Uses of the social distancing strategy: ಸಮಾಜ ಮಿತಿ ತಂತ್ರದ ಉಪಯೋಗಗಳು.
Uses of the social distancing strategy: ಸಮಾಜ ಮಿತಿ ತಂತ್ರವನ್ನು ತರಗತಿಯ ಶಿಕ್ಷಕ ವ್ಯವಸ್ಥಿತವಾಗಿ ಬಳಸಿಕೊಳ್ಳುವ ಮೂಲಕ ಈ ಕೆಳಕಂಡ ಪ್ರಯೋಜ ಪಡೆಯಬಹುದಾಗಿದೆ.
ತನ್ನ ತರಗತಿಯ ವಿದ್ಯಾರ್ಥಿಗಳ ನಡುವಿನ ಅಂತರ್ ವ್ಯಕ್ತಿ ಸಂಬಂಧಗಳನ್ನು ಅರ್ಥಮಾಡಿಕೊಂಡು ಅವರಲ್ಲಿ ಉತ್ತ ಬಾಂಧವ್ಯ ಬೆಳೆಸಬಹುದಾಗಿದೆ.
ನಾಯಕತ್ವವನ್ನು ಮಕ್ಕಳಲ್ಲಿ ಬೆಳೆಸಲು ಸಾಧ್ಯವಾಗುತ್ತದೆ. ತರಗತಿಯಲ್ಲಿರುವ ವಿದ್ಯಾರ್ಥಿಗಳಲ್ಲಿ ಕಂಡುಬರುವ ನಾಯಕತ್ವದ ಸಾಮರ್ಥ್ಯವನ್ನು ಗುರ್ತಿಸಬಹುದು ಮತ್ತು ಉತ್ತು
ಒಂಟಿಗಳು ಅಥವಾ ತಿರಸ್ಕೃತರನ್ನು ಗುರ್ತಿಸಿಕೊಳ್ಳುವ ಮೂಲಕ ಅವರನ್ನು ಸಾಮಾಜೀಕರಣಗೊಳಿಸಬಹುದು. ಇದರಿಂದ ಅಪವ್ಯಯವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
ಶಾಲೆಯಲ್ಲಿ ವಿವಿಧ ಯೋಜನಾ ಕಾರ್ಯಗಳನ್ನು ನೀಡುವಾಗ ಅಥವಾ ಯಾವುದೇ ಗುಂಪುಕಾರ್ಯವನ್ನು ನೀಡಲ ಸಹಾಯಕವಾಗುವಂತೆ ಗುಂಪುಗಳನ್ನು ರಚಿಸಲು ಇದರಿಂದ ಸಾಧ್ಯವಾಗುತ್ತದೆ.
ಹೊಂದಾಣಿಕೆಯ ಸಮಸ್ಯೆಯಿರುವ ಮಕ್ಕಳನ್ನು ಗುರ್ತಿಸಿ ಅವರನ್ನು ಗುಂಪು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರಲ್ಲಿ ಉತ್ತಮ ಅಂತರ್ ವ್ಯಕ್ತಿ ಸಂಬಂಧವನ್ನು ಬೆಳೆಸಬಹುದು.
ಒಂದು ಗುಂಪನ್ನು ಇನ್ನೊಂದು ಗುಂಪಿನೊಡನೆ ಹೋಲಿಸಲು ಮತ್ತು ಗುಂಪಿನ ರಚನೆಯಲ್ಲಾಗುವ ಬದಲಾವಣೆಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ.
ಸಮಾಜ ಮಿತಿ ತಂತ್ರವನ್ನು ಸಾಮಾಜಿಕ ಮನೋವಿಜ್ಞಾನದ ಸಂಶೋಧನೆ ಮತ್ತು ಶೈಕ್ಷಣಿಕ ಸಂಶೋಧನೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಶೈಕ್ಷಣಿಕ ಸಂಶೋಧನೆಗಳಲ್ಲಿ ವಿದ್ಯಾರ್ಥಿಯು ತರಗತಿಯಲ್ಲಿನ ಸ್ಥಾನಮಾನವನ್ನು ಇತರೆ ಚರಾಂಶಗಳೊಂದಿಗೆ ಉದಾ: ಮಾನಸಿಕ ಸಾಮರ್ಥ್ಯ, ಶೈಕ್ಷಣಿಕ ಸಾಧನೆ, ಶಿಕ್ಷಕರ ಆಯ್ಕೆ ಇತ್ಯಾದಿ, ಹೊಂದಿರುವ ಸಂಬಂಧಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.
ತರಗತಿ ನಾಯಕತ್ವ (Teacher Leadership):
ನಾವು ಈಗಾಗಲೇ ಸಮೂಹದ ಸ್ವರೂಪ, ಲಕ್ಷಣಗಳು ಹಾಗೂ ಅದರ ಮೇಲೆ ಪ್ರಭಾವ ಬೀರುವ ಅಂಶಗಳು ಹಾಗೂ ಸಮಾಜಮಿತಿ ತಂತ್ರದ ಸಹಾಯದಿಂದ ಸಮೂಹದ ಅಂತರ್ ಸಂಬಂಧ ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡಿರುತ್ತೇವೆ. ಸಮೂಹದ ಕಾರ್ಯಕ್ಷಮತೆ ನಾಯಕತ್ವವನ್ನು ಅವಲಂಬಿಸಿರುತ್ತದೆ. ಈ ಅಧ್ಯಾಯದ ಕೆಳಕಂಡ ಭಾಗದಲ್ಲಿ ನಾಯಕತ್ವದ ಪ್ರಾಮುಖ್ಯತೆ, ನಾಯಕತ್ವದ ನಮೂನೆಗಳು, ನಾಯಕನಿಗಿರಬೇಕಾದ ಗುಣಗಳು ಹಾಗೂ ತರಗತಿ ಸಮೂಹದ ನಾಯಕನಾಗಿ ಶಿಕ್ಷಕನ ಪಾತ್ರವನ್ನು ಚರ್ಚಿಸಲಾಗಿದೆ.
ನಾಯಕ ಸಮೂಹದ ಕೇಂದ್ರ ಬಿಂದುವಾಗಿರುವುದು ಮಾತ್ರವಲ್ಲದೇ ಸಮೂಹದ ಕಾರ್ಯಗಳನ್ನು ನಿರ್ದೇಶಿಸಿ ಮುನ್ನಡೆಸುವವನೂ ಆಗಿರುತ್ತಾನೆ. ಅವನು ತನ್ನ ಸಮೂಹದ ಮೇಲೆ ನಿಯಂತ್ರಣ ಹೊಂದಿರುತ್ತಾನೆ. ನಾಯಕ ಸಮೂಹರ ಸದಸ್ಯರೊಡನೆ ಹೇಗೆ ವ್ಯವಹರಿಸುತ್ತಾನೆ ಎಂಬುದರ ಮೇಲೆ ಸಮೂಹದ ವಾತಾವರಣ ನಿರ್ಧರಿಸಲ್ಪಡುತ್ತದೆ.
ತರಗತಿಯ ನಿಜವಾದ ನಾಯಕ ಶಿಕ್ಷಕ, ಸಮೂಹದ ಸ್ಥಿರತೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಶಿಕ್ಷಕನದಾಗಿರುತ್ತದೆ. ನಾಯಕನೂ ಸಹ ಸಮೂಹದ ಒಬ್ಬ ಸದಸ್ಯನಾಗಿರುತ್ತಾನೆ ಮತ್ತು ಅವನು ಸಮೂಹದೊಡನೆ ಹೇಗೆ ನಡೆದುಕೊಳ್ಳುತ್ತಾನೆ.
ಎಂಬುದರ ಮೇಲೆ ಅವನ ಸ್ಥಾನ ನಿರ್ಧಾರವಾಗುತ್ತದೆ. ಸಮೂಪದ ನೀತಿ ಸಂಹಿತೆ ಹೆಚ್ಚಾಗಿ ನಾಯಕನ ಮೇಲೆ ಅವಲಂಬಿಸಿರುತ್ತದೆ. ಗುಂಪಿನ ಇತರ ಸದಸ್ಯರ ಆಲೋಚನೆಗಳು. ಮನೋಧೋರಣೆ ಹಾಗೂ ವರ್ತನೆಯ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶಿಕ್ಷಕ ಪ್ರಭಾವ ಬೀರುತ್ತಾನೆ. ನಾಯಕ ತನ್ನ ಸಮೂಹವನ್ನು ಅದರ ಗುರಿಗಳ ಸಾಧನೆಯ ಕಡೆಗೆ ಸಾಗಿಸುವವನಾಗಿರುತ್ತಾನೆ.
ನಾಯಕ ತನ್ನ ಸಮೂಹದ ಸದಸ್ಯರ ಮೇಲೆ ಯಾವ ರೀತಿಯ ನಿಯಂತ್ರಣ ಸಾಧಿಸಿದ್ದಾನೆ ಎಂಬುದರ ಆಧಾರದ ಮೇಲೆ ಮೂರು ರೀತಿಯ ನಾಯಕತ್ತದ ನಮೂನೆಗಳನ್ನು ಕಾಣಬಹುದು. ಅವುಗಳೆಂದರೆ ನಿರಂಕುಶ ಪ್ರಭುತ್ವ, ಪ್ರಜಾಸತ್ತಾತ್ಮಕ ಮಾದರಿ ಮತ್ತು ನಿರ್ಬಂಧರಹಿತ ಪ್ರಭುತ್ವ ಮಾದರಿಗಳು.
ನಿರಂಕುಶ ಪ್ರಭುತ್ವ ಮಾದರಿ ನಾಯಕತ್ವ : ನಿರಂಕುಶ ಪ್ರಭುತ್ವ ಮಾದರಿ ನಾಯಕನು ಅಧಿಕಾರಶಾಹಿ ಮನೋಭಾವ ಹೊಂದಿರುತ್ತಾನೆ.
ಎಲ್ಲಾ ಗುರಿಗಳನ್ನು ತಾನೇ ನಿರ್ಧರಿಸುತ್ತಾನೆ. ಸಮೂಹದ ಎಲ್ಲಾ ನಿರ್ಣಯಗಳನ್ನು ಅವನೇ ಕೈಗೊಳ್ಳುತ್ತಾನೆ. ಸದಸ್ಯರು ಯಾವ ಕಾರ್ಯಗಳನ್ನು ಕೈಗೊಳ್ಳಬೇಕೆಂಬುದನ್ನು ಅವನೇ ನಿರ್ಧರಿಸುತ್ತಾನೆ. ಸದಸ್ಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ನೀಡುವುದಿಲ್ಲ. ತರಗತಿಯ ಎಲ್ಲಾ ಯೋಜನೆಗಳನ್ನು ಅವನೇ ರೂಪಿಸುತ್ತಾನೆ ಮತ್ತು ಸದಸ್ಯರಿಗೆ ಅವುಗಳನ್ನು ಕೈಗೊಳ್ಳಲು ನಿರ್ದೇಶನಗಳನ್ನು ಮಾತ್ರ ನೀಡುತ್ತಾನೆ. ಇಂತಹ ನಾಯಕನಿರುವ ತರಗತಿಯಲ್ಲಿ ವಿದ್ಯಾರ್ಥಿಗಳು ಮಾತನಾಡಲು ಅಥವಾ ಪ್ರಶ್ನೆ ಕೇಳಲು ಹಿಂಜರಿಯುತ್ತಾರೆ. ಇದು ಕಲಿಕೆಗೆ ಪೂರಕವಾದ ವಾತಾವರಣವಾಗಿರುವುದಿಲ್ಲ.
ಪ್ರಜಾಸತ್ತಾತ್ಮಕ ಮಾದರಿ ನಾಯಕತ್ವ: ಇದು ಅತ್ಯಂತ ಪರಿಣಾಮಕಾರಿಯಾದ ನಾಯಕತ್ವದ ವಿಧವಾಗಿದೆ. ಪ್ರಜಾಸತ್ತಾತ್ಮಕ
ಮಾದರಿಯ ನಾಯಕ ಸಮೂಹದ ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಾನೆ. ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಾಗ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾನೆ. ವಿದ್ಯಾರ್ಥಿಗಳು ತಮ್ಮ ಸಲಹೆ, ಸೂಚನೆ ಅಥವಾ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ವಾತಾವರಣ ಕಲ್ಪಿಸುತ್ತಾನೆ. ತರಗತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಗರಿಷ್ಠ ಮಟ್ಟದ ಅಂತರ್‌ಕ್ರಿಯೆಗೆ ಅವಕಾಶವಿರುತ್ತದೆ. ಇಂತಹ ಶಿಕ್ಷಕನು ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತನ್ನು ಬೆಳೆಸಲು ಪ್ರಯತ್ನಿಸುವನು. ವಿದ್ಯಾರ್ಥಿಗಳು ಇಂತಹ ಶಿಕ್ಷಕರಿಗೆ ಸ್ವ-ಇಚ್ಛೆಯಿಂದ ವಿಧೇಯರಾಗಿರುತ್ತಾರೆ.
ನಿರ್ಬಂಧರಹಿತ ಮಾದರಿ ನಾಯಕತ್ವ : ನಿರ್ಬಂಧ ರಹಿತ ಮಾದರಿಯ ನಾಯಕ ಸಮೂಹದ ಸದಸ್ಯರ ಕಾರ್ಯನಿರ್ವಹಣೆಯಲ್ಲಿ
ಪಾಲ್ಗೊಳ್ಳದೇ ನಿರಾಸಕ್ತ ಪ್ರೇಕ್ಷಕನಂತೆ ವರ್ತಿಸುತ್ತಾನೆ. ಇಂತಹ ನಾಯಕರನ್ನು ತಟಸ್ಥ ಧೋರಣೆಯ ನಾಯಕರೆಂತಲೂ ಸಹ ಕರೆಯುತ್ತಾರೆ. ಇಂತಹ ನಾಯಕತ್ವದ ಶಿಕ್ಷಕರು ವಿದ್ಯಾರ್ಥಿಗಳನ್ನು ನಿಯಂತ್ರಿಸುವುದೂ ಇಲ್ಲ ಮತ್ತು ಯಾವುದೇ ರೀತಿಯ ಮಾರ್ಗದರ್ಶನವನ್ನೂ ಸಹ ನೀಡುವುದಿಲ್ಲ. ವಿದ್ಯಾರ್ಥಿಗಳು ತಮ್ಮ ನಿರ್ಧಾರಗಳನ್ನು ತಾವೇ ಕೈಗೊಳ್ಳುತ್ತಾರೆ. ಇಂತಹ ನಾಯಕರನ್ನು ಮಕ್ಕಳು ಗೌರವಿಸುವುದಿಲ್ಲ ಮತ್ತು ಇಂತಹ ನಾಯಕರಿರುವ ಸಮೂಹದಲ್ಲಿ ಯಾವುದೇ ಉಪಯುಕ್ತ ಕಾರ್ಯ ನಡೆಯುವುದಿಲ್ಲ.
ಈ ಮೇಲಿನ ಮೂರು ನಾಯಕತ್ವದ ನಮೂನೆಗಳಲ್ಲಿ ಪ್ರಜಾಸತ್ತಾತ್ಮಕ ಮಾದರಿಯ ನಾಯಕತ್ವ ಅತ್ಯುತ್ತಮವಾದುದು. ಇಂತಹ ಶಿಕ್ಷಕ ನಾಯಕರು ಮಾತ್ರ ತರಗತಿಯ ಕಲಿಕೆಯ ಪ್ರಕ್ರಿಯೆಗಳನ್ನು ಸಫಲವಾಗಿ ಮುನ್ನಡೆಸಬಲ್ಲರು. ಇಂತಹ ನಾಯಕರು ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಗುರುತಿಸಿ ಅವರನ್ನು ಉತ್ತಮ ನಾಯಕರನ್ನಾಗಿ ರೂಪಿಸಬಲ್ಲರು.
ಉತ್ತಮ ಶಿಕ್ಷಕ ನಾಯಕ ಈ ಕೆಳಕಂಡ ಗುಣಗಳನ್ನು ಹೊಂದಿರಬೇಕು:
▪️ಶಿಕ್ಷಕ ತಾನು ಬೋಧಿಸುವ ವಿಷಯದಲ್ಲಿ ಪಾಂಡಿತ್ಯವನ್ನು ಹೊಂದಿರಬೇಕು.
▪️ಶಿಕ್ಷಕ ತನ್ನ ಸಹೋದ್ಯೋಗಿಗಳೊಂದಿಗೆ, ಪೋಷಕರೊಂದಿಗೆ ಹಾಗೂ ಸಮಾಜದ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು.
▪️ಆತ್ಮ ವಿಶ್ವಾಸವುಳ್ಳವನಾಗಿರಬೇಕು.
▪️ಸಂವೇಗಾತ್ಮಕ ಸ್ಥಿರತೆ ಹೊಂದಿರಬೇಕು.
▪️ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣಬೇಕು.
▪️ಸಚ್ಚಾರಿತ್ರ್ಯ ಉಳ್ಳವನಾಗಿದ್ದು ತರಗತಿಯಲ್ಲಿ ಇತರರಿಗೆ ಮಾದರಿಯಾಗಿರಬೇಕು.
▪️ಶಿಕ್ಷಕರು ತಮ್ಮ ತರಗತಿಯಲ್ಲಿ ಕಲಿಕೆಗೆ ಪೂರಕವಾದ ಮುಕ್ತ ವಾತಾವರಣವನ್ನು ರೂಪಿಸಬೇಕು.
▪️ ಉತ್ತಮ ಸಂವಹನ ಸಾಮರ್ಥ್ಯ ಹೊಂದಿದ್ದು ವಿದ್ಯಾರ್ಥಿಗಳಲ್ಲಿ ಉತ್ತಮ ಸಂವಹನವನ್ನು ಉತ್ತೇಜಿಸುವಂತಿರಬೇಕು
▪️ ಆಶಾವಾದಿಯಾಗಿರಬೇಕು ಮತ್ತು ಬಹಿರ್ಮುಖ ವ್ಯಕ್ತಿತ್ವವುಳ್ಳವನಾಗಿರಬೇಕು.
▪️ತರಗತಿಯನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವಂತಿರಬೇಕು.
ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವಾತಂತ್ರ್ಯ ನೀಡಬೇಕು.
ಇಂತಹ ಗುಣಗಳನ್ನು ಹೊಂದಿರುವ ಶಿಕ್ಷಕ ತನ್ನ ತರಗತಿಯ ಯಶಸ್ವೀ ನಾಯಕನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಎಲ್ಲಾ ಶಿಕ್ಷಕರು ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆಂದು ಹೇಳಲು ಸಾಧ್ಯವಿಲ್ಲ. ಒಬ್ಬ ಉತ್ತಮ ಶಿಕ್ಷಕ ಒಬ್ಬ ಉತ್ತಮ ನಾಯಕನಾಗಿಲ್ಲದಿರಬಹುದು. ಆದ್ದರಿಂದ ಶಿಕ್ಷಕರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿ ಪೋಷಿಸಬೇಕಾಗುತ್ತದೆ. ಶಿಕ್ಷಕರ ಶಿಕ್ಷಣ ಕಾಲೇಜುಗಳು ತರಬೇತಿ ಶಿಕ್ಷಕರಿಗೆ ವಿವಿಧ ರೀತಿಯ ಗುಂಪು ಚಟುವಟಿಕೆಗಳನ್ನು ಏರ್ಪಡಿಸುವುದರ ಮೂಲಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಉತ್ತಮ ಅವಕಾಶಗಳನ್ನು ಒದಗಿಸಿಕೊಡಬೇಕು.
ಸಾಮಾಜಿಕ ವಾತಾವರಣ:
ತರಗತಿ ಸಮೂಹದ ಸದಸ್ಯರ ನಡುವೆ ಪರಸ್ಪರ ಅಂತರ್ ಕ್ರಿಯೆ ನಡೆದು ಅದರ ಪರಿಣಾಮವಾಗಿ ತರಗತಿಯಲ್ಲಿ ಸಂವೇಗಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಇದೇ ಸಾಮಾಜಿಕ ವಾತಾವರಣ. ಕೆಲವು ಸಮೂಹಗಳಲ್ಲಿ ಸದಸ್ಯರು ಉತ್ಸಾಹದಿಂದ ಪರಸ್ಪರ ಸಹಕರಿಸುತ್ತಾ ತಮ್ಮ ಗುರಿಗಳನ್ನು ಸಾಧಿಸಲು ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಕಾಣುತ್ತೇವೆ. ಕೆಲವು ಸಮೂಹಗಳಲ್ಲಿ ಇದಕ್ಕೆ ವಿರುದ್ಧವಾಗಿರುವುದನ್ನು ಕಾಣಬಹುದು. ಸಮೂಹದ ಸದಸ್ಯರ ಉತ್ಸಾಹ ಅಥವಾ ನಿರುತ್ಸಾಹಕ್ಕೆ ಕಾರಣವಾಗುವ ಅಂಶವೇ ಸಾಮಾಜಿಕ ವಾತಾವರಣ ಎಂದು ಹೇಳಬಹುದು.
ಸಾಮಾಜಿಕ ವಾತಾವರಣದ ಮೇಲೆ ಪ್ರಭಾವ ಬೀರುವ ಅಂಶಗಳು :
ತರಗತಿಯ ಸಾಮಾಜಿಕ ವಾತಾವರಣದ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳೆಂದರೆ ಸಮೂಹದ ರಚನೆಯ ನಮೂನೆ, ನಾಯಕತ್ವದ ವಿಧ, ಸಂವಹನ ಮತ್ತು ಅಂತರ್ ಕ್ರಿಯೆಯ ನಮೂನೆಗಳು, ಶಿಕ್ಷಕನ ವ್ಯಕ್ತಿತ್ವ, ತರಗತಿ ಕೊಠಡಿಯ ವಿನ್ಯಾಸ, ತರಗತಿಯ ಪೀಠೋಪಕರಣಗಳೂ ಸಹ ಸಾಮಾಜಿಕ ವಾತಾವರಣದ ಮೇಲೆ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರುತ್ತವೆ.
ಸದಸ್ಯರು ಗುರಿಗಳ ಬಗ್ಗೆ ಹೊಂದಿರುವ ಮನೋಧೋರಣೆ, ಸಮೂಹದಲ್ಲಿ ತೀರ್ಮಾನಗಳನ್ನು ಯಾರು ಕೈಗೊಳ್ಳುತ್ತಾರೆ ಎಂಬುದು ಸಮೂಹದ ರಚನೆಯ ಸ್ವರೂಪವನ್ನು ನಿರ್ಧರಿಸುತ್ತದೆ. ತರಗತಿ ಸಮೂಹದ ಗುರಿ ಮಹತ್ವಪೂರ್ಣದ್ದು ಹಾಗೂ ಸಾಧಿಸಬೇಕಾದದ್ದು ಎಂದು ಸದಸ್ಯರು ತಿಳಿದಿದ್ದು, ಪರಸ್ಪರ ವಿಚಾರ ವಿನಿಮಯದ ಮೂಲಕ ಸೂಕ್ತ ತೀರ್ಮಾನ ಕೈಗೊಳ್ಳುವಂತಿದ್ದರೆ ಸಮೂಹದ ರಚನೆ ಸೌಹಾರ್ದತೆಯಿಂದ ಕೂಡಿರುತ್ತದೆ. ಸಮೂಹದಲ್ಲಿ ಮುಕ್ತ ವಾತಾವರಣ ಏರ್ಪಡುತ್ತದೆ ಮತ್ತು ಸಮೂಹ ಗುರಿಯುತ್ತ ಪ್ರಗತಿ ಪಥದಲ್ಲಿ ಮುನ್ನಡೆಯುತ್ತದೆ.
ನಾಯಕತ್ವದ ನಮೂನೆಗಳಲ್ಲಿ ನಿರಂಕುಶ ಪ್ರಭುತ್ವದ ಮಾದರಿಯ ಶಿಕ್ಷಕ ತರಗತಿಯಲ್ಲಿ ನಿರ್ಬಂಧಿತ ವಾತಾವರಣವನ್ನು ಸೃಷ್ಟಿಸುತ್ತಾನೆ. ನಿರ್ಬಂಧ ರಹಿತ ಪ್ರಭುತ್ವ ಸ್ವಚ್ಛಂದತೆಗೆ ಕಾರಣವಾಗುತ್ತದೆ. ಪ್ರಜಾಪ್ರಭುತ್ವ ಮಾದರಿಯ ಶಿಕ್ಷಕ ತರಗತಿಯಲ್ಲಿ ಮುಕ್ತ ವಾತಾವರಣವನ್ನು ಸೃಷ್ಟಿಸುತ್ತಾನೆ. ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾನೆ ಮತ್ತು ಅವರಲ್ಲಿ ಸ್ವಯಂ ಶಿಸ್ತನ್ನು ಬೆಳೆಸುತ್ತಾನೆ. ಆದ್ದರಿಂದ ಪ್ರಜಾಸತ್ತಾತ್ಮಕ ಮಾದರಿ ನಾಯಕತ್ವ ಕಲಿಕೆಗೆ ಪೋಷಕವಾದ ವಾತಾವರಣವನ್ನು ನಿರ್ಮಿಸುತ್ತದೆ.
ಸಂವಹನದ ವಿವಿಧ ನಮೂನೆಗಳಲ್ಲಿ ವೃತ್ತ ನಮೂನೆ ಸಮೂಹದ ಸದಸ್ಯರಿಗೆ ವಿಚಾರ ವಿನಿಮಯಕ್ಕೆ ಹೆಚ್ಚಿನ ಅವಕಾಶ ಒದಗಿಸುತ್ತದೆ. ಮುಕ್ತ ಚರ್ಚೆಗೆ ಅವಕಾಶ ದೊರೆಯುತ್ತದೆ. ಇದರಿಂದ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ. ಸಂವಹನದ ಮೇಲೆ ನಿರ್ಬಂಧ ಹೇರಿದರೆ ತರಗತಿಯಲ್ಲಿ ನಿರ್ಬಂಧಿತ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಕಲಿಕೆಗೆ ಅಡ್ಡಿಯುಂಟಾಗುತ್ತದೆ.