Sensation and Perception: ಸಂವೇದನೆ ಮತ್ತು ಪ್ರತ್ಯಕ್ಷಾನುಭವ(Sensation and Perception)

Sensation and Perception:”ಪಂಚೇಂದ್ರಿಯಗಳು ಜ್ಞಾನದ ಹೆಬ್ಬಾಗಿಲುಗಳಿದ್ದಂತೆ”. ಮನುಷ್ಯನ ಎಲ್ಲಾ ಅನುಭವಗಳು ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ತ್ವಚೆಗಳ ಮೂಲಕ ಉಂಟಾಗುತ್ತವೆ. ಈ ಅನುಭವ ಕಾರ್ಯ ಜ್ಞಾನೇಂದ್ರಿಗಳಲ್ಲಿರುವ ಗ್ರಾಹಕಜೀವಕೋಶಗಳು ಬಾಹ್ಯ ಪ್ರಪಂಚದೊಂದಿಗೆ ಪ್ರಚೋದನೆಗೊಳ್ಳುವ ಮೂಲಕ ಪ್ರಾರಂಭವಾಗುತ್ತದೆ. ನಂತರ ನರವಾಹಿನಿಗಳು ಈ ಸಂದೇಶವನ್ನು ಮೆದುಳಿಗೆ ತಲುಪಿಸುತ್ತವೆ. ಇದರಿಂದ ಜ್ಞಾನ ಸಂಪಾದನೆ ಸಾಧ್ಯವಾಗುತ್ತದೆ. ಮಾನವನ ಚಿಂತನೆಯೂ ಸಹ ಭಾವರೂಪಣವನ್ನು ಆಧರಿಸಿದೆ. ಚಿಂತನೆಯು ವ್ಯಕ್ತಿಯ ಮೇಲ್ಮಟ್ಟದ ಮಾನಸಿಕ ಕ್ರಿಯೆಯಾಗಿದ್ದು, ಅದು ವ್ಯಕ್ತಿ ಮತ್ತು ಸಮಷ್ಠಿಯ ಪ್ರಗತಿಗೆ ಅತ್ಯವಶ್ಯಕವಾಗಿದೆ. ನಮ್ಮ ಚಿಂತನೆಗಳೇ ಭವಿಷ್ಯತ್ತಿನ ಬುನಾದಿಯಾಗಿವೆ. ನಾವು ಹೇಗೆ ಯೋಚನೆ ಮಾಡುತ್ತೇವೆಯೋ ಹಾಗೆ ನಮ್ಮ ವ್ಯಕ್ತಿತ್ವ ರೂಪಗೊಳ್ಳುತ್ತದೆ. ವ್ಯಕ್ತಿ ಮಾಡುವ ಪ್ರತಿಯೊಂದು ಕಾರ್ಯಚಟುವಟಿಕೆಯು ಚಿಂತನೆಯ ಪ್ರಭಾವಕ್ಕೆ ಒಳಗಾಗಿರುತ್ತದೆ. ಸಕಾರಾತ್ಮಕ ಚಿಂತನೆ ವ್ಯಕ್ತಿಯ ಏಳೆಗೆ ಪೂರಕವಾಗಿದೆ.
ಸಂವೇದನೆಯ ಪರಿಕಲ್ಪನೆ (Concept of Sensation)
ಸಂವೇದನೆಗಳು ಮಾನಸಿಕ ಕ್ರಿಯೆಯ ‘ಮೂಲವಸ್ತು’ಗಳಾಗಿವೆ. ಸಂವೇದನೆ ಉಂಟಾಗಬೇಕಾದರೆ ಪ್ರಚೋದನೆ, ಗ್ರಾಹಕ, ಸಂವೇದನಾ ನರತಂತು, ನಿರ್ದಿಷ್ಟ ಜ್ಞಾನವಲಯಗಳಿರುವುದು ಅತ್ಯವಶ್ಯಕವಾಗಿದೆ. ಪರಿಸರ ಮತ್ತು ವ್ಯಕ್ತಿಯ ನಡುವೆ ಸಮರ್ಪಕವಾದ ಸಂಬಂಧ ಮತ್ತು ಮಾಹಿತಿಗಳನ್ನು ಗ್ರಹಿಸುವಲ್ಲಿ ಸಂವೇದನೆಗಳು ಪ್ರಮುಖ ಪಾತ್ರವಹಿಸುತ್ತವೆ. ಅರಿಸ್ಟಾಟಲ್‌ರು “ಆತ್ಮದ(ಮನಸ್ಸಿನ) ಹೆಬ್ಬಾಗಿಲೇ ಸಂವೇದನೆ” ಎಂದಿದ್ದಾರೆ. ಜರ್ಮನಿಯ ಮನೋವಿಜ್ಞಾನಿ ಟಿಚನರ್ ಅವರು “ಜ್ಞಾನದ ಮೂಲಗಳೆಲ್ಲವೂ ಸಂವೇದನೆ ಗಳಿಂದಲೇ ಜನಿಸುತ್ತವೆ” ಎಂದಿದ್ದಾರೆ. ಸಂವೇದನೆಗಳ (ಜ್ಞಾನೇಂದ್ರಿಯಗಳ) ಕಾರ್ ಉತ್ತಮವಾಗಿದ್ದರೆ, ನಮ್ಮ ಮಾನಸಿಕ ಕ್ರಿಯೆಯಲ್ಲಿಯೂ ಸಹ ಸ್ಥಿರತೆಯನ್ನು ಕಾಣಬಹುದಾಗಿದೆ. ಪರಿಸರದಿಂದ ಬರುವ ಪ್ರಚೋದನೆಗಳನ್ನು ಪಡೆದು ಅವುಗಳನ್ನು ಮೆದುಳಿಗೆ ಕಳುಹಿಸುವ ಕಾರ ಜ್ಞಾನೇಂದ್ರಿಯಗಳದ್ದಾಗಿದೆ. ಅಂತೆಯೇ ಜ್ಞಾನೇಂದ್ರಿಯಗಳನ್ನು ನಮ್ಮ ಶರೀರದ ಕಿಟಕಿಗಳೆಂದು ಕರೆಯುತ್ತಾರೆ. ಕಣ್ಣಿನಿಂದ ನೋಡಿ, ಕಿವಿಯಿಂದ ಕೇಳಿ, ಮೂಗಿನಿಂದ ಫ್ರಾಣಿಸಿ, ನಾಲಿಗೆಯಿಂದ ರುಚಿಸಿ, ತ್ವಚೆಯಿಂದ ಸ್ಪರ್ಶಿಸುವ ಮೂಲಕ ಐದು ಸಂವೇದನಾ ಕ್ರಿಯೆಗಳು ನಡೆಯುತ್ತವೆ. ಇದರಿಂದ ನಮಗೆ ಜ್ಞಾನ ಮತ್ತು ಅನುಭವಗಳು ಉಂಟಾಗುತ್ತವೆ ಎಂದು ಶರೀರಶಾಸ್ತ್ರವು ಹೇಳುತ್ತದೆ.
ಬಾಹ್ಯ ಮತ್ತು ಆಂತರಿಕ ಪರಿಸರದ ಮಾಹಿತಿ ಅಥವಾ ಪ್ರಚೋದನೆಗಳನ್ನು ಗ್ರಹಿಸಿ ಅವುಗಳನ್ನು ಮೆದುಳಿನ ಕಡೆಗೆ ಹರಿಬಿಡುವ ದೈಹಿಕ ಕಾವ್ಯವನ್ನು ಸಂವೇದನೆಗಳೆನ್ನುತ್ತಾರೆ.
ಸಂವೇದನೆಯ ಲಕ್ಷಣಗಳು(Characteristics of Sensation)
1) ಗುಣಮಟ್ಟ:- ಸಂವೇದನೆಯಲ್ಲಿ ಅನುಭವದ ಗುಣಮಟ್ಟ ಅತ್ಯವಶ್ಯಕವಾಗಿದೆ. ಒಂದು ಸಂವೇದನೆಯಿಂದ ಇನ್ನೊಂದು ಸಂವೇದನೆಗೆ ಧ್ವನಿ, ಬಣ್ಣ, ರುಚಿ, ವಾಸನೆ, ಉಷ್ಣತೆ ಇತ್ಯಾದಿಗಳಲ್ಲಿ ವ್ಯತ್ಯಾಸಗಳಿರುತ್ತವೆ. ಇವುಗಳಿಲ್ಲದಿದ್ದರೆ ಸಂವೇದನೆ ಅಸಾಧ್ಯವಾಗುತ್ತದೆ.
2) ತೀವ್ರತೆ:- ಉದ್ದೀಪನದ ತೀವ್ರತೆಗನುಗುಣವಾಗಿ ವ್ಯಕ್ತಿಯ ಸಂವೇದನೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಧ್ವನಿಯಲ್ಲಿ ಏರಿಳಿತವಾದಾಗ, ಬೆಳಕು ಬೆಳಿಗ್ಗೆ ಮಂದ ಅಥವಾ ಪ್ರಕಾಶಮಾನವಾದಾಗ, ವಾಸನೆಯು ತೀಕ್ಷ್ಯ ಅಥವಾ ಮಂದವಾದಾಗ, ಸಂವೇದನೆಯು ಸಾಮಾನ್ಯ ಪ್ರಚೋದನೆಗಿಂತ ಶಕ್ತಿಶಾಲಿಯಾಗಿದ್ದರೆ, ಹೆಚ್ಚು ನೋವನ್ನುಂಟು ಮಾಡುತ್ತದೆ. ಉದಾ: ಪ್ರಕಾಶ ಮಾನವಾದ ಬೆಳಕು ಅಥವಾ ಸಿಡಿಲಿನ ಶಬ್ದ ಕೇಳಿದಾಗ ಭಯ, ಆತಂಕ ಉಂಟಾಗುತ್ತದೆ.
3) ಸುಸೂಪ್ತಾವಧಿ :- ಪ್ರಚೋದನೆ ಮತ್ತು ಸಂವೇದನೆಯ ಅವಶ್ಯಕತೆಗಳು ಏಕಕಾಲದಲ್ಲಿ ನಡೆದರೂ ಎರಡರ ನಡುವೆ ಕಾಲಾವಧಿ ಬೇಕಾಗುತ್ತದೆ. ಪ್ರಚೋದನೆಯಾದಾಗ ನರವ್ಯೂಹವು ಮೆದುಳಿಗೆ ಮಾಹಿತಿ ರವಾನಿಸುತ್ತದೆ. ಮೆದುಳು ಪ್ರಚೋದನೆಗೆ ಪ್ರತಿಕ್ರಿಯಿಸಲು ನರಮಂಡಲದ ಮೂಲಕ ಕಾಲಾವಕಾಶ ತಗೆದುಕೊಳ್ಳುತ್ತದೆ. ಉದಾ: ಶಿಕ್ಷಕರು ವಿದ್ಯಾರ್ಥಿಗೆ ಪ್ರಶ್ನೆ ಕೇಳಿದಾಕ್ಷಣ ಅದಕ್ಕೆ ಉತ್ತರಿಸಲು ವಿದ್ಯಾರ್ಥಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾನೆ.
4) ಕಾಲಾವಧಿ:- ಅವಧಿಯು ಒಂದು ಪ್ರಚೋದನೆಯ ಪರಿಸರದಲ್ಲಿ ಎಷ್ಟು ಸಮಯದವರೆಗೆ ನಿರೂಪಿಸಬೇಕೆಂಬುದನ್ನು ನಿರ್ಧರಿಸುತ್ತದೆ. ಪಂಚೇದ್ರಿಯಗಳಲ್ಲಿ ಪ್ರಚೋದನೆಯನ್ನುಂಟು ಮಾಡಲು ಒಂದು ಸಂವೇದನೆಯಿಂದ ಇನ್ನೊಂದು ಸಂವೇದನೆಗೆ ಕಾಲಾವಧಿಯಲ್ಲಿ ವ್ಯತ್ಯಾಸವಾಗುತ್ತದೆ.
5) ವಿಸ್ತತತೆ:- ಎಲ್ಲ ಸಂವೇದನೆಗಳು ವಿಸ್ತ್ರತತೆಯನ್ನು ಹೊಂದುವ ಅವಶ್ಯಕತೆಯಿಲ್ಲ. ಸ್ಪರ್ಶ ಮತ್ತು ದೃಷ್ಟಿಗಳು ಮಾತ್ರ ವಿಸ್ತತತೆಯನ್ನು ಹೊಂದಿರುತ್ತವೆ. ಆದರೆ ಶಬ್ದವು ದೂರದಿಂದ ಕೇಳಿಬಂದರೆ ಅದರಲ್ಲಿ ವಿಶ್ವತತೆಯ ಅಗತ್ಯವಿದೆ.
ಉದಾ: ದೊಡ್ಡ ಕಾರ್ಯಕ್ರಮದಲ್ಲಿ ಧ್ವನಿ ಹೆಚ್ಚಿಸಲು ಧ್ವನಿವರ್ಧಕವನ್ನು ಬಳಸುತ್ತಾರೆ. ಹೀಗೆ ಸಂವೇದನೆಯು ಮೇಲ್ಕಾಣಿಸಿದ ಪ್ರಮುಖ ಲಕ್ಷಣಗಳನ್ನು ಹೊಂದಿದ್ದು, ಹೊರಜಗತ್ತಿನ ಮಾಹಿತಿಯನ್ನು ದೇಹ ಮತ್ತು ಮೆದುಳಿನೊಳಗೆ ರವಾನಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.
ಪ್ರತ್ಯಕ್ಷಾನುಭವದ ಪರಿಕಲ್ಪನೆ (Concept of Perception)
ಪ್ರತ್ಯಕ್ಷಾನುಭವವು ಒಂದು ಪ್ರಮುಖ ಮಾನಸಿಕ ಕ್ರಿಯೆಯಾಗಿದ್ದು, ಪರಿಸರದಲ್ಲಿ ಉಂಟಾಗುವ ಮಾರ್ಪಾಡು ವ್ಯಕ್ತಿ. ವಸ್ತುಗಳನ್ನು ಗುರ್ತಿಸುವಲ್ಲಿ ಸಹಾಯಕವಾಗಿದೆ. ಯಾವುದೇ ವಸ್ತುವನ್ನು ನೋಡಿ ಅದನ್ನು ಸರಿಯಾಗಿ ಸೂಚಿಸಿದರೆ ಅದು ಪ್ರತ್ಯಕ್ಷಾನುಭವವಾಗುತ್ತದೆ. ಜ್ಞಾನೇಂದ್ರಿಯಗಳು ಗ್ರಹಿಸಿದ ಸಂವೇದನೆಗಳ ವಿಶ್ಲೇಷಣೆ, ಸಂಶ್ಲೇಷಣೆ ಮತ್ತು ಅರ್ಥ ವಿವರಣೆಯನ್ನು ‘ಪ್ರತ್ಯಕ್ಷಾನುಭವ’ ಎನ್ನುವರು. ಸಂವೇದನೆ ಪ್ರತ್ಯಕ್ಷಾನುಭವಕ್ಕೆ ಪೂರಕವಾಗಿದೆ. ಇದು ಪ್ರತ್ಯಕ್ಷಾನುಭವಕ್ಕೆ ಅಗತ್ಯವಾದರೆ, ಪ್ರತ್ಯಕ್ಷಾನುಭವವು ಸಂವೇದನೆಗೆ ಸ್ಪಷ್ಟರೂಪ ಕೊಡುತ್ತದೆ. ಉದಾಹರಣೆ : ಒಂದು ಹೂವನ್ನು ನೋಡುವುದು ಸಂವೇದನೆಯಾದರೆ, ಆ ಹೂವು ಯಾವುದು ಎಂದು ಗುರ್ತಿಸುವುದು ಪ್ರತ್ಯಕ್ಷಾನುಭವವಾಗುತ್ತದೆ. ಸಂವೇದನೆ ಪ್ರತ್ಯಕ್ಷಾನುಭವಕ್ಕೆ ದಾರಿಮಾಡಿಕೊಡುತ್ತದೆ. ಸಂವೇದನೆಗಳು ಅವಧಾನದಿಂದ ಬಲಗೊಂಡು ಪೂರ್ವಾನುಭವದ ಸಹಾಯದಿಂದ ಪ್ರತ್ಯಕ್ಷಾನುಭವ ಉಂಟಾಗುತ್ತದೆ. ಸಂವೇದನೆಯಾಗದ ಹೊರತು ಪ್ರತ್ಯಕ್ಷಾನುಭವವಾಗಲಾರದು. ವ್ಯಕ್ತಿಯು ಯಾವುದೇ ವಸ್ತುವನ್ನು ಸಂವೇದಿಸಲಾರದೇ ಪ್ರತ್ಯಕ್ಷಾನುಭವನ್ನು ಹೊಂದಲಾರನು. ವ್ಯಕ್ತಿ ವಸ್ತುವಿನ ಇರುವಿಕೆಯನ್ನು ಸಂವೇದಿಸುವುದರೊಂದಿಗೆ ಅದರ ಗಾತ್ರ, ಆಕಾರ, ಹೊಳಪು, ಬಣ್ಣ ಮುಂತಾದ ಲಕ್ಷಣಗಳ ವ್ಯತ್ಯಾಸಗಳನ್ನು ಗುರ್ತಿಸುವ ಸಾಮರ್ಥ್ಯ ಪಡೆಯುತ್ತಾನೆ.
ಹಾಗಾಗಿ ಸಂವೇದನಾ ವ್ಯತ್ಯಾಸಗಳನ್ನು ಗುರ್ತಿಸುವುದು ಪ್ರತ್ಯಕ್ಷಾನುಭವದ ಮೊದಲ ಹೆಜ್ಜೆಯಾಗಿದೆ.
ಸಂವೇದನೆಯ ಮೂಲಕ ಪ್ರಚೋದನೆಗಳಲ್ಲಿನ ವ್ಯತ್ಯಾಸಗಳನ್ನು ಗುರ್ತಿಸಿ ಅವುಗಳನ್ನು ಅರ್ಥೈಸುವ ಕ್ರಿಯೆಯೇ ಪ್ರತ್ಯಕ್ಷಾನುಭವಾಗಿದೆ. ಸಂವೇದನೆ ಮತ್ತು ವರ್ತನೆಯ ನಡುವಿನ ಕ್ರಿಯೆಯೇ ಪ್ರತ್ಯಕ್ಷಾನುಭವವಾಗಿರುವುದಿಂದ ಅದನ್ನು ನೇರವಾಗಿ ಗಮನಿಸುವುದು ಅಸಾಧ್ಯ ಜ್ಞಾನೇಂದ್ರಿಯಗಳನ್ನು ಪ್ರಚೋದಿಸಿ ವಸ್ತುಗಳ ಗುಣಗಳ ಘಟನೆಗಳ ಅರಿವನ್ನು ಪಡೆಯುವ ಕ್ರಿಯೆಯೇ ಪ್ರತ್ಯಕ್ಷಾನುಭವವಾಗಿದೆ.
ಪ್ರತ್ಯಕ್ಷಾನುಭವಕ್ಕೆ ‘ಗ್ರಹಿಕೆ’ ಅಥವಾ ‘ಗೋಚರಾನುಭವ’ ಎಂತಲೂ ಕರೆಯುತ್ತಾರೆ. ಸಂವೇದನೆಯ ಮೂಲಕ ಹೊರ ಜಗತ್ತಿನ ವಸ್ತು ವಿಷಯ ಹಾಗೂ ಮಾಹಿತಿಗಳನ್ನು ಸಂಸ್ಕರಿಸುವ ಮಾನಸಿಕ ಕ್ರಿಯೆಯೇ ಪ್ರತ್ಯಕ್ಷಾನುಭವಾಗಿದೆ. ಸಂವೇದನೆಗೆ ನಿಲುಕುವ ವಸ್ತುವಿನ ಆಯ್ಕೆ, ಸಂಘಟನೆ ಮತ್ತು ವಿವರಣೆಯನ್ನು ಪ್ರತ್ಯಕ್ಷಾನುಭವ ಎನ್ನುವರು.
ಪರಿಸರದಲ್ಲಿನ ವಸ್ತು, ವಿಷಯ, ಮತ್ತು ಘಟನೆಗಳಿಗೆ ಸಂಬಂಧಿಸಿದಂತೆ ಸಂವೇದನಾ ಪ್ರಚೋದನೆಗಳ ಮೂಲಕ ಮೆದುಳು ನೀಡುವ ಅರ್ಥವಿವರಣೆಗಳನ್ನು ಪ್ರತ್ಯಕ್ಷಾನುಭವ ಎನ್ನುತ್ತಾರೆ. ಸಂವೇದನೆ ಮತ್ತು ಹಿಂದಿನ ಅನುಭವಗಳನ್ನು ಅರ್ಥಪೂರ್ಣವಾಗಿಸುವ ಸಕ್ರಿಯಾತ್ಮಕ ಪ್ರಕ್ರಿಯೆಯೇ ಪ್ರತ್ಯಕ್ಷಾನುಭವ. ಪ್ರತ್ಯಕ್ಷಾನುಭವವು ಒಂದು ವೈಯಕ್ತಿಕ ಕ್ರಿಯೆಯಾಗಿದ್ದು, ಪರಿಸರ, ವಸ್ತು, ಸನ್ನಿವೇಶ ಮತ್ತು ವ್ಯಕ್ತಿಗಳೊಂದಿಗೆ ಸುಲಲಿತ ಸಂಪರ್ಕವನ್ನುಂಟುಮಾಡುವ ಮಾನಸಿಕ ಕ್ರಿಯೆಯಾಗಿದೆ. ಪ್ರತ್ಯಕ್ಷಾನುಭವವು ಕೇವಲ ಹೊರಗಿನಿಂದ ಬರುವ ಪ್ರಚೋದನೆಗಳನ್ನು ಗ್ರಹಿಸುವುದಷ್ಟೇ ಅಲ್ಲದೆ, ಪ್ರಚೋದನೆಗಳಿಗೆ ಅರ್ಥವನ್ನು ಸಹ ಕೊಡುವಂತಹ ಮಾನಸಿಕ ಪ್ರಕ್ರಿಯೆಯಾಗಿದೆ. ಅನೇಕ ಮನೋವಿಜ್ಞಾನಿಗಳು ಪ್ರತ್ಯಕ್ಷಾನುಭವವನ್ನು ತಮ್ಮದೇ ಆದ ಅರ್ಥದಲ್ಲಿ ವ್ಯಾಖ್ಯಾನಿಸಿದ್ದಾರೆ ಈ ಎಲ್ಲಾ ವ್ಯಾಖ್ಯೆಗಳು ಸಹ ಸಾಮ್ಯತೆಯಿಂದ ಕೂಡಿದ್ದು ಪ್ರತ್ಯಕ್ಷಾನುಭವ ಎಂದರೇನು? ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಪ್ರತ್ಯಕ್ಷಾನುಭವದ ಲಕ್ಷಣಗಳು(Characteristics of Perception)
1) ಪ್ರತ್ಯಕ್ಷಾನುಭವವು ಒಂದು ಪ್ರಕ್ರಿಯೆಯಾಗಿದೆ:- ಪ್ರತ್ಯಕ್ಷಾನುಭವವು ಒಂದು ಉತ್ಪನ್ನವಾಗಿರದೆ. ಅದೊಂದು ಪ್ರಕ್ರಿಯೆಯಾಗಿದೆ.
ಇದನ್ನು ಒಂದು ವ್ಯವಸ್ಥಾಮಾರ್ಗಕ್ಕೆ ಹೋಲಿಸಿದರೆ ನಮ್ಮ ಪಂಚೇಂದ್ರಿಯಗಳು ಸಂವೇದನೆಗಳಿಂದ ಪ್ರಭಾವಿತವಾಗುವದು ಕಚ್ಚಾ ಪದಾರ್ಥವಾದರೆ ಪೂರ್ವಾನುಭವಗಳ ಆಧಾರದ ಮೇಲೆ ವಸ್ತು ವಿಷಯ ಮತ್ತು ವ್ಯಕ್ತಿಗಳನ್ನು ಅರ್ಥೈಯಿಸುವಿಕೆ ಪ್ರಕ್ರಿಯೆಯಾಗುತ್ತದೆ. ಉತ್ಪಾದಕ ವಸ್ತುವಾಗಿ ಪ್ರತ್ಯಕ್ಷಾನುಭವ ಉಂಟಾಗುತ್ತದೆ. ಕಚ್ಚಾ ಪದಾರ್ಥಗಳನ್ನು ಅನುಭವಿಕ, ಸಂಘಟಿತ ರೂಪದಲ್ಲಿ ಪಕ್ಕಾ ವಸ್ತುವಾಗಿ ಮಾರ್ಪಡಿಸಲು ಈ ಪ್ರಕ್ರಿಯೆ ಅತ್ಯವಶ್ಯಕವಾಗಿದೆ.
2) ಪ್ರತ್ಯಕ್ಷಾನುಭವವು ಮಾಹಿತಿ ಸಂಗ್ರಹಿಸುತ್ತದೆ:- ಜ್ಞಾನೇಂದ್ರಿಯಗಳು ನಿರಂತರವಾಗಿ ಪರಿಸರದ ವೈವಿಧ್ಯಮಯ ಪ್ರಚೋದನೆಯಿಂದ ಮಾಹಿತಿ ಸಂಗ್ರಹಿಸುತ್ತವೆ. ಆದರೆ ಪ್ರತಿಯೊಂದು ಪ್ರಚೋದನೆಗೆ ಪ್ರತಿಕ್ರಿಯಿಸುವುದು ಕಷ್ಟಕರವಾಗುತ್ತದೆ. ಆಯ್ಕೆಪ್ರಕ್ರಿಯೆಯು ಪ್ರತ್ಯಕ್ಷಾನುಭವದಲ್ಲಿ ಅತ್ಯಂತ ಅವಶ್ಯಕ ಕಾರ್ಯವಾಗಿದೆ. ಬಹಳಷ್ಟು ಸಂವೇದನೆಗಳಲ್ಲಿ ಉಪಯುಕ್ತ ಮಾಹಿತಿಯನ್ನು ಸಂಗ್ರಹಿಸಿ ಅರ್ಥಪೂರ್ಣ ರೀತಿಯಲ್ಲಿ ಮಾರ್ಪಡಿಸುತ್ತದೆ.
3) ಪ್ರತ್ಯಕ್ಷಾನುಭವವು ಪ್ರತಿಕ್ರಿಯೆಯ ಸಿದ್ಧತೆಯಾಗಿದೆ: ಪ್ರತ್ಯಕ್ಷಾನುಭವವು ಕ್ರಿಯಾಶೀಲವರ್ತನೆಯ ಮೊದಲ ಹೆಜ್ಜೆ ಯಾಗಿದೆ.
ಇದೊಂದು ಪ್ರತಿಕ್ರಿಯೆಗೆ ಪೂರ್ವಸಿದ್ಧತಾ ಹಂತವಾಗಿದೆ. ಜ್ಞಾನೇಂದ್ರಿಯಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಪ್ರತ್ಯಕ್ಷಾನುಭವವು ಅರ್ಥಪೂರ್ಣವಾಗಿ ರೂಪಾಂತರಿಸುವ ನರಮಂಡಲ ಕೇಂದ್ರವಾಗಿದೆ. ಕೇಂದ್ರನರಮಂಡಲವು ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ನಿರ್ದೇಶನ ನೀಡುತ್ತದೆ.
4) ಪ್ರತ್ಯಕ್ಷಾನುಭವವು ಸಂವೇದನೆಗಳನ್ನು ಒಳಗೊಂಡಿದೆ: ಸರಳ ಹಾಗೂ ಸ್ಪಷ್ಟವಾಗಿ ಹೇಳುವುದಾದರೆ ಸಂವೇದನೆಯಿಂದಲೇ
ಪ್ರತ್ಯಕ್ಷಾನುಭವವು ಉಂಟಾಗುತ್ತದೆ. ಸಂವೇದನೆಗಳು ಪ್ರತ್ಯಕ್ಷಾನುಭವಗಳೊಂದಿಗೆ ಅನ್ನೋನ್ಯ ಸಂಬಂಧನ್ನು ಹೊಂದಿವೆ. ಸಂವೇದನೆ ಮಾಹಿತಿ ಪಡೆದರೆ ಪ್ರತ್ಯಕ್ಷಾನುಭವವು ಅರ್ಥಪೂರ್ಣ ವಿವರಣೆ ನೀಡುತ್ತದೆ.
5) ಪ್ರತ್ಯಕ್ಷಾನುಭವವು ಸಂಘಟನೆಗೆ ಅವಕಾಶ ಕಲ್ಪಿಸುತ್ತದೆ : ಸಂವೇದನೆಯು ಮಾಹಿತಿ ಸಂಗ್ರಹಣೆಯ ಭಾಗವಾದರೆ
ಪ್ರತ್ಯಕ್ಷಾನುಭವವು ಮಾಹಿತಿಯನ್ನು ಸುವ್ಯವಸ್ಥಿತವಾಗಿ ಸಂಘಟಿಸುತ್ತದೆ. ಸನ್ನಿವೇಶದ ಭಾಗಗಳನ್ನು ಬಿಡಿಬಿಡಿಯಾಗಿ ಗ್ರಹಿಸದೆ ಇಡಿಯಾಗಿ ಗ್ರಹಿಸುತ್ತದೆ.
6 ) ಪ್ರತ್ಯಕ್ಷಾನುಭವವು ಸಂಪೂರ್ಣ ವ್ಯಕ್ತಿಗತವಾಗಿದೆ: ಪ್ರತ್ಯಕ್ಷಾನುಭವವು ಸಂಪೂರ್ಣವಾಗಿ ವ್ಯಕ್ತಿಗತ ಅಂಶವಾಗಿದೆ.
ವಿಭಿನ್ನ ವ್ಯಕ್ತಿಗಳು ಒಂದೇ ವಸ್ತುಗಳ ಬಗೆಗೆ ವಿಭಿನ್ನರೀತಿಯಲ್ಲಿ ಪ್ರತ್ಯಕ್ಷಾನುಭವ ಪಡೆಯುತ್ತಾರೆ. ಒಂದೇ ಘಟನೆ ಅಥವಾ ಸನ್ನಿವೇಶಗಳನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಅರ್ಥೈಸಿಕೊಳ್ಳುತ್ತಾರೆ. ಏಕೆಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಆಸಕ್ತಿ, ಅವಧಾನ, ಪ್ರೇರಣೆ ಮತ್ತು ಪೂರ್ವಾನುಭವಗಳು ಭಿನ್ನವಾಗಿರುತ್ತವೆ
ಸಂವೇದನೆ ಮತ್ತು ಪ್ರತ್ಯಕ್ಷಾನುಭವಗಳ ನಡುವಿನ ವ್ಯತ್ಯಾಸ(Difference between sensation and perception)
• ಸಂವೇದನೆ
1. ನಮ್ಮ ಇಂದ್ರಿಯಗಳ ಮೂಲಕ ಬಾಹ್ಯ ಪ್ರಚೋದನೆಗಳನ್ನು ಮೆದುಳಿಗೆ ತಲುಪಿಸುವ ಪ್ರಕ್ರಿಯೆಯೇ ಸಂವೇದನೆ.
2. ಸಂವೇದನೆಗೆ ಜ್ಞಾನೇಂದ್ರಿಯಗಳು ಸಹಾಯಕವಾಗಿವೆ.
3. ಸಂವೇದನೆಗೆ ಪ್ರಚೋದನೆ ಅವಶ್ಯಕವಾಗಿದೆ.
4. ಜ್ಞಾನೇಂದ್ರಿಯಗಳು ಸಂವೇದನೆಯನ್ನುಂಟು ಮಾಡುತ್ತವೆ.
5. ಸಂವೇದನೆಯು ಇಂದ್ರಿಯಜನ್ಯ ಕ್ರಿಯೆಯಾಗಿದೆ.
6. ಇಂದ್ರಿಯಗಳಲ್ಲಿ ದೋಷವಿದ್ದರೆ ಸಂವೇದನೆಗಳಲ್ಲಿ ದೋಷವಿರುತ್ತದೆ.
7. ಇದು ಸರಳ ಮತ್ತು ಸಾಮಾನ್ಯ ಮಾನಸಿಕ ಕ್ರಿಯೆಯಾಗಿದೆ.
8. ಸಂವೇದನೆಯಿಂದ ವಸ್ತುವಿನ ಸಂಪರ್ಕ ಮಾತ್ರ ಉಂಟಾಗುತ್ತದೆ.
9. ಸಂವೇದನೆಯು ಆಧಾರರಹಿತ ಅವಿಶ್ಲೇಷಿತ ಸಂಜ್ಞಾರೂಪವಾಗಿದೆ.
10. ಸಂವೇದನೆಯು ಪೂರ್ವಾನುಭವಗಳನ್ನು ಆಧರಿಸಿಲ್ಲ.
• ಪ್ರತ್ಯಕ್ಷಾನುಭವ
1. ಜ್ಞಾನೇಂದ್ರಿಯಗಳು ಗ್ರಹಿಸಿದ ಸಂವೇದನೆಗಳನ್ನು ಅರ್ಥೈಸುವದೇ ಪತ್ಯಕ್ಷಾನುಭವ.
2. ಪ್ರತ್ಯಕ್ಷಾನುಭವಕ್ಕೆ ಸಂವೇದನೆ ಮತ್ತು ಪೂರ್ವಾನುಭವ ಸಹಾಯಕವಾಗಿವೆ.
3. ಪ್ರತ್ಯಕ್ಷಾನುಭವಕ್ಕೆ ಸಂವೇದನೆ ಅವಶ್ಯಕವಾಗಿದೆ.
4. ಸಂವೇದನೆಗಳು ಪ್ರತ್ಯಕ್ಷಾನುಭವವನ್ನುಂಟು ಮಾಡುತ್ತವೆ.
5. ಪ್ರತ್ಯಕ್ಷಾನುಭವವು ಮನೋಜನ್ಯ ಕ್ರಿಯೆಯಾಗಿದೆ.
6. ಸಂವೇದನೆಗಳಲ್ಲಿನ ದೋಷಗಳನ್ನು ಸರಿಪಡಿಸಿಕೊಂಡು ವಾಸ್ತವ ಚಿತ್ರ ಮೂಡಿಸುತ್ತದೆ.
7. ಇದು ಸಂಕೀರ್ಣ ಮತ್ತು ಉನ್ನತ ಮಾನಸಿಕ ಕ್ರಿಯೆಯಾಗಿದೆ.
8. ಪ್ರತ್ಯಕ್ಷಾನುಭವದಿಂದ ವಸ್ತುವಿನ ಅರ್ಥಸ್ಥಿತಿಯ ಪರಿಜ್ಞಾನ ಉಂಟಾಗುತ್ತದೆ.
9. ಪ್ರತ್ಯಕ್ಷಾನುಭವವು ಸ್ಪಷ್ಟ ಅರ್ಥ ವಿಶ್ಲೇಷಣೆಗೆ ಸಹಾಯಕವಾಗಿದೆ.
10. ಪ್ರತ್ಯಕ್ಷಾನುಭವವು ಪೂರ್ವಾನುಭವಗಳನ್ನು ಆಧರಿಸಿದೆ.
ಪ್ರತ್ಯಕ್ಷಾನುಭವದ ನಿರ್ಧಾರಕಗಳು (Determinants of perception)
ಪ್ರತ್ಯಕ್ಷಾನುಭವದ ಮೇಲೆ ಪ್ರಭಾವ ಬೀರುವ ಅನೇಕ ಅಂಶಗಳಿಗೆ ಪ್ರತ್ಯಕ್ಷಾನುಭವದ ನಿರ್ಧಾರಕಗಳೆನ್ನುತ್ತಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ.
1. ಜ್ಞಾನೇಂದ್ರಿಯಗಳ ಸ್ಥಿತಿಗತಿ(Condition of sense organs)
ಪ್ರತ್ಯಕ್ಷಾನುಭವದ ನಿರ್ಧಾರಕ ಅಂಶಗಳಲ್ಲಿ ಜ್ಞಾನೇಂದ್ರಿಯಗಳು ಪ್ರಮುಖವಾಗಿವೆ. ಪಂಚೇಂದ್ರಿಯಗಳಿಗೆ (ಕಣ್ಣು, ಕಿವಿ. ಮೂಗು, ನಾಲಿಗೆ ತ್ವಚೆ) ಜ್ಞಾನೇಂದ್ರಿಯಗಳೆನ್ನುತ್ತಾರೆ. ಇವು ಅನುಭವಗಳ ಹೆಬ್ಬಾಗಿಲುಗಳಿದ್ದಂತೆ. ಜ್ಞಾನೇಂದ್ರಿಯಗಳೇ ಪ್ರತ್ಯಕ್ಷಾನುಭವದ ಸಾಧನಗಳಾಗಿವೆ. ಜ್ಞಾನೇಂದ್ರಿಯಗಳಲ್ಲಿರುವ ನರಗ್ರಾಹಿಗಳು ಸಂವೇದನೆಗಳನ್ನು ಗ್ರಹಿಸಿ ಮೆದುಳಿಗೆ ವರ್ಗಾಯಿಸುತ್ತವೆ. ಇವು ಸುಸ್ಥಿತಿಯಲ್ಲಿದ್ದಾಗ ಮಾತ್ರ ನಾವು ಗ್ರಹಿಸುವ ಸಂವೇದನೆಗಳು ಪ್ರತ್ಯಕ್ಷಾನುಭವಗಳಾಗಿ ಮಾರ್ಪಡುತ್ತವೆ. ಜ್ಞಾನೇಂದ್ರಿಯಗಳಲ್ಲಿ ಏನಾದರೂ ದೋಷವಿದ್ದರೆ ಅದು ಗ್ರಹಿಸುವ ಸಂವೇದನೆಯ ಮೇಲೆ ದುಷ್ಪರಿಣಾಮಬೀರುತ್ತದೆ.
2. ಮೆದುಳು ಮತ್ತು ನರವ್ಯೂಹ (Brain and nervous system)
ಜ್ಞಾನೇಂದ್ರಿಯಗಳ ಮೂಲಕ ಸಂವೇದನೆ ಉಂಟಾಗಿ ಮೆದುಳು ಪ್ರಚೋದನೆಗಳನ್ನು ಪಡೆದು ಸೂಕ್ತ ಅರ್ಥವಿವರಣೆ ಮಾಡಿದಾಗ ಮಾತ್ರ ಪ್ರತ್ಯಕ್ಷಾನುಭವ ಉಂಟಾಗುತ್ತದೆ. ಒಂದು ವೇಳೆ ಮೆದುಳು ಮತ್ತು ನರವ್ಯೂಹ ಕ್ರಿಯೆಯಲ್ಲಿ ಏನಾದರೂ ದೋಷವಿದ್ದರೆ, ಪ್ರತ್ಯಕ್ಷಾನುಭವ ಸಮರ್ಪಕವಾಗಿ ಆಗಲಾರದು. ಹಾಗಾಗಿ ಪ್ರತ್ಯಕ್ಷಾನುಭವವಾಗಲು ಮೆದುಳು ಹಾಗೂ ನರವ್ಯೂಹ ಸಮರ್ಪಕವಾಗಿ ಕಾರನಿರ್ವಹಿಸಬೇಕು.
3. ಪ್ರೇರಕಗಳು(Motives)
ಪ್ರತ್ಯಕ್ಷಾನುಭವವನ್ನು ನಿರ್ಧರಿಸುವ ಅಂಶಗಳಲ್ಲಿ ಪ್ರೇರಕಗಳ ಪಾತ್ರವೂ ಪ್ರಮುಖವಾಗಿದೆ. ಯಾವುದೇ ವ್ಯಕ್ತಿಯ ಪ್ರತ್ಯಕ್ಷಾನುಭವವು ಆತನ ಬೇಡಿಕೆಗಳನ್ನಾಧರಿಸಿದೆ. ಅವನು ತನ್ನ ಅಗತ್ಯತೆಗಳ ತೃಪ್ತಿಗಾಗಿ ಆಲೋಚಿಸುತ್ತಾನೆ. ಉದಾಹರಣೆಗೆ ಹಸಿದವನಿಗೆ ಒಂದು ಅಸ್ಪಷ್ಟ ಚಿತ್ರ ತೋರಿಸಿ ಅದರ ವಿವರಣೆ ಕೇಳಿದರೆ ಆ ಚಿತ್ರವು ಆಹಾರದಂತೆ ಕಾಣುತ್ತದೆ ಎಂದು ತಿಳಿಸುತ್ತಾನೆ. ಹೀಗೆ ಮಾನವನ ಮೂಲ ಪ್ರೇರಣೆಗಳಾದ ಹಸಿವು, ತೃಷೆಗಳು ಪ್ರತ್ಯಕ್ಷಾನುಭವದ ಮೂಲಾಂಶಗಳಾಗಿವೆ.
4. ಪೂರ್ವಾನುಭವಗಳು (Past experiences)
ಪೂರ್ವಾನುಭವವು ಪ್ರತ್ಯಕ್ಷಾನುಭವಕ್ಕೆ ಅವಶ್ಯವಾಗಿದೆ. ಅಂದರೆ ಪ್ರಚೋದನೆಯಬಗ್ಗೆ ಮೊದಲೇ ತಿಳಿದಿದ್ದರೆ ಮಾತ್ರ ಅದನ್ನು ಪುನಃ ನೋಡಿದಾಗ ನಮಗೆ ಪ್ರತ್ಯಕ್ಷಾನುಭವವಾಗುತ್ತದೆ.
ಒಮ್ಮೆ ಪ್ರಚೋದನೆಯ ಅರಿವಾದರೆ ಅದರ ಮಾಹಿತಿ ಮೆದುಳಿನಲ್ಲಿ ಸಂಶ್ಲೇಷಿಸಲ್ಪಟ್ಟಿರುತ್ತದೆ. ಪುನಃ ಪ್ರಚೋದನೆಯಾದಾಗ ಸಂಶ್ಲೇಷಿಸಲ್ಪಟ್ಟ ಮಾಹಿತಿ ಆ ಪ್ರಚೋದನೆಯ ಮಾಹಿತಿ ಅರಿವನ್ನುಂಟುಮಾಡುತ್ತದೆ. ಹಾಗಾಗಿ ಪ್ರತ್ಯಕ್ಷಾನುಭವವಾಗಲು ಪೂರ್ವಾನುಭವಗಳು ಅತ್ಯವಶ್ಯಕವಾಗಿವೆ.
ಉದಾಹರಣೆಗೆ ಮಗು ಬೆಟ್ಟವನ್ನು ಪ್ರತ್ಯಕ್ಷವಾಗಿ ಅಥವಾ ಚಿತ್ರದಲ್ಲಿ ನೋಡಿದ್ದರೆ ಮಾತ್ರ ಮತ್ತೆ ಅದನ್ನು ಕಂಡಾಗ ಬೆಟ್ಟ ಎಂದು ಗುರ್ತಿಸಬಲ್ಲದು. ಆ ಮಗು ಹಿಂದೆ ಬೆಟ್ಟವನ್ನೇ ನೋಡಿರದಿದ್ದರೆ ಆಗ ಅದು ಬೆಟ್ಟವೆಂದು ಹೇಳಲಾರದು. ಅಂದರೆ ಪೂರ್ವಾನುಭವವಿಲ್ಲದಿದ್ದರೆ ಅದರ ಪ್ರತ್ಯಕ್ಷಾನುಭವ ಆಗಲಾರದು.
5. ನಿರೀಕ್ಷೆಗಳು(Expectations)
ನಿರೀಕ್ಷೆಗಳು ಸಹ ಪ್ರತ್ಯಕ್ಷಾನುಭವದ ಮೂಲಾಂಶಗಳಾಗಿವೆ. ನಿರೀಕ್ಷೆಗಳು ಪ್ರತ್ಯಕ್ಷಾನುಭವವನ್ನುಂಟು ಮಾಡುತ್ತವೆ. ಉದಾಹರಣೆಗೆ-ನಿಮ್ಮ ತಂದೆಯವರು ಊರಿನಿಂದ 4 ಗಂಟೆಗೆ ಬರುತ್ತೇನೆ ಎಂದು ಹೇಳಿದ್ದರೆ ನೀವು ನಿಮ್ಮ ಮನೆಯಲ್ಲಿ ಅವರಿಗಾಗಿ ಕಾಯುತ್ತಿರುವಾಗ 4 ಗಂಟೆಗೆ ಯಾರಾದರೂ ನಿಮ್ಮ ಬಾಗಿಲನ್ನು ತಟ್ಟಿದಾಗ ನಿಮ್ಮ ಪ್ರತ್ಯಕ್ಷಾನುಭವದ ನಿರೀಕ್ಷೆಯಿಂದ ನಿಮ್ಮ ತಂದೆ ಬಂದರು ಎಂದು ತಿಳಿದುಕೊಳ್ಳುತ್ತೀರಿ. ಹೀಗೆ ನಮ್ಮ ನಿರೀಕ್ಷೆಗಳು ಪ್ರತ್ಯಕ್ಷಾನುಭವವನ್ನುಂಟು ಮಾಡುತ್ತವೆ.
6. ಅವಧಾನ(Attention)
ಪ್ರತ್ಯಕ್ಷಾನುಭವದ ನಿರ್ಧಾರಕಗಳಲ್ಲಿ ಅವಧಾನವು ಪ್ರಮುಖವಾಗಿದೆ. ಅವಧಾನವಿಲ್ಲದೆ ಪ್ರತ್ಯಕ್ಷಾನುಭವ ಅಸಾಧ್ಯ. ಮನಸ್ಸಿನ ಏಕಾಗ್ರತೆಯೇ ಆವಧಾನವಾಗಿದೆ. ಇದು ವಸ್ತು ವಿಷಯಗಳನ್ನು ಅರ್ಥೈಸಿಕೊಳ್ಳಲು ನೆರವಾಗುತ್ತದೆ. ಅವಧಾನವು ನಮ್ಮ ಅನುಭವ ಕ್ಷೇತ್ರವನ್ನು ಪ್ರಮುಖ ಮತ್ತು ಪ್ರಮುಖವಲ್ಲದವುಗಳೆಂದು ವಿಂಗಡಿಸಿ ಪ್ರಮುಖವಾದವುಗಳ ಬಗ್ಗೆ ಅವಧಾನ ಕೇಂದ್ರೀಕರಿಸುವುದರ ಮೂಲಕ ಪ್ರತ್ಯಕ್ಷಾನುಭವಕ್ಕೆ ದಾರಿಮಾಡಿ ಕೊಡುತ್ತದೆ.
7. ನಂಬಿಕೆ ಮತ್ತು ಮೌಲ್ಯಗಳು ( Beliefs and values)
ಪ್ರತ್ಯಕ್ಷಾನುಭವವನ್ನು ನಿರ್ಧರಿಸುವಲ್ಲಿ ನಂಬಿಕೆ ಮತ್ತು ಮೌಲ್ಯಗಳು ಸಹ ಪ್ರಮುಖವಾಗಿವೆ. ನಂಬಿಕೆ ಮತ್ತು ಮೌಲ್ಯಗಳು ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಅಂಶಗಳಾಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗುತ್ತವೆ.
8. ಮನೋಬಾವ (Attitude)
ಒಂದು ಪ್ರಚೋದನೆಯು ಪ್ರತ್ಯಕ್ಷಾನುಭವವಾಗಲು ವ್ಯಕ್ತಿ ಧನಾತ್ಮಕ ಮನೋಭಾವ ಹೊಂದಿರಬೇಕು. ಅಂದರೆ ಪ್ರಚೋದನೆ ಗ್ರಹಿಸಲು ಉತ್ತಮ ಮನೋಭಾವ ಆಗತ್ಯವಾಗಿದೆ. ಮನೋಭಾವಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದರ ಮೂಲಕ ಪ್ರತ್ಯಕ್ಷಾನುಭವವನ್ನು ನಿರ್ಧರಿಸುತ್ತವೆ. ಅಶಾಂತಿಯಿಂದ ಕೂಡಿದ ಮನಸ್ಸು ಪ್ರಚೋದನೆಯನ್ನು ಸರಿಯಾಗಿ ಗ್ರಹಿಸಲಾರದು. ಉದಾಹರಣೆಗೆ- ಪೂರ್ವಾಗ್ರಹಪೀಡಿತ ಮನಸ್ಸು ಒಂದು ಪ್ರಚೋದನೆಯನ್ನು ತಪ್ಪಾಗಿ ಗ್ರಹಿಸುತ್ತದೆ. ಹಾಗಾಗಿ ಪ್ರತ್ಯಕ್ಷಾನುಭವ ಸೂಕ್ತವಾಗಲು ಪ್ರಚೋದನೆಯನ್ನು ಗ್ರಹಿಸುವ ಸೂಕ್ತ ಮನಸ್ಥಿತಿ ಅಗತ್ಯವಾಗಿದೆ.