ಚಿಕಿತ್ಸಾ ವಿಧಾನಗಳು (Therapeutic approaches)

ಚಿಕಿತ್ಸಾ ವಿಧಾನಗಳು (Therapeutic approaches)

ಚಿಕಿತ್ಸಾ ವಿಧಾನಗಳು (Therapeutic approaches)

ಚಿಕಿತ್ಸಾ ವಿಧಾನಗಳು (Therapeutic approaches):ಇಂದು ಮನೋವಿಜ್ಞಾನಿಗಳು ಹಾಗೂ ಮನೋರೋಗ ಚಿಕಿತ್ಸಕರು ಅನೇಕ ರೀತಿಯ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳನ್ನು ರೂಪಿಸಿ ಬಳಕೆಗೆ ತಂದಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಕೆಲವು ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚಿಸೋಣ.

ಮನೋರೋಗ ಚಿಕಿತ್ಸೆಯ ಸ್ವರೂಪ ಮತ್ತು ಪ್ರಕ್ರಿಯೆ:

ಮನೋರೋಗ ಚಿಕಿತ್ಸೆಯು ಚಿಕಿತ್ಸಕ ಮತ್ತು ರೋಗಿ (ಕಕ್ಷಿ) ಯ ನಡುವಿನ ಇಚ್ಚಾಪೂರ್ವಕ ಹಾಗೂ ಪರಸ್ಪರ ಸ್ಪಂದಿಸುವ ಪ್ರಕ್ರಿಯೆಯಾಗಿರುತ್ತದೆ. ಇಲ್ಲಿ ಚಿಕಿತ್ಸಕನು, ಕಕ್ಷಿ, ತನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತಾನೆ ಮತ್ತು ಕಕ್ಷಿಯ ದುಗುಡವನ್ನು ಕಡಿಮೆ ಮಾಡಿ ಪರಿಸರದ ಜೊತೆ ಪರಿಣಾಮಕಾರಿಯಾಗಿ ಹೊಂದಿಕೊಳ್ಳುವಂತೆ ಮಾಡುತ್ತಾನೆ. ಮನೋರೋಗ ಚಿಕಿತ್ಸೆಯಲ್ಲಿ ವ್ಯಕ್ತಿ (ಕಕ್ಷಿ) ತನ್ನ ಅನುಚಿತ ವರ್ತನೆಗಳನ್ನು ತಿದ್ದಿಕೊಂಡು ಉಚಿತ ವರ್ತನೆಗಳನ್ನು ರೂಢಿಸಿಕೊಳ್ಳಲು ಹೆಚ್ಚು ಒತ್ತು ನೀಡಲಾಗುವುದು ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಕೌಶಲಗಳನ್ನು ಕರಗತ ಮಾಡಿಕೊಳ್ಳುವ ತಿಳುವಳಿಕೆ ನೀಡಲಾಗುವುದು.

ವಿವಿಧ ರೀತಿಯ ಮನೋರೋಗಗಳನ್ನು ಗುಣಪಡಿಸಲು ವಿವಿಧ ರೀತಿಯ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುವುದು. ರೋಗದ ಸ್ವರೂಪ, ಅದರ ಕಾರಣಗಳು ಮತ್ತು ರೋಗದ ತೀವ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಸೂಕ್ತ ಚಿಕಿತ್ಸಾ ವಿಧಾನವನ್ನು ಅನುಸರಿಸಲಾಗುವುದು. ಮನೋರೋಗ ಚಿಕಿತ್ಸೆಯ ಎಲ್ಲ ವಿಧಾನಗಳಲ್ಲೂ ಕೆಲವು ಸಾಮಾನ್ಯ ಲಕ್ಷಣಗಳಿವೆ. ಅವುಗಳೆಂದರೆ :

1. ಎಲ್ಲ ಚಿಕಿತ್ಸಾ ವಿಧಾನಗಳಲ್ಲೂ ಚಿಕಿತ್ಸಕ ಮತ್ತು ಕಕ್ಷಿಯ ನಡುವೆ ಪರಸ್ಪರ ಒಪ್ಪಿಗೆಯ ಸೌಹಾರ್ದಯುತ ಸಂಬಂಧವನ್ನು ಕಾಣುತ್ತೇವೆ.

2. ಮನೋಚಿಕಿತ್ಸೆಯಲ್ಲಿ ಆಳವಾದ ಪರಿಜ್ಞಾನ ಮತ್ತು ಅನುಭವವುಳ್ಳ ವ್ಯಕ್ತಿ ಮಾತ್ರ ಚಿಕಿತ್ಸಕನಾಗಿರುತ್ತಾನೆ. ಯಾರು ಬೇಕಾದರೂ ಮನೋಚಿಕಿತ್ಸಕರಾಗುವಂತಿಲ್ಲ.

3. ಎಲ್ಲ ಮನೋಚಿಕಿತ್ಸಾ ವಿಧಾನಗಳೂ ಸೂಕ್ತ ತತ್ವ ಹಾಗೂ ಸಿದ್ಧಾಂತಗಳ ವ್ಯವಸ್ಥಿತ ಅನ್ವಯವನ್ನು ಆಧರಿಸಿವೆ.

4. ಪ್ರತಿಯೊಂದು ಮನೋಚಿಕಿತ್ಸಾ ವಿಧಾನದ ಮೂಲ ಉದ್ದೇಶ ಕಕ್ಷಿ ತನ್ನನ್ನು ತಾನು ಅರ್ಥಮಾಡಿಕೊಂಡು ಸ್ವಸಾಮರ್ಥ್ಯದಿಂದ ಪರಿಸರದ ಜೊತೆ ಯಶಸ್ವಿಯಾಗಿ ಹೊಂದಿಕೊಳ್ಳುವಂತೆ ಮಾಡುವುದಾಗಿದೆ.

ಮನೋಚಿಕಿತ್ಸೆಯ ಗುರಿಗಳು (Goals of Psychotherapy):

1. ಕಕ್ಷಿ ತನ್ನ ಆಲೋಚನಾ ವಿಧಾನವನ್ನು ಹಾಗೂ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವಂತೆ ಮಾಡುವುದು ಮತ್ತು ತನ್ನ ಸಮಸ್ಯೆಗಳನ್ನು ತಾನೇ ಪರಿಹರಿಸಿಕೊಳ್ಳುವಂತೆ ಪ್ರೇರೇಪಿಸುವುದು.

2. ಕಕ್ಷಿ ತನ್ನ ಸಂವಹನ (Communication) ಕೌಶಲಗಳನ್ನು ಉತ್ತಮ ಪಡಿಸಿಕೊಳ್ಳುವಂತೆ ಮಾಡುವುದು.

3. ಪ್ರತಿಬಲನವನ್ನು ಯಶಸ್ವಿಯಾಗಿ ನಿಭಾಯಿಸುವಂತೆ ಮಾಡುವುದು.

4. ಕಕ್ಷಿ ತನ್ನ ಸಾಮರ್ಥ್ಯಗಳನ್ನು (Potentials) ಹಾಗೂ ದೌರ್ಬಲ್ಯ (weaknesses)ಗಳನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ತನ್ನ ದೌರ್ಬಲ್ಯಗಳನ್ನು ತೊಡೆದು ಹಾಕುವಂತೆ ಮಾಡುವುದು.

5. ಸೂಕ್ತ ತೀರ್ಮಾನ ಕೈಗೊಳ್ಳುವಲ್ಲಿ ಸಫಲನಾಗುವಂತೆ ಮಾಡುವುದು.

ಚಿಕಿತ್ಸಾ ಸಂಬಂಧ (Therapeutic relationship):

ಚಿಕಿತ್ಸಾ ಸಂಬಂಧವು ಚಿಕಿತ್ಸಕ ಮತ್ತು ಕಕ್ಷಿಯ ನಡುವಿನ ಪರಸ್ಪರ ಸ್ಪಂದಿಸುವ, ಕಾರ್ಯಶೀಲ ಹಾಗೂ ಪರಿಣಾಮಕಾರಿ ಸಂಬಂಧವಾಗಿರುತ್ತದೆ. ಇಲ್ಲಿ ಚಿಕಿತ್ಸಕ ಕಕ್ಷಿಯ ಜೊತೆ ಪರಸ್ಪರ ನಂಬುಗೆಯ ಮಧುರ ಬಾಂಧವ್ಯವನ್ನು ವೃದ್ಧಿಮಾಡುತ್ತಾನೆ.

ಚಿಕಿತ್ಸಾ ಸಂಬಂಧದ ಪ್ರಮುಖ ಲಕ್ಷಣಗಳು :

1. ಚಿಕಿತ್ಸಕ ಮತ್ತು ಕಕ್ಷಿ ನಡುವಿನ ಸಂಬಂಧವು ಪರಸ್ಪರ ಒಪ್ಪಿಗೆಯಿಂದ ಉಂಟಾದ ಸಂಬಂಧ. ಚಿಕಿತ್ಸೆಯ ಗುರಿಸಾಧನೆಗಾಗಿ ಇಬ್ಬರೂ ಕೂಡಿ ಪ್ರಯತ್ನಿಸುತ್ತಾರೆ.

2. ಚಿಕಿತ್ಸಕ ಮತ್ತು ಕಕ್ಷಿಯ ನಡುವಿನ ಸಂಬಂಧ ಪರಸ್ಪರ ನಂಬುಗೆಯಿಂದ ಉಂಟಾಗಿರುವ ಬಾಂಧವ್ಯವಾಗಿರುತ್ತದೆ. ಇಲ್ಲಿ ಕಕ್ಷಿ ತನ್ನ ಮನದಾಳದ ನೋವು-ನಲಿವುಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾನೆ. ಚಿಕಿತ್ಸಕ ಕಕ್ಷಿಯ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಪ್ರೋತ್ಸಾಹಿಸುತ್ತಾನೆ ಮತ್ತು ಕಕ್ಷಿ ನೀಡುವ ಮಾಹಿತಿಗಳನ್ನು ಬಹಿರಂಗಗೊಳಿಸದೆ ರಹಸ್ಯ ಕಾಪಾಡುತ್ತಾನೆ.

3. ಕಕ್ಷಿ ಹೇಳುವುದನ್ನೆಲ್ಲಾ ಚಿಕಿತ್ಸಕ ಗಮನವಿಟ್ಟು ಆಲಿಸುತ್ತಾನೆ. ಕಕ್ಷಿ ಕೋಪಗೊಂಡಾಗ, ದುಃಖಿತನಾದಾಗ ಸಾಂತ್ವನ ಹೇಳುತ್ತಾನೆ ಮತ್ತು ಕಕ್ಷಿಯ ಸಮಸ್ಯೆಗಳಿಗೆ ಕಾರಣ ಏನು ಹಾಗೂ ಅದಕ್ಕೆ ಪರಿಹಾರ ಏನು ಎಂಬುದನ್ನು ಕಕ್ಷೆಯೇ ಕಂಡುಕೊಳ್ಳುವಂತೆ ಮಾಡುವುದೇ ಚಿಕಿತ್ಸಕನ ಕೌಶಲಕ್ಕೆ ಹಿಡಿದ ಕನ್ನಡಿಯಾಗಿರುತ್ತದೆ.

4.ಒಟ್ಟಾರೆ, ಚಿಕಿತ್ಸಾ ಸಂಬಂಧವು ಪರಸ್ಪರ ಒಪ್ಪಿಗೆಯಿಂದ ಉಂಟಾದ ಬಾಂದವ್ಯ ಎಂದು ಹೇಳಬಹುದಾಗಿದೆ.

ಚಿಕಿತ್ಸಾ ವಿಧಾನಗಳು :

ಎಲ್ಲ ಚಿಕಿತ್ಸಾ ವಿಧಾನಗಳೂ ಕಕ್ಷಿಯ ಸಮಸ್ಯೆಯನ್ನು ಬಗೆಹರಿಸಲು ಮತ್ತು ಕಕ್ಷಿಯ ವರ್ತನೆಯಲ್ಲಿ ಪರಿಣಾಮಕಾರಿ ಬದಲಾವಣೆ ತರುವ ಉದ್ದೇಶ ಹೊಂದಿದ್ದರೂ, ಅವುಗಳು ಅನುಸರಿಸುವ ತಂತ್ರಗಳು, ತತ್ವಗಳು ಮತ್ತು ವಿಧಾನಗಳು ಭಿನ್ನವಾಗಿರುತ್ತವೆ. ಕೆಲವು ಚಿಕಿತ್ಸಾ ವಿಧಾನಗಳು ಕಕ್ಷಿಯ ಮಾನಸಿಕ ಸಮಸ್ಯೆಗೆ ಕಾರಣವಾದ ಸುಪ್ತ ಮನಸ್ಸಿನ ಸಂಘರ್ಷ (conflicts), ತಪ್ಪು ಕಲಿಕೆ, ಆಲೋಚನಾ ವಿಧಾನ ಹಾಗೂ ನಂಬಿಕೆಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತವೆ.

ಕೆಲವು ಪ್ರಮುಖ ಚಿಕಿತ್ಸಾ ವಿಧಾನಗಳು ಕೆಳಕಂಡಂತಿವೆ.

1. ಮನೋ ವಿಶ್ಲೇಷಣ ಚಿಕಿತ್ಸಾ ವಿಧಾನ (Psychodynamic therapy)

2. ವರ್ತನಾ ವಿಜ್ಞಾನ (Behavioural therapy)

3. ಸಂಜ್ಞಾನಾತ್ಮಕ ವಿಧಾನ (Cognitive therapy)

4.ಮಾನವತಾ ಚಿಕೆತ್ಸೆ ವಿಧಾನ (Humanistic therapy)

5. ಅಸ್ತಿತ್ವ ಚಿಕಿತ್ಸಾ ವಿಧಾನ (Existential therapy)

6. ಜೀವವೈದ್ಯಕೀಯ ವಿಧಾನ  (Bio-Medical therapy)

7. ಯೋಗ ಚಿಕಿತ್ಸೆ ವಿಧಾನ (Yoga therapy)

1. ಮನೋಗತಿ ಚಿಕಿತ್ಸಾ ವಿಧಾನ (ಮನೋವಿಶ್ಲೇಷಣಾ ಚಿಕಿತ್ಸಾ ವಿಧಾನ):

ಮನೋವಿಶ್ಲೇಷಣಾ ಚಿಕಿತ್ಸಾ ವಿಧಾನದ ಜನಕ ಸಿಗಂಡ್ ಫ್ರಾಯ್ಡ್. ಈ ಚಿಕಿತ್ಸಾ ವಿಧಾನವು ಪ್ರಮುಖವಾಗಿ ಅಂತ‌ರ್ ಮನಸ್ಸಿನ (ಇದ್, ಅಹಂ ಮತ್ತು ಮಹದಹಂ) ಸಂಘರ್ಷಗಳನ್ನು, ಅಹಂರಕ್ಷಣಾ ತಂತ್ರಗಳನ್ನು ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾದ ಬಾಲ್ಯದ ಅತೃಪ್ತ ಬಯಕೆಗಳನ್ನು ಕುರಿತು ಅಧ್ಯಯನ ಮಾಡುತ್ತದೆ. ಅಂದರೆ ಮನೋವಿಶ್ಲೇಷಣೆ ಚಿಕಿತ್ಸಾ ವಿಧಾನವು ಇಂದಿನ ವರ್ತನೆಗೆ ಬದಲಾಗಿ ಹಿಂದಿನ ವರ್ತನೆಯನ್ನು ಕುರಿತು ಅಧ್ಯಯನ ಮಾಡುತ್ತದೆ. ಮನೋವಿಶ್ಲೇಷಣೆ ಚಿಕಿತ್ಸಾ ವಿಧಾನದಲ್ಲಿ ಅನುಸರಿಸುವ ಪ್ರಮುಖ ಚಿಕಿತ್ಸಾ ವಿಧಾನಗಳೆಂದರೆ

1) ಮುಕ್ತ ಸಹಚರ್ಯೆ ಮತ್ತು
2) ಸ್ವಪ್ನ ವಿಶ್ಲೇಷಣೆ.

1) ಮುಕ್ತ ಸಹಚರ್ಯೆ (Catharsis):

ಇದು ಮನೋವಿಶ್ಲೇಷಣೆ ಚಿಕಿತ್ಸಾ ವಿಧಾನದ ಒಂದು ಪ್ರಮುಖ ತಂತ್ರ. ಇಲ್ಲಿ ಕಕ್ಷಿಯನ್ನು ಒಂದು ಹಾಸಿಗೆ ಮೇಲೆ ಆರಾಮವಾಗಿ ಮಲಗಿಸಲಾಗುವುದು. ನಂತರ ತನ್ನ ಮನಸ್ಸಿಗೆ ತೋಚಿದ್ದರ ಬಗ್ಗೆ ಮುಕ್ತವಾಗಿ ಮಾತನಾಡುವಂತೆ ಪ್ರೋತ್ಸಾಹಿಸಲಾಗುವುದು. ಮಾತನಾಡುವಾಗ ತನ್ನ ಅಂತರಂಗದ ಘರ್ಷಣೆಗಳು, ಆಸೆ-ಆಕಾಂಕ್ಷೆಗಳು, ಅತೃಪ್ತ ಬಯಕೆಗಳು, ನೋವುಗಳು, ಹೀಗೆ ಎಲ್ಲವೂ ಕಕ್ಷಿಯ ಮಾತುಗಳಲ್ಲಿ ಹೊರಹಾಕಲ್ಪಡುತ್ತವೆ. ಕಕ್ಷಿ ಮಾತನಾಡುವಾಗ

ಚಿಕಿತ್ಸಕ ಕಕ್ಷಿಯ ಹಿಂದೆ ಕುಳಿತುಕೊಳ್ಳುತ್ತಾನೆ. ಏಕೆಂದರೆ, ಕಕ್ಷಿಯ ಆಲೋಚನೆ ಮತ್ತು ಮಾತುಗಳಿಗೆ ಅಡಚಣೆ ಆಗಬಾರದು ಎಂದು ಚಿಕಿತ್ಸಕನು ಕಕ್ಷಿ ಹೇಳುವುದನ್ನೆಲ್ಲಾ ಬರೆದುಕೊಳ್ಳುತ್ತಾನೆ.

ಕಕ್ಷಿ ಮನ ಬಿಚ್ಚಿ ಮಾತನಾಡುವುದರಿಂದ ಅವನ ಸುಪ್ತ ಮನಸ್ಸಿನಲ್ಲಿ ಅಡಗಿರುವ ಗೊಂದಲಗಳು, ನೋವುಗಳು, ಅತೃಪ್ತ ಬಯಕೆಗಳ ಅರಿವು ಚಿಕಿತ್ಸಕನಿಗೆ ಆಗುತ್ತದೆ. ಇದರ ಆಧಾರದ ಮೇಲೆ ಕಕ್ಷಿಯ ಸಮಸ್ಯೆ ಏನು ಮತ್ತು ಅದಕ್ಕೆ ಪರಿಹಾರ ಏನು ಎಂದು ಮನದಟ್ಟು ಮಾಡಿಕೊಡುತ್ತಾನೆ.

2.ಸ್ವಪ್ನ ವಿಶ್ಲೇಷಣೆ  (Dream analysis) :

ಫ್ರಾಡ್ಜ್‌ನ ಪ್ರಕಾರ ಸುಪ್ತ ಮನಸ್ಸನ್ನು ಅರ್ಥಮಾಡಿಕೊಳ್ಳಲು ಕನಸುಗಳ ವಿಶ್ಲೇಷಣೆ ರಾಜಮಾರ್ಗ ಇದ್ದಂತೆ. ಏಕೆಂದರೆ, ಅತೃಪ್ತ ಬಯಕೆಗಳು, ಮನಸ್ಸಿನ ಘರ್ಷಣೆಗಳು ಸಂಕೇತಗಳ ರೂಪದಲ್ಲಿ ಕನಸುಗಳಾಗಿ ಕಾಣಿಸಿಕೊಳ್ಳುತ್ತವೆ. ಕನಸಿನ ಈ ಸಂಕೇತಗಳನ್ನು ವಿಶ್ಲೇಷಣೆ ಮಾಡುವುದರಿಂದ ಕಕ್ಷಿಯ ಅಂತರಾಳದಲ್ಲಿ ಏನಿದೆ ಎಂದು ಚಿಕಿತ್ಸಕನಿಗೆ ಅರಿವಾಗುತ್ತದೆ. ಆದ್ದರಿಂದ ನಿದ್ರೆಯಿಂದ ಎದ್ದ ಮೇಲೆ ಕಂಡ ಕನಸುಗಳ ಬಗ್ಗೆ ಬರೆಯುವಂತೆ ಕಕ್ಷಿಗೆ ಚಿಕಿತ್ಸಕ ಹೇಳುತ್ತಾನೆ.

ಚಿಕಿತ್ಸೆ ವಿಧಾನ ಪ್ರಕ್ರಿಯೆ (Treatment Process):

ಅ) ಪ್ರಾರಂಭದ ಹಂತ (Opening phase):- ಮನೋವಿಶ್ಲೇಷಣೆ ಚಿಕಿತ್ಸಾ ವಿಧಾನವು ಪ್ರಾರಂಭದಲ್ಲಿ

ಚಿಕಿತ್ಸಕ ಮತ್ತು ಕಕ್ಷಿಯ ನಡುವೆ ಮುಖಾ-ಮುಖಿ ಭೇಟಿಯಿಂದ ಆರಂಭವಾಗುತ್ತದೆ. ನಂತರ, ‘ಮುಕ್ತ ಸಹಚರ್ಯೆ’ ಮತ್ತು ಸ್ವಪ್ನ ವಿಶ್ಲೇಷಣೆ ಪ್ರಕ್ರಿಯೆಗಳ ಮೂಲಕ ಕಕ್ಷಿ ಮುಂದುವರೆಯುತ್ತಾನೆ.

ಆ) ವರ್ಗಾವಣೆ ವಿಕಾಸ (Development of Transference) :- ಮುಕ್ತ ಸಹಚರ್ಯೆ

ಮತ್ತು ಸ್ವಪ್ನ ವಿಶ್ಲೇಷಣೆಯಲ್ಲಿ ಸುಪ್ತಮನಸ್ಸಿನಲ್ಲಿರುವ ಬೇಡವಾದ ಕಹಿ ಅನುಭವಗಳು, ನೋವು-ನಲಿವುಗಳು, ಪುಂಕಾನುಪುಂಕವಾಗಿ ಕಕ್ಷಿಯ ಮಾತಿನಲ್ಲಿ ಹೊರಬೀಳುತ್ತವೆ. ಹಿಂದೆ ಇತರರ ಜೊತೆ ಅನುಭವಿಸಿದ್ದ ನೋವು. ದುಃಖ, ಕೋಪ, ಇತ್ಯಾದಿಗಳನ್ನು ಕಕ್ಷಿ ಚಿಕಿತ್ಸಕನ ಮೇಲೆ ವರ್ಗಾಯಿಸುತ್ತಾನೆ.

Leave a Comment