Social application: ಮನೋವಿಜ್ಞಾನ – ಅದರ ಸಾಮಾಜಿಕ ಅನ್ವಯ(Social application).

Social application:ಗುಂಪು ಸಮಾಲೋಚನೆ (Group Think) :-
ಸಾಮಾನ್ಯವಾಗಿ ಗುಂಪು ಸಮಾಲೋಚನೆ ಉತ್ತಮ ಫಲಿತಾಂಶಕ್ಕೆ ದಾರಿಮಾಡಿಕೊಡುತ್ತದೆ. ಆದರೆ ಇರ್‌ವಿಂಗ್ ಜನಿಸ್ (Irving Janis) ಪ್ರಕಾರ ಅತಿಯಾದ ನಿಕಟತೆಯನ್ನು ಪ್ರದರ್ಶಿಸುವ ಗುಂಪು ಕೆಲವು ವೇಳೆ ಮಾರಕ ಫಲಿತಾಂಶವನ್ನು ನೀಡಬಹುದು. ಜನಿಸ್ ‘ಗುಂಪು ಸಮಾಲೋಚನೆ’ ಎಂಬ ಪ್ರಕ್ರಿಯೆಯನ್ನು ರೂಪಿಸಿದ್ದಾನೆ. ಅದರಲ್ಲಿ ಗುಂಪು ಒಗ್ಗಟ್ಟಿನ ತೀರ್ಮಾನವನ್ನು ಸದಾ ಬೆಂಬಲಿಸುತ್ತದೆ. ಇದರಿಂದಾಗಿ ಗುಂಪು ಅಸಂಬದ್ಧ ಹಾಗೂ ಅರ್ಥಹೀನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ಗುಂಪು ಸಮಾಲೋಚನೆಯ ಪ್ರಮುಖ ಗುಣವೆಂದರೆ ಒಮ್ಮತದ ತೀರ್ಮಾನ ಕೈಗೊಳ್ಳುವುದು. ಗುಂಪು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ಗುಂಪಿನಲ್ಲಿ ಯಾವೊಬ್ಬ ವ್ಯಕ್ತಿಯೂ ಗುಂಪು ತೀರ್ಮಾನವನ್ನು ಪ್ರಶ್ನಿಸುವುದಿಲ್ಲ. ಏಕೆಂದರೆ ಗುಂಪಿನ ಒಗ್ಗಟ್ಟು ಹಾಳಾಗಬಾರದು ಎಂಬುದು ಆತನ ಉದ್ದೇಶವಾಗಿರುತ್ತದೆ. ಇಂತಹ ಗುಂಪುಗಳು ತಮ್ಮ ತೀರ್ಮಾನ ಅತ್ಯುತ್ತಮವಾದುದು ಎಂಬ ಉಪ್ಪೇಕ್ಷಾ ಭಾವನೆಯನ್ನು ತಳೆದಿರುತ್ತವೆ. ಇಂತಹ ತೀರ್ಮಾನಗಳು ಸರಿಯಲ್ಲ ಎಂಬ ವಾಸ್ತವಿಕ ಸುಳಿವುಗಳು ದೊರೆತರೂ ಗುಂಪು ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಗುಂಪಿನಲ್ಲಿ ಒಗ್ಗಟ್ಟು ಹಾಗೂ ಏಕತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಂತಹ ಗುಂಪುಗಳು ವಾಸ್ತವಿಕತೆಯಿಂದ ದೂರ ಉಳಿಯುತ್ತವೆ. ಗುಂಪು ತೀರ್ಮಾನ ಹೆಚ್ಚಾಗಿ ಎಲ್ಲರಿಂದ ದೂರವಾದ. ಒಂದೇ ಮನಃಸ್ಥಿತಿಯ ಜನರಿರುವ ಗುಂಪುಗಳಲ್ಲಿ ಕಂಡುಬರುತ್ತದೆ. ಇವರಲ್ಲಿ ಹೊಸದನ್ನು ಪರಿಗಣಿಸುವ ಪದ್ಧತಿ ಇರುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಂಪು ಸಮಾಲೋಚನೆಗೆ ಅನೇಕ ಉದಾಹರಣೆಗಳನ್ನು ನೀಡಬಹುದು. ಉದಾಹರಣೆಗೆ : ಅಮೆರಿಕಾ ಹಾಗೂ ಅದರ ಮಿತ್ರ ರಾಷ್ಟ್ರಗಳು, ಅಫ್ಘಾನಿಸ್ತಾನ, ಇರಾಕ್ ಮುಂತಾದ ದೇಶಗಳಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ನಡೆಸಿದ ಯುದ್ಧಗಳಿಂದ ಲಕ್ಷಾಂತರ ಮಂದಿ ಅಸುನೀಗಿದರು. ಅಲ್ಲಿ ಇಂದಿಗೂ ರಾಜಕೀಯ ಅಭದ್ರತೆ ಇದೆ. ಜನರು ಆತಂಕದಲ್ಲಿ ಬದುಕು ದೂಡುತ್ತಿದ್ದಾರೆ. ಅಮೆರಿಕಾ ಹಾಗೂ ಮಿತ್ರ ರಾಷ್ಟ್ರಗಳ ಸಾವಿರಾರು ಸೈನಿಕರು ಜೀವ ತೆತ್ತಿದ್ದಾರೆ. ಆರ್ಥಿಕವಾಗಿ ಕೂಡ ಈ ರಾಷ್ಟ್ರಗಳು ಸಾಕಷ್ಟು ನಷ್ಟ ಅನುಭವಿಸಿವೆ.
ಗುಂಪು ಸಮಾಲೋಚನೆಯನ್ನು ತಗ್ಗಿಸಲು ಕೆಳಕಂಡ ಕ್ರಮಗಳನ್ನು ಅನುಸರಿಸಬಹುದು.
i) ಗುಂಪಿನಲ್ಲಿ ವಿಮರ್ಶಾತ್ಮಕ ಆಲೋಚನೆಯನ್ನು ಹಾಗೂ ಅಭಿಪ್ರಾಯ ಭೇದಗಳನ್ನು ಪ್ರೋತ್ಸಾಹಿಸುವುದು.
ii) ಪರ್ಯಾಯ ಕಾರ್ಯ ಯೋಜನೆಯನ್ನು ಮಂಡಿಸುವಂತೆ ಗುಂಪನ್ನು ಒತ್ತಾಯಿಸುವುದು.
iii) ಹೊರಗಿನ ತಜ್ಞರನ್ನು ಕರೆಸಿ ಗುಂಪು ತೀರ್ಮಾನವನ್ನು ಪರಿಶೀಲಿಸುವಂತೆ ಹೇಳುವುದು. ಮತ್ತು
iv) ಗುಂಪಿನ ಸದಸ್ಯರು ತಮ್ಮ ತೀರ್ಮಾನಗಳ ಬಗ್ಗೆ ನಂಬಿಕಸ್ತರಿಂದ ಅಭಿಪ್ರಾಯ ಪಡೆಯುವಂತೆ ಪ್ರೋತ್ಸಾಹಿಸುವುದು.
ಗುಂಪುಗಳ ವಿಧಗಳು (Types of groups) :-
ಗುಂಪುಗಳು ಅನೇಕ ರೀತಿಯಲ್ಲಿ ಭಿನ್ನವಾಗಿವೆ. ಕೆಲವು ಗುಂಪುಗಳು ಅಧಿಕ ಸಂಖ್ಯೆಯ ಸದಸ್ಯರುಗಳನ್ನೊಳಗೊಂಡಿದೆ. ಉದಾಹರಣೆಗೆ:ದೇಶ, ಕೆಲವು ಗುಂಪುಗಳು ಕಡಿಮೆ ಸಂಖ್ಯೆಯ ಸದಸ್ಯರು ಗಳನ್ನೊಳಗೊಂಡಿದೆ. ಉದಾಹರಣೆಗೆ: ಕುಟುಂಬ, ಕೆಲವು ಗುಂಪುಗಳು ತಾತ್ಕಾಲಿಕವಾಗಿ ಅಸ್ತಿತ್ವದಲ್ಲಿರುತ್ತವೆ. ಉದಾಹರಣೆಗೆ :ಒಂದು ಸಮಿತಿ, ಕೆಲವು ಗುಂಪುಗಳು ದೀರ್ಘಕಾಲ ಅಸ್ತಿತ್ವದಲ್ಲಿರುತ್ತವೆ. ಉದಾಹರಣೆಗೆ: ಧಾರ್ಮಿಕ ಗುಂಪುಗಳು, ಕೆಲವು ಗುಂಪುಗಳು ತುಂಬಾ ವ್ಯವಸ್ಥಿತವಾಗಿರುತ್ತವೆ. ಉದಾಹರಣೆಗೆ: ಸೈನ್ಯ, ಪೋಲೀಸ್, ಮುಂತಾದವು. ಕೆಲವು ಗುಂಪುಗಳು ತಾತ್ಕಾಲಿಕವಾಗಿ ಸೇರಿ ನಂತರ ಚದುರುತ್ತವೆ. ಉದಾಹರಣೆಗೆ : ಕ್ರಿಕೆಟ್, ಫುಟ್‌ಬಾಲ್, ಮುಂತಾದ ಆಟಗಳನ್ನು ನೋಡಲು ಸೇರಿರುವ ಪ್ರೇಕ್ಷಕರು ವಿವಿಧ ಗುಂಪುಗಳಿಗೆ ಸೇರಿರುತ್ತಾರೆ. ಈ ಗುಂಪುಗಳನ್ನು ಅನೇಕ ವಿಧಗಳಲ್ಲಿ ವರ್ಗೀಕರಿಸಲಾಗಿದೆ. ಅವುಗಳೆಂದರೆ:
1) ಪ್ರಾಥಮಿಕ ಹಾಗೂ ಅನುಷಂಗಿಕ ಗುಂಪುಗಳು
2) ಔಪಚಾರಿಕ ಮತ್ತು ಅನೌಪಚಾರಿಕ ಗುಂಪುಗಳು
3) ಒಳ ಗುಂಪು (ಪಂಗಡ) ಮತ್ತು ಹೊರಗುಂಪು (ಪಂಗಡ)
1. ಪ್ರಾಥಮಿಕ ಹಾಗೂ ಅನುಷಂಗಿಕ ಗುಂಪುಗಳು (Primary and Secondary groups)
ಪ್ರಾಥಮಿಕ ಗುಂಪುಗಳು ಈಗಾಗಲೇ ಅಸ್ತಿತ್ವದಲ್ಲಿರುವ ಗುಂಪುಗಳು. ಉದಾಹರಣೆಗೆ : ಕುಟುಂಬ, ಜಾತಿ ಹಾಗೂ ಧರ್ಮ. ಅನುಷಂಗಿಕ ಗುಂಪುಗಳೆಂದರೆ ವ್ಯಕ್ತಿ ಆಕಸ್ಮಿಕವಾಗಿ ಅವುಗಳ ಸದಸ್ಯನಾಗುವ ಗುಂಪುಗಳು. ಉದಾಹರಣೆಗೆ : ರಾಜಕೀಯ ಪಕ್ಷ ಸೇರುವುದು, ಕ್ರೀಡಾ ಕ್ಲಬ್ ಸದಸ್ಯನಾಗುವುದು, ಇತ್ಯಾದಿ.
ಪ್ರಾಥಮಿಕ ಗುಂಪುಗಳಲ್ಲಿ ಮುಖಾ-ಮುಖಿ ಸಂಪರ್ಕವಿರುತ್ತದೆ. ಅಲ್ಲಿ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಸದಸ್ಯರ ನಡುವೆ ಅನ್ನೋನ್ಯತೆ ಇರುತ್ತದೆ, ವ್ಯಕ್ತಿಯ ಮೌಲ್ಯಗಳು, ಆಲೋಚನೆಗಳು ಮತ್ತು ಭಾವನೆಗಳು ಪ್ರಾಥಮಿಕ ಸಮೂಹಗಳಿಂದ ರೂಪಿತವಾಗಿರುತ್ತವೆ.
ಅನುಷಂಗಿಕ ಸಮೂಹದಲ್ಲಿ ಸಂಬಂಧಗಳು ಪರೋಕ್ಷವಾಗಿರುತ್ತವೆ ಮತ್ತು ಸಂಪರ್ಕ ಯಾವಾಗಲೂ ಇರುವುದಿಲ್ಲ. ಅನುಷಂಗಿಕ ಸಮೂಹಗಳನ್ನು ಸೇರುವುದು ಮತ್ತು ತ್ಯಜಿಸುವುದು ತುಂಬಾ ಸುಲಭ. ಆದರೆ ಪ್ರಾಥಮಿಕ ಸಮೂಹದಲ್ಲಿ ಇದು ಸಾಧ್ಯವಿಲ್ಲ.
2. ಔಪಚಾರಿಕ ಗುಂಪುಗಳು Formal and informal groups): –
ಒಂದು ಔಪಚಾರಿಕ ಗುಂಪಿನ ಚಟುವಟಿಕೆಗಳು ವ್ಯಕ್ತ ರೂಪದಲ್ಲಿರುತ್ತವೆ. ಉದಾಹರಣೆಗೆ: ಒಂದು ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಗುಂಪಿನ ಸದಸ್ಯರ ಕಾರ್ಯಚಟುವಟಿಕೆಗಳು ಸ್ಪಷ್ಟವಾಗಿ ವ್ಯಕ್ತ ರೂಪದಲ್ಲಿ (ಪ್ರಕಟಿತ) ಇರುತ್ತವೆ. ಆದರೆ ಒಂದು ಅನೌಪಚಾರಿಕ ಗುಂಪಿನಲ್ಲಿ ಸದಸ್ಯರ ಚಟುವಟಿಕೆಗಳು ಅವ್ಯಕ್ತ (ಅಪ್ರಕಟಿತ) ರೂಪದಲ್ಲಿರುತ್ತವೆ. ಅಂದರೆ ಸಾಮರ್ಥ್ಯ ಇರುವವನು ಯಾವುದೇ ಕೆಲಸವನ್ನು ನಿರ್ವಹಿಸಬಹುದು. ಉದಾಹರಣೆಗೆ: ಒಂದು ಸಂತೋಷ ಕೂಟದಲ್ಲಿ ಎಲ್ಲರೂ ಮಂಕಾಗಿರುವಾಗ ಒಬ್ಬ ವ್ಯಕ್ತಿ ಹಾಸ್ಯ ಚಟಾಕಿಗಳನ್ನು ಹಾರಿಸುವ ಮೂಲಕ, ಹಾಡುವ ಮೂಲಕ, ನರ್ತಿಸುವ ಮೂಲಕ, ಸಂತೋಷಕೂಟಕ್ಕೆ ಜೀವಕಳೆ ತುಂಬಬಹುದು.
3) ಒಳಗುಂಪು ಮತ್ತು ಹೊರಗುಂಪುಗಳು (Ingroup and outgroup):-
ತನ್ನದೇ ಗುಂಪನ್ನು ಒಳಗುಂಪು ಎನ್ನುವರು. ತನ್ನದಲ್ಲದ ಗುಂಪನ್ನು ಹೊರಗುಂಪು ಎನ್ನುವರು. ‘ನಾವು’ ಮತ್ತು ‘ಅವರು’ ಎಂಬ ಭಾವನೆ ಸಾಪೇಕ್ಷ (relative) ವಾದುದು. ಉದಾಹರಣೆಗೆ : ಭಾರತದಲ್ಲಿರುವಾಗ ಒಬ್ಬ ದಕ್ಷಿಣ ಭಾರತೀಯನಿಗೆ ಉತ್ತರ ಭಾರತೀಯನು ‘ಅವರು’ ಆಗುತ್ತಾನೆ. ಅದೇ ಇಬ್ಬರು ವ್ಯಕ್ತಿಗಳು ಹೊರದೇಶದಲ್ಲಿದ್ದಾಗ ‘ನಾವು’ ಭಾರತೀಯರು ಆಗುತ್ತೇವೆ, ಹೊರ ದೇಶದವರಿಗೆ ‘ಅವರು’, ಹೊರದೇಶದವರು, ಎನಿಸುತ್ತೇವೆ.
‘ಇತರರು’ ಒಬ್ಬ ವ್ಯಕ್ತಿಯ ವರ್ತನೆಯ ಮೇಲೆ ಎರಡು ರೀತಿಯಲ್ಲಿ ಪ್ರಭಾವ ಬೀರುತ್ತಾರೆ. ಅವುಗಳೆಂದರೆ;
1. ಸಾಮಾಜಿಕ ಸುಗಮತೆ (Social facilitation) :- ವ್ಯಕ್ತಿ ಇತರರಿಂದ ಪ್ರೇರಿತನಾಗಿ ಒಂದು ಚಟುವಟಿಕೆಯನ್ನು ಒಬ್ಬನೇ ಮಾಡುವುದಕ್ಕೆ ‘ಸಾಮಾಜಿಕ ಸುಗಮತೆ’ (Social facilitation) ಎನ್ನುವರು.
2. ಸಾಮಾಜಿಕ ಸೋಮಾರಿತನ (Social loafing) :- ಒಂದು ಕೆಲಸವನ್ನು ಇತರರ ಜೊತೆಗೂಡಿ ಮಾಡುವುದಕ್ಕೆ ‘ಸಾಮಾಜಿಕ ಸೋಮಾರಿತನ’ (Social loafing) ಎನ್ನುವರು.
ಸಾಮಾಜಿಕ ಸುಗಮತೆ Social facilitation) :-
ಇತರರ ಸಮ್ಮುಖದಲ್ಲಿ ಒಬ್ಬ ವ್ಯಕ್ತಿ ಒಳ್ಳೆಯ ಸಾಧನೆ ಮಾಡುತ್ತಾನೆ. ಇದನ್ನು ‘ಸಾಮಾಜಿಕ ಸುಗಮತೆ’ ಎನ್ನುವರು. ಉದಾಹರಣೆಗೆ : ವ್ಯಕ್ತಿ ತನ್ನ ತೃಪ್ತಿಗಾಗಿ ಹಾಡುವುದಕ್ಕೂ, ಇತರರ ಮುಂದೆ ಹಾಡುವುದಕ್ಕೂ ತುಂಬಾ ವ್ಯತ್ಯಾಸವಿರುತ್ತದೆ. ಇತರರ ಮುಂದೆ ಹಾಡುವಾಗ ಹೆಚ್ಚು ಉತ್ಸಾಹದಿಂದ ಹಾಗೂ ಜಾಗರೂಕತೆಯಿಂದ ಹಾಡುತ್ತಾನೆ. ಸೈಕಲ್ ರೇಸ್‌ನಲ್ಲಿ ಒಬ್ಬ ಸ್ಪರ್ಧಿ ಪ್ರತಿಸ್ಪರ್ಧಿ ಇದ್ದಾಗ ಹೆಚ್ಚು ವೇಗವಾಗಿ ಸೈಕಲ್ ಓಡಿಸುತ್ತಾನೆ. ಅದೇ ವ್ಯಕ್ತಿ ಗಡಿಯಾರದ ವಿರುದ್ದ ಸೈಕಲ್ ಓಡಿಸಿದಾಗ ಅಷ್ಟು ವೇಗ ಇರುವುದಿಲ್ಲ ಎಂದು ನಾರ್ಮನ್ ಟ್ರಿಪ್ಲೆಟ್ (1898), ಎಂಬ ಮನೋವಿಜ್ಞಾನಿ ಹೇಳಿದ್ದಾನೆ. ಅನಂತರ ನಡೆದ ಅಧ್ಯಯನಗಳಿಂದ ತಿಳಿದು ಬಂದುದೇನೆಂದರೆ ಇತರರು ಇರುವಾಗ ಒಬ್ಬ ವ್ಯಕ್ತಿ ಚಲನೆ (motor)ಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಒಳ್ಳೆಯ ಸಾಧನೆ ಮಾಡುತ್ತಾನೆ.
ಸಾಮಾಜಿಕ ಸುಗಮತೆ ಪರಿಣಾಮವನ್ನು ಪ್ರಾಣಿಗಳಲ್ಲಿಯೂ ಕಾಣಬಹುದಾಗಿದೆ. ಉದಾಹರಣೆಗೆ : ಒಂದು ಜಾತಿಯ ಇರುವೆಗಳು ಮತ್ತೊಂದು ಪ್ರಭೇದದ ಇರುವೆಗಳ ಎದುರು ಹೆಚ್ಚು ಮರಳನ್ನು ಅಗೆದು ತೆಗೆಯುತ್ತವೆ ಮತ್ತು ಕೋಳಿಗಳು ಇತರ ಕೋಳಿಗಳು ಇರುವಾಗ ಹೆಚ್ಚು ಆಹಾರವನ್ನು ತಿನ್ನುತ್ತವೆ.
ಕೆಲವು ಸಾಕ್ಷ್ಯಾಧಾರಗಳ ಪ್ರಕಾರ ಇತರರು ಇರುವಾಗ ಕೆಲವರ ಸಾಧನೆ ಕುಗ್ಗುತ್ತದೆ. ಉದಾಹರಣೆಗೆ : ಸಂಕೀರ್ಣ ಸಮಸ್ಯೆಗಳನ್ನು ಕಲಿಯುವಾಗ (ಇತರರ ಮುಂದೆ) ವ್ಯಕ್ತಿಯ ಸಾಮರ್ಥ್ಯ ಕುಗ್ಗುತ್ತದೆ. ಈ ಕೆಳಕಂಡ ಅಂಶಗಳು ‘ಇತರರ ಸಮ್ಮುಖದಲ್ಲಿ’ ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತವೆ.
ಅ) ಇತರರ ಸಮ್ಮುಖದಲ್ಲಿ ಉತ್ತಮ ಸಾಧನೆ ಮಾಡಲು ಕಾರಣ, ಇತರರು ಇರುವಾಗ ವ್ಯಕ್ತಿ ಉದ್ರೇಕಿತನಾಗುತ್ತಾನೆ
ಆ) ಇತರರ ಸಮ್ಮುಖದಲ್ಲಿ ವ್ಯಕ್ತಿಗೆ ಹೆಚ್ಚು ಬಲ ಬಂದಂತಾಗುತ್ತದೆ. (ಮುಲ್ಲರ್ ಮತ್ತು ಇತರರು – 1997). ಹಾಗಾಗಿ ಸರಳ ಕೆಲಸಗಳಲ್ಲಿ ಯಶಸ್ಸು ಸಾಧಿಸುತ್ತಾನೆ. ಆದರೆ ಕಷ್ಟದ ಕೆಲಸಗಳನ್ನು ನಿರ್ವಹಿಸುವಾಗ ಎಡವುತ್ತಾನೆ. ಸ್ವಯಂಪ್ರಜ್ಞೆ (Self conscious) ಯುಳ್ಳ ವ್ಯಕ್ತಿಗಳು ಇತರರ ಸಮ್ಮುಖದಲ್ಲಿ ಎಡವುತ್ತಾರೆ.
ಅಂತಿಮವಾಗಿ, ಒಬ್ಬ ವ್ಯಕ್ತಿಯ ಸಾಧನೆ ಇತರರ ಸಮಕ್ಷಮದಲ್ಲಿ ಉತ್ತಮವಾಗಿರಬಹುದು ಅಥವಾ ಕಳಪೆಯೂ ಆಗಿರಬಹುದು.
2. ಸಾಮಾಜಿಕ ಸೋಮಾರಿತನ (Social loafing):
Edutation
ಯಾವುದೇ ವ್ಯಕ್ತಿ ಒಂದು ಕೆಲಸವನ್ನು ಇತರರ ಜೊತೆ ಒಗ್ಗೂಡಿ ಮಾಡುವಾಗ ಕಡಿಮೆ ಶ್ರಮ ಪಡುತ್ತಾನೆ. ಆದರೆ ಅದೇ ವ್ಯಕ್ತಿ ಆ ಕೆಲಸವನ್ನು ಒಬ್ಬನೇ ಮಾಡುವಾಗ ಹೆಚ್ಚು ಶ್ರಮಪಟ್ಟು ಮಾಡುತ್ತಾನೆ. ಕೆಲವರು ಗುಂಪಿನಲ್ಲಿ ಯಾವ ಶ್ರಮವನ್ನೂ ಪಡದೆ ಸಮಪಾಲು ಪಡೆಯುವರು. ಇದನ್ನು ಸಾಮಾಜಿಕ ಸೋಮಾರಿತನ (Socail loafing) ಎನ್ನುವರು.
ಉದಾಹರಣೆಗೆ : ಹಗ್ಗ ಜಗ್ಗಾಟದಲ್ಲಿ ಎರಡೂ ಕಡೆಯಿಂದ ಎರಡೂ ಗುಂಪಿನ ಸ್ಪರ್ಧಿಗಳು ಹಗ್ಗವನ್ನು ಜಗ್ಗುವಾಗ ಎಲ್ಲರೂ ಸಮಾನ ಬಲ ಪ್ರಯೋಗ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಒಂದಿಬ್ಬರು ಸುಮ್ಮನೆ ಹಗ್ಗ ಹಿಡಿದುಕೊಂಡು ಜಗ್ಗುತ್ತಿರುವಂತೆ ನಟಿಸಬಹುದು. ಗೆದ್ದ ತಂಡದಲ್ಲಿ ಸಮಾನ ಪ್ರಯತ್ನ ಮಾಡದಿದ್ದವನೂ ಕೂಡ ಸಮಾನ ಗೌರವಕ್ಕೆ ಪಾತ್ರನಾಗುತ್ತಾನೆ.
ಮಾಡಬೇಕಾದ ಕೆಲಸ ಎಲ್ಲರಿಗೂ ಒಂದು ಸವಾಲು ಎನಿಸಿದಾಗ ಸೋಮಾರಿತನ ತೋರುವ ಸಾಧ್ಯತೆ ಕಡಿಮೆ ಇರುತ್ತದೆ. (Karam and Williams – 1993), ದೈನಂದಿನ ಬದುಕಿನಲ್ಲಿ ಕೂಡ ಸವಾಲೆನಿಸುವ ಕೆಲಸ ಮಾಡಬೇಕಾದಾಗ ಗುಂಪಿನ ಎಲ್ಲರೂ ಸಮಾನ ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ : ಕೇರಳದಲ್ಲಿ ನಡೆಯುವ ದೋಣಿ ಸ್ಪರ್ಧೆಯಲ್ಲಿ ತಮ್ಮ ತಂಡ ಗೆಲ್ಲಬೇಕೆಂಬ ಹುಮ್ಮಸ್ಸಿನಿಂದ ಎಲ್ಲ ತಂಡಗಳ ಸ್ಪರ್ಧಿಗಳೂ ಸಮಾನ ಶ್ರಮಹಾಕಿ ದೋಣಿ ಉಟ್ಟು ಹಾಕುವರು.
ಗುಂಪಿನಲ್ಲಿ ಕಾರ್ಯನಿರ್ವಹಿಸುವಾಗ ಕೆಲವರು ಸಮಾನ ಪ್ರಯತ್ನ ಮಾಡುವುದಿಲ್ಲ. ಆದರೆ ಗುಂಪು ಚಿಕ್ಕದಿದ್ದು, ಆ ಗುಂಪಿನಲ್ಲಿರುವ ಸದಸ್ಯರೆಲ್ಲರೂ ಅತಿ ಸಮರ್ಥರಾಗಿದ್ದರೆ, ಅವರು ಸೋಮಾರಿತನ ತೋರದೆ ಗರಿಷ್ಠ ಶ್ರಮ ಹಾಕಿ ಗುರಿ ಸಾಧಿಸುವರು. ಆದ್ದರಿಂದ ಒಗ್ಗೂಡಿ ಕೆಲಸ ಮಾಡಿದರೆ ಸಾಧನೆ ನಿರೀಕ್ಷಿಸಿದ ಮಟ್ಟದಲ್ಲಿ ಇರಲಾರದು ಎಂಬ ಪ್ರಚಲಿತ ಅಭಿಪ್ರಾಯ ಸರ್ವಕಾಲಿಕ ಸತ್ಯ ಎಂದು ಹೇಳಲಾಗುವುದಿಲ್ಲ.
ಅನುವರ್ತನೆ (Conformity):- ಸಮೂಹದ ಕಟ್ಟುಪಾಡುಗಳಿಗೆ ಹೊಂದಿಕೊಂಡು ಹೋಗುವುದೇ
ಅನುವರ್ತನೆ. ಅನುವರ್ತನೆಯಿಂದ ಸಮಾಜದಲ್ಲಿ ನೆಮ್ಮದಿ, ಒಗ್ಗಟ್ಟು, ಶಿಸ್ತು ಹಾಗೂ ಸಂಯಮ ನೆಲೆಗೊಳ್ಳುತ್ತದೆ. ವ್ಯಕ್ತಿ ಮತ್ತು ಸಮೂಹದ ನಡುವೆ ಸಮಂಜಸತೆ (Congruence) ಇದ್ದಾಗ ವ್ಯಕ್ತಿಯ ಮೇಲೆ ಸಮೂಹದ ಪ್ರಭಾವ ಹೆಚ್ಚಾಗಿರುತ್ತದೆ. ಈ ಪ್ರಭಾವದಿಂದ ವ್ಯಕ್ತಿಯ ವರ್ತನೆಯಲ್ಲಿ ಮಾರ್ಪಾಟುಗಳಾಗುತ್ತವೆ. ಸಮಾಜದ ಒತ್ತಡಕ್ಕೆ ಮಣಿಯುವುದೇ ಅನುವರ್ತನೆಯ ಉದ್ದೇಶವಾಗಿರುತ್ತದೆ. ಉದಾಹರಣೆಗೆ : ಒಂದು ಚಿತ್ರಮಂದಿರದ ಬಳಿ ಟಿಕೆಟ್ ಕೊಳ್ಳಲು ‘ದಯವಿಟ್ಟು ಸಾಲಾಗಿ ಬನ್ನಿ’ (Queue Please) ಎಂಬ ಫಲಕ ನೋಡಿ ಎಲ್ಲರೂ ಸಾಲಾಗಿ ಹೋಗಿ ಟಿಕೆಟ್ ಕೊಳ್ಳುತ್ತಾರೆ. ಇದರಿಂದ ಗೊಂದಲವಿಲ್ಲದೆ ಸುಲಭವಾಗಿ ಟಿಕೆಟ್ ಕೊಳ್ಳಲು ಅನುಕೂಲವಾಗುತ್ತದೆ.
ಅನುವರ್ತನೆಯಲ್ಲಿ ಹಲವು ರೀತಿಯ ಅನುವರ್ತನೆಗಳನ್ನು ಕಾಣುತ್ತೇವೆ. ಅವುಗಳಲ್ಲಿ ‘ಅನುಸರಣೆ’ (Compliance) ಮತ್ತು ಸಮ್ಮತಿ ಸೂಚಿಸುವುದು (acceptance) ಬಗ್ಗೆ ತಿಳಿದುಕೊಳ್ಳೋಣ.
1. ಅನುಸರಣೆ Compliance):-
ಸಮಾಜದ ಕೆಲವು ನಿಯಮಗಳು ನಮಗೆ ಹಿಡಿಸದಿದ್ದರೂ ಸಮಾಜದ ಹಿತದೃಷ್ಟಿಯಿಂದ ಬಾಹ್ಯದಲ್ಲಿ ಸಮ್ಮತಿ ಸೂಚಿಸುತ್ತೇವೆ. ಅಂದರೆ, ಅಂತರ್ಯದಲ್ಲಿ ವಿರೋಧವಿದ್ದು ಬಾಹ್ಯದಲ್ಲಿ ಸಮ್ಮತಿ ಸೂಚಿಸುವುದಕ್ಕೆ ‘ಅನುಸರಣೆ’ (Compliance) ಎನ್ನುವರು. ವ್ಯಕ್ತಿಯ ಅಭಿಪ್ರಾಯ ಬೇರೆಯಾದರೂ ಸಮಾಜಕ್ಕೆ ತಲೆಬಾಗಿ ನಡೆದುಕೊಂಡರೆ ಅದು ‘ಅನುಸರಣೆ’ ಎನಿಸುತ್ತದೆ ಎಂದು ‘ಕೆಲ್‌ಮನ್’ ಹೇಳಿದ್ದಾನೆ. ನಾಯಕನ ಆದೇಶದಂತೆ ನಡೆದುಕೊಳ್ಳುವ ಅನುಸರಣೆಗೆ ‘ವಿಧೇಯತೆ’ (obedience) ಎನ್ನುವರು.
2. ನಿಜವಾದ ಸಮ್ಮತಿ ಸೂಚಿಸುವುದು (Acceptance) :-
ಬಾಹ್ಯ ಹಾಗೂ ಆಂತರ್ಯಗಳೆರಡರಲ್ಲೂ ಸಮಾಜ ಸಮ್ಮತ ರೀತಿಯಲ್ಲಿ ನಡೆದುಕೊಳ್ಳುವುದನ್ನು ‘ನಿಜವಾದ ಅನುವರ್ತನೆ’ ಅಥವಾ ನಿಜವಾದ ಸಮ್ಮತಿ ಸೂಚಿಸುವುದು ಎನ್ನುತ್ತೇವೆ. ವ್ಯಕ್ತಿಯ ನಂಬಿಕೆಗಳು ಹಾಗೂ ವರ್ತನೆ ನಡುವೆ ಸಾಮರಸ್ಯವಿದ್ದಾಗ ನಿಜವಾದ ಅನುವರ್ತನೆ ಕಂಡುಬರುತ್ತದೆ. ಉದಾಹರಣೆಗೆ : ‘ಹಾಲು ಸೇವನೆ ಆರೋಗ್ಯಕ್ಕೆ ಒಳ್ಳೆಯದು’ ಎಂದು ಲಕ್ಷಾಂತರ ಮಂದಿ ಹಾಲು ಕುಡಿಯುವಾಗ ನಾವೂ ಕೂಡ ಹಾಲಿನ ಮಹತ್ವ ತಿಳಿದು ಅವರ ಜೊತೆ ಕೈಜೋಡಿಸಿದರೆ ಅದು ನಿಜವಾದ ಅನುವರ್ತನೆ ಎನಿಸುತ್ತದೆ.
ಸ್ವಯಂ ಚಲನೆ ವಿದ್ಯಮಾನ (Auto-kinetic Phenomenon) :-
ಕೆಲವು ಪ್ರಯೋಗಾರ್ಥಿಗಳು ಒಂದು ಕತ್ತಲೆ ಕೋಣೆಯಲ್ಲಿ ಕುಳಿತಿದ್ದರು. ಅವರಿಂದ 15 ಅಡಿ ದೂರದಲ್ಲಿ ಸೂಕ್ಷ್ಮ ಬೆಳಕಿನ ಕೇಂದ್ರ ಕಾಣಿಸಿತು. ಬೆಳಕು ಕೆಲವು ಸೆಕೆಂಡ್‌ಗಳ ಕಾಲ ಅಡ್ಡಾದಿಡ್ಡಿಯಾಗಿ ಚಲಿಸಿದಂತೆ ಕಂಡುಬಂದು ಕೊನೆಗೆ ಮರೆಯಾಯಿತು. ಪ್ರಯೋಗಾರ್ಥಿಗಳಿಗೆ ಬೆಳಕು ಎಷ್ಟು ದೂರ ಚಲಿಸಿತು ಎಂದು ಊಹಿಸುವಂತೆ ಹೇಳಲಾಯಿತು. ಪ್ರಯೋಗಾರ್ಥಿಗಳು ಹಲವು ಪ್ರಯತ್ನಗಳಲ್ಲಿ ತಮ್ಮ ತೀರ್ಮಾನವನ್ನು ತಿಳಿಸಬೇಕಾಗಿತ್ತು. ಪ್ರತಿ ಪ್ರಯತ್ನದ ನಂತರ ಗುಂಪು ತಿಳಿಸಿದ ಸರಾಸರಿ ದೂರವನ್ನು ಹೇಳಲಾಯಿತು. ಪ್ರಯೋಗವನ್ನು ಮತ್ತೆ ಮತ್ತೆ ಪುನರಾವರ್ತನೆ ಮಾಡಿದಾಗ ಪ್ರಯೋಗಾರ್ತಿಗಳು ತಮ್ಮ ಅಭಿಪ್ರಾಯ(ತೀರ್ಮಾನ)ವನ್ನು ಬದಲಾಯಿಸುತ್ತಿದ್ದುದು ಕಂಡುಬಂತು. ಈ ಪ್ರಯೋಗದ ಕುತೂಹಲಕಾರಿ ಅಂಶವೆಂದರೆ, ಸೂಕ್ಷ್ಮ ಬೆಳಕಿನ ಕೇಂದ್ರ ಕಾಣಿಸಿತು. ಆದರೆ ಚಲಿಸುತ್ತಿರಲಿಲ್ಲ ಎಂಬುದು. ಬೆಳಕು ಮಾತ್ರ ಚಲಿಸುತ್ತಿದ್ದುದನ್ನು ಪ್ರಯೋಗಾರ್ಥಿಗಳು ಗಮನಿಸಿದ್ದರು. ಇದನ್ನು ಮುಜಾಫರ್ ಶರೀಫ್ (1937) ರವರು “ಸ್ವಯಂ ಚಲನೆ ವಿದ್ಯಮಾನ” ಎಂದು ಕರೆದರು.
ದೈನಂದಿನ ಜೀವನದಲ್ಲಿ ‘ಸೂಚನೆ’ (Suggestability) ಫಲಿತಾಂಶ ತಮಾಷೆಯಾಗಿರುತ್ತದೆ. ಯಾರಾದರೂ ಆಕಳಿಸಿದರೆ ನಾವೂ ಆಕಳಿಸುತ್ತೇವೆ. ಯಾರಾದರೂ ನಕ್ಕರೆ ನಾವು ನಗುತ್ತೇವೆ. ಅದೇ ರೀತಿ ಸಂತೋಷವಾಗಿರುವ ಜನರ ನಡುವೆ ನಾವೂ ಕೂಡ ಸಂತೋಷವಾಗಿರುವಂತೆ ಅನಿಸುತ್ತದೆ.



