Psychology Its Social Relevance:ಮನೋವಿಜ್ಞಾನ ಅದರ ಸಾಮಾಜಿಕ ಅನ್ವಯ (Psychology Its Social Relevance):

Psychology Its Social Relevance:ಸಾಮಾಜಿಕ ಮನೋವಿಜ್ಞಾನವು ಮನೋವಿಜ್ಞಾನದ ಒಂದು ಶಾಖೆ. ಸಾಮಾಜಿಕ ಮನೋವಿಜ್ಞಾನವು ಮಾನವನ ವರ್ತನೆಯ ಮೇಲೆ ಸಾಮಾಜಿಕ ಪರಿಸರ ಹಾಗೂ ಇತರರು ಹೇಗೆ ಪ್ರಭಾವ ಬೀರುತ್ತಾರೆ ಎಂಬುದನ್ನು ಅಧ್ಯಯನ ಮಾಡುತ್ತದೆ. ಸಮಾಜದಲ್ಲಿ ಹುಟ್ಟಿ ಬೆಳೆಯುವಾಗ ಸಮಾಜದ ಎಲ್ಲ ರೀತಿ-ನೀತಿಗಳನ್ನು, ಮೌಲ್ಯಗಳನ್ನು, ಸಂಪ್ರದಾಯಗಳನ್ನು ಮೈಗೂಡಿಸಿಕೊಳ್ಳುತ್ತೇವೆ. ವ್ಯಕ್ತಿ-ವ್ಯಕ್ತಿಯ ನಡುವಿನ ಸಂಬಂಧ, ವ್ಯಕ್ತಿ-ಸಮೂಹದ ನಡುವಿನ ಸಂಬಂಧ, ಸಮೂಹ-ಸಮೂಹದ ನಡುವಿನ ಸಂಬಂಧ ಕುರಿತು ಸಾಮಾಜಿಕ ಮನೋವಿಜ್ಞಾನ ಅಧ್ಯಯನ ಮಾಡುತ್ತದೆ. ಸಮಾಜದಲ್ಲಿ ವ್ಯಕ್ತಿಯ ಮನೋಭಾವ, ಪೂರ್ವಾಗ್ರಹ ಇತ್ಯಾದಿ ವರ್ತನೆಗಳು ಹೇಗೆ ರೂಪುಗೊಳ್ಳುತ್ತವೆ ಎಂಬ ಬಗ್ಗೆ ಕೂಡ ಸಾಮಾಜಿಕ ಮನೋವಿಜ್ಞಾನ ಅಧ್ಯಯನ ಮಾಡುತ್ತದೆ. ಹೀಗೆ ಸಮಾಜ ಹಾಗೂ ವ್ಯಕ್ತಿಯ ನಡುವಿನ ಸಂಬಂಧ, ಪರಸ್ಪರ ಪ್ರಭಾವ, ಮುಂತಾದ ಅಂಶಗಳನ್ನು ಸಾಮಾಜಿಕ ಮನೋವಿಜ್ಞಾನವು ಅಧ್ಯಯನ ಮಾಡುತ್ತದೆ. ಈ ಅಧ್ಯಾಯದಲ್ಲಿ ಮನುಷ್ಯನ ಕೆಲವು ಸಾಮಾಜಿಕ ವರ್ತನೆಗಳನ್ನು ಕುರಿತು ಅಧ್ಯಯನ ಮಾಡೋಣ.
ಸಾಮಾಜಿಕ ವರ್ತನೆ( Explaining Social Behaviour):
ಮಾನವ ಸಮಾಜದಲ್ಲಿ ಜನರ ನಡುವಿನ ಸಂಬಂಧಗಳು ಸಂಕೀರ್ಣವಾದವುಗಳು. ನಮ್ಮ ವ್ಯಕ್ತಿತ್ವ ಹಲವು ಸಾಮಾಜಿಕ ಅಂಶಗಳಿಂದ ಪ್ರಭಾವಿತವಾಗಿದೆ. ನಮ್ಮ ನಡೆ, ನುಡಿ, ಹಾವ-ಭಾವ, ಆಲೋಚನೆ, ಭಾವನೆಗಳು, ಮುಂತಾದ ವರ್ತನೆಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ವ್ಯಕ್ತಿಗಳು, ವಸ್ತುಗಳು, ಸನ್ನಿವೇಶಗಳು, ಹಾಗೂ ಘಟನೆಗಳ ಪ್ರಭಾವದಿಂದ ರೂಪಿತವಾಗಿವೆ. ಉದಾಹರಣೆಗೆ: ಒಬ್ಬ ಹಾಡುಗಾರ ಸ್ಟುಡಿಯೋದಲ್ಲಿ ಹಾಡುವ ಸನ್ನಿವೇಶಕ್ಕೂ ಒಂದು ಸಭಾಂಗಣದಲ್ಲಿ ಹಾಡುವ ಸನ್ನಿವೇಶಕ್ಕೂ ವ್ಯತ್ಯಾಸವಿರುತ್ತದೆ. ಸ್ಟುಡಿಯೋದಲ್ಲಿ ತಾನೊಬ್ಬನೇ ಇರುತ್ತಾನೆ. ಆದರೆ ಒಂದು ಸಭಾಂಗಣದಲ್ಲಿ ನೂರಾರು ಜನರ ನಡುವೆ ಹಾಡುವಾಗ ಆತನ ವರ್ತನೆ ಭಿನ್ನವಾಗಿರುತ್ತದೆ. ನೂರಾರು ಕಣ್ಣುಗಳು ಹಾಗೂ ಕಿವಿಗಳು ಹಾಡುಗಾರನ ಮೇಲೆ ಕೇಂದ್ರೀಕೃತವಾಗಿರುವಾಗ ಹಾಡುಗಾರ ತುಂಬಾ ಜಾಗರೂಕನಾಗಿರುತ್ತಾನೆ. ಇದಕ್ಕೆ ಕಾರಣ ಸಭಾಂಗಣದ ಸಾಮಾಜಿಕ ಸನ್ನಿವೇಶ, ಸಾಮಾಜಿಕ ಮನೋವಿಜ್ಞಾನಿಗಳು ಸಾಮಾಜಿಕ ವರ್ತನೆಯ ವಿವಿಧ ಅಂಶಗಳಿಗೆ ಗಮನ ನೀಡುತ್ತಾರೆ ಮತ್ತು ವರ್ತನೆಯ ಕಾರ್ಯ-ಕಾರಣ ಸಂಬಂಧವನ್ನು ಕುರಿತು ಅಧ್ಯಯನ ಮಾಡುತ್ತಾರೆ. ಈ ಅಧ್ಯಾಯದಲ್ಲಿ ಸಾಮಾಜಿಕ ವರ್ತನೆಗಳಾದ ಮನೋಭಾವ (attitude), ಪೂರ್ವಾಗ್ರಹ, ಮುಂತಾದವುಗಳನ್ನು ಕುರಿತು ಅಧ್ಯಯನ ಮಾಡಲಾಗುವುದು.
1 ಮನೋಭಾವ (ಅಭಿವೃತ್ತಿ) Attitude:
ಮನೋಭಾವ ಎಂಬ ಪದವನ್ನು ಆಗಾಗ ನಮ್ಮ ಮಾತುಗಳಲ್ಲಿ ಸೇರಿಸುತ್ತೇವೆ. ನಮ್ಮ ಮನೋಭಾವ ನಮ್ಮ ಬದುಕನ್ನು ನಿರ್ಧರಿಸುತ್ತದೆ. ನಾವು ಯಾವ ರೀತಿಯ ಮನೋಭಾವವನ್ನು ಹೊಂದಿದ್ದೇವೆ ಎಂಬುದು ಯಶಸ್ಸಿನ ಹಾದಿಯಲ್ಲಿ ಇಲ್ಲವೆ ಅವನತಿಯ ಹಾದಿಯಲ್ಲಿ ಕೊಂಡೊಯ್ಯಬಲ್ಲದು.
ಮನೋಭಾವದ ಪರ್ಯಾಯ ಪದ ಅಭಿವೃತ್ತಿ ಅಭಿವೃತ್ತಿ ಅಥವಾ ಮನೋಭಾವ ಹೇಗೆ ರೂಪುಗೊಳ್ಳುತ್ತದೆ. ಹೇಗೆ ಬದಲಾಗುತ್ತದೆ. ಅದರ ಲಕ್ಷಣಗಳು ಏನು, ಎಂಬಿತ್ಯಾದಿ ಅಂಶಗಳ ಬಗ್ಗೆ ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.
ಅಭಿವೃತ್ತಿ ನಿರೂಪಣೆಗಳು :
ಮನೋಭಾವ ಕುರಿತು ನೀಡಿರುವ ನಿರೂಪಣೆಗಳು ಕೆಲವು ಪ್ರಮುಖ ಅಂಶಗಳನ್ನು ಒಳಗೊಂಡಿವೆ. ಅವುಗಳೆಂದರೆ ಮನೋಭಾವ ಎಂಬುದು ಮನಸ್ಸಿನ ಸ್ಥಿತಿ, ವ್ಯಕ್ತಿ ಒಂದು ವಸ್ತು, ಒಂದು ಸನ್ನಿವೇಶ ಹಾಗೂ ಇತರ ವ್ಯಕ್ತಿಗಳ ಬಗ್ಗೆ ತಳೆದಿರುವ ದೃಷ್ಟಿಕೋನ.
1. ‘ಬ್ರಿಟನ್’ ಎಂಬ ಸಾಮಾಜಿಕ ಮನೋವಿಜ್ಞಾನಿ ಪ್ರಕಾರ “ಸಂಬಂಧಪಟ್ಟ ವ್ಯಕ್ತಿಗಳು, ವಸ್ತುಗಳು ಹಾಗೂ ಸನ್ನಿವೇಶಗಳಿಗೆ ನಾವು ತೋರುವ ಪ್ರತಿಕ್ರಿಯೆಗಳ ಮೇಲೆ ಸಮಯೋಚಿತ ಪ್ರಭಾವ ಬೀರುವ ದೈಹಿಕ ಹಾಗೂ ಮಾನಸಿಕ ಸ್ಥಿತಿಯೇ ಮನೋಭಾವ ಅಥವಾ ಅಭಿವೃತ್ತಿ”.
2. ನ್ಯೂಕೂಂಬ್ ಪ್ರಕಾರ: “ವ್ಯಕ್ತಿಯ ಪ್ರೇರಣೆ ಕಾರ್ಯೋನ್ಮುಖವಾಗಲು ಅಗತ್ಯವಾದ ಸಿದ್ಧತಾ ಸ್ಥಿತಿಯೇ ಮನೋಭಾವ ಅಥವಾ ಅಭಿವೃತ್ತಿ.
ಅಭಿವೃತ್ತಿಯ ಸ್ವಭಾವ ಮತ್ತು ಅದರ ಘಟಕಾಂಶಗಳು :
ಅಭಿವೃತ್ತಿ ಅಥವಾ ಮನೋಭಾವ ಎಂಬುದು ಇತರ ಪರಿಕಲ್ಪನೆಗಳಾದ ನಂಬಿಕೆಗಳು ಹಾಗೂ ಮೌಲ್ಯಗಳಿಗಿಂತ ಭಿನ್ನವಾಗಿದೆ. ನಂಬಿಕೆಗಳು ಅಭಿವೃತ್ತಿಯ ಸಂಜ್ಞಾನಾತ್ಮಕ ಅಂಶಗಳಿಗೆ ಸಂಬಂಧಿಸಿದೆ. ಉದಾಹರಣೆಗೆ : ದೇವರ ನಂಬಿಕೆ. ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆ, ಇತ್ಯಾದಿ. ಮೌಲ್ಯಗಳು ಸಮಾಜದಲ್ಲಿ ಅನುಸರಿಸಲೇಬೇಕಾದ ನೈತಿಕ ಅಂಶಗಳಿಗೆ ಸಂಬಂಧಪಟ್ಟಿದೆ. ಉದಾಹರಣೆಗೆ : ಕಷ್ಟಪಟ್ಟು ಕೆಲಸ ಮಾಡು, ಪ್ರಮಾಣಿಕನಾಗಿರು, ಇತ್ಯಾದಿ ಸಮಾಜದಲ್ಲಿ ಹುಟ್ಟಿ ಬೆಳೆಯುವಾಗ ಇತರರ ಪ್ರಭಾವದಿಂದ ಹಾಗೂ ಸ್ವಯಂ ವಿವೇಚನೆಯಿಂದ ರೂಪುಗೊಂಡ ಮೌಲ್ಯಗಳು ಬದಲಾವಣೆ ಹೊಂದುವುದು ಕಷ್ಟ ಅಭಿವೃತ್ತಿಗಳು ನಾವು ಒಂದು ಸನ್ನಿವೇಶದಲ್ಲಿ ಹೇಗೆ ವರ್ತಿಸಬೇಕು ಎಂಬುದಕ್ಕೆ ಹಿನ್ನಲೆಯನ್ನು ಒದಗಿಸುತ್ತವೆ. ಉದಾಹರಣೆಗೆ : ಒಬ್ಬ ಹೊರದೇಶದ ವ್ಯಕ್ತಿಯ ಬಗೆಗಿನ ನಮ್ಮ ಮನೋಭಾವವು ಆ ವ್ಯಕ್ತಿಯ ಜೊತೆ ನಾವು ಹೇಗೆ ವರ್ತಿಸುತ್ತೇವೆ ಎಂಬುದಕ್ಕೆ ಹಿನ್ನಲೆಯನ್ನು ಒದಗಿಸುತ್ತದೆ.
ಅಭಿವೃತ್ತಿಗಳು ಭಾವನಾತ್ಮಕ, ಸಂಜ್ಞಾನಾತ್ಮಕ, ವರ್ತನಾ ಅಂಶಗಳ ಜೊತೆಗೆ ಇತರ ಅಂಶಗಳನ್ನು ಒಳಗೊಂಡಿದೆ.
ಅವುಗಳಲ್ಲಿ ಪ್ರಮುಖವಾದ ನಾಲ್ಕು ಅಂಶಗಳೆಂದರೆ:
1. ಮನೋಸ್ಥಿತಿ (ಸಕಾರಾತ್ಮಕತೆ & ನಕಾರಾತ್ಮಕತೆ)
2.ವೈಪರೀತ್ಯತೆ
3.ಸರಳತೆ ಅಥವಾ ಸಂಕಿರಣತೆ (Extremeness)
4.ಕೇಂದ್ರೀಕೃತಿತ್ವ: (Centrality)
1. ಮನೋಸ್ಥಿತಿ (ಸಕಾರಾತ್ಮಕತೆ & ನಕಾರಾತ್ಮಕತೆ)
ಒಬ್ಬ ವ್ಯಕ್ತಿ ಅಥವಾ ಒಂದು ವಸ್ತು ಅಥವಾ ಒಂದು ಸನ್ನಿವೇಶದ ಬಗ್ಗೆ ನಮ್ಮ ಮನೋಭಾವ ಸಕಾರಾತ್ಮಕ ಇಲ್ಲವೆ ನಕಾರಾತ್ಮಕವಾಗಿರುತ್ತದೆ. ಕೆಲವು ವೇಳೆ ನಾವು ತಟಸ್ಥ ಮನೋಭಾವವನ್ನು ತಳೆದಿರುತ್ತೇವೆ. ಉದಾಹರಣೆಗೆ : ವಿದ್ಯುತ್ ಆಣುಸ್ಥಾವರಗಳ ಸ್ಥಾಪನೆ ಬಗ್ಗೆ ನಿಮ್ಮ ಅಭಿಪ್ರಾಯ ಅಥವಾ ಮನೋಭಾವವನ್ನು 1 ರಿಂದ 5 ಅಂಶಗಳ ದರೀಕರಣದಲ್ಲಿ ಮಾಪನ ಮಾಡಿ ಎಂದಾಗ ನಿಮ್ಮ ಮಾಪನವು 4 ಅಥವ 5 ಎಂದಾಗಿದ್ದರೆ ಅದು ಸಕಾರಾತ್ಮಕ ಎಂದು ಹೇಳುತ್ತೇವೆ. ನಿಮ್ಮ ಅಭಿಪ್ರಾಯ 1 ಅಥವಾ 2 ಆಗಿದ್ದರೆ ಆಗ ಅದು ನಕಾರಾತ್ಮಕ ಮನೋಭಾವ ಎನಿಸುತ್ತದೆ. ಅದೇ ನಿಮ್ಮ ಅಭಿಪ್ರಾಯ 3 ಎಂದು ಮಾಪನ ಮಾಡಿದ್ದರೆ ಅದು ತಟಸ್ಥ ಮನೋಭಾವವನ್ನು ಸೂಚಿಸುತ್ತದೆ.
2) ವೈಪರಿತ್ಯತೆ ( ಉತ್ಕಟತೆ (Extremeness):
ನಮ್ಮ ಮನೋಭಾವವು ವೈಪರೀತ್ಯದ ಹಂತ ತಲುಪುವುದು ಯಾವಾಗ ಎಂದರೆ ನಮ್ಮ ಮಾಪನ ಸಕಾರಾತ್ಮಕ ಹಾಗೂ ನಕಾರಾತ್ಮಕತೆಯ ಗರಿಷ್ಠ ಮಿತಿ ತಲುಪಿದಾಗ ಮೇಲಿನ ಉದಾಹರಣೆಯಲ್ಲಿ ಅಣುಸ್ಥಾವರ ಸ್ಥಾಪನೆ ಬಗ್ಗೆ ಅಭಿಪ್ರಾಯವನ್ನು 5 ಅಂಶಗಳ ದರೀಕರಣದಲ್ಲಿ ಮಾಪನ ಮಾಡಿದಾಗ ನಿಮ್ಮ ಮಾಪನ | ಅಥವಾ 5 ಎಂದಾಗಿದ್ದರೆ ಅದನ್ನು ಮಾಪನದ ವೈಪರೀತ್ಯತೆ ಅಥವಾ ಉತ್ಕಟತೆ ಎನ್ನುತ್ತೇವೆ.
3. ಸರಳತೆ ಇಲ್ಲವೇ ಸಂಕಿರಣತೆ (Simplicity or Complexity):
ಮನೋಭಾವದಲ್ಲಿ ಸರಳತೆ ಇಲ್ಲವೆ ಸಂಕೀರ್ಣತೆಯನ್ನು ಒಂದು ಉದಾಹರಣೆಯೊಂದಿಗೆ ವಿವರಿಸುವುದು ಸೂಕ್ತವೆನಿಸುತ್ತದೆ. ಆರೋಗ್ಯ ಹಾಗೂ ನೈರ್ಮಲ್ಯತೆ ಕಾಪಾಡಿಕೊಳ್ಳುವ ಬಗ್ಗೆ ಒಂದು ಕುಟುಂಬದ ಎಲ್ಲ ಜನರ ಅಭಿಪ್ರಾಯ ಬೇರೆ ಬೇರೆಯಾಗಿರುತ್ತದೆ. ಅಂದರೆ ಒಂದೇ ಕುಟುಂಬದವರ ಅಭಿಪ್ರಾಯಗಳು ಬೇರೆ ಬೇರೆಯಾಗಿರುತ್ತವೆ. ಇದನ್ನು ಮನೋಭಾವದಲ್ಲಿ ಸಂಕೀರ್ಣತೆ ಎನ್ನುತ್ತೇವೆ. ಆದರೆ ಯಾವ ಪಕ್ಷಕ್ಕೆ ಅಥವಾ ಯಾವ ವ್ಯಕ್ತಿಗೆ ಚುನಾವಣೆಯಲ್ಲಿ ಮತ ಹಾಕುವಿರಿ? ಎಂಬ ಪ್ರಶ್ನೆಗೆ ಅದೇ ಕುಟುಂಬದ ಎಲ್ಲ ಜನರು ಒಂದೆರಡು ಪಕ್ಷ ಅಥವಾ ಅಭ್ಯರ್ಥಿಗಳ ಹೆಸರು ಹೇಳಬಹುದು. ಇದನ್ನೇ ಮನೋಭಾವದಲ್ಲಿ ಸರಳತೆ ಎನ್ನುತ್ತೇವೆ.
4. ಕೇಂದ್ರೀಕೃತತ್ವ Centrality):
ಅಭಿವೃತ್ತಿ ಅಥವಾ ಮನೋಭಾವ ವ್ಯವಸ್ಥೆಯಲ್ಲಿ ಒಂದು ಅಭಿವೃತ್ತಿ (ಮನೋಭಾವ)ಗೆ ಕೇಂದ್ರೀಕೃತತ್ತ ಸಂಬಂಧಿಸಿದೆ. ಕೇಂದ್ರೀಕೃತತ್ವವುಳ್ಳ ಅಭಿವೃತ್ತಿಯು ಅಭಿವೃತ್ತಿ ವ್ಯವಸ್ಥೆ ಮೇಲೆ ಇತರೆ ಯಾವುದೇ ಅಭಿವೃತ್ತಿಗಿಂತಲೂ ಹೆಚ್ಚು ಪ್ರಭಾವ ಬೀರುತ್ತದೆ. ಉದಾಹರಣೆಗೆ : ವಿಶ್ವಶಾಂತಿಗೆ ಸಂಬಂಧಪಟ್ಟಂತೆ ನಮ್ಮ ಅಭಿವೃತ್ತಿಯ ಮೇಲೆ ರಕ್ಷಣಾ ವೆಚ್ಚದ ಬಗೆಗಿನ ನಕಾರಾತ್ಮಕ ಅಭಿವೃತ್ತಿಯು ಕೇಂದ್ರಿಕೃತ ಅಭಿವೃತ್ತಿಯಾಗಿ ಉಳಿದೆಲ್ಲಾ ಅಭಿವೃತ್ತಿಗಳ ಮೇಲೆ ತನ್ನ ಪ್ರಭಾವ ಬೀರುತ್ತದೆ.
ನಮ್ಮ ವರ್ತನೆಯ ಇತರ ಅಂಶಗಳು ರೂಪುಗೊಳ್ಳುವ ರೀತಿಯಲ್ಲಿಯೇ ಅಭಿವೃತ್ತಿಗಳೂ ಸಹ ರೂಪುಗೊಳ್ಳುತ್ತದೆ. ಅಂದರೆ ಸಮಾಜದಲ್ಲಿ ಇತರ ಜನರ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವದಿಂದ ಅಭಿವೃತ್ತಿಗಳು ರೂಪುಗೊಳ್ಳುತ್ತವೆ.
ಅಭಿವೃತ್ತಿಗಳು ರೂಪುಗೊಳ್ಳುವಲ್ಲಿ ವ್ಯಕ್ತಿಯ ಸ್ವಂತ ಅನುಭವ ಮತ್ತು ಇತರರ ಪ್ರಭಾವ ಪ್ರಮುಖ ಅಂಶಗಳಾಗಿವೆ. ಅಲ್ಲದೆ ಅನುವಂಶೀಯ ಅಂಶಗಳಾದ ಗುಣಾಣು (genes) ಗಳು ಅಭಿವೃತ್ತಿ ರೂಪುಗೊಳ್ಳುವಲ್ಲಿ ಪರೋಕ್ಷ ಪ್ರಭಾವ ಬೀರುತ್ತವೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಅಭಿವೃತ್ತಿಗಳು ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮ ಇಷ್ಟ ಅಥವಾ ಇಷ್ಟ ಇಲ್ಲದಿರುವಿಕೆ ಪ್ರಮುಖ ಪಾತ್ರವಹಿಸುತ್ತದೆ. ಉದಾಹರಣೆಗೆ : ತಮಗೆ ಇಷ್ಟವಾದ ಉಪನ್ಯಾಸಕರು ಬೋಧಿಸುವ ವಿಷಯದ ಬಗ್ಗೆ ಕೆಲವು ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಅದೇ ರೀತಿ ತಾವು ಇಷ್ಟಪಡದ ಉಪನ್ಯಾಸಕರು ಬೋಧಿಸುವ ವಿಷಯದಲ್ಲಿ ಆಸಕ್ತಿ ತಳೆಯದಿರುವ ಸಾಧ್ಯತೆ ಇರುತ್ತದೆ.
ಅಭಿವೃತ್ತಿ ರೂಪುಗೊಳ್ಳುವಲ್ಲಿ ಹೊಗಳಿಕೆ-ತೆಗಳಿಕೆಗಳು ತಮ್ಮ ಪ್ರಭಾವ ಬೀರುತ್ತವೆ. ಉದಾಹರಣೆಗೆ : ಒಂದು ವಿಷಯದಲ್ಲಿ ಒಳ್ಳೆಯ ಪ್ರಗತಿ ತೋರಿದಾಗ ವಿದ್ಯಾರ್ಥಿಯನ್ನು ಹೊಗಳಿದರೆ ಅಥವಾ ಸೂಕ್ತ ಬಹುಮಾನ ನೀಡಿದರೆ ಆ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಾನೆ. ಅದೇ ರೀತಿ ಒಂದು ವಿಷಯದಲ್ಲಿ ಒಳ್ಳೆಯ ಪ್ರಗತಿ ತೋರದಿದ್ದಾಗ ವಿದ್ಯಾರ್ಥಿಯನ್ನು ನಿಂದಿಸಿದರೆ ಅಥವಾ ಶಿಕ್ಷಿಸಿದರೆ ಆ ವಿಷಯದ ಬಗ್ಗೆ ಹಾಗೂ ಶಿಕ್ಷಕರ ಬಗ್ಗೆ ನಕಾರಾತ್ಮಕ ಅಭಿವೃತ್ತಿ ಬೆಳೆಸಿಕೊಳ್ಳುತ್ತಾನೆ.
ಇತರರನ್ನು ಗಮನಿಸುವ ಮೂಲಕ ಅಭಿವೃತ್ತಿಗಳು ರೂಪುಗೊಳ್ಳುತ್ತವೆ. ಮಕ್ಕಳು ಬೆಳೆಯುತ್ತಾ ಕುಟುಂಬದ ಇತರರು ಕೈಗೊಳ್ಳುವ ಕಾರ್ಯಗಳ ಬಗ್ಗೆ ಒಳ್ಳೆಯ ಇಲ್ಲವೇ ನಕಾರಾತ್ಮಕ ಅಭಿವೃತ್ತಿ ರೂಪಿಸಿಕೊಳ್ಳುವರು. ಉದಾಹರಣೆಗೆ: ಮನೆಯಲ್ಲಿ ದೊಡ್ಡವರು ಭಕ್ತಿಯಿಂದ ದೇವರನ್ನು ಪೂಜಿಸುತ್ತಿದ್ದರೆ, ದಿನವೂ ಅದನ್ನು ಗಮನಿಸುವ ಮಕ್ಕಳು ದೇವರು ಹಾಗೂ ಪೂಜೆ ಬಗ್ಗೆ ಸಕಾರಾತ್ಮಕ ಅಭಿವೃತ್ತಿ ರೂಢಿಸಿಕೊಳ್ಳುವರು.
ಪ್ರತಿಯೊಂದು ಸಮಾಜ ಹಾಗೂ ಸಮೂಹಕ್ಕೆ ತನ್ನದೇ ಆದ ಅಲಿಖಿತ ನಿಯಮಗಳು, ಕಾನೂನು ಕಟ್ಟಲೆಗಳಿರುತ್ತವೆ. ಅವುಗಳನ್ನು ಆ ಸಮಾಜದ ಎಲ್ಲರೂ ಪಾಲಿಸುವರು. ಇವುಗಳನ್ನು ‘norms’ ಎಂದು ಕರೆಯುವರು. ಹೀಗೆ ಅಭಿವೃತ್ತಿಗಳು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಟ್ಟುಕಟ್ಟಲೆಗಳ ಮೂಲಕ ರೂಪುಗೊಳ್ಳುತ್ತವೆ. ಉದಾಹರಣೆಗೆ : ಹಿಂದೂಧರ್ಮ ಅನುಯಾಯಿಗಳು ದೇವರಿಗೆ ಹಣ್ಣು, ಹೂ, ತೆಂಗಿನಕಾಯಿ, ಅರ್ಪಿಸುವುದು ದೀಪ ಬೆಳಗಿಸುವುದು ಸಂಪ್ರದಾಯವಾಗಿದೆ. ಇದನ್ನು ಎಲ್ಲರೂ ಅನುಸರಿಸುವುದನ್ನು ಕಾಣಬಹುದು. ಈ ಸಂಪ್ರದಾಯಗಳು ಸಾಮಾಜಿಕ ಸಮ್ಮತಿಯಿಂದ ಆಚರಣೆಯಲ್ಲಿವೆ. ಇಂತಹ ಆಚರಣೆಗಳು ದೇವರು ಮತ್ತು ಪೂಜೆ ಬಗ್ಗೆ ಸಕಾರಾತ್ಮಕ ಅಭಿವೃತ್ತಿ ರೂಪುಗೊಳ್ಳಲು ಸಹಕಾರಿಯಾಗಿವೆ.
ಹೊಸ ವಿಷಯಗಳನ್ನು ತಿಳಿದುಕೊಳ್ಳುವಾಗ ಅಭಿವೃತ್ತಿಗಳು ರೂಪುಗೊಳ್ಳುತ್ತವೆ. ಸಾಮಾಜಿಕ ಸನ್ನಿವೇಶದಲ್ಲಿ ಹೊಸ ಹೊಸ ವಿಷಯ ತಿಳಿದಾಗ, ಹೊಸ, ಹೊಸ ಜನರನ್ನು ಸಂಪರ್ಕಿಸಿದಾಗ, ಬೆರೆತಾಗ, ವಿಚಾರ ವಿನಿಮಯ ಮಾಡಿಕೊಂಡಾಗ, ಅಭಿವೃತ್ತಿಗಳು ರೂಪುಗೊಳ್ಳುತ್ತವೆ. ಉದಾಹರಣೆಗೆ : ಗಾಂಧೀಜಿಯವರ ಆತ್ಮ ಚರಿತ್ರೆಯನ್ನು ಓದಿದ ಅದೆಷ್ಟೋ ಮಂದಿ, ಸತ್ಯ, ಅಹಿಂಸೆ ಹಾಗೂ ದೀನ-ದಲಿತರ ಸೇವೆ ಬಗ್ಗೆ ಸಕಾರಾತ್ಮಕ ಅಭಿವೃತ್ತಿ ಬೆಳೆಸಿಕೊಂಡಿದ್ದಾರೆ.




