ಮಾನಸಿಕ ಸಮಸ್ಯೆಗಳು (ಅಪಸಾಮಾನ್ಯ ವರ್ತನೆ) (Psychological Disorders)

ಮಾನಸಿಕ ಸಮಸ್ಯೆಗಳು (ಅಪಸಾಮಾನ್ಯ ವರ್ತನೆ) (Psychological Disorders)

ಮಾನಸಿಕ ಸಮಸ್ಯೆಗಳು

ಮಾನಸಿಕ ಸಮಸ್ಯೆಗಳು:ಸಮಾಜದಲ್ಲಿ ಎಲ್ಲರೂ ಸುಖಿಗಳಲ್ಲ. ಅನೇಕ ಜನರಿಗೆ ತಮ್ಮದೇ ಆದ ಸಮಸ್ಯೆಗಳಿವೆ. ಹಾಗೆ ನೋಡಿದರೆ ಸಮಸ್ಯೆಗಳಿಲ್ಲದ ಜೀವಿಯೇ ಇಲ್ಲ. ಮನುಷ್ಯ ಹುಟ್ಟಿದಂದಿನಿಂದ ಸಾಯುವವರೆಗೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬದುಕಿನ ಒಂದೊಂದು ಹಂತದಲ್ಲಿ ಒಂದೊಂದು ರೀತಿಯ ಸಮಸ್ಯೆಗಳು ಎದುರಾಗುತ್ತವೆ.

ಕೆಲವರು ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸುತ್ತಾರೆ. ಯಶಸ್ವಿಯಾಗಿ ಬಗೆಹರಿಸಿಕೊಂಡು ಮುಂದೆ ಸಾಗುತ್ತಾರೆ. ಮತ್ತೆ ಕೆಲವರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲಾರದೆ ತೊಳಲಾಡುತ್ತಾರೆ. ಸಮಸ್ಯೆ ಗಂಭೀರವಾದರೆ ಶಾರೀರಿಕ ಹಾಗೂ ಮಾನಸಿಕ ಕಾಯಿಲೆಗಳಿಂದ ಬಳಲುತ್ತಾರೆ. ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳಿಂದ ಬಳಲುವವರಿಗೆ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಗಳು ಕಡಿಮೆಯಾಗುತ್ತವೆ. ಮಾನಸಿಕ ಬಳಲಿಕೆಯಿಂದ ವ್ಯಕ್ತಿ ಯಾವುದೇ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ವಿಫಲನಾಗುತ್ತಾನೆ. ಸಮಸ್ಯೆ ಇನ್ನೂ ಗಂಭೀರವಾದರೆ ಪ್ರಪಂಚದ ಜೊತೆ ಸಂಬಂಧವನ್ನೇ ಕಡಿದುಕೊಂಡು ತನ್ನದೇ ಆದ ಭ್ರಮಾಲೋಕದಲ್ಲಿ ವಿಹರಿಸುತ್ತಾನೆ.

ಮಾನಸಿಕ ಸಮಸ್ಯೆಗಳನ್ನು ಅಪಸಾಮಾನ್ಯ ವರ್ತನೆಗಳು ಎನ್ನುವರು. ಸಾಮಾನ್ಯ ವರ್ತನೆಗಿಂತ ಭಿನ್ನವಾದ ವರ್ತನೆಯೇ ಅಪಸಾಮಾನ್ಯ ವರ್ತನೆ. ಉದಾಹರಣೆಗೆ : ನಿದ್ರಾಹೀನತೆಯಿಂದ ಬಳಲುವುದು ಒಂದು ಅಪಸಾಮಾನ್ಯ ವರ್ತನೆ. ಸಮಾಜದಲ್ಲಿ ಭಿನ್ನವಾದ, ಸಹಿಸಲಸಾಧ್ಯವಾದ, ಅಸಮರ್ಪಕ ಹೊಂದಾಣಿಕೆಯ ವರ್ತನೆಯನ್ನು ‘ಅಪಸಾಮಾನ್ಯ ವರ್ತನೆ’ ಅಥವಾ ‘ಮಾನಸಿಕ ಸಮಸ್ಯೆ’ ಎನ್ನುವರು.

ಅಪಸಾಮಾನ್ಯ ವರ್ತನೆ ಅಥವಾ ಮಾನಸಿಕ ಸಮಸ್ಯೆ – ನಿರೂಪಣೆಗಳು :

1. ವೇಕ್‌ ಫೀಲ್ಡ್ ಪ್ರಕಾರ :- ಇತರರಿಗೆ ಇಷ್ಟವಾಗದ ಮತ್ತು ಗಂಭೀರವಾದ ಸಂಕಟ ಅಥವಾ ನೋವುಂಟು ಮಾಡುವ ಮಾನಸಿಕ ಅಸಮರ್ಥತೆಯನ್ನು ಮಾನಸಿಕ ಸಮಸ್ಯೆ ಎನ್ನುವರು.

2. ಡಿ.ಎಸ್.ಎಂ. ಪ್ರಕಾರ, ‘ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಬಾಹ್ಯ ವರ್ತನೆಯಲ್ಲಿ ಕಂಡುಬರುವ ಅಸಮರ್ಥತೆಯೇ ಮಾನಸಿಕ ಸಮಸ್ಯೆ ಅಥವಾ ಅಪಸಾಮಾನ್ಯ ವರ್ತನೆ’.

3. ಸಾಮಾನ್ಯ ವರ್ತನೆಗಿಂತ ಭಿನ್ನವಾದ ವರ್ತನೆಯೇ ಅಪಸಾಮಾನ್ಯ ವರ್ತನೆ.

ಅಪಸಾಮಾನ್ಯ ವರ್ತನೆಗಳ ನಿರೂಪಣೆಯಲ್ಲಿ ವೈವಿಧ್ಯತೆ ಇದ್ದರೂ ಸಹ ಎಲ್ಲ ನಿರೂಪಣೆಗಳಲ್ಲಿ ಕೆಲವು ಸಾಮಾನ್ಯ ಲಕ್ಷಣಗಳಿವೆ. ಅವುಗಳನ್ನು ‘4 ಡಿ’ ಗಳು ಎನ್ನುತ್ತೇವೆ. ಅವುಗಳೆಂದರೆ,

1) ನೋವು ಅಥವಾ ಸಂಕಟ (Distress): ವ್ಯಕ್ತಿಗೆ ಹಾಗೂ ಇತರರಿಗೆ ನೋವುಂಟು ಮಾಡುವ ವರ್ತನೆ.

2) ನಿಷ್ಕ್ರಿಯತೆ (Dysfunction): ದೈನಂದಿನ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಸಮರ್ಥತೆ ತೋರುವುದು.

3) ವಿಭಿನ್ನ ನಡವಳಿಕೆ (Deviance): ತೀವ್ರತರವಾದ ಭಿನ್ನ ಹಾಗೂ ಅಪಸಾಮಾನ್ಯ ವರ್ತನೆ.

4) ಅಪಾಯಕಾರಿ ವರ್ತನೆ (Dangerous): ವ್ಯಕ್ತಿಗೆ ಹಾಗೂ ಇತರರಿಗೆ ಹಾನಿ ಉಂಟುಮಾಡುವ ವರ್ತನೆ.

ವರ್ತನೆಯಲ್ಲಿ ಯಾವುದು ಸಾಮಾನ್ಯ ಮತ್ತು ಯಾವುದು ಅಪಸಾಮಾನ್ಯ ಎಂದು ಸಮಾಜದಲ್ಲಿ ಹೇಗೆ ಅರ್ಥೈಸಲಾಗುತ್ತದೆ ಎಂಬುದನ್ನು ನೋಡೋಣ.

ಆ) ಸಾಮಾಜಿಕ ಮಾನಕದಿಂದ ಭಿನ್ನವಾಗಿದೆ. (Deviation from social norms):

ಸಾಮಾಜಿಕ ಸನ್ನಿವೇಶದಲ್ಲಿ ಪ್ರಚಲಿತದಲ್ಲಿರುವ ವರ್ತನೆಗಿಂತ ಭಿನ್ನವಾದ ವರ್ತನೆಯನ್ನು ಅಪಸಾಮಾನ್ಯ ವರ್ತನೆ ಎನ್ನುವರು. ಉದಾಹರಣೆಗೆ : ನಮ್ಮ ಸಮಾಜದಲ್ಲಿ ಎಲ್ಲರೂ ಬಟ್ಟೆ ಧರಿಸಿ ಓಡಾಡುವುದು ಸಾಮಾನ್ಯ ವರ್ತನೆ, ಒಬ್ಬ ವ್ಯಕ್ತಿ ಬೀದಿಯಲ್ಲಿ ಬೆತ್ತಲೆಯಾಗಿ ಓಡಾಡಿದರೆ ಅದು ಅಪಸಾಮಾನ್ಯ ವರ್ತನೆಯಾಗುತ್ತದೆ. ಆದರೆ ಯಾವ ವರ್ತನೆ ಸಾಮಾನ್ಯ ಅಥವಾ ಅಪಸಾಮಾನ್ಯ ಎಂಬುದು ಸನ್ನಿವೇಶದಿಂದ ಸನ್ನಿವೇಶಕ್ಕೆ, ಸಮಾಜದಿಂದ ಸಮಾಜಕ್ಕೆ ಭಿನ್ನವಾಗಿರುತ್ತದೆ. ಉದಾಹರಣೆಗೆ: ಒಬ್ಬ ವ್ಯಕ್ತಿ ಕಛೇರಿಗೆ ಅರೆ ಬೆತ್ತಲೆಯಾಗಿ ಬರುವುದು ಅಪಸಾಮಾನ್ಯ ವರ್ತನೆ. ಆದರೆ ಅದೇ ವ್ಯಕ್ತಿ ಬೀಚ್‌ನಲ್ಲಿ ಅರೆಬೆತ್ತಲೆಯಾಗಿರುವುದು ಅಪಸಾಮಾನ್ಯ ವರ್ತನೆ ಎನಿಸುವುದಿಲ್ಲ. ಅದೇ ರೀತಿ ಕೆಲವು ಬುಡಕಟ್ಟು ಜನಾಂಗಗಳು ಬೆತ್ತಲೆ ಓಡಾಡುವುದು ಅಪಸಾಮಾನ್ಯ ವರ್ತನೆಯಲ್ಲ. ಆದ್ದರಿಂದ ಆಯಾಯ ಸಾಮಾಜಿಕ ಸನ್ನಿವೇಶಕ್ಕೆ ಒಪ್ಪುವ ವರ್ತನೆಯೇ ಸಾಮಾನ್ಯ ವರ್ತನೆ ಎಂದಾಗುತ್ತದೆ ಮತ್ತು ಆಯಾಯ ಸಾಮಾಜಿಕ ಸನ್ನಿವೇಶಕ್ಕೆ ಒಪ್ಪದ ವರ್ತನೆಯನ್ನು ಅಪಸಾಮಾನ್ಯ ವರ್ತನೆ ಎನ್ನುವರು. ಇದು ಆಯಾಯ ಸಂಸ್ಕೃತಿ, ಸನ್ನಿವೇಶ, ಸಂದರ್ಭ, ವಯಸ್ಸು ಹಾಗೂ ಲಿಂಗವನ್ನು ಅವಲಂಬಿಸಿರುತ್ತದೆ. ಸಮಾಜದಲ್ಲಿ ಕಾಲದಿಂದ ಕಾಲಕ್ಕೆ ಸಾಮಾನ್ಯ ಹಾಗೂ ಅಪಸಾಮಾನ್ಯ ವರ್ತನೆಗಳ ಗ್ರಹಿಕೆ ವ್ಯತ್ಯಾಸವಾಗುತ್ತಾ ಹೋಗುತ್ತದೆ.

ಮಾನಸಿಕ ಸಮಸ್ಯೆಗಳ ವರ್ಗೀಕರಣ (ಅಪಸಾಮಾನ್ಯ ವರ್ತನೆಯ ವರ್ಗೀಕರಣ):

ಅಪಸಾಮಾನ್ಯ ವರ್ತನೆಗಳನ್ನು ಅರ್ಥಮಾಡಿಕೊಳ್ಳಲು ಅವುಗಳನ್ನು ವರ್ಗೀಕರಿಸುವುದು ಅನಿವಾರ್ಯ. ವರ್ಗೀಕರಣದಿಂದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು, ಚಿಕಿತ್ಸೆ ನೀಡಲು ಕಾರಣಗಳನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತದೆ. ಪ್ರಸ್ತುತ ಎರಡು ರೀತಿಯ ವರ್ಗೀಕರಣ ವಿಧಾನಗಳನ್ನು ಅನುಸರಿಸಿ ಅಪಸಾಮಾನ್ಯ ವರ್ತನೆಗಳನ್ನು ವರ್ಗೀಕರಿಸಲಾಗಿದೆ.

ಅ) ಅಮೇರಿಕಾದ ಮನೋವಿಜ್ಞಾನ ಸಂಘದವರು (APA) ಮಾಡಿರುವ ಮಾನಸಿಕ ಸಮಸ್ಯೆಗಳ ವರ್ಗೀಕರಣ DSM (Diagnostic Statistical Manual) ( ರೋಗ ನಿಧಾನ ಸಾಂಖಿಕ ಕೈಪಿಡಿ) DSM-V (Revised) ಈಗ ಹೊರಬಂದಿದೆ.

ಮಾನಸಿಕ ಸಮಸ್ಯೆಗಳ ಇತಿಹಾಸ History of Mental disorders):

ಪ್ರಾಚೀನ ಕಾಲದಲ್ಲಿ ಚೀನಾ, ಗ್ರೀಕ್, ಈಜಿಪ್ಟ್ ದೇಶದ ಜನರು ಅಪಸಾಮಾನ್ಯ ವರ್ತನೆಯನ್ನು ದೇವರು ಇಲ್ಲವೆ ದೆವ್ವಗಳ ಕಾಟ ಎಂದು ನಂಬಿದ್ದರು. ನಾವು ಮಾಡಿದ ಪಾಪಕ್ಕೆ ದೇವರು ಅಥವಾ ದೆವ್ವ ಶಿಕ್ಷೆ ನೀಡುತ್ತವೆ ಎಂದು ನಂಬಿದ್ದರು.

ಆಗಿನ ಕಾಲದಲ್ಲಿ ನೀಡುತ್ತಿದ್ದ ಚಿಕಿತ್ಸೆ ಎಂದರೆ ತಲೆಯಲ್ಲಿ ಒಂದು ತೂತು ಮಾಡಿದರೆ ಅದರ ಮೂಲಕ ದೆವ್ವ ಹೊರಹೋಗುತ್ತದೆ ಎಂದು ನಂಬಿದ್ದರು. ಮತ್ತೊಂದು ಚಿಕಿತ್ಸಾ ವಿಧಾನವೆಂದರೆ ಮಾಟ, ಮಂತ್ರ, ಪ್ರಾರ್ಥನೆ. ಜೋರು ಶಬ್ದ ಮಾಡುವುದು, ಕುರಿಯ ಹಿಕ್ಕೆ ಜೊತೆ ವೈನ್ ಕಲಸಿ ತಿನ್ನಿಸುವುದು, ಮುಂತಾದ ಕ್ರಮಗಳನ್ನು ಅನುಸರಿಸುತ್ತಿದ್ದರು.

ಗ್ರೀಕ್ ವೈದ್ಯ ಹಿಪ್ಪೋಕ್ರೇಟನು ಮೆದುಳಿನ ನ್ಯೂನತೆಯಿಂದ ಮತ್ತು ಸ್ವಾಭಾವಿಕ ಕಾರಣಗಳಿಂದ ಮಾನಸಿಕ ಸಮಸ್ಯೆಗಳುಂಟಾಗುತ್ತವೆ ಎಂದು ನಂಬಿದ್ದನು. ಅಲ್ಲದೆ ಮೆದುಳು ಬುದ್ದಿ ಚಟುವಟಿಕೆಗಳ ಕೇಂದ್ರಬಿಂದು ಎಂದೂ ಹಿಪ್ಪೋಕ್ರೇಟ್ ಹೇಳಿದನು. ಅನುವಂಶೀಯ ಅಂಶಗಳು ಹಾಗೂ ತಲೆಗೆ ಬೀಳುವ ಪೆಟ್ಟಿನಿಂದ ಅಪಸಾಮಾನ್ಯ ವರ್ತನೆಗಳು (ಮಾನಸಿಕ ಸಮಸ್ಯೆಗಳು) ಉಂಟಾಗುತ್ತವೆ ಎಂದು ಪ್ರತಿಪಾದಿಸಿದ್ದನು. ಹಿಪ್ಪೋಕ್ರೇಟನು ಮನೋರೋಗಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದ್ದನು. ಅವುಗಳೆಂದರೆ 1) ಮೇನಿಯಾ 2) ಮೆಲಾಂಕೊಲಿಯಾ ಮತ್ತು 3) ಫ್ರೆನಿಟಿಸ್ (ಮೆದುಳು ಜ್ವರ). ಇವುಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದ್ದಾನೆ. ನಂತರ ಗ್ಲೆನ್ ಮತ್ತು ಹಿಪ್ಪೋಕ್ರೇಟ್ಸ್, ವಸ್ತುಗಳನ್ನು ಭೂಮಿ, ಗಾಳಿ, ಬೆಂಕಿ ಮತ್ತು ನೀರು ಎಂದು ವಿಂಗಡಿಸಿ. ಇವು ಬಿಸಿ. ತಂಪು, ಒದ್ದೆ ಮತ್ತು ಒಣ (ಆರಿದ) ಸ್ಥಿತಿ ಉಂಟು ಮಾಡುತ್ತವೆ ಎಂದು ಹೇಳಿದ್ದಾರೆ. ಈ ದ್ರವಗಳು ರಕ್ತದಲ್ಲಿ (Sanguine), ಕಫದಲ್ಲಿ (Choler) ಮತ್ತು ಪಿತ್ತದಲ್ಲಿ (Melancholer) ಕಂಡುಬರುತ್ತವೆ. ಎಂದು ಹೇಳಿದ್ದಾರೆ. ಇವುಗಳ ಅಸಮತೋಲನದಿಂದ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಮಾನಸಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಕನಸುಗಳ ಅಧ್ಯಯನದ ಮಹತ್ವ ಕುರಿತು ಒತ್ತಿ ಹೇಳಿದ್ದಾರೆ.

ಮನೋರೋಗಗಳ ಚಿಕಿತ್ಸೆ ಎಂದರೆ, ಸಮತೋಲನದ ಮನಃಸ್ಥಿತಿ, ನೆಮ್ಮದಿ (ಶಾಂತಿ)ಯುಕ್ತ ಜೀವನ, ಸಮತೋಲನವಾದ ಆಹಾರ ಸೇವನೆ, ಶಾಖಾಹಾರ, ವ್ಯಾಯಾಮ, ಇತ್ಯಾದಿ ಅನುಸರಿಸಬೇಕು ಎಂದು ಹೇಳಿದ್ದಾರೆ.

ಪ್ಲೇಟೋ ಪ್ರಕಾರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳು ನಮ್ಮ ವರ್ತನೆಯ ಮೇಲೆ ಪ್ರಭಾವ ಬೀರುತ್ತವೆ.

ಪ್ರಥಮ ಮಾನಸಿಕ ಚಿಕಿತ್ಸಾ ಕೇಂದ್ರವನ್ನು ಕ್ರಿ.ಶ. 752 ರಲ್ಲಿ ಬಾಗ್ದಾದಿನಲ್ಲಿ ಸ್ಥಾಪಿಸಲಾಯಿತು. ಮಾನಸಿಕ ಕಾಯಿಲೆ ದೆವ್ವ-ಪಿಶಾಚಿಗಳ ಕಾಟ ಎಂಬ ಮೂಢನಂಬಿಕೆಯನ್ನು ಟೀಕಿಸಿದವರಲ್ಲಿ ಮೊದಲಿಗನೆಂದರೆ ಸ್ವಿಸ್ ದೇಶದ ವೈದ್ಯ ‘ಪಾರಸೆಲ್ವಸ್’.

16ನೇ ಶತಮಾನದಲ್ಲಿ ಮೊತ್ತ ಮೊದಲಿಗೆ ಮನೋರೋಗಗಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ತಾಣ (Asylum)ವನ್ನು ನಿರ್ಮಿಸಲಾಯಿತು. ಮಾನಸಿಕ ಅಸ್ವಸ್ಥರಿಗಾಗಿ ನಿರ್ಮಿಸಿದ ತಾಣಗಳನ್ನು ‘ಹುಚ್ಚರತಾಣ’ (Mad houses) ಎಂದು ಕರೆಯುತ್ತಿದ್ದರು. ಇವುಗಳು ಚಿಕಿತ್ಸಾ ಕೇಂದ್ರಗಳಾಗಿರದೆ ಮಾನಸಿಕ ಅಸ್ವಸ್ಥರ ಬಂದೀಖಾನೆಗಳಿಂತಿದ್ದವು. ಕೊಳಕು ವಾತಾವರಣದಲ್ಲೇ ಅವರು ಅಂತ್ಯ ಕಾಣುತ್ತಿದ್ದರು. ಮಾನಸಿಕ ಅಸ್ವಸ್ಥರನ್ನು ಬಂಧಿಸಿಡುವುದು ತಪ್ಪು, ಅವರನ್ನು ಕರುಣೆಯಿಂದ ಕಾಣಬೇಕು, ಬಂಧಿಸಿರುವ ಸರಪಳಿ ತೆಗೆದು ಗಾಳಿ ಬೆಳಕು, ಹಾಗೂ ನೈರ್ಮಲ್ಯತೆ ಇರುವ ಕೊಠಡಿಗಳಲ್ಲಿ ಇಡಬೇಕು ಎಂದು ಫಿನೆಲ್ ಹೇಳಿದ್ದಾನೆ.

19ನೇ ಶತಮಾನದ ಅಂತ್ಯದಲ್ಲಿ ಹಾಗೂ 20ನೇ ಶತಮಾನದ ಆರಂಭದಲ್ಲಿ ಆಸ್ಟ್ರಿಯಾ ದೇಶದ ವೈದ್ಯ ಎಫ್.ಎ. ಮೀಮರ್, ಸಮ್ಮೋಹಕ (hypnosis) ವಿದ್ಯೆಯನ್ನು ಮನೋರೋಗ ಚಿಕಿತ್ಸಕ ವಿಧಾನವಾಗಿ ಬಳಸುವ ಬಗ್ಗೆ ಅಧ್ಯಯನ ನಡೆಸಿದನು. ನಂತರ ಸಿಕ್ಕಂಡ್ ಫ್ರಾಯ್ಡ್ ಮನೋವಿಶ್ಲೇಷಣಾ ಚಿಕಿತ್ಸಾ ವಿಧಾನವನ್ನು ರೂಪಿಸಿ ಬಳಕೆ ತಂದನು.

ಸ್ಕಿನ್ನರ್ ಮತ್ತು ವಾಟ್ಸನ್ ಪ್ರಕಾರ ಅನುಬಂಧ (conditioning) ಕಲಿಕೆಯ ಪರಿಣಾಮವಾಗಿ ಅಪಸಾಮಾನ್ಯ ವರ್ತನೆಗಳು ಕಾಣಿಸಿಕೊಳ್ಳುತ್ತವೆ. ಸಂಜ್ಞಾನಾತ್ಮಕ ಮನೋವಿಜ್ಞಾನಿಗಳ ಪ್ರಕಾರ ಅಸಂಬದ್ಧ (irrational) ಆಲೋಚನೆಗಳ ಪರಿಣಾಮವಾಗಿ ಮಾನಸಿಕ ಸಮಸ್ಯೆಗಳು ಉದ್ಭವವಾಗುತ್ತವೆ.

ಅಪಸಾಮಾನ್ಯ ವರ್ತನೆಯ ಮೇಲೆ ಪ್ರಭಾವ ಬೀರುವ ಅಂಶಗಳು :

ಅಪಸಾಮಾನ್ಯ ವರ್ತನೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಅಪಸಾಮಾನ್ಯ ವರ್ತನೆಯ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕು. ಅವುಗಳಲ್ಲಿ ಪ್ರಮುಖವಾದ ಅಂಶಗಳೆಂದರೆ:

1) ಜೈವಿಕ ಅಂಶಗಳು

2) ಮಾನಸಿಕ ಅಂಶಗಳು ಮತ್ತು

3) ಸಮಾಜ-ಸಾಂಸ್ಕೃತಿಕ ಅಂಶಗಳು.

ಜೈವಿಕ ಅಂಶಗಳು(Biological factors):

ಜೈವಿಕ ಅಂಶಗಳಾದ ವರ್ಣತಂತುಗಳು, ಗುಣಾಣುಗಳು, ಅಂತಃಸ್ರಾವಗಳ ವೈಪರೀತ್ಯಗಳು. ಅಪೌಷ್ಟಿಕತೆ,

ನರಮಂಡಲದ ವೈಪರೀತ್ಯಗಳು ಮುಂತಾದವು ಮಾನಸಿಕ ಅಸ್ವಸ್ಥತೆಯ ಮೇಲೆ ಪ್ರಭಾವ ಬೀರುತ್ತವೆ. ಉದಾಹರಣೆಗೆ: ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕದ ಪ್ರಮಾಣದಲ್ಲಿ ಏರಿಕೆಯಾದಾಗ ಇಚ್ಚಿತ್ತ (Schizophrenia) ಎಂಬ ತೀವ್ರ ರೀತಿಯ ಮಾನಸಿಕ ಅಸ್ವಸ್ಥತೆ ಉಂಟಾಗುತ್ತದೆ. ಗುಣಾಣುಗಳು ಮತ್ತು ವರ್ಣತಂತುಗಳಲ್ಲಿ ಉಂಟಾಗುವ ದೋಷದಿಂದ ಬುದ್ದಿಮಾಂದ್ಯತೆ ಉಂಟಾಗುತ್ತದೆ.

2. ಮಾನಸಿಕ ಅಂಶಗಳು (Psychological Factors):

ಮಾನಸಿಕ ಸಂಘರ್ಷಗಳು, ಒತ್ತಡಗಳು, ಮುಂತಾದವು ಅಪಸಾಮಾನ್ಯ ವರ್ತನೆಗೆ ಕಾರಣವಾಗಿವೆ. ಮನೋವಿಶ್ಲೇಷಣಾವಾದದ ಪ್ರಕಾರ ಮಾನಸಿಕ ಸಮಸ್ಯೆಗಳು ಆಂತರಿಕ ಸಂಘರ್ಷಗಳ ಪರಿಣಾಮ, ಬಾಲ್ಯದ ಆತೃಪ್ತ ಬಯಕೆಗಳು, ಅಹಂ ರಕ್ಷಣಾ ತಂತ್ರಗಳ ಅತಿಯಾದ ಅವಲಂಬನೆ ಮುಂತಾದವು ಮಾನಸಿಕ ಸಮಸ್ಯೆಗಳನ್ನುಂಟು ಮಾಡುತ್ತವೆ.

ವರ್ತನಾವಾದಿಗಳ ಪ್ರಕಾರ ತಪ್ಪು ಕಲಿಕೆಯ ಪರಿಣಾಮವಾಗಿ ಅಪಸಾಮಾನ್ಯ ವರ್ತನೆಗಳುಂಟಾಗುತ್ತವೆ.

ಸಂಜ್ಞಾನಾತ್ಮಕ ಮನೋವಿಜ್ಞಾನಿಗಳ ಪ್ರಕಾರ ತಪ್ಪು ಆಲೋಚನೆ ಹಾಗೂ ತಪ್ಪು ಮನೋಭಾವದ ಪರಿಣಾಮವಾಗಿ ಅಪಸಾಮಾನ್ಯ ವರ್ತನೆಗಳುಂಟಾಗುತ್ತವೆ.

ಮಾನವತಾವಾದಿಗಳ ಪ್ರಕಾರ ಎಲ್ಲರೂ ಹುಟ್ಟುವಾಗ ಒಳ್ಳೆಯವರೇ ಆಗಿರುತ್ತಾರೆ. ಆದರೆ ಜೀವನದಲ್ಲಿ ಸಂಭವಿಸುವ ಅನಿರೀಕ್ಷಿತ ಘಟನೆಗಳು, ವಿಫಲತೆಗಳು, ವ್ಯಕ್ತಿ ತನ್ನ ಸಾಮರ್ಥ್ಯವನ್ನು ಅರಿಯುವಲ್ಲಿ ವಿಫಲನಾಗುವಂತೆ ಮಾಡುತ್ತವೆ. ಇದರ ಪರಿಣಾಮವೇ ಅಪಸಾಮಾನ್ಯ ವರ್ತನೆ.

3) ಸಮಾಜ-ಸಾಂಸ್ಕೃತಿಕ ಅಂಶಗಳು (socio-cultural factors) :

ಕುಟುಂಬದ ರಚನೆ, ಸಾಮಾಜಿಕ ಸಂಬಂಧಗಳು, ಸಮಾಜದ ನಿರೀಕ್ಷೆಗಳು, ಮುಂತಾದವು ಅಪಸಾಮಾನ್ಯ ವರ್ತನೆ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಅಂಶಗಳಾಗಿವೆ.

Leave a Comment