psychology in relation to other sciences: ಮನೋವಿಜ್ಞಾನ ಮತ್ತು ಇತರ ಅಧ್ಯಯನ ವಿಷಯಗಳು (psychology in relation to other sciences):

psychology in relation to other sciences: ಮನೋವಿಜ್ಞಾನ ಮತ್ತು ಇತರ ಅಧ್ಯಯನ ವಿಷಯಗಳು (psychology in relation to other sciences):

psychology in relation to other sciences

psychology in relation to other sciences: ಸಾಮಾಜಿಕ ಮನೋವಿಜ್ಞಾನದ ಹಾಗೂ ವಿಜ್ಞಾನ ವಿಷಯಗಳ ಸಂಶೋಧಕರು ಹಾಗೂ ಪರಿಣಿತರು ಮನೋವಿಜ್ಞಾನ ಅಧ್ಯಯನದ ಮಹತ್ವ ಅರಿತಿದ್ದಾರೆ. ವ್ಯಕ್ತಿಯ ನರಮಂಡಲ ಮತ್ತು ವರ್ತನೆಯ ಅಧ್ಯಯನವು ನರವಿಜ್ಞಾನ, ತತ್ವಶಾಸ್ತ್ರ, ಜೀವಶಾಸ್ತ್ರ, ವೈದ್ಯಶಾಸ್ತ್ರ, ಮತ್ತು ಗಣಕ ವಿಜ್ಞಾನದ ಸಂಬಂಧವನ್ನು ಸೂಚಿಸುತ್ತದೆ. ವ್ಯಕ್ತಿಯ ವರ್ತನೆಯನ್ನು ಆತನ ಸಮಾಜ ಹಾಗೂ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವುದರಿಂದ ಮನೋವಿಜ್ಞಾನ ಹಾಗೂ ಇತರ ಸಾಮಾಜಿಕ ವಿಜ್ಞಾನಗಳಾದ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಹಾಗೂ ಆಂತ್ರೋಪಲಜಿ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ಮನೋವಿಜ್ಞಾನವು ಕಲೆ, ಸಾಹಿತ್ಯ, ಹಾಗೂ ಸಂಗೀತದ ಜೊತೆಗೆ ಕೂಡ ತನ್ನ ಸಂಬಂಧವನ್ನು ಹೊಂದಿದೆ. ಮನೋವಿಜ್ಞಾನ ಸಂಬಂಧ ಹೊಂದಿರುವ ಕೆಲವು ಪ್ರಮುಖ ಅಧ್ಯಯನ ವಿಷಯಗಳ ಬಗ್ಗೆ ಮುಂದೆ ಚರ್ಚಿಸಲಾಗಿದೆ.

ತತ್ವಶಾಸ್ತ್ರ (Philosophy):

ಸುಮಾರು 19ನೇ ಶತಮಾನದ ಅಂತ್ಯದವರೆಗೆ ಮಾನವ ವರ್ತನೆಯ ಪ್ರಮುಖ ಅಂಶಗಳಾದ, ಮನಸ್ಸಿನ ಸ್ವಭಾವದ ಬಗೆಗಿನ ಅಧ್ಯಯನ, ಪ್ರೇರಣೆ ಹಾಗೂ ಸಂವೇಗಗಳ ಅಧ್ಯಯನ ಮುಂತಾದವು ತತ್ವಶಾಸ್ತ್ರದ ಭಾಗಗಳಾಗಿದ್ದವು. 19ನೇ ಶತಮಾನದ ಕೊನೆಗೆ ವಿಲಿಯಂ ವೂಂಟ್ ಹಾಗೂ ಇತರ ಮನೋವಿಜ್ಞಾನಿಗಳು ಪ್ರಾಯೋಗಿಕ ವಿಧಾನಗಳ ಮೂಲಕ ಮನುಷ್ಯನ ಮನಸ್ಸು ಹಾಗೂ ವರ್ತನೆಯ ಇತರ ಕ್ರಿಯೆಗಳ ಅಧ್ಯಯನ ನಡೆಸಲು ಆರಂಭಿಸಿದರು. ಇದರ ಫಲವಾಗಿ ಮನೋವಿಜ್ಞಾನ ಪ್ರತ್ಯೇಕ ಅಧ್ಯಯನ ವಿಷಯವಾಗಿ ರೂಪುಗೊಂಡಿತು. ಮನೋವಿಜ್ಞಾನದ ಅನೇಕ ವಿಷಯಗಳು ತತ್ವಶಾಸ್ತ್ರದ ಕೊಡುಗೆಗಳಾಗಿವೆ.

ವೈದ್ಯಕೀಯ (Medical):

‘ಆರೋಗ್ಯಕರ ದೇಹ ಹೊಂದಲು ಆರೋಗ್ಯಕರ ಮನಸ್ಸು ಬಹಳ ಮುಖ್ಯ’ ಎಂಬ ವೈದ್ಯರ ಅನಿಸಿಕೆ ನಿಜವಾಗಿದೆ. ಬಹುತೇಕ ಆಸ್ಪತ್ರೆಗಳು ಮನೋವಿಜ್ಞಾನಿಗಳನ್ನು ನೇಮಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಮನೋವಿಜ್ಞಾನಿಗಳ ಕರ್ತವ್ಯಗಳೆಂದರೆ, ರೋಗಿಗಳು ಆರೋಗ್ಯಕರ ಜೀವನ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಮನಃಪರಿವರ್ತನೆ ಮಾಡುವುದು, ಚಿಕತ್ಸೆ ಬಗ್ಗೆ ಹಾಗೂ ಕಾಯಿಲೆ ಬಗ್ಗೆ ತಳೆದಿರುವ ಅನಗತ್ಯ ತಪ್ಪು ತಿಳುವಳಿಕೆ ಹಾಗೂ ಭಯವನ್ನು ಹೋಗಲಾಡಿಸುವುದು, ಮತ್ತು ವೈದ್ಯರ ಸಲಹೆಯನ್ನು ಚಾಚೂತಪ್ಪದೇ ಪಾಲಿಸುವಂತೆ ಮಾಡುವುದು. ಏಡ್ಸ್‌, ಕ್ಯಾನ್ಸರ್ ಮುಂತಾದ ಗಂಭೀರ ಕಾಯಿಲೆಗಳಿಂದ ನರಳುತ್ತಿರುವವರಿಗೆ ಆಪ್ತಸಲಹೆಯ ಅಗತ್ಯವನ್ನು ವೈದ್ಯರು ಮನಗಂಡಿದ್ದಾರೆ. ‘ಒಬ್ಬ ಉತ್ತಮ ವೈದ್ಯ ರೋಗಿಯ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ತ್ರವನ್ನು ಉತ್ತಮ ಪಡಿಸುವ ಬಗ್ಗೆ ಒತ್ತು ನೀಡುತ್ತಾನೆ’.

ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಮತ್ತು ಸಮಾಜಶಾಸ್ತ್ರ (Economics, Political science and Sociology)

ಈ ಸಾಮಾಜಿಕ ವಿಜ್ಞಾನಗಳು ಮನೋವಿಜ್ಞಾನದಿಂದ ಹಾಗೂ ಮನೋವಿಜ್ಞಾನ ಸಾಮಾಜಿಕ ವಿಜ್ಞಾನಗಳಿಂದ ಪರಸ್ಪರ ಪ್ರಭಾವಿತವಾಗಿವೆ. ಮನೋವಿಜ್ಞಾನವು ಕೆಳಮಟ್ಟದಲ್ಲಿ ಆರ್ಥಿಕ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಅದರಲ್ಲೂ ಬಳಕೆದಾರರ ವರ್ತನೆಯನ್ನು ಅರ್ಥಮಾಡಿಕೊಳ್ಳಲು. ಠೇವಣೆ ಇಡುವ ಸ್ವಭಾವ, ಮತ್ತು ತೀರ್ಮಾನ ತೆಗೆದುಕೊಳ್ಳುವ ವಿಧಾನವನ್ನು, ಅಮೆರಿಕಾದ ಆರ್ಥಿಕ ತಜ್ಞರು, ಆರ್ಥಿಕ ಪ್ರಗತಿಯನ್ನು ನಿಷ್ಕರ್ಷೆ ಮಾಡಲು ಬಳಸುವರು. ಈ ವಿಷಯದ ಮೇಲೆ ನಡೆಸಿದ ಅಧ್ಯಯನಕ್ಕಾಗಿ ಎಚ್. ಸೈಮನ್ಸ್, ಇ. ಕನ್ವೆಮನ್ ಮತ್ತು ಟಿ. ಷೆಲಿಂಗ್ ಎಂಬ ಮೂವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಅರ್ಥಶಾಸ್ತ್ರದಂತೆಯೇ ರಾಜ್ಯಶಾಸ್ತ್ರದಲ್ಲಿ ಕೂಡ ಮನೋವಿಜ್ಞಾನದ ಕೊಡುಗೆಯನ್ನು ಕಾಣಬಹುದು. ಉದಾಹರಣೆಗೆ: ಮತದಾನ ಮಾಡುವ ಸ್ವಭಾವ, ಅಧಿಕಾರ ಚಲಾವಣೆ, ರಾಜಕೀಯ ಸಂಘರ್ಷಗಳ ರೀತಿ-ನೀತಿ ಇತ್ಯಾದಿಗಳ ಅಧ್ಯಯನದಲ್ಲಿ ಮನಃಶಾಸ್ತ್ರದ ಪ್ರಭಾವವನ್ನು ಕಾಣಬಹುದು. ಸಮಾಜಶಾಸ್ತ್ರ ಹಾಗೂ ಮನೋವಿಜ್ಞಾನ ವ್ಯಕ್ತಿಯ ಸಮಾಜೀಕರಣದ ಮೇಲೆ ಸಾಮಾಜಿಕ – ಸಾಂಸ್ಕೃತಿಕ ಅಂಶಗಳ ಪ್ರಭಾವ, ಸಾಮಾಜಿಕ ವರ್ತನೆಗಳು, ಮುಂತಾದುವುಗಳ ಅಧ್ಯಯನದಲ್ಲಿ ಸಮಾನ ಕೊಡುಗೆ ನೀಡಿವೆ.

ಗಣಕ ವಿಜ್ಞಾನ (Computer Science)

ಗಣಕ ವಿಜ್ಞಾನವು ಪ್ರಾರಂಭದಿಂದಲೂ ಮಾನವನ ಮನಸ್ಸನ್ನು ಅನುಕರಿಸಲು ಯತ್ನಿಸುತ್ತಿದೆ. ಗಣಕಯಂತ್ರವನ್ನು  ಹೇಗೆ ರೂಪಿಸಲಾಗಿದೆ. ಅದರಲ್ಲಿ ಮಾಹಿತಿ ಹೇಗೆ ಸಂಗ್ರಹವಾಗುತ್ತದೆ ಮತ್ತು ವಿಶ್ಲೇಷಿಸಲ್ಪಡುತ್ತದೆ ಎಂಬುದು ಕಂಪ್ಯೂಟರ್ ಮಾನವನ ಮೆದುಳಿನಂತೆ ಕೆಲಸಮಾಡುತ್ತದೆ ಎಂಬುದನ್ನು ದೃಢಪಡಿಸುತ್ತದೆ. ಗಣಕಯಂತ್ರ ತಜ್ಞರು ಮತ್ತು ಇಂಜಿನಿಯರ್‌ಗಳು ಗಣಕಯಂತ್ರವನ್ನು ಹೆಚ್ಚು ಬುದ್ದಿಯುಳ್ಳ ಯಂತ್ರವನ್ನಾಗಿ ರೂಪಿಸುತ್ತಿದ್ದಾರೆ. ಆ ಯಂತ್ರದಲ್ಲಿ ಮನುಷ್ಯನಲ್ಲಿರುವಂತೆ ಭಾವನೆಗಳನ್ನು ಸಂವೇದನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ತುಂಬುತ್ತಿದ್ದಾರೆ. ಮನೋವಿಜ್ಞಾನ ಮತ್ತು ಗಣಕ ವಿಜ್ಞಾನಗಳಲ್ಲಿ ಆಗುತ್ತಿರುವ ಪ್ರಗತಿಯು ಸಂಜ್ಞಾನತ್ಮಕ ವಿಜ್ಞಾನದಲ್ಲಿ ಗಣನೀಯ ಪ್ರಗತಿಯನ್ನುಂಟು ಮಾಡುತ್ತಿವೆ.

ವಿವಿಧ ಕ್ಷೇತ್ರಗಳಲ್ಲಿ ಶೈಕ್ಷಣಿಕ ಮನೋವಿಜ್ಞಾನಿಗಳು:  psychologists in different fields):-

ಶೈಕ್ಷಣಿಕ ಮನೋವಿಜ್ಞಾನಿಗಳು ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದಾರೆ. ನೈದಾನಿಕ ಮನೋವಿಜ್ಞಾನಿಗಳು ಮನೋರೋಗಿಗಳಿಗೆ ಮನೋಚಿಕಿತ್ಸೆ ನೀಡಿ ಗುಣಪಡಿಸುತ್ತಿದ್ದಾರೆ. ಆಪ್ತಸಲಹೆ ಮನೋವಿಜ್ಞಾನಿಗಳು ಸಮಸ್ಯೆಯುಳ್ಳ ವ್ಯಕ್ತಿಗಳಿಗೆ ಉಪಬೋಧೆ ಮೂಲಕ ಪರಿಹಾರ ಸೂಚಿಸುತ್ತಾರೆ. ಸೈನ್ಯದಲ್ಲಿ ಸೈನಿಕರ ಆಯ್ಕೆ ಹಾಗೂ ತರಬೇತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ಅವರಿಗೆ ಶಿಕ್ಷೆ ವಿಧಿಸುವಲ್ಲಿ ನ್ಯಾಯಾಲಯಕ್ಕೆ ಮನೋವಿಜ್ಞಾನ ತುಂಬಾ ಸಹಕಾರಿಯಾಗಿದೆ. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಮನೋವಿಜ್ಞಾನಿಗಳು ಗಣನೀಯ ಸೇವೆಸಲ್ಲಿಸುತ್ತಿದ್ದಾರೆ.

ದೈನಂದಿನ ಬದುಕಿನಲ್ಲಿ ಮನೋವಿಜ್ಞಾನ psychology in everyday life) :-

ಮನೋವಿಜ್ಞಾನದ ಬಗೆಗಿನ ಇದುವರೆಗಿನ ಚರ್ಚೆಯಿಂದ ನಮಗೆ ಮನದಟ್ಟಾಗಿರುವುದೇನೆಂದರೆ, ಮನೋವಿಜ್ಞಾನ ಕೇವಲ ಮಾನವನ ವರ್ತನೆ ಹಾಗೂ ಮನಸ್ಸಿನ ಬಗ್ಗೆ ನಮಗಿರುವ ಕುತೂಹಲವನ್ನು ತಣಿಸುವುದಷ್ಟೇ ಅಲ್ಲ, ಅನೇಕ ಸಮಸ್ಯೆಗಳಿಗೆ ಪರಿಹಾರವನ್ನೂ ಸೂಚಿಸುತ್ತದೆ. ಉದಾಹರಣೆಗೆ : ಸಮಸ್ಯಾತ್ಮಕ ಮಕ್ಕಳನ್ನು ನಿಭಾಯಿಸುವ ಬಗ್ಗೆ ಮತ್ತು ಮದ್ಯವ್ಯಸನಿ ತಂದೆಯನ್ನು ಎದುರಿಸಬೇಕಾದ ಮಕ್ಕಳು, ಮುಂತಾದ ಕೌಟುಂಬಿಕ ಸಮಸ್ಯೆಗಳಿಗೂ ಮನೋವಿಜ್ಞಾನ ಪರಿಹಾರ ಸೂಚಿಸುತ್ತದೆ. ಕೆಲವು ಸಮಸ್ಯೆಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮಸ್ಯೆಗಳಾಗಿರಬಹುದು (ಉದಾ: ಉಗ್ರಗಾಮಿಗಳ ಸಮಸ್ಯೆ). ಶಿಕ್ಷಣ, ಆರೋಗ್ಯ, ಪರಿಸರ, ಸಾಮಾಜಿಕ ನ್ಯಾಯ. ಮಹಿಳಾ ಅಭಿವೃದ್ಧಿ, ಸಾಮಾಜಿಕ ಸಂಬಂಧಗಳು ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಷ್ಟಸಾಧ್ಯ. ಇವುಗಳಿಗೆ ಪರಿಹಾರ ದೊರೆಯಬೇಕಾದರೆ ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸುಧಾರಣೆ ಆಗಬೇಕು. ಅನೇಕ ಸಮಸ್ಯೆಗಳಿಗೆ ಮೂಲ ಕಾರಣ ನಮ್ಮ ಅನಾರೋಗ್ಯಕರ ಆಲೋಚನೆಗಳು, ನಕರಾತ್ಮಕ ಮನೋಭಾವ ಹಾಗೂ ಆಸಹನೀಯ ನಡವಳಿಕೆಗಳು. ಈ ಸಮಸ್ಯೆಗಳ ಮನೋವೈಜ್ಞಾನಿಕ ವಿಶ್ಲೇಷಣೆ ಮಾಡಲು. ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಪರಿಣಾಮಕಾರಿ ಪರಿಹಾರ ಕಂಡುಹಿಡಿಯಲು ಮನೋವಿಜ್ಞಾನ ಸಹಾಯಮಾಡುತ್ತದೆ.

ಬದುಕಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮನೋವಿಜ್ಞಾನದ ಸತ್ವವನ್ನು ಈಗ ಮನಗಂಡಿದ್ದಾರೆ. ಸುದ್ದಿ ಮಾಧ್ಯಮ ಈ ದಿಶೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ದೂರದರ್ಶನದ ವಿವಿಧ ಚಾನೆಲ್‌ಗಳಲ್ಲಿ ಮನೋವಿಜ್ಞಾನಿಗಳು ಹಾಗೂ ಉಪಬೋಧಕರು ವಿವಿಧ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದನ್ನು ನೀವೆಲ್ಲ ನೋಡಿರುತ್ತೀರಿ. ಸಮಾಜದ ಕೆಲವು ಸಂಕೀರ್ಣ ಸಮಸ್ಯೆಗಳಾದ, ಸಾಮಾಜಿಕ ಬದಲಾವಣೆ, ಜನಸಂಖ್ಯೆ, ಬಡತನ, ಗುಂಪುಘರ್ಷಣೆ, ಪರಿಸರ ನಾಶ, ವರದಕ್ಷಿಣೆ ಸಮಸ್ಯೆ, ಸಾಮಾಜಿಕ ಶೋಷಣೆ ಮುಂತಾದ ಸಮಸ್ಯೆಗಳ ಬಗ್ಗೆ ವಿಮರ್ಶಾತ್ಮಕ ಚಿಂತನೆಗಳನ್ನು ಅಭಿಪ್ರಾಯಗಳನ್ನು ಮಾಧ್ಯಮಗಳಲ್ಲಿ ನೀವು ನೋಡಿರುತ್ತೀರಿ. ಜನರ ಬದುಕಿನ ಗುಣಮಟ್ಟ ಸುಧಾರಿಸಲು ಮನೋವಿಜ್ಞಾನಿಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹಾಗಾಗಿ ಇಂದು ಮನೋವಿಜ್ಞಾನಿಗಳು ವಿವಿಧ ಕ್ಷೇತ್ರಗಳಲ್ಲಿ ಅಂದರೆ ಶಾಲೆ, ಆಸ್ಪತ್ರೆಗಳು, ಕೈಗಾರಿಕೆಗಳು, ಸೆರೆಮನೆ, ವ್ಯಾಪಾರೋದ್ಯಮಗಳು, ರಕ್ಷಣಾ ವ್ಯವಸ್ಥೆ, ಮುಂತಾದಕಡೆ ಸಮಸ್ಯೆಗಳ ನಿವಾರಣೆಗಾಗಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಖಾಸಗಿಯಾಗಿ ಸಮಸ್ಯೆ ಪರಿಹರಿಸುವ ಸಲಹೆಗಾರರಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.

ಮನೋವಿಜ್ಞಾನದ ಪರಿಜ್ಞಾನವು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಲು ಹಾಗೂ ಇತರರಿಗೆ ಸಹಾಯಮಾಡಲು ನಿಮ್ಮನ್ನು ಸಜ್ಜುಗೊಳಿಸುತ್ತದೆ. ಇದರ ಅರ್ಥ ನಾವು ನಮ್ಮ ಬಗ್ಗೆ ಯೋಚಿಸುವುದಿಲ್ಲ ಎಂಬ ಅರ್ಥವಲ್ಲ. ಆದರೆ ಕೆಲವು ವೇಳೆ ನಮ್ಮ ಬಗ್ಗೆ ಮಾಡುವ ಟೀಕೆಯನ್ನು ಪ್ರತಿಭಟಿಸುತ್ತೇವೆ ಇಲ್ಲವೇ ತಿರಸ್ಕರಿಸುತ್ತೇವೆ. ಇದನ್ನು ರಕ್ಷಣಾತ್ಮಕ ವರ್ತನೆ ಎನ್ನುತ್ತೇವೆ. ಇನ್ನು ಕೆಲವರು ತಮ್ಮ ಬಗೆಗೆ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ. ಇಂತಹ ಮನಃಸ್ಥಿತಿಗಳು ವ್ಯಕ್ತಿತ್ವ ಬೆಳವಣಿಗೆಗೆ ಮಾರಕ. ನಮ್ಮ ಬಗ್ಗೆ ನಾವು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು, ಜ್ಞಾಪಕಶಕ್ತಿ ವೃದ್ಧಿಸಿಕೊಳ್ಳಲು. ಕಲಿಕೆಯನ್ನು ಉತ್ತಮಪಡಿಸಿಕೊಳ್ಳಲು, ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಮಾಜಿಕ ಸಂಬಂಧಗಳನ್ನು ಉತ್ತಮ ಪಡಿಸಿಕೊಳ್ಳಲು ಮನೋವೈಜ್ಞಾನಿಕ ತತ್ವಗಳನ್ನು ಹಾಗೂ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು. ಮನೋವಿಜ್ಞಾನ ಸಹಾಯ ಮಾಡುತ್ತದೆ. ಹೀಗೆ ನಮ್ಮ ಬದುಕಿನ ಗುಣಮಟ್ಟ ಸುಧಾರಿಸುವಲ್ಲಿ ಮನೋವಿಜ್ಞಾನ ಮುಖ್ಯಪಾತ್ರ ವಹಿಸುತ್ತದೆ ಎಂದು ಹೇಳಬಹುದು.

ಗಮನಿಸಬೇಕಾದ ಅಂಶಗಳು:

ಮನೋವಿಜ್ಞಾನ ಒಂದು ಆಧುನಿಕ ವಿಷಯ. ಇದರ ಉದ್ದೇಶ ಜೀವಿಯ ವರ್ತನೆಯನ್ನು ಹಾಗೂ ಮಾನಸಿಕ ಪ್ರಕ್ರಿಯೆಗಳನ್ನು ಅಧ್ಯಯನ ಮಾಡುವುದು. ಮನೋವಿಜ್ಞಾನ ಒಂದು ಸ್ವಾಭಾವಿಕ ಹಾಗೂ ಸಾಮಾಜಿಕ ವಿಜ್ಞಾನವಾಗಿದೆ.

ಮನೋವಿಜ್ಞಾನಿಗಳು ಇಂದು ಅನೇಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತತ್ವಗಳನ್ನು ರೂಪಿಸಲು ಹಾಗೂ ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ಮನೋವಿಜ್ಞಾನದ ಪ್ರಮುಖ ಕ್ಷೇತ್ರಗಳೆಂದರೆ ಸಂಜ್ಞಾನಾತ್ಮಕ ಮನೋವಿಜ್ಞಾನ, ಜೀವಮನೋವಿಜ್ಞಾನ, ಆರೋಗ್ಯ ಮನೋವಿಜ್ಞಾನ, ವಿಕಾಸ ಮನೋವಿಜ್ಞಾನ, ಸಾಮಾಜಿಕ ಮನೋವಿಜ್ಞಾನ, ಶೈಕ್ಷಣಿಕ ಹಾಗೂ ಶಾಲಾ ಮನೋವಿಜ್ಞಾನ, ನೈದಾನಿಕ ಮತ್ತು ಉಪಬೋದೆ ಮನೋವಿಜ್ಞಾನ, ಪರಿಸರ ಮನೋವಿಜ್ಞಾನ, ಕೈಗಾರಿಕಾ ಮನೋವಿಜ್ಞಾನ, ಕ್ರೀಡಾ ಮನೋವಿಜ್ಞಾನ ಇತ್ಯಾದಿ.

ಮನೋವಿಜ್ಞಾನ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಆಗಿದೆ. ಅವುಗಳೆಂದರೆ “ಸೈಕಿ” ಮತ್ತು “ಲೋಗಸ್”, ಸೈಕಿ ಎಂದರೆ ಆತ್ಮ, ಲೋಗಸ್ ಎಂದರೆ ಅಧ್ಯಯನ ಎಂದು ಅರ್ಥ.

ನಿರೂಪಣೆಗಳು (ವ್ಯಾಖ್ಯೆಗಳು)

1. ಮನೋವಿಜ್ಞಾನ ಎಂದರೆ: ಆತ್ಮದ ಅಧ್ಯಯನ ಈ ವ್ಯಾಖ್ಯೆಯನ್ನು ಒಪ್ಪಿಕೊಳ್ಳಲಿಲ್ಲ ಏಕೆಂದರೆ ಆತ್ಮ ಎಂಬುದು ಹೇಗಿದೆ ಮತ್ತು ಎಲ್ಲಿದೆ ಎಂದು ಯಾರಿಗೂ ತಿಳಿದಿಲ್ಲ.

2. ‘ಮನೋವಿಜ್ಞಾನ ಎಂದರೆ ಮನಸ್ಸಿನ ಅಧ್ಯಯನ’ ಇದೂ ಕೂಡ ಆತ್ಮದ ಅಧ್ಯಯನ ಎಂಬ ನಿರೂಪಣೆಯಂತೆಯೇ ಅಸ್ಪಷ್ಟವಾಗಿದೆ.

3. ‘ಮನೋವಿಜ್ಞಾನ ಎಂದರೆ ಪ್ರಜ್ಞಾನುಭವಗಳ ಅಧ್ಯಯನ’ ಈ ನಿರೂಪಣೆಯನ್ನು ವಿಲಿಯಂ ವೂಂಟ್ ನೀಡಿದನು. ಈತನು 1879ರಲ್ಲಿ ಜರ್ಮನಿಯ ‘ಲೀಪ್‌ಜಿಗ್’ ಎಂಬಲ್ಲಿ ಪ್ರಥಮ ಮನೋವಿಜ್ಞಾನ ಪ್ರಯೋಗಶಾಲೆಯನ್ನು ಸ್ಥಾಪಿಸಿದನು.

4. ಮನೋವಿಜ್ಞಾನ ಎಂದರೆ ಜೀವಿಯ ವರ್ತನೆಯ ವೈಜ್ಞಾನಿಕ ಅಧ್ಯಯನ.

5. “ಮನೋವಿಜ್ಞಾನ ಎಂದರೆ ಜೀವಿಯ ವರ್ತನೆಯನ್ನು ಹಾಗೂ ಮಾನಸಿಕ ಪ್ರಕ್ರಿಯೆಗಳನ್ನು ಅಧ್ಯಯನ ಮಾಡುವ ವಿಜ್ಞಾನ”, ಈ ನಿರೂಪಣೆ ಹೆಚ್ಚು ಸಮಂಜಸವಾಗಿದೆ ಎನ್ನಬಹುದು.

ಮನೋವಿಜ್ಞಾನದ ವ್ಯಾಪ್ತಿ:

1. ಅಧ್ಯಯನ ಕ್ಷೇತ್ರಗಳು ಮತ್ತು

2. ಅನ್ವಯಿಕ ಕ್ಷೇತ್ರಗಳು ಎಂಬ ಎರಡು ವಿಧಗಳು,

ಮನೋವಿಜ್ಞಾನ ಕ್ಷೇತ್ರಗಳು:

1. ಸಾಮಾನ್ಯ ಮನೋವಿಜ್ಞಾನ: ಮಾನವನ ವರ್ತನೆಯ ಮೂಲತತ್ವಗಳು ಹಾಗೂ ಸಿದ್ದಾಂತಗಳನ್ನು ಕುರಿತು ಅಧ್ಯಯನ ಮಾಡುವುದು.

2. ವಿಕಾಸ ಮನೋವಿಜ್ಞಾನ : ಮಾನವನ ಬೆಳವಣಿಗೆ ಮತ್ತು ವಿಕಾಸ ಕುರಿತು ಅಧ್ಯಯನ ಮಾಡುತ್ತದೆ.

3. ಸಾಮಾಜಿಕ ಮನೋವಿಜ್ಞಾನ : ವ್ಯಕ್ತಿಯ ವರ್ತನೆಯನ್ನು ಅವನ ಸಾಮಾಜಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡುತ್ತದೆ.

4. ಅಪಸಾಮಾನ್ಯ ಮನೋವಿಜ್ಞಾನ : ವ್ಯಕ್ತಿಯ ಅಪಸಾಮಾನ್ಯ ವರ್ತನೆಯನ್ನು ಕುರಿತು ಅಧ್ಯಯನ ಮಾಡುತ್ತದೆ.

5. ಪ್ರಾಣಿ ಮನೋವಿಜ್ಞಾನ : ಪ್ರಾಣಿಗಳ ವರ್ತನೆಯನ್ನು ಕುರಿತು ಅಧ್ಯಯನ ಮಾಡುತ್ತದೆ.

6. ನೈದಾನಿಕ ಮನೋವಿಜ್ಞಾನ : ಅಪಸಾಮಾನ್ಯ ವರ್ತನೆಯ ಕಾರಣ ಹಾಗೂ ಆ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ಅನ್ವಯಿಕ ಮನೋವಿಜ್ಞಾನವಾಗಿದೆ.

7. ಶೈಕ್ಷಣಿಕ ಮನೋವಿಜ್ಞಾನ : ಮನೋವೈಜ್ಞಾನಿಕ ತತ್ವಗಳು ಮತ್ತು ವಿಧಾನಗಳನ್ನು ಬಳಸಿ ಕಲಿಕೆ ಮತ್ತು ಬೋಧನೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತದೆ.

8. ಕೈಗಾರಿಕಾ ಮನೋವಿಜ್ಞಾನ : ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳ ಆಯ್ಕೆ, ತರಬೇತಿ. ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ಮುಂತಾದ ಅಂಶಗಳ ಬಗ್ಗೆ ಗಮನ ನೀಡುತ್ತದೆ.

9. ಸೈನಿಕ ಮನೋವಿಜ್ಞಾನ : ಸೈನ್ಯಕ್ಕೆ ಸೂಕ್ತ ವ್ಯಕ್ತಿಗಳ ಆಯ್ಕೆ, ತರಬೇತಿ ಹಾಗೂ ಸೈನಿಕರ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಒತ್ತು ನೀಡುತ್ತದೆ.

Leave a Comment