಗಾಗಿಯೇ ಚಿಂತಿಸುತ್ತಿದ್ದರು. ಇಂತಹ ಮಹನೀಯರನ್ನು ನೋಡಿ ಅನೇಕ ಮಂದಿಯಲ್ಲಿ ಸಾಮಾಜಿಕ ಕಳಕಳಿ ಗುಣ ಹುಟ್ಟಿತೆಂದರೆ ತಪ್ಪಾಗಲಾರದು.

ಕೆಲವರು ಮಾತಿನಲ್ಲಿ ಅತಿಯಾದ ಸಾಮಾಜಿಕ ಕಳಕಳಿ ವ್ಯಕ್ತಪಡಿಸುತ್ತಾರೆ. ಆದರೆ ಕೃತಿಯಲ್ಲಿ ಆಚರಣೆಗೆ ತರುವುದಿಲ್ಲ. ಅವರು ಹೇಳುವುದು ಒಂದಾದರೆ ಮಾಡುವುದು ಮತ್ತೊಂದು. ಮಕ್ಕಳು ಇಂತಹವರು ಹೇಳುವುದನ್ನು ಕೇಳಿ ಆ ರೀತಿ ವರ್ತಿಸುತ್ತಾರೆ ಮತ್ತು ಅವರು ಕೃತಿಯಲ್ಲಿ ವ್ಯಕ್ತಪಡಿಸುವುದನ್ನು ನೋಡಿ ತಾವೂ ಕೂಡ ಅದೇ ರೀತಿ ಮಾಡುತ್ತಾರೆ. ಸಾಮಾಜಿಕ ಕಳಕಳಿ ನಮ್ಮ ಮನಃಸ್ಥಿತಿಯನ್ನು ಅವಲಂಬಿಸಿರುತ್ತದೆ. ಕೆಟ್ಟ ಮನಃಸ್ಥಿತಿ ಇರುವಾಗ, ಪುರಸೊತ್ತಿಲ್ಲದೆ ತಮ್ಮದೇ ಸಮಸ್ಯೆಯಲ್ಲಿ ಮುಳುಗಿರುವಾಗ ಮತ್ತು ಸಾಮಾಜಿಕ ಕಳಕಳಿ ತೋರಲು ಜನ ಅರ್ಹರಲ್ಲ ಎನಿಸಿದಾಗ ನಮ್ಮಲ್ಲಿ ಸಾಮಾಜಿಕ ಕಳಕಳಿ ಕಡಿಮೆಯಾಗುತ್ತದೆ.

ಅಧ್ಯಯನಗಳ ಪ್ರಕಾರ ಕೆಲವು ಜನರು ನಿರಂತರವಾಗಿ ಹೆಚ್ಚು ಸಾಮಾಜಿಕ ಕಳಕಳಿಯನ್ನು ತೋರುತ್ತಾರೆ. ‘ಪರೋಪಕಾರಂ ಇದಂ ಶರೀರಂ’ ಎಂಬ ಧಾರ್ಮಿಕ ನಂಬಿಕೆಗಳನ್ನು ಆಳವಾಗಿ ಬೆಳೆಸಿಕೊಂಡಿರುವ ಜನರು ನಿರಂತರವಾಗಿ ಸಾಮಾಜಿಕ ಕಳಕಳಿ ವರ್ತನೆ ತೋರುತ್ತಾರೆ. ಇದಕ್ಕೆ ಪುರಾವೆ ಎಂದರೆ ಅನಾಥಾಲಯ, ಬಡಬಗ್ಗರಿಗೆ ಉಚಿತ ಊಟ ನೀಡುವುದು, ಧಾರ್ಮಿಕ ದತ್ತಿ ನೀಡುವುದು ಮುಂತಾದವು. ಸುದ್ದಿಮಾದ್ಯಮಗಳಾದ ಪತ್ರಿಕೆಗಳು, ರೇಡಿಯೋ, ದೂರದರ್ಶನದಲ್ಲಿ ಬಿತ್ತರವಾಗುವ ಕೆಲವು ಕಾರ್ಯಕ್ರಮಗಳೂ ಸಹ ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಗುಂಪು ಪ್ರಕ್ರಿಯೆಗಳು (Group Processes):

ನಾವೆಲ್ಲರೂ ಹುಟ್ಟಿನಿಂದಲೇ ಸಾಮಾಜಿಕ ಜೀವಿಗಳು. ಜೀವನದುದ್ದಕ್ಕೂ ನಮ್ಮಂತಹ ಇತರ ಜನರ ಜೊತೆ ಕೂಡಿ, ಬಾಳಿ ಬದುಕುತ್ತೇವೆ. ಮೊದಲು ಮನೆ ನಂತರ ನೆರೆಹೊರೆ, ಶಾಲೆ, ಗೆಳೆಯರು ಹೀಗೆ ನಾವು ಬೆಳೆದಂತೆ ನಮ್ಮ ಸಾಮಾಜಿಕ ಪರಿಸರ ವಿಸ್ತಾರವಾಗುತ್ತಾ ಹೋಗುತ್ತದೆ. ಸಾಮಾಜಿಕ ಪರಿಸರದಲ್ಲಿ ನಮ್ಮ ವರ್ತನೆ ಮೊದಲು ಮನೆಯವರ ಜೊತೆ ನಂತರ ಶಾಲೆಯಲ್ಲಿ ಗೆಳೆಯರ ಜೊತೆ ಅನೇಕ ವಿಚಾರಗಳ ವಿನಿಮಯ ಮಾಡಿಕೊಳ್ಳುತ್ತೇವೆ. ಪಾಠಗಳ ಬಗ್ಗೆ ಚರ್ಚಿಸುತ್ತೇವೆ. ಆಟ ಆಡುತ್ತೇವೆ. ಶಿಕ್ಷಕರ ಜೊತೆ ವಿವಿಧ ವಿಷಯಗಳ ಬಗ್ಗೆ ಸಂವಾದ ನಡೆಸುತ್ತೇವೆ. ಹೀಗೆ ನಿರಂತರವಾಗಿ ವಿವಿಧ ಸನ್ನಿವೇಶಗಳಲ್ಲಿ ವಿವಿಧ ಗುಂಪುಗಳ ಜೊತೆ ವರ್ತಿಸುತ್ತೇವೆ. ಚಿರಪರಿಚಿತವಾದ ಪರಿಸರದಿಂದ ಎಂದಾದರೂ ದೂರ ಸರಿದಾಗ ನಮಗೆ ಒಂಟಿತನ ಕಾಡುತ್ತದೆ. ನಮ್ಮ ಜೊತೆ ಸಂವಾದಿಸುವವರು ಇಲ್ಲದೆ ಪರಿತಪಿಸುತ್ತೇವೆ. ಹೀಗೆ ಅಪರಿಚಿತ ಸ್ಥಳದಲ್ಲಿ ಒಂಟಿತನ ಕಾಡುತ್ತದೆ.

ನಮ್ಮ ಬದುಕು ನಾವು ಬೆರೆಯುವ ಗುಂಪುಗಳಿಂದ ಪ್ರಭಾವಿತವಾಗುತ್ತದೆ. ನಾವು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಾದರೆ ಉತ್ತಮ ಜನರ ಗುಂಪುಗಳ ಜೊತೆ ಬೆರೆಯಬೇಕು. ಈ ಅಧ್ಯಾಯದಲ್ಲಿ ಗುಂಪುಗಳೆಂದರೇನು? ಅವು ಹೇಗೆ ನಮ್ಮ ವರ್ತನೆಯ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಒಂದು ಅಂಶವನ್ನು ನೆನಪಿಟ್ಟುಕೊಳ್ಳಬೇಕು. ಏನೆಂದರೆ ಗುಂಪುಗಳು ಹೇಗೆ ನಮ್ಮ ಮೇಲೆ ಪ್ರಭಾವ ಬೀರುತ್ತವೆಯೋ ಅದೇ ರೀತಿ ನಾವೂ ಕೂಡ ಗುಂಪುಗಳ ಮೇಲೆ ಪ್ರಭಾವ ಬೀರುತ್ತೇವೆ. ಸಮಾಜದಲ್ಲಿ ಸಹಕಾರ ಮತ್ತು ಸ್ಪರ್ಧೆಗಳು ಹೇಗೆ ನಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಕೌಶಲಗಳ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಅಧ್ಯಯನ ಮಾಡುತ್ತೇವೆ. ಜೊತೆಗೆ ಹೇಗೆ ನಮ್ಮನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಹಾಗೂ ನಮ್ಮ ಸ್ವಂತಿಕೆ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತೇವೆ. ಅದೇ ರೀತಿ ಗುಂಪು ಘರ್ಷಣೆಗೆ ಕಾರಣಗಳೇನು ಮತ್ತು ಗುಂಪು ಘರ್ಷಣೆಗಳನ್ನು ತಡೆಗಟ್ಟುವುದು ಹೇಗೆ ಮತ್ತು ಉತ್ತಮ ಸಮಾಜದ ಬದುಕನ್ನು ರೂಪಿಸುವಲ್ಲಿ ನಾವು ಯಾವ ರೀತಿ ಕೊಡುಗೆ ನೀಡಬಹುದು ಎಂಬುದನ್ನು ಈ ಅಧ್ಯಾಯದಲ್ಲಿ ತಿಳಿದುಕೊಳ್ಳುತ್ತೇವೆ.

ಗುಂಪುಗಳ ಸ್ವರೂಪ ಹಾಗೂ ರೂಪುಗೊಳ್ಳುವಿಕೆ (Nature and formation of groups):

ಗುಂಪು ಎಂದರೇನು?

ಪೀಠಿಕೆಯಲ್ಲಿ ಗುಂಪು ರಚನೆಯ ಪ್ರಾಮುಖ್ಯತೆಯನ್ನು ತಿಳಿದುಕೊಂಡೆವು. ಗುಂಪುಗಳಲ್ಲಿ ಎರಡು ರೀತಿಯ ಗುಂಪುಗಳನ್ನು ಕಾಣುತ್ತೇವೆ. ಅವುಗಳೆಂದರೆ, ‘ರಚನಾತ್ಮಕ’ ಹಾಗೂ ‘ರಚನಾ ರಹಿತ’ ಗುಂಪುಗಳು. ರಚನಾತ್ಮಕ ಗುಂಪುಗಳಲ್ಲಿ ಗುಂಪಿನ ಪ್ರತಿಯೊಬ್ಬ ಸದಸ್ಯನ ಪಾತ್ರ ಏನು ಎಂಬುದು ಸ್ಪಷ್ಟವಾಗಿ ನಿರೂಪಿತವಾಗಿರುತ್ತದೆ. ಉದಾಹರಣೆಗೆ: ಕುಟುಂಬ, ಶಾಲೆ, ಸಂಘ-ಸಂಸ್ಥೆಗಳು, ಇತ್ಯಾದಿ. ಆದರೆ ರಚನಾರಹಿತ ಗುಂಪುಗಳಲ್ಲಿ ಸದಸ್ಯರ ಪಾತ್ರಗಳೇನು ಎಂಬುದು ಸ್ಪಷ್ಟವಾಗಿರುವುದಿಲ್ಲ. ಉದಾಹರಣೆಗೆ: ಕ್ರಿಕೆಟ್ ಆಟ ನೋಡಲು ಬಂದ ಗುಂಪು. ಇಲ್ಲಿ ಗುಂಪಿನ ಸದಸ್ಯರು ಪರಸ್ಪರ ಅವಲಂಬಿತರಾಗಿರುವುದಿಲ್ಲ. ಆದರೆ ರಚನಾತ್ಮಕ ಗುಂಪುಗಳಲ್ಲಿ ಗುಂಪಿನ ಸದಸ್ಯರು ಪರಸ್ಪರ ಅವಲಂಬಿತರಾಗಿರುತ್ತಾರೆ. ಮತ್ತು ಗುಂಪಿನಲ್ಲಿ ಅವರಿಗೊಂದು ನಿರ್ದಿಷ್ಟ ಸ್ಥಾನವಿರುತ್ತದೆ. ಉದಾಹರಣೆಗೆ : ಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯನೂ ನಿರ್ಧಿಷ್ಟ ಪಾತ್ರವನ್ನು ನಿರ್ವಹಿಸುತ್ತಾನೆ ಮತ್ತು ಅವರು ಪರಸ್ಪರ ಅವಲಂಬಿತರಾಗಿರುತ್ತಾರೆ.

“ಗುಂಪು ಎಂದರೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಜನರಿರುವ ವ್ಯವಸ್ಥಿತವಾದ ಪರಸ್ಪರ ಅವಲಂಬಿತರಾದ ಹಾಗೂ ಮೌಲ್ಯಗಳ ಚೌಕಟ್ಟಿನಲ್ಲಿ ನಿರ್ದಿಷ್ಟ ಪಾತ್ರವನ್ನು ನಿರ್ವಹಿಸುವ ಜನರ ಸಮೂಹ” ಎಂದು ನಿರೂಪಿಸಬಹುದು.

ಗುಂಪಿನ ಲಕ್ಷಣಗಳು :

ಗುಂಪು ಸಮಾಜದ ಭಾಗವಾಗಿದ್ದು ಎರಡು ಅಥವಾ ಎರಡಕ್ಕಿಂತ ಹೆಚ್ಚು ಜನರನ್ನು ಒಳಗೊಂಡಿದೆ. ಗುಂಪಿನ ಸದಸ್ಯರು ಪರಸ್ಪರ ಅವಲಂಬಿತರಾಗಿರುತ್ತಾರೆ.

ಗುಂಪಿನ ಸದಸ್ಯರಿಗೆ ಒಂದು ಸಾಮಾನ್ಯವಾದ ಗುರಿ ಹಾಗೂ ಪ್ರೇರಣೆ ಇರುತ್ತದೆ. ಗುಂಪಿನ ಗುರಿಸಾಧನೆಗಾಗಿ ಒಗ್ಗೂಡಿ ಕೆಲಸ ಮಾಡುತ್ತಾರೆ.

ಗುಂಪಿನ ಸದಸ್ಯರು ಪರಸ್ಪರ ಅವಲಂಬಿತರಾಗಿರುವುದರಿಂದ ಒಬ್ಬರು ಏನೇ ಮಾಡಿದರೂ ಅದು ಗುಂಪಿನ ಇತರ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ : ಹಾಕಿ ಆಟದಲ್ಲಿ ಕಳಪೆ ಗೋಲ್‌ಕೀಪಿಂಗ್‌ನಿಂದ ಆಟದ ಫಲಿತಾಂಶವೇ ಬದಲಾಗುತ್ತದೆ.

ಗುಂಪಿನ ಸದಸ್ಯರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪರಸ್ಪರ ಪ್ರಭಾವ ಬೀರುತ್ತಾರೆ.

ಗುಂಪಿನ ಪ್ರತಿಯೊಬ್ಬ ಸದಸ್ಯರು ನಿರ್ದಿಷ್ಟ ಪಾತ್ರವನ್ನು ಮೌಲ್ಯಗಳ ಚೌಕಟ್ಟಿನಲ್ಲಿ ನಿರ್ವಹಿಸುವರು.

ಗುಂಪಿನಲ್ಲಿರುವ ಪ್ರತಿಯೊಬ್ಬ ಸದಸ್ಯನೂ ತಾನು ಗುಂಪಿನ ಒಂದು ಭಾಗ ಎಂದು ಗುರುತಿಸಲ್ಪಡಬೇಕು.

ಗುಂಪುಗಳು ಇತರ ಜನ ಸಮೂಹಗಳಿಗಿಂತ ಭಿನ್ನ ಎಂಬುದನ್ನು ತಿಳಿಯಬೇಕು. ‘ಜನಸಂದಣಿ’ (Crowd)

ಕೂಡ ಒಂದು ಜನ ಸಮೂಹವೇ. ಉದಾಹರಣೆಗೆ: ಬೆಂಗಳೂರಿನಂತಹ ನಗರಗಳಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತವೆ. ಅಪಘಾತ ಸಂಭವಿಸಿದ ಸ್ಥಳಗಳಲ್ಲಿ ಇದ್ದಕ್ಕಿದ್ದಂತೆ ಜನ ಸಂದಣಿ ಸೇರುತ್ತದೆ. ಒಬ್ಬೊಬ್ಬರೂ ಒಂದೊಂದು ಮಾತನಾಡುತ್ತಾರೆ. ವಿವರಣೆ, ಸಮಾಜಾಯಿಷಿ ನೀಡುತ್ತಾರೆ. ಕೆಲವರು ಪೋಲಿಸರಿಗೆ ತಿಳಿಸಿ ಎನ್ನುತ್ತಾರೆ. ಮತ್ತೊಬ್ಬರು ಅಂಬ್ಯೂಲನ್ಸ್‌ ಗೆ ಕರೆ ಮಾಡುತ್ತಾರೆ ಮತ್ತೆ ಕೆಲವರು ಅಪಘಾತಕ್ಕೆ ತುತ್ತಾದವರಿಗೆ ಹಾರೈಕೆ, ಶುಶೂಷೆ ಮಾಡುತ್ತಾರೆ. ಕೆಲವರು ಸುಮ್ಮನೆ ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಂತಿರುತ್ತಾರೆ. ಕೆಲವರು ಅಪಘಾತದ ಕಾರಣಗಳನ್ನು ಕುರಿತು ಚರ್ಚಿಸುತ್ತಿರುತ್ತಾರೆ. ಹೀಗೆ ‘ಯಾವುದೇ ಗೊತ್ತು ಗುರಿ ಇಲ್ಲದೆ ಒಂದೆಡೆ ಸೇರಿ ನಂತರ ಕರಗಿ ಹೋಗುವ ಜನರ ಸಮೂಹವನ್ನು ‘ಜನ ಸಂದಣಿ’ (Crowd) ಎನ್ನುವರು.

ತಂಡಗಳು ಅಥವಾ ಪಂಗಡಗಳು (Teams) :-

ಪಂಗಡಗಳು ವಿಶೇಷ ರೀತಿಯ ಗುಂಪುಗಳು ಪಂಗಡದ ಪ್ರತಿಯೊಬ್ಬ ಸದಸ್ಯನೂ ವಿಶೇಷವಾಗಿ ಕೌಶಲವನ್ನು ಹೊಂದಿದ್ದು ಒಂದು ನಿರ್ದಿಷ್ಟ ಗುರಿಸಾಧನೆಗಾಗಿ ಬದ್ದರಾಗಿರುತ್ತಾರೆ ಮತ್ತು ಆ ಗುರಿ ಸಾಧನೆಗಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯುತ್ತಾರೆ. ‘ಗುಂಪು’ ಮತ್ತು ‘ಪಂಗಡ’ದ ನಡುವೆ ಕೆಲವು ವ್ಯತ್ಯಾಸಗಳಿವೆ. ಅವುಗಳೆಂದರೆ;

1. ಒಂದು ಗುಂಪಿನ ಪ್ರಗತಿಯು ಆ ಗುಂಪಿನ ಪ್ರತಿಯೊಬ್ಬ ಸದಸ್ಯನೂ ನೀಡುವ ಕೊಡುಗೆಯನ್ನು ಅವಲಂಬಿಸಿದೆ. ಆದರೆ ಪಂಗಡದಲ್ಲಿ ವ್ಯಕ್ತಿ ಹಾಗೂ ಪಂಗಡದ ಕೊಡುಗೆ ಎರಡೂ ಮುಖ್ಯವಾಗಿರುತ್ತದೆ. ಉದಾಹರಣೆಗೆ : ಒಂದು ತರಗತಿಯಲ್ಲಿ ಕೆಲವು ವಿದ್ಯಾರ್ಥಿಗಳು ಬುದ್ದಿವಂತರೂ ಹಾಗೂ ಶ್ರಮಪಟ್ಟು ಕಲಿಯುವವರಾಗಿರುತ್ತಾರೆ. ಆದರೆ ಕೆಲವರು ಕಲಿಯುವುದರಲ್ಲಿ ಹಿಂದಿರುತ್ತಾರೆ. ಆದರೂ ಸಹ ಆ ತರಗತಿಯನ್ನು ಒಳ್ಳೆಯ ವಿದ್ಯಾರ್ಥಿಗಳಿರುವ ಗುಂಪು ಎಂದು ಗುರ್ತಿಸುವರು. ಪಂಗಡಕ್ಕೆ ಒಂದು ಉದಾಹರಣೆ ಎಂದರೆ, ಒಂದು ಕ್ರಿಕೆಟ್ ತಂಡ. ಅಲ್ಲಿ ಎಲ್ಲ ಆಟಗಾರರು ಉತ್ತಮ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮಾಡಿ ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ಆಟದಲ್ಲಿ ಗೆಲವು ಸಾಧ್ಯವಾಗುತ್ತದೆ. ಒಂದು ಕಳಪೆ ಫೀಲ್ಡಿಂಗ್ ಅಥವಾ ಕಳಪೆ ಬೌಲಿಂಗ್ ಆಟದ ಫಲಿತಾಂಶವನ್ನೇ ಬುಡಮೇಲು ಮಾಡಬಹುದು.

2. ಒಂದು ಪಕ್ಷದಲ್ಲಿ ನಾಯಕನಾದವನು ಒಂದು ಚುನಾವಣೆ ಗೆಲುವಿಗೆ ಕಾರಣನಾಗಬಹುದು. ಉದಾಹರಣೆಗೆ: ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ದಿವಂಗತ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಹೆಸರೇ ಪ್ರಮುಖ ಕಾರಣವಾಗಿತ್ತು. ಆದರೆ ಒಂದು ತಂಡದಲ್ಲಿ ಗೆಲುವಿಗೆ ನಾಯಕನಷ್ಟೇ ಮುಖ್ಯರಾಗುತ್ತಾರೆ. ತಂಡದ ಸದಸ್ಯರೂ ಕೂಡ.

ಪ್ರೇಕ್ಷಕರು ಮತ್ತು ದೊಂಬಿ Audience and mob):

ಜನಸಮೂಹದಲ್ಲಿ ಮತ್ತೆರಡು ರೀತಿಯ ಗುಂಪುಗಳನ್ನು ಕಾಣಬಹುದು. ಅವುಗಳೆಂದರೆ, ಪ್ರೇಕ್ಷಕರು ಮತ್ತು ದೊಂಬಿ. ಪ್ರೇಕ್ಷಕರು ಒಂದು ನಿರ್ದಿಷ್ಟ ಸ್ಥಳದಲ್ಲಿ ನಿರ್ದಿಷ್ಟ ವೇಳೆಗೆ ನಿರ್ದಿಷ್ಟ ಉದ್ದೇಶದಿಂದ ಸೇರಿರುತ್ತಾರೆ. ಉದಾಹರಣೆಗೆ : ಸಂಗೀತ ಕಛೇರಿ, ನಾಟಕ, ಸಿನಿಮಾ, ಕ್ರಿಕೆಟ್ ಅಥವಾ ಪುಟ್‌ಬಾಲ್ ಆಟ ಮುಂತಾದೆಡೆ ಸೇರುವ ಜನರನ್ನು ಪ್ರೇಕ್ಷಕರು ಎನ್ನುವರು. ಸಾಮಾನ್ಯವಾಗಿ ಪ್ರೇಕ್ಷಕರ ಪ್ರಮುಖ ಉದ್ದೇಶ ಮನರಂಜನೆ. ಮನರಂಜನೆಗೆ ಯಾವುದೇ ರೀತಿಯ ಭಂಗ ಉಂಟಾದಾಗ ಪ್ರೇಕ್ಷಕರೇ ದೊಂಬಿಯಾಗಿ ಪರಿವರ್ತನೆಯಾಗಬಹುದು. ಸಿಳ್ಳೆ ಹೊಡೆಯುವುದು, ಕಲ್ಲು, ಚಪ್ಪಲಿ ಎಸೆಯುವುದು, ಕಿರುಚುವುದು, ಕುರ್ಚಿಗಳನ್ನು ಎತ್ತಿ ಬಿಸಾಡುವುದು. ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವುದು. ಮುಂತಾದ ಅನಾಗರೀಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಮನರಂಜನೆಗೆ ಭಂಗ ಉಂಟಾದಾಗ ಪ್ರೇಕ್ಷಕರು ತಾಳ್ಮೆ ಕಳೆದುಕೊಳ್ಳುತ್ತಾರೆ. ಭಾವಾವೇಶದಿಂದ ವರ್ತಿಸುತ್ತಾರೆ. ದೊಂಬಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದರ ಅರಿವಿರುವುದಿಲ್ಲ. ಸರಿ-ತಪ್ಪು, ನ್ಯಾಯ-ಅನ್ಯಾಯಗಳ ಗೊಡವೆ ಅವರಿಗೆ ಇರುವುದಿಲ್ಲ. ದೊಂಬಿ ಸಂಪೂರ್ಣವಾಗಿ ವಿವೇಚನಾ ರಹಿತವಾಗಿರುತ್ತದೆ.

ಆರ್. ಡಬ್ಲ್ಯೂ, ಬ್ರೌನ್ ಪ್ರಕಾರ, ಜನ ಸಂದಣಿಯಲ್ಲಿ ಎರಡು ವಿಧ. 1) ಸಕ್ರಿಯ ಜನಸಂದಣಿ ಮತ್ತು 2) ನಿಷ್ಕ್ರಿಯ ಜನಸಂದಣಿ. ನಿಷ್ಕ್ರಿಯ ಜನಸಂದಣಿ ಎಂದರೆ ಪ್ರೇಕ್ಷಕರು, ಸಕ್ರಿಯ ಜನಸಂದಣಿ ಎಂದರೆ ದೊಂಬಿ,

ದೊಂಬಿಯ ಪ್ರಮುಖ ಲಕ್ಷಣಗಳು :

1. ದೊಂಬಿಯಲ್ಲಿ ಮಾನಸಿಕ ಏಕತೆಯನ್ನು (Mental homogeneity) ಕಾಣಬಹುದು ಅಂದರೆ, ದೊಂಬಿಯ ವ್ಯಕ್ತಿಗಳೆಲ್ಲರ ಗುರಿ ಹಾಗೂ ಗಮನ ಒಂದೇ ಆಗಿರುತ್ತದೆ.

2. ದೊಂಬಿಯ ಎರಡನೇ ಲಕ್ಷಣ ಅಧಿಕ ಭಾವೋದ್ರಿಕ್ತತೆ.

3. ದೊಂಬಿ ವಿವೇಚನಾ ರಹಿತವಾಗಿ ವರ್ತಿಸುತ್ತದೆ. ಅಂದರೆ, ಸರಿ ತಪ್ಪುಗಳ ಅರಿವಿಲ್ಲದೆ ಮೃಗಗಳಂತೆ ವರ್ತಿಸುತ್ತಾರೆ. ಎದುರಾಳಿಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಾರೆ.

4. ದೊಂಬಿ ಬೇಜವಾಬ್ದಾರಿಯಾಗಿ ವರ್ತಿಸುತ್ತದೆ.

5. ದೊಂಬಿಯಲ್ಲಿ ವ್ಯಕ್ತಿ ಅನಾಮಿಕನಾಗಿರುತ್ತಾನೆ.

6. ದೊಂಬಿ ಅಸ್ಥಿರ ಮತ್ತು ಅವ್ಯವಸ್ಥಿತವಾಗಿರುತ್ತದೆ.

7. ದೊಂಬಿಯಲ್ಲಿ ಸಾವು-ನೋವುಗಳು ಅಧಿಕವಾಗಿರುತ್ತದೆ.

ಜನ ಏಕೆ ಗುಂಪುಗಳನ್ನು ಸೇರುತ್ತಾರೆ Why do people join groups?):

ನಾವು ಹಲವು ಸಂಘ-ಸಂಸ್ಥೆಗಳಿಗೆ ಸದಸ್ಯರಾಗುತ್ತೇವೆ. ಕೆಲವು ಔಪಚಾರಿಕ ಗುಂಪುಗಳು ಮತ್ತೆ ಕೆಲವು ಅನೌಪಚಾರಿಕ ಗುಂಪುಗಳಾಗಿರುತ್ತವೆ. ಗೆಳೆಯರ ಕೂಟಗಳು ಕಾಫಿ-ತಿಂಡಿಗಾಗಿ ಒಂದೆಡೆ ಗುಂಪು ಸೇರುತ್ತಾರೆ. ದೇಶದ ರಾಜಕೀಯ, ಆರ್ಥಿಕ ಸ್ಥಿತಿಗತಿ ಕುರಿತು ಅನೌಪಚಾರಿಕವಾಗಿ ಚರ್ಚಿಸುತ್ತಾರೆ. ಜನರು ಗುಂಪು ಸೇರುವುದಕ್ಕೆ ಕಾರಣಗಳೇನು ಎಂಬುದನ್ನು ಸಾಮಾಜಿಕ ಮನೋವಿಜ್ಞಾನಿಗಳು ಕೆಳಕಂಡಂತೆ ಪಟ್ಟಿ ಮಾಡಿದ್ದಾರೆ.

1. ಗುಂಪುಗಳು ನಮ್ಮ ಮಾನಸಿಕ ಹಾಗೂ ಸಾಮಾಜಿಕ ಅಗತ್ಯಗಳನ್ನು ಪೂರೈಸುತ್ತವೆ. ಗುಂಪಿನಲ್ಲಿ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ, ತೃಪ್ತಿ ದೊರೆಯುತ್ತದೆ. ಜನಸಂಪರ್ಕ ಇಲ್ಲದಿರುವಾಗ ಒಂಟಿತನ ಕಾಡುತ್ತದೆ. ಸಮಾನ ಮನಸ್ಕರ ಜೊತೆ ಬೆರೆಯುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ.

2. ನಾವು ಒಬ್ಬರೇ ಸಾಧಿಸಲಾಗದಿರುವ ಗುರಿಯನ್ನು ಗುಂಪಿನಲ್ಲಿ ಸುಲಭವಾಗಿ ಸಾಧಿಸಬಹುದು. ಇತರರ ಜೊತೆ ಕಲೆತು ಯಾವುದೇ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸಬಹುದು.

3. ಗುಂಪಿನಲ್ಲಿ ಸದಸ್ಯನಾಗುವುದರಿಂದ ನಮ್ಮ ಜ್ಞಾನಮಟ್ಟ ವೃದ್ಧಿಯಾಗುತ್ತದೆ. ಗುಂಪಿನ ಸದಸ್ಯರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಬಹುದು. ಒಂಟಿಯಾಗಿ ಇರುವಾಗ ಇಂತಹ ವಿಚಾರಗಳನ್ನು ತಿಳಿಯಲು ಆಗುವುದಿಲ್ಲ.

4. ಗುಂಪು ನಮಗೆ ಭದ್ರತೆಯನ್ನು ನೀಡುತ್ತದೆ. ಗುಂಪಿನ ಸದಸ್ಯನಾಗಿ ಶತ್ರುಗಳಿಂದ ರಕ್ಷಣೆ ಪಡೆಯಬಹುದು.

5. ಗುಂಪಿನ ಸದಸ್ಯನಾಗುವುದರಿಂದ ಸಾಮಾಜಿಕ ಸ್ಥಾನಮಾನಗಳು ದೊರೆಯುತ್ತವೆ. ಪ್ರತಿಷ್ಠಿತ ಸಂಘ-ಸಂಸ್ಥೆಗಳಿಗೆ ಸದಸ್ಯನಾಗುವುದರಿಂದ ನಮ್ಮ ಘನತೆ-ಗೌರವ ಹೆಚ್ಚಾಗುತ್ತದೆ.

ಗುಂಪು ರಚನೆಯಾಗುವುದು. (Formation of group):-

ಗುಂಪು ರೂಪುಗೊಳ್ಳುವಿಕೆಗೆ ಸಹಾಯಕವಾದ ಅಂಶಗಳು ಕೆಳಕಂಡಂತಿವೆ.

ಸಾಮಿಪ್ಯ (Proximity) :- ನಾವು ಯಾರನ್ನು ಭೇಟಿಯಾಗುತ್ತೇವೆ ಎಂಬುದರ ಮೇಲೆ ನಮ್ಮ ಭೌತಿಕ ಪರಿಸರ ಪ್ರಮುಖ ಪ್ರಭಾವ ಬೀರುತ್ತದೆ. ಉದಾಹರಣೆಗೆ: ಇಬ್ಬರು ವ್ಯಕ್ತಿಗಳು ಅಕ್ಕಪಕ್ಕ ವಾಸಿಸುತ್ತಿದ್ದು ಯಾವುದೋ ಒಂದು ಸಂದರ್ಭದಲ್ಲಿ ಮುಖಾಮುಖಿ ಭೇಟಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಾಗ ಮತ್ತು ಅವರಿಬ್ಬರಲ್ಲೂ ಸಕಾರಾತ್ಮಕ ಭಾವನೆಗಳು ಉಂಟಾದಾಗ ಅವರು ಪರಸ್ಪರ ಹತ್ತಿರವಾಗುತ್ತಾರೆ. ತರಗತಿಯಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುವವರು. ಒಂದೇ ಕಛೇರಿಯಲ್ಲಿ ಅಕ್ಕ-ಪಕ್ಕ ಕುಳಿತು ಕೆಲಸ ಮಾಡುವವರು ಹಾಗೂ ವಿವಿಧ ಸಂದರ್ಭಗಳಲ್ಲಿ ಪದೇ ಪದೇ ಭೇಟಿಯಾಗುವವರು ಪರಸ್ಪರ ತುಂಬಾ ಆತ್ಮೀಯರಾಗುವ ಸಾಧ್ಯತೆ ಹೆಚ್ಚು.

Leave a Comment